ರೈತರ ಖಾತೆಗೆ ₹12.5 ಕೋಟಿ ಜಮೆ

7

ರೈತರ ಖಾತೆಗೆ ₹12.5 ಕೋಟಿ ಜಮೆ

Published:
Updated:
ರೈತರ ಖಾತೆಗೆ ₹12.5 ಕೋಟಿ ಜಮೆ

ಚಾಮರಾಜನಗರ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 2016–17ನೇ ಸಾಲಿನ  ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 20,759 ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ. ಫಸಲು ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು ₹12.5 ಕೋಟಿ ವಿಮೆ ಮೊತ್ತ ಜಮೆಯಾಗಿದೆ.

ಬೆಳೆದ ಫಸಲು ನಾಶವಾದರೆ ಅದಕ್ಕೆ ವಿಮೆ ಪರಿಹಾರ ನೀಡುವ ಯೋಜನೆ ಈ ಮೊದಲು ಇತ್ತು. ಆದರೆ, ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ಬಿತ್ತನೆ ಮಾಡುವ ಮೊದಲೇ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಮಳೆ ಬಾರದೆ ಬಿತ್ತನೆ ಸಾಧ್ಯವಾಗದಿದ್ದರೂ ವಿಮೆಯ ಹಣ ಪಡೆಯಲು ಅವಕಾಶವಿದೆ. ಸತತ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರಿಗೆ ಇದು ವರದಾನವಾಗಿದೆ. ಪ್ರಸಕ್ತ ಮುಂಗಾರಿನಲ್ಲಿ 27,433 ರೈತರು ಫಸಲ್‌ ಬಿಮಾ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಒಟ್ಟು ₹13.80 ಕೋಟಿ ವಿಮೆ ಬಿಡುಗಡೆಯಾಗಿದೆ.

ಬ್ಯಾಂಕ್‌ನ ವಿವಿಧ ತಾಂತ್ರಿಕ ಕಾರಣ ಗಳಿಂದ  ಉಳಿದ 6,674 ರೈತರ ಖಾತೆಗೆ ₹1.74 ಕೋಟಿ ವಿಮೆ ಹಣ ಜಮೆಯಾಗ ಬೇಕಿದೆ. ಇದರಲ್ಲಿ 2,408 ರೈತರ ಬ್ಯಾಂಕ್ ಖಾತೆಗಳಲ್ಲಿ ಬದಲಾವಣೆ ಮಾಡಬೇಕಾಗಿದೆ. ಭತ್ತ ಮತ್ತು ಹತ್ತಿ ಬೆಳೆಯ ವಿಮೆ ಇನ್ನೂ ಬಿಡುಗಡೆಯಾಗಿಲ್ಲ.

‘ಇಷ್ಟು ಮೊತ್ತದ ವಿಮೆ ಹಣ ಬಿಡುಗಡೆಯಾಗಿರುವುದು ಜಿಲ್ಲೆಯಲ್ಲಿ ಇದೇ ಮೊದಲು’ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಜಿ.ಎಚ್‌. ಯೋಗೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದಿನ ವಿಮೆ ಯೋಜನೆ ಬೆಳೆ ಹಾನಿಗೆ ಸೀಮಿತವಾಗಿತ್ತು. ಈಗ ವಿಮೆ ಒಳಗೊಳ್ಳುವ ವ್ಯಾಪ್ತಿ ವಿಸ್ತರಣೆಯಾಗಿದೆ. ಬೀಜ ಬಿತ್ತನೆಗೂ ಮೊದಲು ಆರಂಭವಾಗಿ, ಕಟಾವು ಮಾಡಿದ 14 ದಿನಗಳ ವರೆಗೂ ಆಗುವ ನಷ್ಟಕ್ಕೆ ವಿಮೆ ದೊರಕುತ್ತದೆ. ಅಲ್ಲದೆ, ವಿಮೆ ಮೊತ್ತದ ಶೇಕಡಾವಾರು ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಸರಾಸರಿ ಫಸಲಿನಲ್ಲಿ ಶೇ 80ಕ್ಕಿಂತ ಕಡಿಮೆಯಾದರೆ ವಿಮೆ ಅನ್ವಯವಾಗುತ್ತದೆ’ ಎಂದು ಅವರು ತಿಳಿಸಿದರು.

ವಿಮೆ ಕಂತು:  2017–18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ನಿಗದಿಪಡಿಸಲಾಗಿರುವ ವಿಮಾ ಮೊತ್ತ ಮತ್ತು ರೈತರ ವಿಮಾ ಕಂತಿನ ವಿವರಗಳನ್ನು ಅಂತಿಮಗೊಳಿಸಲಾಗಿದೆ. ಮಳೆ ಆಶ್ರಿತ ಬೆಳೆಗಳಾದ ಉದ್ದು, ಹೆಸರು ಮತ್ತು ಎಳ್ಳು ಬೆಳೆಗಾರರು ಇದೇ 30ರ ಒಳಗೆ ಕೊನೆಯ ಕಂತನ್ನು ಪಾವತಿಸಬೇಕಾಗುತ್ತದೆ.

ಭತ್ತ, ರಾಗಿ, ಅವರೆ ಮತ್ತು ಹತ್ತಿ ಬೆಳೆಗಳಿಗೆ ಆಗಸ್ಟ್‌ 14ರವರೆಗೆ ಕಾಲಾವ ಕಾಶವಿದೆ. ಉಳಿದ ಪ್ರಮುಖ ಬೆಳೆಗಳನ್ನು ಬೆಳೆಯುವವರು ಜುಲೈ 15ರ ಒಳಗೆ ಕಂತು ಪಾವತಿಸಬೇಕು. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬರುವ ಬೆಳೆಗಳನ್ನು ಈ ಮೊದಲು ತಾಲ್ಲೂಕುವಾರು ಮಟ್ಟಕ್ಕೆ ವಿಂಗಡಿಸಲಾಗಿತ್ತು. ಅದನ್ನು ಈಗ ಆಯಾ ಗ್ರಾಮ ಪಂಚಾಯಿತಿ ಮತ್ತು ಹೋಬಳಿ ಮಟ್ಟಕ್ಕೆ ವಿಂಗಡಿಸಲಾಗಿದೆ.

ಹಿಂಗಾರಿನಲ್ಲಿ ಹೆಚ್ಚಿದ ನೋಂದಣಿ

ಚಾಮರಾಜನಗರ: ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿ ಇರುವುದರಿಂದ ಜಿಲ್ಲೆಯ ಸುಮಾರು 2.43 ಲಕ್ಷ ರೈತರ ಪೈಕಿ 27,433 ಕೃಷಿಕರು ಮಾತ್ರ ಮುಂಗಾರು ಹಂಗಾಮಿನಲ್ಲಿ ವಿಮೆಗೆ ನೋಂದಾಯಿಸಿ ಕೊಂಡಿದ್ದರು.

ಆದರೆ, ಹಿಂಗಾರು ಋತುವಿ ನಲ್ಲಿ ಸುಮಾರು 32,000 ರೈತರು ನೋಂದಾಯಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ 50,000ಕ್ಕೂ ಹೆಚ್ಚು ರೈತರು ನೋಂದಣಿ ಮಾಡಿ ಕೊಳ್ಳುವ ನಿರೀಕ್ಷೆ ಇದೆ ಎಂದು ಜಿ.ಎಚ್‌. ಯೋಗೇಶ್‌ ತಿಳಿಸಿದರು.

₹11 ವಿಮೆ ಪರಿಹಾರ!

ಫಸಲ್‌ ಬಿಮಾ ಯೋಜನೆ ಯಡಿ ಕೆಲವು ರೈತರಿಗೆ ನಷ್ಟವಾದ ಬೆಳೆಗೆ ತಕ್ಕ ವಿಮೆ ಪರಿಹಾರ ದೊರಕಿದೆ. ಆದರೆ, ಚಾಮರಾಜ ನಗರ ತಾಲ್ಲೂಕಿನ ಹರವೆ ಗ್ರಾಮದ ರೈತರೊಬ್ಬರಿಗೆ ಕೇವಲ ₹11 ವಿಮೆ ಮೊತ್ತ ಸಂದಾಯವಾಗಿದೆ. ಮುಸುಕಿನ ಜೋಳದ ಬೆಳೆ ನಷ್ಟ ಅನುಭವಿಸಿದ್ದ ಕೊಳ್ಳೇಗಾಲ ತಾಲ್ಲೂಕು ಪೊನ್ನಾಚಿ ಗ್ರಾಮದ ರೈತರೊಬ್ಬರಿಗೆ ₹1.37 ಲಕ್ಷ ಪರಿಹಾರ ದೊರೆತಿದೆ.

* * 

ಪ್ರಚಾರದ ಕೊರತೆಯಿಂದ ಯೋಜನೆ ರೈತರಿಗೆ ಸಮರ್ಪಕವಾಗಿ ತಲುಪಿಲ್ಲ. ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಕೊಳ್ಳುವ ರೈತರ ಪ್ರಮಾಣ ಹೆಚ್ಚುವ ಭರವಸೆಯಿದೆ

ಜಿ.ಎಚ್‌.ಯೋಗೇಶ್‌

ಕೃಷಿ ಇಲಾಖೆ ಉಪನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry