ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲೂ ಶುರುವಾದ ಡೆಂಗಿ ಜ್ವರ

Last Updated 9 ಜೂನ್ 2017, 10:52 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಾದ್ಯಂತ ಡೆಂಗಿ ಜ್ವರ ಕಾಣಿಸಿಕೊಂಡಿದ್ದು, ಜನರಿಗೆ ಭೀತಿ ಮೂಡಿಸಿದೆ. ಇಂದು ಆರೋಗ್ಯವಾಗಿರುವ ವ್ಯಕ್ತಿಗಳು ಮರುದಿನ ಅಸ್ವಸ್ಥರಾಗಿ ಆಸ್ಪತ್ರೆ ಸೇರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಮಾರುಕಟ್ಟೆ ಪ್ರದೇಶ, ಪ್ರತಿಷ್ಠಿತ ಬಡಾವಣೆ, ಕೊಳಚೆ ಪ್ರದೇಶ... ಹೀಗೆ ಎಲ್ಲ ಕಡೆಗೂ ಡೆಂಗಿ ಜ್ವರದಿಂದ ನರಳುವವರು ಸಂಖ್ಯೆ ಕಂಡುಬರುತ್ತಿದೆ. ಜ್ವರ ಎಂದರೆ ಸಾಕು, ತಮಗೂ ಡೆಂಗಿ ಜ್ವರ ಬಂದುಬಿಟ್ಟಿದೆಯೇನೊ ಎಂದು ಜನರು ಭಯದಿಂದ ನಾಲ್ಕಾರು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಟವಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಎಂಬ ವ್ಯಕ್ತಿ ಡೆಂಗಿ ಜ್ವರ ಕಾಣಿಸಿಕೊಂಡು, ಮೃತಪಟ್ಟಿದ್ದಾನೆ ಎಂದು ವ್ಯಾಪಾರಸ್ಥರು, ಕುಟುಂಬದವರು ದೂರುತ್ತಾರೆ.

ಆದರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಮೂಲಗಳ ಪ್ರಕಾರ ಅದು ‘ಸಂಶಯಾಸ್ಪದ ಡೆಂಗಿ ಪ್ರಕರಣ’ವಾಗಿದೆ. ‘ಜಿಲ್ಲೆಯಲ್ಲಿ ಜನವರಿಯಿಂದ ಜೂನ್‌ವರೆಗೆ ಒಟ್ಟು 32 ಡೆಂಗಿ ಜ್ವರ ಪ್ರಕರಣ ವರದಿಯಾಗಿವೆ.

ಇದರಲ್ಲಿ 21 ಪ್ರಕರಣ ತುಮಕೂರು ನಗರದಲ್ಲಿಯೇ ದಾಖಲಾಗಿವೆ. 9 ಪ್ರಕರಣ ಇತರ ತಾಲ್ಲೂಕುಗಳಲ್ಲಿ ವರದಿಯಾಗಿವೆ. ಡೆಂಗಿ ಜ್ವರದಿಂದ ಮೃತಪಟ್ಟ ಪ್ರಕರಣಗಳಿಲ್ಲ’ ಎಂದು ಆರೋಗ್ಯ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ.ಪುರುಷೋತ್ತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜ್ವರದಿಂದ ಬಳಲಿದವರ ಗೋಳು: ‘ನನಗೂ ಡೆಂಗಿ ಜ್ವರ ಬಂದಿತ್ತು. ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ₹ 40 ಸಾವಿರ ಚಿಕಿತ್ಸೆಗೆ ಖರ್ಚು ಮಾಡಿದ್ದೇನೆ. ಎಪಿಎಂಸಿಯ ಪ್ರತಿ ಅಂಗಡಿಯಲ್ಲೂ ಜ್ವರದಿಂದ ಬಳುತ್ತಿರುವವರು ಒಬ್ಬರಾದರೂ ಸಿಗುತ್ತಾರೆ. ಎಪಿಎಂಸಿ ಆವರಣದಲ್ಲಿ ಹೊರನೋಟಕ್ಕೆ ಸ್ವಚ್ಛತೆ ಕಂಡರೂ, ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಕೊಳಚೆ ಇದೆ. ಸೊಳ್ಳೆ ಕಾಟ ವಿಪರೀತವಾಗಿದೆ. ಅಂಗಡಿಯಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ’ ಎನ್ನುತ್ತಾರೆ ವ್ಯಾಪಾರಿ ಡಿ.ಎಂ.ಖದೀರ್.

‘ಸೊಳ್ಳೆಯಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿ ಹಣ ಸುರಿದಿದ್ದಾಗಿದೆ. ಒಬ್ಬರಲ್ಲ, ನಮ್ಮ ಅಂಗಡಿಯಲ್ಲಿನ ಮೂರು ಜನರಿಗೂ ಜ್ವರ ಬಂದಿತ್ತು. ವಾರಾನುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ. ಮೈ ಮುರಿಯುವಂತೆ ಕೆಲಸ ಮಾಡಿದರೂ ಆಯಾಸವಾಗುತ್ತಿರಲಿಲ್ಲ.

ಆದರೆ, ಜ್ವರ ಬಂದು ನಮ್ಮನ್ನು ಹೈರಾಣು ಮಾಡಿತು. ಡೆಂಗಿ ಜ್ವರದಿಂದ ಒಬ್ಬ ಮೃತಪಟ್ಟಿದ್ದಾನೆ ಎಂಬುದನ್ನು ಕೇಳಿ ಇನ್ನೂ ಭಯ ಆವರಿಸಿತು’ ಎಂದು ಎಪಿಎಂಸಿಯ ಸಿರಿ ಪ್ರಾವಿಜನಲ್ ಸ್ಟೋರ್‌್ಸನ ರೈಟರ್ ಮಂಜುನಾಥ್ ಅಳಲು ತೋಡಿಕೊಂಡರು.

ಡೆಂಗಿ ಜ್ವರದಿಂದ ಬಳಲುತ್ತಿರುವವರು, ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ, ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ತೆರಳಿ, ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ನಿತ್ಯ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಗಂಭೀರ ಪ್ರಕರಣಗಳನ್ನು ವೈದ್ಯರು ಬೆಂಗಳೂರಿಗೆ ಕಳುಹಿಸುತ್ತಿರುವುದು ಕಂಡುಬರುತ್ತಿದೆ.

ಸ್ವಚ್ಛತೆಗೆ ಆದ್ಯತೆ ಇರಲಿ: ಡೆಂಗಿ ಜ್ವರಕ್ಕೆ ಸೊಳ್ಳೆಗಳ ಹತೋಟಿ ಒಂದೇ ದಾರಿ. ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಮಣ್ಣಿನ ಮಡಿಕೆ, ಬ್ಯಾರೆಲ್‌, ಒಳಕಲ್ಲು ಮುಂತಾದ ಕಡೆ ಸಂಗ್ರಹವಾಗುವ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ.  ಇದರಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರಿನ ತೊಟ್ಟಿ, ಬ್ಯಾರೆಲ್, ಏರ್ ಕೂಲರ್‌ಗಳನ್ನು ವಾರಕೊಮ್ಮೆಯಾದರೂ ಶುಚಿಗೊಳಿಸಬೇಕು ಎಂದು ಸಲಹೆ ನೀಡುತ್ತಾರೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು.

ಸ್ವಚ್ಛತೆ ಮರೆತ ಪಾಲಿಕೆ
‘ಸ್ವಚ್ಛ ನಗರ’ ಎಂಬುದು ಮಹಾನಗರ ಪಾಲಿಕೆಯ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಕಂಡಲ್ಲೆಲ್ಲ ಕಲುಷಿತ ವಾತಾವರಣ, ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿದೆ. ಆದರೆ, ಪಾಲಿಕೆ ಮಾತ್ರ ಸ್ವಚ್ಛತೆಗೆ ಮುಂದಾಗಿಲ್ಲ. ಕಸ ವಿಲೇವಾರಿ ಮಾಡುವ ಗೋಜಿಗೂ ಹೋಗಿಲ್ಲ.

ಸೊಳ್ಳೆ ನಿಯಂತ್ರಣಕ್ಕೆ ಬಡಾವಣೆಗಳಲ್ಲಿ ಧೂಮೀಕರಣ( ಫಾಗಿಂಗ್) ಮಾಡುತ್ತಿಲ್ಲ. ಹೀಗಾದರೆ, ಸೊಳ್ಳೆ ನಿಯಂತ್ರಣ ಹೇಗೆ ಸಾಧ್ಯ’ ಎಂದು ಅಮಾನಿಕೆರೆ ಪಕ್ಕದ ಬಡಾವಣೆಯ ಶ್ರೀರಾಮನಗರದ ಕುಮಾರಸ್ವಾಮಿ ಪ್ರಶ್ನಿಸುತ್ತಾರೆ.

ಡೆಂಗಿ ಜ್ವರ ನಿಯಂತ್ರಿಸಲು ಕ್ರಮ
‘ಜಿಲ್ಲೆಯ ಮಧುಗಿರಿ, ಪಾವಗಡ ಮತ್ತು ತುಮಕೂರು ನಗರದಲ್ಲಿ ಡೆಂಗಿ ಜ್ವರದ ಪ್ರಕರಣ ವರದಿಯಾಗುತ್ತಿವೆ. ಜ್ವರದಿಂದ ಮೃತಪಟ್ಟ ಪ್ರಕರಣ ನಡೆದಿಲ್ಲ. ಮುಂಗಾರು ಶುರುವಾಗಿದೆ. ಇದು ಸೊಳ್ಳೆ ಉತ್ಪತ್ತಿಗೆ ಸಕಾಲ. ಹೀಗಾಗಿ, ಸ್ವಚ್ಛತೆಗೆ ಆದ್ಯತೆ ನೀಡಿ, ಸೊಳ್ಳೆ ನಿಯಂತ್ರಣ ಕ್ರಮಕೈಗೊಳ್ಳಬೇಕು. ಇಲಾಖೆಯೂ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ವಿ.ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ -ಅಂಶ
32(ಜನವರಿ–ಜೂನ್) ಡೆಂಗಿ ಜ್ವರ ಪ್ರಕರಣ 

35 ಎಚ್1ಎನ್1

23 ಚಿಕುನ್‌ ಗುನ್ಯ

5 ಮಲೇರಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT