ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಿಂದ ಪದವಿ ಕೋರ್ಸ್

7

ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಿಂದ ಪದವಿ ಕೋರ್ಸ್

Published:
Updated:
ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಿಂದ ಪದವಿ ಕೋರ್ಸ್

ಕಲಬುರ್ಗಿ: ಬೆಂಗಳೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ ಜಿಲ್ಲೆಯ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಆಸಕ್ತಿ ವಹಿಸಿದೆ. ಸಂಸ್ಥೆ ನಿರ್ದೇಶಕ ಅನೂಪ್‌ ಕೆ.ಪೂಜಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಿ.ದ್ಯಾಬೇರಿ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಈಚೆಗೆ ಭೇಟಿ ನೀಡಿ ಚರ್ಚಿಸಿದರು.

‘ಇಂದಿನ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸ್ಥಿತಿಗತಿ ಗಮನದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಅಗತ್ಯವಿರುವ ನಾಗರಿಕರನ್ನಾಗಿ ಮಾಡುವುದು ಮತ್ತು ಅವರಲ್ಲಿ ಚೈತನ್ಯ ತುಂಬುವುದು ನಮ್ಮ ಗುರಿ. ಇಂದು ವಿದ್ಯಾರ್ಥಿಗಳು ಏನಿದ್ದಾರೆ ಎನ್ನುವುದಕ್ಕಿಂತ  ಮುಂದೆ ಏನಾಗಬೇಕೆನ್ನುತ್ತಾರೆ ಎಂಬುದು ಮುಖ್ಯ. ಅದಕ್ಕಾಗಿ ಯಾವುದೇ ಹಿನ್ನೆಲೆಯ ವಿದ್ಯಾರ್ಥಿಯನ್ನು ಸಮಾಜದ ಅಗತ್ಯಕ್ಕೆ ತಕ್ಕಂತೆ ರೂಪಿಸಬಹುದಾಗಿದೆ’ ಎಂದು ಅನೂಪ್‌ ಹೇಳಿದರು.

‘ಆರಂಭದಲ್ಲಿ ಸ್ನಾತಕ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ನಂತರ ಸ್ನಾತಕೋತ್ತರ ಮತ್ತು ಸಂಶೋಧನಾ ಕೋರ್ಸ್‌ ಪ್ರಾರಂಭಿಸಲಾಗುವುದು. ಒಂದು ಕೋರ್ಸ್‌ಗೆ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದ್ದು, ಕ್ರಮೇಣ ಈ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಲಾಗುವುದು’ ಎಂದರು.

‘ಪಿಯು ನಂತರ   ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳ ಬದಲಾಗಿ ಸಮಾಜ ವಿಜ್ಞಾನ ಆಯ್ದುಕೊಳ್ಳುವಂತೆ ಮಾಡುವುದು ಹಾಗೂ  ಗುಣಮಟ್ಟದ ಸಂಸ್ಥೆ ನಿರ್ಮಿಸುವುದು ನಮ್ಮ ಆದ್ಯತೆ. ನಾವು ಹೆಚ್ಚು ಪದವಿಗಳನ್ನು ನೀಡುವುದಕ್ಕಿಂತ ಗುಣಮಟ್ಟದ ಪದವೀಧರರನ್ನು  ರೂಪಿಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ.

ವೈಯಕ್ತಿಕ ಕಾಳಜಿ, ಬೋಧನೆ ಮತ್ತು ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳು ಕಲಿಕೆಯನ್ನು ಆನಂದಿಸುವಂತೆ ಮಾಡುವುದು ನಮ್ಮ ಗುರಿ. ಸಂಸ್ಥೆ ಸಂಪೂರ್ಣ ವಸತಿಸಹಿತ ಕ್ಯಾಂಪಸ್ ಆಗಲಿದ್ದು, ಬೆಂಗಳೂರು ವಿವಿಯ 43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಏ.14ರಂದು ರಾಷ್ಟ್ರಪತಿಯವರು ಕ್ಯಾಂಪಸ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಶಿಕ್ಷಕರ ನೇಮಕ ಮತ್ತು ನಿರ್ವಹಣೆ ಕುರಿತು ಮಾಹಿತಿ ನೀಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ, ‘ನಮ್ಮಲ್ಲಿ ಸದ್ಯ 50 ಜನ ಪೂರ್ಣಾವಧಿ ಬೋಧಕರು ಇದ್ದು, 103 ಹುದ್ದೆ ಖಾಲಿ ಇವೆ. ಶೀಘ್ರದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುವುದು.

ಗುಣಮಟ್ಟದ ಬೋಧಕರನ್ನು ಸೆಳೆಯುವ ಉದ್ದೇಶದಿಂದಲೇ ಅತಿಥಿ ಉಪನ್ಯಾಸಕರಿಗೆ ಬೇರೆ ಸಂಸ್ಥೆಗಳಲ್ಲಿ ₹25 ಸಾವಿರ ವೇತನವಿದ್ದರೆ ನಾವು ₹45 ಸಾವಿರ ವೇತನ ನೀಡುತ್ತಿದ್ದೇವೆ. ಸಂಶೋಧನೆಗೆ ಪ್ರೇರೇಪಿಸುವ ಉದ್ದೇಶದಿಂದ ಪ್ರತಿ ಬೋಧಕರಿಗೆ  ಪ್ರತಿ 3 ವರ್ಷಗಳಿಗೆ ₹3 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಇದರಿಂದ ಅವರು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘18 ರಾಜ್ಯಗಳ 1,480 ವಿದ್ಯಾರ್ಥಿಗಳು ವಿವಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಶೇ70 ರಷ್ಟು ವಿದ್ಯಾರ್ಥಿಗಳು ವಸತಿನಿಲಯದಲ್ಲಿರುತ್ತಾರೆ. ಉಳಿದವರು ಸುತ್ತಮುತ್ತಲಿನ ನಗರ, ಗ್ರಾಮಗಳಿಂದ ಬರುತ್ತಾರೆ. ಹೈದರಾಬಾದ್‌ ಕರ್ನಾಟಕದ ವಿದ್ಯಾರ್ಥಿಗಳಿಗೆ 371(ಜೆ) ಪ್ರಕಾರ ಶೇ 8ರಷ್ಟು ಸ್ಥಾನಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು. 

‘ನಮ್ಮ ವಿಶ್ವವಿದ್ಯಾಲಯ 654 ಎಕರೆ ಭೂಮಿ ಹೊಂದಿದ್ದು, ಸದ್ಯ 6 ನಿಕಾಯಗಳು ಮತ್ತು 20 ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ₹12.5 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯಕ್ಕೆ ವೈ-ಫೈ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರತಿವರ್ಷ ಗ್ರಂಥಾಲಯಕ್ಕೆ ₹3 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ’ ಎಂದು ತಿಳಿಸಿದರು. ಸಮ ಕುಲಪತಿ ಪ್ರೊ.ಜಿ.ಆರ್.ನಾಯಕ್, ಕುಲಸಚಿವ ಪ್ರೊ.ಚಂದ್ರಕಾಂತ ಎಂ. ಯಾತನೂರ, ವಿವಿಧ ನಿಕಾಯಗಳ ಡೀನ್‌, ವಿಭಾಗಗಳ ಮುಖ್ಯಸ್ಥರು, ಬೋಧಕರು ಉಪಸ್ಥಿತರಿದ್ದರು.

* *

ಸದ್ಯ  ಯಾವುದಾದರೊಂದು ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡು ಪದವಿ ನೀಡುತ್ತೇವೆ. ನಂತರ ನಮ್ಮ ಸಂಸ್ಥೆಯಿಂದಲೇ ಪದವಿ ನೀಡುತ್ತೇವೆ.

ಅನೂಪ್‌ ಕೆ.ಪೂಜಾರಿ, ನಿರ್ದೇಶಕ, ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry