ಗೋಲಿಬಾರ್‌ ಖಂಡಿಸಿ ಹೆದ್ದಾರಿ ತಡೆ

7

ಗೋಲಿಬಾರ್‌ ಖಂಡಿಸಿ ಹೆದ್ದಾರಿ ತಡೆ

Published:
Updated:
ಗೋಲಿಬಾರ್‌ ಖಂಡಿಸಿ ಹೆದ್ದಾರಿ ತಡೆ

ಮದ್ದೂರು: ಶಾಂತಿಯುತ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ಮಾಡಿರುವ ಮಧ್ಯಪ್ರದೇಶದ ಪೊಲೀಸರ ಕ್ರಮ ಖಂಡಿಸಿ ಹಾಗೂ ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಹೆದ್ದಾರಿ ತಡೆ ಪ್ರತಿಭಟನೆ ಮಾಡಿದರು.

ಪಟ್ಟಣದ ಕೊಪ್ಪ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಾಲಮನ್ನಾ ಮಾಡಿದರೆ ದೇಶಕ್ಕೆ ಅಪಾಯಕಾರಿ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿರುವ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. 

ರೈತ ಸಂಘದ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಮುಂದುವರಿದಿವೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರು ಮಾಡಿರುವ ಸಾಲಮನ್ನಾ ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಮೂಲಕ ರೈತರ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಗೊಲ್ಲರದೊಡ್ಡಿ ಅಶೋಕ್, ವೆಂಕಟೇಗೌಡ, ಉಮೇಶ್, ನಿಂಗಪ್ಪಾಜಿ, ವೆಂಕಟೇಶ್, ಚನ್ನಪ್ಪ, ಸಿದ್ದೇಗೌಡ, ರಮೇಶ್, ಮಹೇಶ್, ಕುಮಾರ್, ಶಿವರಾಮು ಭಾಗವಹಿಸಿದ್ದರು.

ರೈತರ ಕಾಳಜಿ ಇಲ್ಲದ ಸರ್ಕಾರ ವಜಾಮಾಡಿ

ಭಾರತೀನಗರ: ಮಧ್ಯಪ್ರದೇಶದಲ್ಲಿ ಚಳವಳಿ ನಿರತ ರೈತರ ಮೇಲೆ ಪೊಲೀಸರು ಗೋಲಿಬಾರ್ ಮಾಡಿರುವು ದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ರೈತರ ಮೇಲೆ ಗೋಲಿಬಾರ್ ನಡೆಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮದ ವಿರುದ್ಧ ಹರಿಹಾಯ್ದರು

ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಮೃತ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು. ಇದಲ್ಲದೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಆರ್‌ಬಿಐ ಗೌರ್ನರ್‌ ವಿರುದ್ಧ ಪ್ರತಿಭಟನೆ: ಆರ್‌ಬಿಐ ಗೌರ್ನರ್ ಊರ್ಜಿತ್‌ ಪಟೇಲ್ ಅವರು, ರೈತರ ಸಾಲಮನ್ನಾ ಮಾಡಬೇಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿರುವ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು, ಇಂತಹ ಅಧಿಕಾರಿಗಳಿಂದ ದೇಶ ಅಧೋಗತಿಗೆ ತಲುಪುತ್ತಿದೆ. ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ರೈತರು ಸಂಕಷ್ಟದಲ್ಲಿದ್ದು, ರೈತರ ಸಾಲಮನ್ನಾ ಮಾಡಿ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಇಲ್ಲವಾದರೆ ರೈತ ಸಂಕುಲವೇ ಅಳಿವಿನಂಚಿಗೆ ತಲುಪುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ತಾಲ್ಲೂಕು ಕಾರ್ಯದರ್ಶಿ ಶೆಟ್ಟಹಳ್ಳಿ ರವಿಕುಮಾರ್, ಶಂಭೂಗೌಡ, ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಕೆ.ಸಿ.ಮಾದೇ ಗೌಡ, ಶೆಟ್ಟಹಳ್ಳಿ ಚಿಕ್ಕಮರೀಗೌಡ, ಕೂಳಗೆರೆ ವೆಂಕಟೇಶ್, ಮಾದರಹಳ್ಳಿ ಪುಟ್ಟಸ್ವಾಮಿ, ಯಲಾದಹಳ್ಳಿ ಬೋರೇ ಗೌಡ, ಪುಟ್ಟಲಿಂಗ, ಬನ್ನಹಳ್ಳಿ ರಮೇಶ್‌, ದಯಾನಂದ, ಮಂಚಯ್ಯ, ಶ್ರೀನಿವಾಸ್‌, ಮಹದೇವ, ಶ್ರೀಕಂಠ ಪಾಲ್ಗೊಂಡಿದ್ದರು.

ರೈತರ ಆಕ್ರೋಶ

ಮಳವಳ್ಳಿ:  ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಮೇಲೆ ಹಲ್ಲೆ ಯತ್ನ ಹಾಗೂ ಮಧ್ಯಪ್ರದೇಶದಲ್ಲಿ ಹೋರಾಟ ಮಾಡು ತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿರುವುದನ್ನು ಖಂಡಿಸಿ ಗುರುವಾರ ಪಟ್ಟಣದಲ್ಲಿ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೋದಿ ಸರ್ಕಾರದ ತಂತ್ರಗಾರಿಕೆ, ಮೋಸ, ಕೋಮುವಾದಿತನ ಖಂಡಿಸಿ ಯೆಚೂರಿ ಅವರು ಹೋರಾಟ ಮಾಡುತ್ತಿದ್ದು, ಇದನ್ನು ಸಹಿಸದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಹಲ್ಲೆ ನಡೆಸಿರುವುದು ಖಂಡನೀಯ. ಮಧ್ಯಪ್ರದೇಶದಲ್ಲಿ ಸಾಲಮನ್ನಾ ಹಾಗೂ ಇನ್ನಿತರೆ ಬೇಡಿಕೆಗಳಿಗಾಗಿ ಒತ್ತಾಯಿಸಿ ಹೋರಾಟ ಮಾಡುತ್ತಿದ್ದ ರೈತರನ್ನು ಕರೆದು ಚರ್ಚಿಸುವ ಬದಲು ಗೋಲಿ ಬಾರ್ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು. ರಾಮಕೃಷ್ಣ, ಎನ್‌.ಎಲ್‌. ಭರತ್‌ ರಾಜ್‌, ಟಿ.ಎಲ್‌.ಕೃಷ್ಣೇಗೌಡ, ದೇವಿ, ಸುನಿತಾ ಇದ್ದರು.

ಸೀತಾರಾಂ ಯೆಚೂರಿ ಮೇಲಿನ ಹಲ್ಲೆಗೆ ಖಂಡನೆ

ಮಂಡ್ಯ: ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ನಗರದ ಕೆ.ಆರ್‌.ವೃತ್ತದಲ್ಲಿ ಸಿಪಿಐಎಂ ಕಾರ್ಯಕರ್ತರು ಗುರುವಾರ ಪ್ರತಿಭಟನೆ ಮಾಡಿದರು.

ದೆಹಲಿಯ ಎ.ಕೆ.ಜಿ. ಭವನದಲ್ಲಿ ಸೀತಾರಾಂ ಯೆಚೂರಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಆರ್‌ಎಸ್‌ಎಸ್‌ನ ಕಾರ್ಯಕರ್ತರಿಬ್ಬರು ಪತ್ರಕರ್ತರೆಂದು ಸುಳ್ಳು ಹೇಳಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋಮುವಾದಿತನ ಪ್ರದರ್ಶಿಸುತ್ತಿರುವ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಗೆ ಕಡಿವಾಣ ಹಾಕಬೇಕು. ಇಂತಹ ಘಟನೆಗಳು ಮತ್ತೆ ನಡೆಯದಂತೆ ಎಚ್ಚರ ವಹಿಸುವುದು ಅಗತ್ಯ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಭಿವೃದ್ಧಿಯು ಶೂನ್ಯವಾಗಿದೆ’ ಎಂದು ದೂರಿದರು.

ದೇಶದಲ್ಲಿ ರೈತರು ಕಂಗಾಲಾಗಿದ್ದಾರೆ. ರೈತರು ತಮ್ಮ ಬೇಡಿಕೆ ಕೇಳಲು ಮುಂದಾದರೆ ಅವರಿಗೆ ಗುಂಡು ಹಾರಿಸಿ ಕೊಲೆ ಮಾಡುವ ಹೀನ ಕೃತ್ಯಕ್ಕೆ ಕೇಂದ್ರ ಸರ್ಕಾರ ನಿರತವಾಗಿದೆ. ಇಂತಹ ಘಟನೆಗಳಿಗೆ ಕಾರಣವಾದ ಕೇಂದ್ರ ಸರ್ಕಾರ ಹಾಗೂ ಮಧ್ಯಪ್ರದೇಶದ ರಾಜ್ಯ ಸರ್ಕಾರದ ನಡೆ ಅತ್ಯಂತ ಖಂಡನೀಯ ಎಂದು ಹರಿಯಾಯ್ದರು.

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಇಂತಹ ಹತಾಶೆ ದಾಳಿಗಳನ್ನು ಕೈಬಿಟ್ಟು, ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಬೆಳೆ ಇಲ್ಲದೆ ಬರಗಾಲದಿಂದ ಕಂಗಾಲಾಗಿರುವ ರೈತರ ಸಾಲಮನ್ನಾ ಮಾಡಬೇಕು. ಅವರ ಉಳಿವಿಗೆ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಸಿ.ಕುಮಾರಿ, ಎನ್‌.ಸುರೇಂದ್ರ, ಕುಮಾರ್‌, ಶ್ರೀಧರ್‌, ರಾಜೆಂದ್ರ, ಕೃಷ್ಣಮೂರ್ತಿ, ರತ್ನಮ್ಮ, ಚಂದ್ರಶೇಖರ್‌ ಭಾಗವಹಿಸಿದ್ದರು.

* * 

ಚಳವಳಿ ನಿರತ ರೈತರ ಮೇಲೆ ಗೋಲಿಬಾರ್‌ ಮಾಡಿರುವುದು, ರೈತರ ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರವಾಗಿದೆ

ಶೆಟ್ಟಹಳ್ಳಿ ರವಿಕುಮಾರ್‌

ಕಾರ್ಯದರ್ಶಿ, ರೈತಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry