ಮುಖ್ಯ ರಸ್ತೆ ಅವ್ಯವಸ್ಥೆ; ನಿತ್ಯ ಪರದಾಟ

7

ಮುಖ್ಯ ರಸ್ತೆ ಅವ್ಯವಸ್ಥೆ; ನಿತ್ಯ ಪರದಾಟ

Published:
Updated:
ಮುಖ್ಯ ರಸ್ತೆ ಅವ್ಯವಸ್ಥೆ; ನಿತ್ಯ ಪರದಾಟ

ಹುಬ್ಬಳ್ಳಿ: ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಗುಂಡಿ ತೋಡಿರುವುದರಿಂದ ದೂಳು ಹೆಚ್ಚಾಗಿದೆ. ಚರಂಡಿ ಸ್ವಚ್ಛಗೊಳಿಸದ ಕಾರಣ ದುರ್ವಾಸನೆ ವ್ಯಾಪಿಸಿದೆ. ಆದ್ದರಿಂದ ಜನ ನಿತ್ಯ ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ.

‘ವಾಣಿಜ್ಯ ನಗರ’ದ ಪ್ರಮುಖ ಪ್ರದೇಶಗಳಾದ ನೆಹರೂ ಮೈದಾನದ ಬಳಿಯ ಹಾದಿ, ಕೊಪ್ಪಿಕರ ರಸ್ತೆ, ಐಟಿ ಪಾರ್ಕ್‌ ಸ್ಥಳಗಳಲ್ಲಿ ಗುಂಡಿ ತೋಡಲಾಗಿದೆ. ಅಗೆದ ರಸ್ತೆಯನ್ನು ಸಮ ಮಾಡದೇ ಹಾಗೆ ಬಿಡಲಾಗಿದೆ. ಇದರಿಂದ ವಾಹನ ಸವಾರರು, ಪಾದಚಾರಿಗಳು ನಿತ್ಯ ಪರದಾಡುತ್ತಿದ್ದಾರೆ.

ಒಳಚರಂಡಿ ವ್ಯವಸ್ಥೆ ಮತ್ತು ಕೇಬಲ್‌ ಅಳವಡಿಸುವ ಸಲುವಾಗಿ ನೆಹರೂ ಮೈದಾನದ ಎದುರು ರಸ್ತೆ ಅಗೆಯಲಾಗಿದೆ. ಮೈದಾನದ ಮುಖ್ಯದ್ವಾರದಿಂದ ಕೆಸಿಸಿಐಗೆ ಹೋಗುವ ವರೆಗೆ ಇರುವ ಕಿರಿದಾದ ರಸ್ತೆಯಲ್ಲಿಯೇ ಎರಡು, 3 ಗುಂಡಿಗಳನ್ನು ಅಗೆದಿದ್ದಾರೆ. ಇದರಿಂದ ರಸ್ತೆ ಮುಂದಿರುವ ಅಂಗಡಿಗಳ ಮಾಲೀಕರಿಗೆ ನಿತ್ಯ ಸಂಕಷ್ಟ. ಇದೇ ದಾರಿಯಲ್ಲಿ  ವಾಹನ  ಸಂಚರಿಸುವುದರಿಂದ ಜನ ಮೂಗುಮುಚ್ಚಿಕೊಂಡೇ ಓಡಾಡಬೇಕಿದೆ. ಅಂಗಡಿಗಳ ಮಾಲೀಕರಿಗೆ ದೂಳಿನ ಗೋಳು ತಪ್ಪುತ್ತಿಲ್ಲ.

‘ಕೇಬಲ್‌ ಸಂಪರ್ಕ ಕಡಿದು ಹೋದ ಕಾರಣ ನೆಹರೂ ಮೈದಾನದ ಮುಂದಿನ ರಸ್ತೆ ಅಗೆಯಲಾಗಿದೆ. ಕೆಲಸ ಮುಗಿದರೂ ಇನ್ನೂ ಮುಚ್ಚಿಲ್ಲ. ಇದರಿಂದ ಸವಾರರಿಗೆ, ಪಾದಚಾರಿಗಳಿಗೆ ಓಡಾಡಲು ಭಾರಿ ಸಮಸ್ಯೆಯಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಸಂಬಂಧಪಟ್ಟವರ ದೂರವಾಣಿ ಸಂಖ್ಯೆ ಕೊಡುತ್ತೇವೆ ಎನ್ನುತ್ತಾರೆಯೇ ಹೊರತು ಸಮಸ್ಯೆ ಪರಿಹರಿಸಲು ಯಾರೂ ಮುಂದೆ ಬರುವುದಿಲ್ಲ’ ಎಂದು ವರ್ತಕ ಅಂಬಾದಾಸ ಸಿದ್ಧಲಿಂಗ ಬೇಸರ ವ್ಯಕ್ತಪಡಿಸುತ್ತಾರೆ.

‘ಹಿಂದೆ ಇಲ್ಲೊಮ್ಮೆ ರಸ್ತೆ ಅಗೆದಾಗ ಎಂಜಿನಿಯರ್‌ ಒಬ್ಬರು ಆಯ ತಪ್ಪಿ ಬಿದ್ದು, ಕಾಲು ಮುರಿದುಕೊಂಡಿದ್ದರು. ಈ ರೀತಿಯ ಘಟನೆ ಆಗಬಾರದು ಎನ್ನುವ ಕಾಳಜಿಯಿಂದ ರಸ್ತೆಯನ್ನು ಸಮ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ನೆಹರೂ ಮೈದಾನದಲ್ಲಿ ಪದೇ ಪದೇ ಕಾರ್ಯಕ್ರಮಗಳು ನಡೆಯುವುದರಿಂದ ಸಂಚಾರ ದಟ್ಟಣೆಯೂ ಹೆಚ್ಚು. ಮಳೆ ಬಂದರಂತೂ ಅಂಗಡಿಗಳಿಗೆ ನೀರು ನುಗ್ಗುತ್ತದೆ’ ಎಂದರು.

‘ನೆಹರೂ ಮೈದಾನದ ಮುಂದಿನ ರಸ್ತೆಯನ್ನು ಹಿಂದೆಯೂ ಅಗೆಯಲಾಗಿತ್ತು. ಕೆಲಸ ಮುಗಿದರೂ ರಸ್ತೆ ಸಮ ಮಾಡುವುದಿಲ್ಲ. ಆದ್ದರಿಂದ ರಸ್ತೆಯಲ್ಲಿಯೇ ಮಣ್ಣು ಉಳಿದು ಬಿಡುತ್ತದೆ. ಅನೇಕ ಬಾರಿ ವಾಹನ ಸವಾರು ಬೀಳುವ ಪರಿಸ್ಥಿತಿಯೂ ಬಂದಿದೆ.  ಅವಘಡ ಸಂಭವಿಸುವ ಮೊದಲು ಪಾಲಿಕೆ ಎಚ್ಚೆತ್ತುಕೊಳ್ಳಬೇಕು’ ಎಂದು ಪಾದಚಾರಿ ಅಜಯ ಹೂಗಾರ ಹೇಳಿದರು. ‘ಮೈದಾನದ ಮುಂದೆ ಚರಂಡಿಗಾಗಿ ಅಗೆದ ಗುಂಡಿಯಲ್ಲಿ ಅನೇಕರು ಕಸ ಚೆಲ್ಲುತ್ತಾರೆ.  ಕೂರಲು ಸಾಧ್ಯವಾಗುತ್ತಿಲ್ಲ’ ಎಂದು ರಾಘವೇಂದ್ರ ಬೇಸರ ತೋಡಿಕೊಂಡರು.

ರೋಗದ ಭೀತಿ: ಸ್ಥಳೀಯರ ಆತಂಕ

‘ನೆಹರೂ ಮೈದಾನದಲ್ಲಿನ ಮುಂಭಾಗದಲ್ಲಿ ಕಿರಿದಾದ ರಸ್ತೆ ಇದ್ದರೂ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ರಸ್ತೆ ಅಗೆದು ಸರಿಯಾಗಿ ಮುಚ್ಚದೇ ಇರುವುದರಿಂದ ಅಂಗಡಿಯ ಒಳಗೆ ದೂಳು ಬರುತ್ತಿದೆ. ಅಂಗಡಿಯಲ್ಲಿ ಕೂರಲು ಸಹ ಆಗುತ್ತಿಲ್ಲ. ಅಲ್ಲಲ್ಲಿ ಕಸದ ರಾಶಿ ಇದ್ದರೂ ಸ್ವಚ್ಛಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ. ರೋಗದ ಭೀತಿ ಎದುರಾಗಿದೆ’ ಎಂದು ಜ್ಯೋತಿ ಎಂಟರ್‌ ಪ್ರೈಸಸ್‌ನ ಮಾಲೀಕ ನಾಗರಾಜ್ ಕಾಳಭೈರವ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry