ಸಾರ್ವಜನಿಕ ಸೇವೆಗೆ ಸಾಮಾಜಿಕ ಜಾಲತಾಣ

7

ಸಾರ್ವಜನಿಕ ಸೇವೆಗೆ ಸಾಮಾಜಿಕ ಜಾಲತಾಣ

Published:
Updated:
ಸಾರ್ವಜನಿಕ ಸೇವೆಗೆ ಸಾಮಾಜಿಕ ಜಾಲತಾಣ

ವಿಜಯಪುರ: ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಲು ಜಿಲ್ಲಾ ಪೊಲೀಸ್ ಇಲಾಖೆ ವಿನೂತನ ಯತ್ನಕ್ಕೆ ಚಾಲನೆ ನೀಡಿದೆ. ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ, ದಾಖಲಾತಿ ಕಳೆದುಕೊಂಡವರು ಅನಗತ್ಯವಾಗಿ ಪೊಲೀಸ್‌ ಠಾಣೆಗಳಿಗೆ ಅಲೆಯುವುದು ತಪ್ಪುತ್ತದೆ. ಮೂರ್ನಾಲ್ಕು ದಿನ ಮನೆಗೆ ಬೀಗ ಹಾಕಿ, ಕುಟುಂಬ ಸಮೇತ ತೆರಳುವವರು ಸಹ ಮನೆಯ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ !

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿರುವ ಕುಲದೀಪ್‌ ಕುಮಾರ್‌ ಆರ್‌.ಜೈನ್‌, ಸಾಮಾಜಿಕ ಜಾಲತಾಣಗಳನ್ನು ಸಾರ್ವಜನಿಕರ ಸೇವೆಗೆ ಬಳಸಿಕೊಳ್ಳಲು ಈ ವಿನೂತನ ಯತ್ನ ಆರಂಭಿಸಿದ್ದಾರೆ.

‘ಎಲ್ಲೆಡೆ ಸಾಮಾಜಿಕ ಜಾಲತಾಣ ನವ ಮಾಧ್ಯಮವಾಗಿ ಕಾರ್ಯ ನಿರ್ವಹಿ ಸುತ್ತಿದೆ. ಪ್ರಮುಖ ವಿದ್ಯಮಾನ ಗಳು ಚರ್ಚೆಗೊಳ ಗಾಗುವುದು, ಒಬ್ಬರಿಂದ ಒಬ್ಬರಿಗೆ ವಿನಿಮಯ ಗೊಳ್ಳುವುದು, ಹಂಚಿಕೆಯಾಗುವುದು ಸಹ ಈ ನವ ಮಾಧ್ಯಮಗಳಲ್ಲೇ.

ಈ ನವ ಮಾಧ್ಯಮಗಳನ್ನು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆ ಸಜ್ಜು ಗೊಂಡಿದೆ. ಟ್ವಿಟ್ಟರ್‌, ಫೇಸ್‌ಬುಕ್‌, ವಾಟ್ಸ್ ಆ್ಯಪ್‌ ಖಾತೆಗಳನ್ನು ತೆರೆದು ಜಿಲ್ಲೆಯ ಜನರಿಂದ ದೂರುಗಳನ್ನು ಆಹ್ವಾನಿಸಲಾಗಿದೆ.

ಜನರ ಸ್ಪಂದನೆ ಗಮನಿಸಿ, ಸೇವೆಗೆ ಇನ್ನಷ್ಟು ಆಧುನಿಕ ಸ್ಪರ್ಶ ನೀಡುವ ಜತೆಗೆ, ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಶೇಷ ಕಾರ್ಯತಂತ್ರ ರೂಪಿಸಲಾಗು ವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ತಿಳಿಸಿದ್ದಾರೆ.

ಸಿಟಿಜನ್‌ ಸೆಂಟ್ರಲ್‌ ಪೋರ್ಟಲ್‌: ‘ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರಿಂದ ದೂರು, ಸಲಹೆ ಸ್ವೀಕರಿಸುವ ಜತೆಗೆ ಸಮಸ್ಯೆಗೆ ತಕ್ಷಣ ಸ್ಪಂದಿಸಲು ವಿಜಯಪುರ ಜಿಲ್ಲಾ ಪೊಲೀಸ್‌ ವತಿಯಿಂದ ಸಿಟಿಜನ್‌ ಸೆಂಟ್ರಲ್‌ ಪೋರ್ಟಲ್‌ ಆರಂಭಿಸಲಾಗಿದೆ.

ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ಸಿಟಿಜನ್‌ ಸೆಂಟ್ರಲ್‌ ಪೋರ್ಟಲ್‌ ಲಭ್ಯ ವಾಗುತ್ತದೆ. ಇದರಲ್ಲಿ ಮೊದಲು ಸಾರ್ವಜನಿಕರು ತಮ್ಮ ನೋಂದಣಿ ಮಾಡಿಕೊಳ್ಳಬೇಕು. ಈ ಸಂದರ್ಭ ಯೂಸರ್‌ ನೇಮ್‌, ಪಾಸ್‌ವರ್ಡ್‌ ಪಡೆಯಬೇಕು. ಸಿಟಿಜನ್‌ ಸೆಂಟ್ರಲ್‌ ಪೋರ್ಟಲ್‌ನಲ್ಲಿ ಸಾರ್ವಜನಿಕರು ಯಾವುದೇ ರೀತಿಯ ದೂರು ಸಲ್ಲಿಸಬಹುದು.

ಅದು ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಆನ್‌ಲೈನ್‌ ಮೂಲಕವೇ ವರ್ಗಾವಣೆಗೊಂಡು, ಮುಂದಿನ ಕ್ರಮಕ್ಕೆ ಶಿಫಾರಸು ಹೋಗುತ್ತದೆ. ಅದರಂತೆ ಮುಂದಿನ ಪ್ರಕ್ರಿಯೆ ನಡೆಯುತ್ತವೆ’ ಎಂದು ಜಿಲ್ಲಾ ವಿಶೇಷ ದಳದ ಇನ್ಸ್‌ಪೆಕ್ಟರ್‌ ಬಸವರಾಜ ಮೂಕರ್ತಿಹಾಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೊಬೈಲ್‌, ಸಿಮ್‌, ದಾಖಲಾತಿ ಕಳೆದುಕೊಂಡವರಿಗೆ ಈ ಪೋರ್ಟಲ್‌ ತುಂಬಾ ಅನುಕೂಲಕಾರಿಯಾಗಲಿದೆ. ಒಂದೇ ಕೆಲಸಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪೊಲೀಸ್ ಠಾಣೆಗೆ ಅಲೆದಾಡುವುದು ತಪ್ಪುತ್ತದೆ.

ಈಗಿನ ಪ್ರಕ್ರಿಯೆಯಂತೆ ಮೊಬೈಲ್, ಸಿಮ್‌, ದಾಖಲಾತಿ ಕಳೆದುಕೊಂಡವರು ಮೊದಲು ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಬೇಕು. ನಂತರ ನೋಟರಿ ವಕೀಲರ ಬಳಿ ಅಫಿಡವಿಟ್‌ ಮಾಡಿಸಿಕೊಂಡು ಮತ್ತೊಮ್ಮೆ ಠಾಣೆಗೆ ಬಂದು ದೂರು ಪ್ರತಿ ಸಲ್ಲಿಸಬೇಕು.

ನಂತರ ಪೊಲೀಸರು ಶೋಧಿಸುತ್ತಾರೆ. ಸಿಗದಿದ್ದ ಸಂದರ್ಭ ನಿಮ್ಮ ವಸ್ತು ದೊರಕಲಿಲ್ಲ ಎಂಬ ಹಿಂಬರಹದ ಲಿಖಿತ ಹೇಳಿಕೆ ಕೊಟ್ಟ ಬಳಿಕ ಡ್ಯುಪ್ಲಿಕೇಟ್‌ ದಾಖಲಾತಿ, ಸಿಮ್‌ ಪಡೆಯಬಹುದು. ಆದರೆ ಇದೀಗ ಅನುಷ್ಠಾನ ಗೊಂಡಿರುವ ನವ ಮಾಧ್ಯಮದ ಸಿಟಿಜನ್‌ ಸೆಂಟ್ರಲ್‌ ಪೋರ್ಟಲ್‌ನಲ್ಲಿ ದಾಖಲಾತಿ ಕಳೆದುಕೊಂಡವರು ದೂರು ಸಲ್ಲಿಸಿದರೆ ಸಾಕು. ಪೊಲೀಸರೇ ಮುಂದಿನ ತನಿಖೆ ನಡೆಸಿ, ವಸ್ತು ಸಿಕ್ಕರೆ ಸಿಕ್ಕಿದೆ ಎಂದು, ಸಿಗದಿದ್ದರೆ ಸಿಕ್ಕಿಲ್ಲ ಎಂದು ದೂರಿಗೆ ಅಲ್ಲಿಯೇ ಉತ್ತರಿಸುತ್ತಾರೆ.

ಇದರ ಆಧಾರದಲ್ಲಿ ಸಾರ್ವಜನಿಕರು ಮುಂದಿನ ನಿರ್ಧಾರ ತೆಗೆದು ಕೊಳ್ಳಬಹುದು. ದಾಖಲಾತಿ, ಸಿಮ್‌ ಅತ್ಯಗತ್ಯವಿದ್ದರೆ ಪೊಲೀಸರಿಂದ ಉತ್ತರ ದೊರೆತ ಸಿಕ್ಕ ತಕ್ಷಣ ಠಾಣೆಗೆ ಬಂದು ಹಿಂಬರಹದ ಪ್ರತಿ ಪಡೆದು ಡ್ಯುಪ್ಲಿಕೇಟ್‌ ದಾಖಲಾತಿ ಪಡೆದುಕೊಳ್ಳಬಹುದು’ ಎಂದು ಅವರು ಹೇಳಿದರು.

‘ಕುಟುಂಬ ಸಮೇತ ಮನೆಗೆ ಬೀಗ ಹಾಕಿ ಹೊರ ಹೋಗುವವರು ಈ ಪೋರ್ಟಲ್‌ನಲ್ಲಿ ಮಾಹಿತಿ ನೀಡಿದರೆ, ಸಂಬಂಧಿಸಿದ ಪೊಲೀಸ್ ಠಾಣೆಗೆ ರವಾನಿಸಲಾಗುವುದು. ಅಲ್ಲಿನ ಬೀಟ್‌ ಸಿಬ್ಬಂದಿ ಕಣ್ಗಾವಲಿಡುವ ಜತೆ, ರಾತ್ರಿ ಪಾಳಿಯ ಗಸ್ತು ಸಿಬ್ಬಂದಿಗೂ ಸೂಚನೆ ನೀಡಿರುತ್ತಾರೆ. ಮನೆಯವರು ಮರಳುವ ತನಕ ಇಲಾಖೆಯ ಸಿಬ್ಬಂದಿ ನಿಗಾವಹಿಸಿರುತ್ತಾರೆ. ಇದರಿಂದ ಮನೆಗಳ್ಳತನ ತಪ್ಪಿಸಬಹುದು’ ಎಂದು ಮೂಕರ್ತಿಹಾಳ ತಿಳಿಸಿದರು.

ವಿಜಯಪುರ ಪೊಲೀಸರ ನವ ಮಾಧ್ಯಮ

* ಜಿಲ್ಲಾ ಪೊಲೀಸ್‌ ವಾಟ್ಸ್‌ ಆ್ಯಪ್‌ ನಂ: 9480804200

* ಟ್ವಿಟ್ಟರ್: VJP DISTRICT POLICE

* ಬ್ಲಾಗ್: [bijapurpolicenews.blogspot.com]

* ಫೇಸ್‌ಬುಕ್‌: Vijayapur District Police

* * 

ಜಿಲ್ಲೆಯ ಸಾರ್ವಜನಿಕರ ಸೇವೆಗೆ, ಸಮಸ್ಯೆಗೆ ತಕ್ಷಣವೇ ಸ್ಪಂದಿಸಲು ನವ ಮಾಧ್ಯಮ ಬಳಸಲಾಗುತ್ತಿದೆ. ಜನರ ಸ್ಪಂದನೆ ಮೇಲೆ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು

ಕುಲದೀಪ್‌ ಕುಮಾರ್‌ ಆರ್‌.ಜೈನ್‌

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry