ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ–ಆನೆಗುಂದಿ ಸೇತುವೆ ಸಂಚಾರಕ್ಕೆ ಮುಕ್ತ

Last Updated 9 ಜೂನ್ 2017, 5:50 IST
ಅಕ್ಷರ ಗಾತ್ರ

ಹೊಸಪೇಟೆ: ಬಹುನಿರೀಕ್ಷಿತ ಹಂಪಿ ಮತ್ತು ಆನೆಗುಂದಿ ನಡುವೆ ಸಂಪರ್ಕ ಬೆಸೆಯುವ ತಾಲ್ಲೂಕಿನ ಬುಕ್ಕಸಾಗರ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿ ಸಿರುವ ಸೇತುವೆ ಸಂಚಾರಕ್ಕೆ ಮುಕ್ತ ಗೊಳಿಸಿರುವುದು ಸಾರ್ವಜನಿಕರಲ್ಲಿ ಸಂತಸ ಉಂಟು ಮಾಡಿದೆ.

ಉದ್ಘಾಟನೆಯ ಔಪಚಾರಿಕತೆಯನ್ನು ಬದಿಗೊತ್ತಿ ವಾಹನ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತ ವಾಗಿದೆ. ಗಣ್ಯರು ಬಂದು ಉದ್ಘಾಟಿಸುವ ವರೆಗೆ ಕಾಯದೇ ಸಾರ್ವಜನಿಕರ ಹಿತಕ್ಕೆ ಆದ್ಯತೆ ಕೊಟ್ಟಿರುವುದು ಮಾದರಿ ಕೆಲಸ ಎಂದು ಜನ ಕೊಂಡಾಡುತ್ತಿದ್ದಾರೆ.

‘ಅನೇಕ ಕಡೆ ಕಾಮಗಾರಿ ಪೂರ್ಣಗೊಂಡರೂ ಮುಖ್ಯಮಂತ್ರಿ, ಸಚಿವ ರಿಂದಲೇ ಅದನ್ನು ಉದ್ಘಾಟಿಸಬೇಕೆಂಬ ಹಟದಿಂದ ಸಾರ್ವಜನಿಕರಿಗೆ ಮುಕ್ತಗೊಳಿಸುವುದಿಲ್ಲ. ಕೆಲಸ ಮುಗಿದು ಸಾರ್ವಜನಿಕರ ಬಳಕೆಗೆ ಸಿದ್ಧವಿದ್ದರೂ ಉದ್ಘಾಟನೆಯಾಗದೇ ವರ್ಷಗಳೇ ಉರುಳುತ್ತವೆ.

ಆದರೆ, ಬುಕ್ಕಸಾಗರ– ಕಡೇಬಾಗಿಲು ನಡುವಿನ ಸೇತುವೆ ವಿಷಯದಲ್ಲಿ ಅಧಿಕಾರಿಗಳು ಉದ್ಘಾಟ ನೆಗೆ ಕಾಯದೇ ವಾಹನಗಳ ಓಡಾಟಕ್ಕೆ ಮುಕ್ತಗೊಳಿಸಿರುವುದು ಒಳ್ಳೆಯ
ಸಂಗತಿ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಯೂಸುಫ್‌ ಪಟೇಲ್‌.

‘ಸೇತುವೆ ನಿರ್ಮಾಣಕ್ಕೂ ಪೂರ್ವ ದಲ್ಲಿ ಕಂಪ್ಲಿ ಮಾರ್ಗವಾಗಿ ಗಂಗಾವತಿಗೆ ಹೋಗಬೇಕಿತ್ತು. ಇದರಿಂದ ಸಾಕಷ್ಟು ಸಮಯ ವ್ಯಯವಾಗುತ್ತಿತ್ತು. ಜತೆಗೇ ಹಣವೂ ಖರ್ಚಾಗುತ್ತಿತ್ತು. ಈಗ ಎರಡೂ ತಪ್ಪಿದಂತಾಗಿದೆ’ ಎಂದು ಹೇಳಿದರು.

‘ಹಂಪಿ–ಆನೆಗುಂದಿ ನಡುವೆ ಸಂಪರ್ಕ ಬೆಸೆಯುವ ಸೇತುವೆ ವಾಹನ ಗಳ ಓಡಾಟಕ್ಕೆ ಮುಕ್ತಗೊಂಡಿರುವುದ ರಿಂದ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಗಲಿದೆ. ಎರಡೂ ಭಾಗಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಲು ಸಾಧ್ಯ ವಾಗುತ್ತದೆ. ನಿಜಕ್ಕೂ ಇದು ಒಳ್ಳೆಯ ಕೆಲಸ’ ಎನ್ನುತ್ತಾರೆ ಹಂಪಿ ಪ್ರವಾಸಿ ಮಾರ್ಗದರ್ಶಿ ಗೋಪಾಲ ಅವರು.

ತಾಲ್ಲೂಕಿನ ಬುಕ್ಕಸಾಗರ ಮತ್ತು ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಕಡೇಬಾಗಿಲು ಗ್ರಾಮಗಳ ಮಧ್ಯೆ ನಿರ್ಮಿಸಲಾಗಿರುವ ಈ ಸೇತುವೆ ಮೇಲೆ ವಾಹನಗಳ ಓಡಾಟ ಏಪ್ರಿಲ್‌ನಲ್ಲಿಯೇ ಆರಂಭವಾಗಿದೆ. 2016ರ ಫೆಬ್ರುವರಿ ಯಲ್ಲೇ ಸೇತುವೆ ಕೆಲಸ ಪೂರ್ಣ ಗೊಂಡು, ವಾಹನ ಸಂಚಾರ ಶುರುವಾಗ ಬೇಕಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬ ಆಗಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಯ ಅಧಿಕಾರಿ.

ಅಂತ್ಯಗೊಂಡ ತೆಪ್ಪದ ಬದುಕು: ವಾಹನ ಸಂಚಾರ ಆರಂಭವಾಗಿರುವುದರಿಂದ ಹಂಪಿ– ಆನೆಗುಂದಿ ನಡುವಿನ ತೆಪ್ಪದ ಬದುಕು ಕೊನೆಗೊಂಡಂತಾಗಿದೆ. ಸೇತುವೆ ನಿರ್ಮಾಣಕ್ಕೂ ಪೂರ್ವದಲ್ಲಿ ಕಂಪ್ಲಿ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿದ್ದವು. ಹೊಸಪೇಟೆ– ಗಂಗಾವತಿ ನಡುವಿನ ಒಟ್ಟು 41 ಕಿ.ಮೀ ಅಂತರವನ್ನು ಕ್ರಮಿಸಲು ಸುಮಾರು 45ರಿಂದ 55 ನಿಮಿಷ ಬೇಕಾಗುತ್ತಿತ್ತು.

ಸೇತುವೆ ನಿರ್ಮಾಣದಿಂದ ಎರಡೂ ಪಟ್ಟಣಗಳ ನಡುವಿನ ಅಂತರ 30 ಕಿ.ಮೀ.ಗೆ ತಗ್ಗಿದೆ. ಜತೆಗೇ ಪ್ರಯಾಣದ ಅವಧಿ 20ರಿಂದ 25 ನಿಮಿಷ ಕಡಿಮೆಯಾಗಿದೆ. ಹಂಪಿ–ಆನೆಗುಂದಿಯಲ್ಲಿರುವ ಪ್ರವಾಸಿ ತಾಣಗಳಿಗೆ ಜನ ಹೋಗಿ ಬರಲು ಸಾಕಷ್ಟು ಅನುಕೂಲವಾಗಿದೆ ಎನ್ನುತ್ತಾರೆ ಸ್ಥಳೀಯರು.

ಮಳೆಗಾಲದಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿ ಸುಮಾರು ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಟ್ಟಾಗ ಕಂಪ್ಲಿ–ಗಂಗಾವತಿ ಸೇತುವೆ ಜಲಾವೃತವಾಗಿ ಹೊಸಪೇಟೆ– ಗಂಗಾವತಿ ನಡುವಿನ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ತೊಂದರೆ ಯಾಗುತ್ತಿತ್ತು.

ಕಂಪ್ಲಿ– ಗಂಗಾವತಿ ನಡುವಿನ 12 ಕಿ.ಮೀ ಅಂತರಕ್ಕೆ 50ರಿಂದ 60 ಕಿ.ಮೀ ಸುತ್ತಬೇಕಾಗಿತ್ತು. ಹೊಸ ಸೇತುವೆಯ ಎತ್ತರ ಕಂಪ್ಲಿ ಸೇತುವೆಗಿಂತ ಅಧಿಕವಾಗಿದ್ದು, ಜಲಾಶ ಯದಿಂದ ಮೂರು ಲಕ್ಷ ಕ್ಯುಸೆಕ್‌ ನೀರು ಬಿಟ್ಟರೂ ಮುಳುಗಡೆ­ಯಾಗುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.

ಸೇತುವೆ ವಿಶೇಷ
ನಬಾರ್ಡ್‌ನ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಲ್ಲಿ (ಆರ್‌.ಐ.ಡಿ.ಎಫ್‌.) ಬುಕ್ಕಸಾಗರ–ಕಡೇಬಾಗಿಲು ನಡುವೆ ಸೇತುವೆ ನಿರ್ಮಿಸಲಾಗಿದೆ. ಒಟ್ಟು ₹32 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಕೆ.ಎನ್‌.ಆರ್. ಕನ್ಸ್‌ಟ್ರಕ್ಷನ್‌ ಕಂಪೆನಿಗೆ ವಹಿಸಲಾಗಿತ್ತು.

ಒಟ್ಟು 487.5 ಮೀಟರ್‌ ಉದ್ದದ ಈ ಸೇತುವೆಯು 32 ಅಡಿ ಅಗಲವಿದೆ. ಒಟ್ಟು 14 ಪಿಲ್ಲರ್‌ಗಳನ್ನು ಹೊಂದಿದೆ. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿ­ಯಲ್ಲಿಯೇ ಈ ಸೇತುವೆ ಬರುತ್ತದೆ.

1996ರಲ್ಲಿ ಹಂಪಿ–ಆನೆಗುಂದಿ ತೂಗು ಸೇತುವೆಯು ನಿರ್ಮಾಣ ಹಂತದಲ್ಲಿಯೇ ಕುಸಿದು ಬಿದ್ದಿತ್ತು. ಘಟನೆಯಲ್ಲಿ 10 ಜನ ಮೃತಪಟ್ಟಿದ್ದರು. ಘಟನೆ ಬಳಿಕ ಆ ಯೋಜನೆಯನ್ನು ಕೈಬಿಟ್ಟು ಬುಕ್ಕಸಾಗರ–ಕಡೇಬಾಗಿಲು ನಡುವೆ ಸೇತುವೆ ನಿರ್ಮಿಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT