ಆಡಳಿತ ಮಂಡಳಿ, ಶಿಕ್ಷಕರ ವಿರುದ್ಧ ಕ್ರಮ

7

ಆಡಳಿತ ಮಂಡಳಿ, ಶಿಕ್ಷಕರ ವಿರುದ್ಧ ಕ್ರಮ

Published:
Updated:
ಆಡಳಿತ ಮಂಡಳಿ, ಶಿಕ್ಷಕರ ವಿರುದ್ಧ ಕ್ರಮ

ಮಡಿಕೇರಿ: ‘ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಾರಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ಎಚ್ಚರಿಸಿದರು. ನಗರದ ಸೇಂಟ್‌ ಮೈಕಲರ ಶಾಲೆಯಲ್ಲಿ ಗುರುವಾರ ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ಫಲಿತಾಂಶ ಪಡೆದಿರುವ ಶಾಲೆಗಳ ಮುಖ್ಯಸ್ಥರು ಹಾಗೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ಫಲಿತಾಂಶದಲ್ಲಿ ಸುಧಾರಣೆ ಕಾಣದಿದ್ದರೆ -ಅನುದಾನಿತ– ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರಿ ಶಾಲೆಗಳು ನಿರೀಕ್ಷಿತ ಫಲಿತಾಂಶ ಪಡೆಯದಿದ್ದಲ್ಲಿ, ಅಂಥಶಾಲೆಗಳ ಮುಖ್ಯಶಿಕ್ಷಕ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ವಸತಿ ಶಾಲೆಗಳಲ್ಲಿ ಶೇ 100 ಫಲಿತಾಂಶ ಕಡ್ಡಾಯವಾಗಿ ಬರಬೇಕು. ಆದರೆ, ಕೆಲವು ವಸತಿ ಶಾಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಅಂತಹ ಶಾಲೆಯ ಮುಖ್ಯಶಿಕ್ಷಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ಮಕ್ಕಳನ್ನು ಶಾಲೆಗೆ ಕರೆತರುವುದು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಶಿಕ್ಷಕರ ಜವಾಬ್ದಾರಿ. ಶಾಲೆಗಳಲ್ಲಿ ಕ್ಷೀರಭಾಗ್ಯ, ಶೂ ಭಾಗ್ಯ, ಸಮವಸ್ತ್ರ, ಪಠ್ಯಪುಸ್ತಕ, ಬೈಸಿಕಲ್... ಹಾಗೆಯೇ ಶಾಲೆಗೆ ಪ್ರತಿದಿನ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹಲವು ಯೋಜನೆ ಜಾರಿಗೊಳಿಸಿದರೂ ಶಾಲೆಗೆ ವಿದ್ಯಾರ್ಥಿ ಗಳು ಬರುವುದಿಲ್ಲ ಎಂದು ಸಬೂಬು ಹೇಳುವುದು ನಿಲ್ಲಬೇಕು’ ಎಂದರು.

‘14 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗಬೇಕು. ಮಕ್ಕಳು ಶಾಲೆಗೆ ಸರಿಯಾಗಿ ಹಾಜರಾಗ ದಿದ್ದರೆ ಪೋಷಕರ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದರು.

ಶಿಕ್ಷಣ ಇಲಾಖೆ ಪ್ರಭಾರ ಉಪ ನಿರ್ದೇಶಕ ಮಲ್ಲೇಸ್ವಾಮಿ, ಡಯಟ್ ಉಪನ್ಯಾಸಕ ಬೊಮ್ಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಸರ್ವಶಿಕ್ಷಣ ಅಭಿಯಾನ ಅಧಿಕಾರಿ ಭಾಗ್ಯಲಕ್ಷ್ಮಿ, ವಿಷಯ ಪರಿವೀಕ್ಷಕ ದೇವನಾಯಕ್, ಸಾವಿತ್ರಿ, ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಜೋಯಪ್ಪ ಇದ್ದರು.

ಸರ್ಕಾರದ ವಶಕ್ಕೆ ಅನುದಾನಿತ ಶಾಲೆಗಳು: ಎಚ್ಚರಿಕೆ

ಮಡಿಕೇರಿ: ‘ಎಸ್‌ಎಸ್ಎಲ್‌ಸಿ ಫಲಿತಾಂಶ ಈ ಬಾರಿ ಸುಧಾರಿಸಿದೆ. ಆದರೂ, ಉನ್ನತ ಸ್ಥಾನ ಪಡೆಯುವಂತೆ ಆಗಬೇಕು. ಜಿಲ್ಲೆಯ ಕೆಲವು ಅನುದಾನಿತ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 50ಕ್ಕಿಂತ ಕಡಿಮೆಯಿದೆ. ಅಂತಹ ಶಾಲೆಗಳನ್ನು ಸರ್ಕಾರದ ಸುಪರ್ದಿಗೆ ತೆಗೆದು ಕೊಳ್ಳಬಹುದೇ ಎಂಬುದು ಬಗ್ಗೆಯೂ ಯೋಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

* * 

ಶಿಕ್ಷಣ ಸಂಸ್ಥೆಗಳು ಹಣಕಾಸು ಲಾಭ ಮಾಡುವ ಸಂಸ್ಥೆಗಳಲ್ಲ; ಸೇವೆ ಮಾಡುವ ಸಂಸ್ಥೆಗಳಾಗಿವೆ ಎಂಬುದನ್ನು ಆಡಳಿತ ಸಂಸ್ಥೆಗಳು ಮರೆಯಬಾರದು

ರಿಚರ್ಡ್‌ ವಿನ್ಸೆಂಟ್‌ ಡಿಸೋಜ,

ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry