3 ಲಕ್ಷ ಸಸಿ ನೆಡಲು ಕ್ರಿಯಾಯೋಜನೆ

7

3 ಲಕ್ಷ ಸಸಿ ನೆಡಲು ಕ್ರಿಯಾಯೋಜನೆ

Published:
Updated:
3 ಲಕ್ಷ ಸಸಿ ನೆಡಲು ಕ್ರಿಯಾಯೋಜನೆ

ಚಿಕ್ಕೋಡಿ: ಇಲ್ಲಿನ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯು ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಸುಮಾರು 3 ಲಕ್ಷಕ್ಕಿಂತ ಹೆಚ್ಚಿನ ಸಸಿಗಳನ್ನು ನೆಡಲು ಕ್ರಿಯಾ ಯೋಜನೆ ರೂಪಿಸಿಕೊಂಡಿದೆ.

ತಾಲ್ಲೂಕಿನ ಜೈನಾಪುರ, ಚಿಂಚಣಿ ಗ್ರಾಮ ವ್ಯಾಪ್ತಿಯಲ್ಲಿ ಇರುವ  ಸಸ್ಯಪಾಲನಾ ಕೇಂದ್ರದಲ್ಲಿ 4.50 ಲಕ್ಷಕ್ಕಿಂತ ಹೆಚ್ಚಿನ ಸಸಿಗಳನ್ನು ಬೆಳೆಸಿ ಪೋಷಿಸಿ ಪಾಲನೆ ಮಾಡುತ್ತಿದೆ.

ಪ್ರಸಕ್ತ ವರ್ಷದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಸುಮಾರು 1 ಲಕ್ಷ ವಿವಿಧ ಜಾತಿಯ ಸಸಿಗಳನ್ನು ನೆಡಲು ಸಂಕಲ್ಪ ಮಾಡಿದೆ. ತಾಲ್ಲೂಕಿನ ಯಮಗರ್ಣಿ, ಬೂದಿಹಾಳ ರಸ್ತೆ,  ಯರನಾಳ-ರಾಮಲಿಂಗೇಶ್ವರ ದೇವಸ್ಥಾನ ರಸ್ತೆ, ಆಡಿ–ಹಂಚನಾಳ ರಸ್ತೆ, ಅಮರ ಝರಿ–ಗವಾಣ ರಸ್ತೆಯಲ್ಲಿ ಸಸಿಗಳನ್ನು ನೆಡಲಾಗುತ್ತಿದೆ.

ನಾಗರಾಳ ಮತ್ತು ಚೆಂದೂರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲು ಕಾರ್ಯಕ್ರಮ ಹಾಕಿಕೊಂಡಿದೆ. ಆಸಕ್ತ ರೈತರು ಸಹ ಸಸಿಗಳನ್ನು ನೆಡಲು ಮುಂದೆ ಬಂದರೆ, ಅರಣ್ಯ ಇಲಾಖೆ ಸಸಿಗಳನ್ನು ನೀಡಿ ಪ್ರೋತ್ಸಾಹ ಧನ ನೀಡುತ್ತಿದೆ.

ಇನ್ನೂ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ಮತ್ತು ಹುಕ್ಕೇರಿ ತಾಲ್ಲೂಕುಗಳಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಅರಣ್ಯೀಕರಣಕ್ಕಾಗಿ ಒಟ್ಟು ವಿವಿಧ ಜಾತಿಯ 2.90 ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡುವ ಗುರಿ ಹಾಕಿ ಕೊಂಡಿದೆ. ಇನ್ನೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಅರಣ್ಯೀಕರಣ ಕಾರ್ಯಕ್ರಮದಡಿ ವಿವಿಧ ಜಾತಿ ಸಸಿಗಳನ್ನು ನೆಡುವ ಸಂಕಲ್ಪ ಅರಣ್ಯ ಇಲಾಖೆ ಹೊಂದಿದೆ.

ತಾಲ್ಲೂಕಿನ ಜೈನಾಪೂರ ಗ್ರಾಮದ ಹತ್ತಿರ ಇರುವ ಸಸ್ಯ ಪಾಲನಾ ಕೇಂದ್ರದಲ್ಲಿ ವಿವಿಧ ಜಾತಿಯ ಸುಮಾರು 3 ಲಕ್ಷಕ್ಕೂ ಅಧಿಕ ಸಸಿಗಳನ್ನು ಬೆಳೆಸಿ ಪೋಷಿಸಲಾಗುತ್ತದೆ.

‘ಪ್ರಸಕ್ತ ವರ್ಷದಲ್ಲಿ ತಾಲ್ಲೂಕಿನ ನಾಯಿಂಗ್ಲಜ ಗುಡ್ಡಗಾಡು ಪ್ರದೇಶದ 50 ಹೆಕ್ಟೆರ ವ್ಯಾಪ್ತಿಯಲ್ಲಿ 35 ಸಾವಿರ ಸಸಿ, ಪಟ್ಟಣಕುಡಿ ಗ್ರಾಮದ 30 ಹೆಕ್ಟೇರ್‌ ಪ್ರದೇಶದಲ್ಲಿ 15,840 ಸಸಿಗಳು, ಕರೋಶಿ ಗ್ರಾಮ ವ್ಯಾಪ್ತಿಯ 25 ಹೆಕ್ಟೇರ್‌ ಪ್ರದೇಶದಲ್ಲಿ 1,11,150 ಸಸಿಗಳು ಮತ್ತು ಹುಕ್ಕೇರಿ ತಾಲ್ಲೂಕಿನ ಬೆಳವಿ ಗ್ರಾಮ ವ್ಯಾಪ್ತಿಯಲ್ಲಿ 25 ಹೆಕ್ಟೇರ್‌ ಪ್ರದೇಶದಲ್ಲಿ 11 ಸಾವಿರ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದೆ.

ರೈತರು ಸಸಿಗಳನ್ನು ನೆಟ್ಟು ಪಾಲನೆ ಮಾಡಿದರೆ ಮೊದಲು ಮತ್ತು ಎರಡನೆ ವರ್ಷದಲ್ಲಿ ಒಂದು ಸಸಿಗೆ ₹ 20, ಮೂರನೆ ವರ್ಷದಲ್ಲಿ ₹ 40 ಪ್ರೋತ್ಸಾಹ ಧನವನ್ನು  ಸರ್ಕಾರ ನೀಡುತ್ತದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜು ಕಾಂಬಳೆ ಹೇಳುತ್ತಾರೆ.

ಜೈನಾಪೂರ-– ಚಿಂಚಣಿಯಲ್ಲಿ ಸಸಿಗಳ ಪಾಲನೆ: ಸಾಮಾಜಿಕ ಅರಣ್ಯ ಇಲಾಖೆ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯು ತಾಲ್ಲೂಕಿನ ಜೈನಾಪೂರ ಗ್ರಾಮದ ಕೆರೆ ಹತ್ತಿರ ಇರುವ ಸಸ್ಯ ಪಾಲನಾ ಕೇಂದ್ರದಲ್ಲಿ ವಿವಿಧ ಲೆಕ್ಕ ಶೀರ್ಷಿಕೆಯಡಿ ಗ್ಲಿರಿಸಿಡಿಯಾ, ಹುಲಗಲ, ತಪಸಿ, ಸಿಮರೂಬಾ, ಅಂಜನ, ಕ್ಯಾಸೋಡಾ, ಸಿಸ್ಸು, ಬೇವು, ಬಂಗಾಲಿ, ರೇನಟ್ರೀ, ಆಲ, ಅರಳಿ, ಜಾಂಬಳ ಗಿಡ ಬೆಳೆಸಲಾಗುತ್ತದೆ. ಇದಲ್ಲದೆ ಅಗೇವಾ, ಬೇಡ್ಸ್, ಸೀತಾಫಲ, ಹೊನ್ನಿ, ಮತ್ತಿ, ಪಿಂವರಿ, ಗೋಣಿ, ಬಸರಿ, ಅತ್ತಿ, ಬುಗ್ಗರಿ, ಮಲ್ಲಿಗೆ, ಬದಾಮ, ಸಂಕೇಶ್ವರಿ, ಸಾಗವಾಣಿ, ಕಾಜು, ಹುಣಸೆ, ಮಾವು, ಅಶೋಕ, ನೆಲ್ಲಿ, ಸಂಪಿಗೆ, ಕರಿಬೇವು ಸೇರಿದಂತೆ ಮುಂತಾದ ಜಾತಿಯ ಒಟ್ಟು 4.50 ಲಕ್ಷಕ್ಕೂ ಅಧಿಕ ಸಸಿಗಳು ಬೆಳದು ನಿಂತಿವೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ತಿಳಿಸಿದ್ದಾರೆ. 

ಸುಧಾಕರ ತಳವಾರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry