ರಜಿನಿಕಾಂತ್‌ ನಟನೆಯ ‘ಕಾಳ ಕರಿಕಾಳನ್‌’ ಚಿತ್ರದ ವಿರುದ್ಧ ಕೃತಿಚೌರ್ಯ ಆರೋಪ

7

ರಜಿನಿಕಾಂತ್‌ ನಟನೆಯ ‘ಕಾಳ ಕರಿಕಾಳನ್‌’ ಚಿತ್ರದ ವಿರುದ್ಧ ಕೃತಿಚೌರ್ಯ ಆರೋಪ

Published:
Updated:
ರಜಿನಿಕಾಂತ್‌ ನಟನೆಯ ‘ಕಾಳ ಕರಿಕಾಳನ್‌’ ಚಿತ್ರದ ವಿರುದ್ಧ ಕೃತಿಚೌರ್ಯ ಆರೋಪ

ಚೆನ್ನೈ: ನಟ ರಜಿನಿಕಾಂತ್‌ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ‘ಕಾಳ ಕರಿಕಾಳನ್‌’ ಚಿತ್ರದ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ.

‘ನನ್ನ ಕಥೆಯನ್ನು ಪಾ ರಂಜಿತ್‌ ಕದ್ದು ಈ ಚಿತ್ರ ಮಾಡುತ್ತಿದ್ದಾರೆ’ ಎಂದು ತಮಿಳಿನ ಮತ್ತೊಬ್ಬ ನಿರ್ದೇಶಕ ರಾಜಶೇಖರ್‌ ಆರೋಪಿಸಿದ್ದಾರೆ.

ಈ ಬಗ್ಗೆ ಚೆನ್ನೈನ ಸಿವಿಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ರಾಜಶೇಖರ್‌, ‘ಚಿತ್ರದ ಮುಂದಿನ ಚಟುವಟಿಕೆಗಳಿಗೆ ತಡೆಯಾಜ್ಞೆ ನೀಡಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ರಾಜಶೇಖರ್‌ ಮಾಡಿರುವ ಕೃತಿಚೌರ್ಯದ ಆರೋಪದ ಬಗ್ಗೆ ಪಾ ರಂಜಿತ್ ಅವರು ಜೂನ್‌ 15ರೊಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.‘1995ರಲ್ಲಿ ನಾನು ರಜಿನಿಕಾಂತ್‌ ಅವರ ಮನೆಯಲ್ಲಿ ಅವರಿಗೆ ಈ ಚಿತ್ರದ ಕಥೆ ಹೇಳಿದ್ದೆ. ‘ಕಾಳ ಕರಿಕಾಳನ್‌’ ಹೆಸರಿನಲ್ಲೇ ಚಿತ್ರ ಮಾಡುವುದಾಗಿ ರಜಿನಿಕಾಂತ್‌ ಅವರಿಗೆ ತಿಳಿಸಿದ್ದೆ. ಕಥೆಯನ್ನು ಮೆಚ್ಚಿಕೊಂಡಿದ್ದ ರಜಿನಿಕಾಂತ್‌ ಮುಂದೆ ಚಿತ್ರ ಮಾಡೋಣ ಎಂದು ಹೇಳಿದ್ದರು. ಆದರೆ, ನನ್ನ ಕಥೆಯನ್ನು ಕದ್ದು ಈಗ ಪಾ ರಂಜಿತ್‌ ಈ ಚಿತ್ರ ಮಾಡುತ್ತಿದ್ದಾರೆ’ ಎಂದು ರಾಜಶೇಖರ್‌ ದೂರಿದ್ದಾರೆ.

‘2011ರಲ್ಲಿ ‘ಕಾಳ ಕರಿಕಾಳನ್‌’ ಚಿತ್ರ ನಿರ್ಮಿಸಲು ಸಿಲ್ವರ್‌ ಲೈನ್‌ ಫಿಲ್ಮ್ಸ್‌ ನಿರ್ಮಾಣ ಸಂಸ್ಥೆ ಮುಂದಾಗಿತ್ತು. ನಟ ವಿಕ್ರಮ್‌ ಅವರು ಈ ಚಿತ್ರದಲ್ಲಿ ನಾಯಕರಾಗಿ ನಟಿಸಬೇಕಿತ್ತು. ಆದರೆ, ಚಿತ್ರಕ್ಕೆ ಕಾನೂನು ತೊಡಕು ಎದುರಾಗಿ ಆ ಚಿತ್ರದ ಯೋಜನೆ ಅಲ್ಲಿಗೇ ನಿಂತಿತು’ ಎಂದು ರಾಜಶೇಖರ್‌ ಹೇಳಿದ್ದಾರೆ.

ಇದಲ್ಲದೆ, ‘ಚಿತ್ರ ನಿರ್ಮಾಣಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರಾಜಶೇಖರ್‌ ಅವರು ಚೆನ್ನೈ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

ರಜಿನಿಕಾಂತ್‌ ಅವರ ಈ ಹಿಂದಿನ ‘ಕಬಾಲಿ’ ಸಿನಿಮಾವನ್ನು ನಿರ್ದೇಶಿಸಿದ್ದ ಪಾ ರಂಜಿತ್‌ ಅವರೇ ‘ಕಾಳ ಕರಿಕಾಳನ್‌’ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಮುಂಬೈನ ಭೂಗತ ದೊರೆಯಾಗಿದ್ದ ಹಾಜಿ ಮಸ್ತಾನ್‌ ಜೀವನ ಆಧರಿಸಿದ ಚಿತ್ರ ಇದೆಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry