ಕೃಷಿಕರಲ್ಲಿ ಸಂಭ್ರಮ ಹೆಚ್ಚಿಸಿದ ಕಾರಹುಣ್ಣಿಮೆ

7

ಕೃಷಿಕರಲ್ಲಿ ಸಂಭ್ರಮ ಹೆಚ್ಚಿಸಿದ ಕಾರಹುಣ್ಣಿಮೆ

Published:
Updated:
ಕೃಷಿಕರಲ್ಲಿ ಸಂಭ್ರಮ ಹೆಚ್ಚಿಸಿದ ಕಾರಹುಣ್ಣಿಮೆ

ವಿಜಯಪುರ: ರೋಹಿಣಿ ಮಳೆ ಕೊನೆಯ ಪಾದದಲ್ಲಿ ಕೃಪೆ ತೋರಿದೆ. ಸೋಮವಾರ 5.76, ಮಂಗಳವಾರ 10.88 ಸೆಂ.ಮೀ.ನಷ್ಟು ಸರಾಸರಿ ಮಳೆ ಜಿಲ್ಲೆಯಲ್ಲಿ ಸುರಿದಿದ್ದು, ಕೃಷಿಕರಲ್ಲಿ ಕಾರಹುಣ್ಣಿಮೆಯ ಸಂಭ್ರಮ ಹೆಚ್ಚಿಸಿದೆ.

ನಾಲ್ಕೈದು ದಿನದಿಂದಲೂ ನಗರದ ಇಂಡಿ ರಸ್ತೆಯಲ್ಲಿ ‘ಕಾರ ಹುಣ್ಣಿಮೆ’ ಸಂತೆ ಜಮಾಯಿಸಿದೆ. ನಗರದ ಸುತ್ತಮುತ್ತಲಿನ ಗ್ರಾಮಗಳ ರೈತರು ಸೇರಿದಂತೆ ದೂರದೂರಿನ ಕೃಷಿಕರು ಎತ್ತುಗಳ ಅಲಂಕಾರ ಸಾಮಗ್ರಿ ಖರೀದಿಗಾಗಿ ನಗರಕ್ಕೆ ಗುರುವಾರ ಬಂದಿದ್ದರು.

‘ಕಾರ ಹುಣ್ಣಿಮೆ ಸಂಭ್ರಮ ತಾತ–ಮುತ್ತಾತಂದಿರ ಕಾಲದಿಂದಲೂ ನಡೆದಿದೆ. ಇದಕ್ಕೂ ಮಳೆಗೂ ಸಂಬಂಧ ವಿಲ್ಲ. ಹುಣ್ಣಿಮೆ ಮುನ್ನ ಸಾಕಷ್ಟು ಮಳೆ ಸುರಿದು, ಹೊಲದಲ್ಲಿ ಮುಂಗಾರು ನಳನಳಿಸುತ್ತಿದ್ದರೆ ನಮ್ಮ ಸಡಗರ ಆಗಸದೆತ್ತರಕ್ಕಿರುತ್ತದೆ. ಮಳೆ ಯಾಗದಿ ದ್ದರೂ ಸಹ ಸಂಪ್ರದಾಯದ ಆಚರಣೆ ಬಿಟ್ಟಿಲ್ಲ’ ಎಂದು ವಿಜಯಪುರ ತಾಲ್ಲೂಕು ಅಡವಿ ಸಂಗಾಪುರ ಗ್ರಾಮದ ರೈತ ಮಲ್ಲು ಸದಪ್ಪ ಕೋಟ್ಯಾಳ ಹೇಳಿದರು.

‘ಈ ಹಿಂದೆ ನಮ್ಮೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎತ್ತುಗಳಿದ್ದವು. ಇದೀಗ 20 ಜೋಡಿ ಎತ್ತುಗಳಿವೆ. ಬಸವಣ್ಣ ಇದ್ದವರ ಮನೆಯ ಕಾರ ಹುಣ್ಣಿಮೆ ಸಂಭ್ರಮವೇ ಬೇರೆ. ಎತ್ತುಗಳಿಲ್ಲದವರ ಮನೆಯವರ ಸಂಪ್ರದಾಯಿಕ ಆಚರಣೆಯೇ ಬೇರೆ.

ಎತ್ತುಗಳಿಗೆ ನಸುಕಿನಲ್ಲೇ ಸ್ನಾನ ಮಾಡಿಸಿ, ತಾವು ಸ್ನಾನಗೈದು ಶ್ರದ್ಧಾಭಕ್ತಿ ಯಿಂದ ಪೂಜಿಸುತ್ತೇವೆ. ಹೊಸ ಹಗ್ಗ, ಹಣೆಪಟ್ಟಿ, ಗೆಜ್ಜೆ ಸರ, ಮೂಗುದಾರ, ಕೊರಳಗಂಟೆ, ಕೊರಳಿಗೆ ಅಂಗಡ, ಬಾರು, ದೃಷ್ಟಿ ಮಣಿ, ಜೂಲ, ಮಿಣಿ ಯೊಂದಿಗೆ ಅಲಂಕರಿಸಿ ರಂಗು ರಂಗಿನ ಬಣ್ಣ ಬಳಿದು ಸಂಭ್ರಮಿಸುತ್ತೇವೆ.

ಮುಸ್ಸಂಜೆ ಊರ ಮುಂದೆ ಎತ್ತುಗಳನ್ನು ಓಡಿಸಿ ಸಂಭ್ರಮ ಪಡುತ್ತೇವೆ. ಈ ಸಂದರ್ಭವೇ ವರ್ಷದ ಬೆಳೆಯ ಸ್ಥಿತಿ–ಗತಿ ತಿಳಿದುಕೊಳ್ಳುವ ‘ಕರಿ’ ಆಚರಣೆಯನ್ನು ನಡೆಸುತ್ತೇವೆ’ ಎಂದು ಮಲ್ಲು ಹೇಳಿದರು. ‘ಹಿಂದಿನ ವರ್ಷ ರೋಹಿಣಿ ಮಳೆ ಚಲೋ ನಡೆಸಿತ್ತು. ಹೊಲಗಳಲ್ಲಿ ಬಿತ್ತನೆ ನಡೆದಿತ್ತು. ಈ ಬಾರಿ ಇನ್ನೂ ಕೆಲವೆಡೆ ಮಳೆಯೇ ಸುರಿದಿಲ್ಲ.

ಇದಕ್ಕೂ ಕಾರಹುಣ್ಣಿಮೆ ‘ಕರಿ’ಗೂ ಸಂಬಂಧವಿಲ್ಲ. ವರ್ಷಕ್ಕೊಮ್ಮೆ ಬರುವ ಕಾರ ಹುಣ್ಣಿಮೆಯಂದು ಬಸವಣ್ಣನನ್ನು ಸಿಂಗರಿಸುವುದೇ ನಮಗೊಂದು ಹಬ್ಬ. ಪ್ರತಿಯೊಬ್ಬರು ಕನಿಷ್ಠ ₹ 1000 ಖರ್ಚು ಮಾಡಿ ಎತ್ತುಗಳನ್ನು ಅಲಂಕರಿಸಿ ಸಂಭ್ರಮಿಸುತ್ತಾನೆ. ವರ್ಷವಿಡಿ ತನ್ನ ಜತೆ ದುಡಿಯುವ ಎತ್ತುಗಳನ್ನು ಅಲಂಕರಿಸಿ, ಪೂಜಿಸಿ, ನಮಿಸುವ ಶ್ರೇಷ್ಠ ಕಾಯಕವನ್ನು ಹುಣ್ಣಿಮೆಯಂದು ನಡೆಸಿದರೆ, ವರ್ಷ ವಿಡಿ ನಮಗೆ ಶುಭ ಫಲ ದೊರಕುತ್ತದೆ ಎಂಬ ನಂಬಿಕೆ ನಮ್ಮದಾಗಿದೆ’ ಎಂದು ಇಂಡಿ ತಾಲ್ಲೂಕು ಹೊರ್ತಿ ಸಮೀಪದ ಕೊಟ್ನಾಳ ಗ್ರಾಮದ ರೈತ ರಮೇಶ ಲಾಯಪ್ಪ ಸೊಲ್ಲಾಪುರ ತಿಳಿಸಿದರು.

ದೂರದೂರಿನ ವ್ಯಾಪಾರಿ ಸಮೂಹ:

ಕಾರಹುಣ್ಣಿಮೆ ಸಂಭ್ರಮ ಇಮ್ಮಡಿ ಗೊಳಿಸಲು ವಿಜಯಪುರ ಜಿಲ್ಲೆಯ ವ್ಯಾಪಾರಿಗಳು ಸೇರಿದಂತೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇನರ್ತಿ ಗ್ರಾಮದ ವ್ಯಾಪಾರಸ್ಥರು, ನೆರೆಯ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮೂಡಲಗಿ ಗ್ರಾಮದ ವ್ಯಾಪಾರಸ್ಥರು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆಗೆ ಕಳೆದ ಶನಿವಾರ–ಭಾನುವಾರವೇ ಬಂದ್ಟಿದ್ದಾರೆ.

‘ಇಲ್ಲಿಗೆ ಬಂದು ನಾಲ್ಕೈದು ದಿನ ವಾಯ್ತು. ಅಪ್ಪಾರ ಕಾಲದಿಂದಲೂ ವ್ಯಾಪಾರಕ್ಕಾಗಿ ಇಲ್ಲಿಗೆ ಬರ್ತೀವಿ. ನಮ್ಮೂರಿನಿಂದ 15–20 ಮಂದಿ ವ್ಯಾಪಾರಸ್ಥರು ಕಾರ ಹುಣ್ಣಿಮೆ ವಹಿವಾಟಿಗಾಗಿ ವಿಜಯಪುರ ಜಿಲ್ಲೆಗೆ ಬರುತ್ತೇವೆ’ ಎಂದು ಹಿರೇನರ್ತಿಯ ಇಮಾಮ್‌ಸಾಬ್‌ ನದಾಫ ತಿಳಿಸಿದರು.

‘ವರ್ಷವಿಡಿ ನಮ್ಮದು ಇದೇ ವ್ಯಾಪಾರ. ಕಾರಹುಣ್ಣಿಮೆ ಸಂಭ್ರಮದ ಸಮಯ ಇಲ್ಲಿಗೆ ಬಂದರೆ, ದೀಪಾವಳಿ ವೇಳೆಗೆ ಮುಂಡಗೋಡ, ಶಿರಸಿ, ಸಿದ್ದಾಪುರ ಭಾಗಕ್ಕೆ ತೆರಳುತ್ತೇವೆ. ಅಲ್ಲಿ ಆ ಸಮಯದಲ್ಲಿ ಎತ್ತುಗಳನ್ನು ಅಲಂಕರಿಸಿ ಮೆರವಣಿಗೆ ನಡೆಸುತ್ತಾರೆ’ ಎಂದರು.

‘ಮುತ್ಯಾರ ಕಾಲದಿಂದಲೂ ನಮ್ಮದು ಇದೇ ಕಸುಬು. ಹುಣ್ಣಿಮೆ ಮುನ್ನಾ ದಿನಗಳಲ್ಲಿ ಮಹಾರಾಷ್ಟ್ರದ ಇಚಲಕರಂಜಿಗೆ ತೆರಳಿ ಹಗ್ಗದ ನೂಲು ತರ್ತೇವೆ. ಅಲ್ಲಿಂದ ಇಲ್ಲಿಗೆ ನೂಲು ಬರೋದರೊಳಗಾಗಿ ನಮಗೆ ಒಂದು ಕೆ.ಜಿ.ಗೆ ₹ 40 ಬೀಳುತ್ತೆ.

ಮೂರ್ನಾಲ್ಕು ಮಂದಿ ಜತೆಯಾಗಿ ಹೋಗಿ ಒಂದು ಲೋಡ್‌ ತರ್ತೇವೆ. ಬಳಿಕ ಇಲ್ಲೇ ಅಗತ್ಯ ಸಾಮಗ್ರಿ ಸಿದ್ಧಗೊಳಿಸಿ ಮಾರಾಟ ನಡೆಸ್ತೀವಿ’ ಎಂದು ನಗರ ಮೂಲದ ವ್ಯಾಪಾರಿ ಏಕನಾಥ ದೇವಕುಳೆ ತಿಳಿಸಿದರು.

* * 

ಅಪ್ಪಾರ ಕಾಲದಿಂದಲೂ ವಿಜಯಪುರಕ್ಕೆ ವ್ಯಾಪಾರಕ್ಕಾಗಿ ಬರುವೆ. ಮಳೆಯಿಲ್ಲದೆ ಮಂದಿ ಕೈಯಲ್ಲಿ ರೊಕ್ಕಇಲ್ಲ. ವರ್ಷದಿಂದ ವರ್ಷಕ್ಕೆ ವಹಿವಾಟು ಕುಸಿಯುತ್ತಿದೆ

ಲಲಿತಾ ರಾಮಚಂದ್ರ ನಾರಾಯಣಕರ

ಮೂಡಲಗಿಯ ವ್ಯಾಪಾರಿ

* * 

ಮಿರಗಾ ಆರಂಭಗೊಂಡಿದೆ. ಕೃಷಿ ಚಟುವಟಿಕೆ ಬಿರುಸು ಪಡೆಯಲಿವೆ. ಈ ಹೊತ್ತಿನಲ್ಲೇ ‘ಕಾರ ಹುಣ್ಣಿಮೆ’ ಬಂದಿರುವುದು ನಮ್ಮ ಖುಷಿ ಹೆಚ್ಚಿಸಿದೆ

ಅಶೋಕ ಗಿರಡ್ಡಿ ಜಂಬಗಿಯ ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry