ಸಹಕಲಾವಿದೆ ಸೇರಿ ಇಬ್ಬರ ಸೆರೆ

7

ಸಹಕಲಾವಿದೆ ಸೇರಿ ಇಬ್ಬರ ಸೆರೆ

Published:
Updated:
ಸಹಕಲಾವಿದೆ ಸೇರಿ ಇಬ್ಬರ ಸೆರೆ

ಬೆಂಗಳೂರು: ₹ 2,000 ಮುಖ ಬೆಲೆಯ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದಡಿ ಕನ್ನಡ ಚಿತ್ರರಂಗದ ಸಹ ಕಲಾವಿದೆ ಜಯಮ್ಮ (45) ಹಾಗೂ ಆಟೊ ಚಾಲಕ ಗೋವಿಂದರಾಜು (40) ಎಂಬುವರನ್ನು ದಾಬಸ್‌ಪೇಟೆ ಪೊಲೀ ಸರು ಬಂಧಿಸಿದ್ದಾರೆ.

‘ನಂದಿನಿಲೇಔಟ್ ನಿವಾಸಿಯಾದ ಜಯಮ್ಮ ಅವರಿಂದ ₹ 44 ಸಾವಿರ ಮೊತ್ತದ 22 ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳನ್ನು  ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳು ಹಿಸಿದ್ದೇವೆ’ ಎಂದು ಡಿವೈಎಸ್ಪಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಬುಧವಾರ ಬೆಳಿಗ್ಗೆ ದಾಬಸ್‌ಪೇಟೆಯ ‘ಪ್ರಿನ್ಸ್‌ ಕ್ಲಾತ್‌ ಶೋರೂಂ’ಗೆ ಹೋಗಿದ್ದ ಜಯಮ್ಮ, ಬಟ್ಟೆ ಖರೀದಿಸಿ ₹ 2,000 ಮುಖಬೆಲೆಯ ನೋಟು ಕೊಟ್ಟಿದ್ದರು. ಅದನ್ನು ಯಂತ್ರದ ಮೂಲಕ ಪರಿಶೀಲಿಸಿದ ಅಂಗಡಿ ಮಾಲೀಕ, ‘ಇದು ನಕಲಿ ನೋಟು’ ಎಂದಿದ್ದರು. ಆ ಕೂಡಲೇ ಜಯಮ್ಮ ತರಾತುರಿಯಲ್ಲಿ ಹೊರಬಂದು, ಗೋವಿಂದರಾಜು ಆಟೊದಲ್ಲಿ ಪರಾರಿಯಾಗಿದ್ದರು. 

ಇದರಿಂದ ಅನುಮಾನಗೊಂಡ ಬಟ್ಟೆ ಅಂಗಡಿ ಮಾಲೀಕ, ಇಬ್ಬರು ನೌಕರರ ಜತೆ ಬೈಕ್‌ಗಳಲ್ಲಿ ಅವರ ಆಟೊ ಹಿಂಬಾಲಿಸಿದ್ದರು. ಅಲ್ಲಿಂದ ಲಕ್ಕೂರು ಗ್ರಾಮಕ್ಕೆ ಬಂದಿದ್ದ ಆರೋಪಿಗಳು, ಮಂಜುನಾಥ್‌ ಎಂಬುವರ ಬೇಕರಿಗೆ ಹೋಗಿ ₹ 150 ಮೊತ್ತದ ತಿಂಡಿ ಖರೀದಿಸಿ ಖೋಟಾ ನೋಟು ಕೊಟ್ಟಿದ್ದರು. ಬೇಕರಿ ಮಾಲೀಕ ಚಿಲ್ಲರೆ ಕೊಟ್ಟು ಕಳುಹಿಸುವಷ್ಟರಲ್ಲಿ ಬಟ್ಟೆ ಅಂಗಡಿಯವರು ಸ್ಥಳಕ್ಕೆ ಬಂದು ಆರೋಪಿಗಳನ್ನು ಹಿಡಿದುಕೊಂಡಿದ್ದಾರೆ.

ನಂತರ ಅವರ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ, 22 ಖೋಟಾ ನೋಟುಗಳು ಪತ್ತೆಯಾಗಿವೆ. ಕೂಡಲೇ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

‘ಹುಲಿಕುಂಟೆಯಲ್ಲಿರುವ ನನ್ನ ಸಂಬಂಧಿ ಮಾರುತಿಯಿಂದ ಈ ನೋಟುಗಳನ್ನು ಪಡೆದುಕೊಂಡಿದ್ದೆ. ಆತ ಎಲ್ಲಿಂದ ಇವುಗಳನ್ನು ತಂದಿದ್ದ ಎಂಬುದು ನನಗೂ ಗೊತ್ತಿಲ್ಲ’ ಎಂದು ಜಯಮ್ಮ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ಮಾರುತಿಯ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry