ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ ನಿವಾಸಕ್ಕೆ ಮುತ್ತಿಗೆ ಯತ್ನ ವಿಫಲ: ಕಪಿಲ್‌ ಮಿಶ್ರಾ ಆಕ್ರೋಶ

Last Updated 9 ಜೂನ್ 2017, 10:11 IST
ಅಕ್ಷರ ಗಾತ್ರ

ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸಕ್ಕೆ ಮುತ್ತಿಗೆ ಹಾಕಿ ಭ್ರಷ್ಟಾಚಾರ ಪ್ರಕರಣದ ಬಗ್ಗೆ ತರಾಟೆಗೆ ತೆಗೆದುಕೊಳ್ಳಲು ಯತ್ನಿಸಿದ ಉಚ್ಛಾಟಿತ ಆಮ್‌ ಆದ್ಮಿ(ಎಎಪಿ) ಪಕ್ಷದ ನಾಯಕ ಕಪಿಲ್‌ ಮಿಶ್ರಾ ಹಾಗೂ ಅವರ ಬೆಂಬಲಿಗರನನ್ನು ದೆಹಲಿ ಪೊಲೀಸರು ತಡೆದಿದ್ದಾರೆ.

ನಿವಾಸಕ್ಕೆ ತೆರಳಲು ಪೊಲೀಸರು ಅವಕಾಶ ನೀಡದ ಕಾರಣ ನಿರಾಸೆಗೊಂಡ ಮಿಶ್ರಾ ಹಾಗೂ ಬೆಂಬಲಿಗರು ಸ್ಥಳದಲ್ಲೇ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂತ್ರಿಮಂಡಲದಲ್ಲಿರುವ ಸಚಿವ ಸತ್ಯೇಂದ್ರ ಜೈನ್‌ ಅವರನ್ನು ವಜಾ ಮಾಡುವಂತೆ ಕೇಜ್ರಿವಾಲ್‌ ಅವರನ್ನು ಆಗ್ರಹಿಸಲು ಮಿಶ್ರಾ ಹಾಗೂ ಅವರ ಬೆಂಬಲಿಗರು ನಿರ್ಧರಿಸಿದ್ದರು. ಅದಕ್ಕಾಗಿ ಸಾರ್ವಜನಿಕ ಸಭಾಂಗಣ ‘ಜನತಾ ದರ್ಬಾರ್‌’ನಲ್ಲಿ ಭೇಟಿ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.

ಇದರಿಂದ ನಿರಾಸೆಗೊಂಡ ಮಿಶ್ರಾ, ‘ನಾನು 15–20 ಜನರೊಂದಿಗೆ ಬಂದಿದ್ದೇನೆ. ಇಲ್ಲಿಗೆ ಬಂದ ಜನತೆಗೆ ಒಳ ಪ್ರವೇಶಿಸಲು ಅವಕಾಶವಿಲ್ಲದ ಮೇಲೆ ಜನತಾ ದರ್ಬಾರ್‌ಗೆ ಅರ್ಥವೆಲ್ಲಿದೆ?’ ಎಂದು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಜತೆಗೆ ‘ನಾವು ಮುಖ್ಯಮಂತ್ರಿ ಹಾಗೂ ಜೈನ್‌ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಕುರಿತು ಚರ್ಚಿಸಲು ಉದ್ದೇಶಿಸಿದ್ದೆವು. ಅದಕ್ಕಾಗಿ ರಾಮ್‌ಲೀಲಾ ಮೈದಾನದಲ್ಲಿ ವಿಶೇಷ ಅಧಿವೇಶನ ಕರೆಯುವಂತೆ ಬೇಡಿಕೆ ಸಲ್ಲಿಸಲು ಸಾರ್ವಜನಿಕ ಸಭೆಗೆ ಆಗಮಿಸಿದ್ದೆವು. ಆದರೆ ಪೊಲೀಸರು ಭ್ರಷ್ಟರನ್ನು ರಕ್ಷಿಸುತ್ತಿರುವ ಮುಖ್ಯಮಂತ್ರಿ ನಿವಾಸಕ್ಕೆ ರಕ್ಷಣೆ ನೀಡಿ, ನಮಗೆ ಅವಕಾಶ ನಿರಾಕರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕೇಜ್ರಿವಾಲ್‌ ಹಾಗೂ ಜೈನ್‌ ಅವರಿಗೆ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯಿಲ್ಲ’ ಎಂದು ಸಹ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT