‘ರೈತರ ಸುಟ್ಟ ಬೆಂಕಿ ಕೇಂದ್ರಕ್ಕೆ ಮುಳುವು’

7

‘ರೈತರ ಸುಟ್ಟ ಬೆಂಕಿ ಕೇಂದ್ರಕ್ಕೆ ಮುಳುವು’

Published:
Updated:
‘ರೈತರ ಸುಟ್ಟ ಬೆಂಕಿ ಕೇಂದ್ರಕ್ಕೆ ಮುಳುವು’

ಮಾಗಡಿ: ‘ರೈತರನ್ನು ಸುಟ್ಟಬೆಂಕಿ ಕೇಂದ್ರ ಸರ್ಕಾರಕ್ಕೆ ಮುಳುವಾಗಲಿದೆ, ಮಧ್ಯಪ್ರದೇಶದಲ್ಲಿ  ಸಾಲಮನ್ನಾ ಮಾಡುವಂತೆ  ಶಾಂತಿಯುತ ಪ್ರತಿಭಟನೆ ನಡೆಸಿದ ಅಮಾಯಕ  ರೈತರ ಮೇಲೆ ನಡೆದಿರುವ ಗೋಲಿಬಾರ್‌  ನಡೆಸಿರುವುದು ಖಂಡನೀಯ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಆಗ್ರಹಿಸಿದರು.

ಸಾಲಮನ್ನಾ ಮಾಡುವಂತೆ  ಶಾಂತಿಯುತ ಪ್ರತಿಭಟನೆ ನಡೆಸಿದ  ಅಮಾಯಕ  ರೈತರ ಮೇಲೆ ನಡೆದಿರುವ ಗೋಲಿಬಾರ್‌ ಪ್ರಕರಣದಲ್ಲಿ ಬಂಧಿಸಿರುವ ರೈತರನ್ನು ಬಿಡುಗಡೆಗೊಳಿಸುವಂತೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ನೇತೃತ್ವದಲ್ಲಿ ತಹಶೀಲ್ದಾರ್‌ ಎನ್‌.ಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು,

ಭಾರಿ ಉದ್ದಿಮೆದಾರರ ಲಕ್ಷಾಂತರ ಕೋಟಿ ಸಾಲಮನ್ನಾ ಮಾಡಿರುವ ಕೇಂದ್ರ ಸರ್ಕಾರ. ರೈತರ ಸಾಲಮನ್ನಾ ಮಾಡಲು ನಿರಾಕರಿಸಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಬ್ಬಗೆಯ ನೀತಿಯಾಗಿದೆ ಎಂದು ಟೀಕಿಸಿದರು.

ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ರೈತರ ಋಣದಲ್ಲಿ ದರ್ಬಾರ್‌ ಮಾಡುತ್ತಿರುವ ಪ್ರಧಾನ ಮಂತ್ರಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ  ಅವರಿಗೆ ರಾಜ್ಯದ ರೈತರು ಎದುರಿಸುತ್ತಿರುವ ಸಂಕಟವನ್ನು ತಿಳಿಸಿ ಎಂದರು.

ಸಾಲಮನ್ನಾ ಮಾಡಿಸಲು ರೈತರ ಹೆಸರಿನಲ್ಲಿ ವಿಧಾನ ಸೌಧದ ಮೆಟ್ಟಿಲ ಮೇಲೆ ಹಸಿರು ಶಾಲು ಹಾಕಿಕೊಂಡು ಪ್ರಮಾಣ ಮಾಡಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಅನ್ನದಾತರ ಆತ್ಮಹತ್ಯೆಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಯಾಕೆ  ಎಂದು ರೈತ ಸಂಘದ ಅಧ್ಯಕ್ಷರು ಪ್ರಶ್ನಿಸಿದರು. 

ರೈತ ಸಂಘದ ಪದಾಧಿಕಾರಿ ಗಳಾದ ಹೊಸಪಾಳ್ಯದ ಮುದ್ದೇಗೌಡ, ಹನಮೇಗೌಡ, ಚಕ್ರಬಾವಿಯ ಗಿರೀಶ್‌, ಬೆಟ್ಟಪ್ಪ, ಮಾಡಬಾಳ್‌ ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷ ಮಧು, ಮೋಟಗೊಂಡನಹಳ್ಳಿ ಶಿವರುದ್ರಯ್ಯ, ಯೋಗೇಶ್‌, ದೊಡ್ಡಸೋಮನ ಹಳ್ಳಿ ಕೆಂಪಯ್ಯ ಮಾತನಾಡಿದರು, ತಹಶೀಲ್ದಾರ್‌ ಎನ್‌. ಲಕ್ಷ್ಮೀ ಅವರಿಗೆ ಮನವಿ ಸಲ್ಲಿಸಿದರು, ಕಲ್ಯಾಬಾಗಿಲು ಬಳಿ ರಸ್ತೆ ತಡೆ ನಡೆಸಿದ ನಂತರ ತಹಶೀಲ್ದಾರ್‌ ಕಚೇರಿಯ ಮುಂದೆ ಧರಣಿ ನಡೆಸಿದರು.

ಹುಸಿಯಾದ ಪ್ರಣಾಳಿಕೆ

ಚನ್ನಪಟ್ಟಣ: ಮಧ್ಯಪ್ರದೇಶದಲ್ಲಿ ನಡೆದಿರುವ ರೈತರ ಮೇಲಿನ ಗೋಲಿಬಾರ್ ಖಂಡಿಸಿ ರೈತಸಂಘದ ಪದಾಧಿಕಾರಿಗಳು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಗುರುವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಗಾಂಧಿಭವನದಿಂದ ಬೆಂಗಳೂರು ಮೈಸೂರು ರಸ್ತೆಯಲ್ಲಿ ಮೆರವಣಿಗೆ ನಡೆಸಿ ನಂತರ ರಸ್ತೆ ತಡೆ ನಡೆಸಿದರು. ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಮಧ್ಯಪ್ರದೇಶದಲ್ಲಿ ರೈತರು ತಮ್ಮ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ರೈತರ ಮೇಲೆ ಬಿಜೆಪಿ ಸರ್ಕಾರ ಗೋಲಿಬಾರ್ ನಡೆಸಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು.

ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿ, ರೈತರ ಮನಗೆದ್ದು ಗೆಲುವು ಸಾಧಿಸಿದೆ. ಗೆದ್ದ ನಂತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದೆ, ಈ ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರವಿದ್ದ ವೇಳೆ ಬಿತ್ತನೆ ಬೀಜ ವಿತರಣೆ ವಿಚಾರದಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸಿತ್ತು.

ಹೀಗೆಯೇ ಮರುಕಳಿಸಿದರೆ ರೈತ ಸಂಘದಿಂದ ಉಗ್ರಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಎಂ.ರಾಮು, ಕೆ.ಮಲ್ಲಯ್ಯ, ರಾಮಕೃಷ್ಣಯ್ಯ, ಕೃಷ್ಣಪ್ಪ, ರಾಮಚಂದ್ರು, ತಿಮ್ಮಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry