ಆಟವಿನ್ನೂ ಬಾಕಿ ಇದೆ

7

ಆಟವಿನ್ನೂ ಬಾಕಿ ಇದೆ

Published:
Updated:
ಆಟವಿನ್ನೂ ಬಾಕಿ ಇದೆ

ಏಕ್ತರಿನಾ ಮಕರೋವಾಗೂ ಟೆನಿಸ್‌ಗೂ ಬಾಲ್ಯದ ಗೆಳೆತನ. ಮಾಸ್ಕೊದಲ್ಲಿ ಹುಟ್ಟಿದ ಈ ಹುಡುಗಿ ಚುರುಕು, ಅಪ್ಪ ವಲೆರಿ ಬ್ಯಾಂಕರ್. ಅಮ್ಮ ಗೃಹಿಣಿ. ಆಪ್ತೇಷ್ಟರು ಕೊಟ್ಟ ಸಲಹೆ ಕೇಳಿಸಿಕೊಂಡು, ಐದನೇ ವಯಸ್ಸಿನ ಮಗಳನ್ನು ಟೆನಿಸ್ ಕಲಿಯಲೆಂದು ಲುಜೆನಿಕಿಗೆ ಕಳುಹಿಸಿದರು.

ಬಹುತೇಕ ಸೋಲುಗಳಿಂದಲೇ ಸುದ್ದಿಯಾದ ಈ ಆಟಗಾರ್ತಿ 2003ರಲ್ಲಿ ವೃತ್ತಿಪರ ಟೆನಿಸ್ ಪ್ರವೇಶಿಸಿದರು. ರಷ್ಯಾದ ಜುಕೊವಿಸ್ಕಿಯಲ್ಲಿ ಆ ವರ್ಷ ನಡೆದ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. ಟೆನಿಸ್ ಸೇರಿಸುವಂತೆ ಸಲಹೆ ನೀಡಿದ್ದ ಕೆಲವು ಆಪ್ತೇಷ್ಟರು, ‘ಮುಂದೆ ಚೆನ್ನಾಗಿ ಆಡುವೆಯಂತೆ’ ಎಂದು ತಲೆ ನೇವರಿಸಿದರು. ಅದರ ಫಲವೋ ಎಂಬಂತೆ ಮಕರೋವಾ ಟರ್ಕಿಯಲ್ಲಿ ಟೂರ್ನಿಯೊಂದರಲ್ಲಿ ಚಾಂಪಿಯನ್ ಆದರು.

ಸೋಲು-ಗೆಲುವಿನ ಜೀಕಿನಲ್ಲಿ ಅನುಭವ ಗಾಢವಾಗಿಸಿಕೊಳ್ಳುತ್ತಾ ಬಂದ ಹುಡುಗಿ, ಆಟದ ವೈಖರಿಯನ್ನು ಕಾಲಕಾಲಕ್ಕೆ ಸರಿಪಡಿಸಿ ಕೊಂಡರು.

2008ರಲ್ಲಿ ಕೂಡ ಸೋಲೇ ಅವರ ಗೆಲುವಿಗೆ ಸೋಪಾನವಾಯಿತು. ಮೆಡಿಬ್ಯಾಂಕ್ ಇಂಟರ್‌ ನ್ಯಾಷನಲ್ ಟೂರ್ನಿಯ ಅರ್ಹತಾ ಸುತ್ತಿನಲ್ಲೇ ಸೋತಿದ್ದ ಅವರು, ಆಸ್ಟ್ರೇಲಿಯಾ ಓಪನ್‌ನಲ್ಲಿ ಆಗನಸ್ ಝಾವೆ ಎದುರು ಗೆದ್ದು ಬೀಗಿದರು. ಝಾವೆ ಆಗ ವಿಶ್ವದ 19ನೇ ರ್‍ಯಾಂಕಿಂಗ್ ಆಟಗಾರ್ತಿ. ಆದರೆ, ವಿಂಬಲ್ಡನ್‌ನಲ್ಲಿ ಆ ವರ್ಷ ಮೊದಲ ಸುತ್ತಿನಲ್ಲೇ ಸೋತರು.

ಮೂರ್ನಾಲ್ಕು ವರ್ಷ ಗ್ರ್ಯಾಂಡ್ ಸ್ಲಾಮ್ ಟೆನಿಸ್‌ನಲ್ಲಿ ನಾಲ್ಕು ಸುತ್ತುಗಳ ಪರಿಧಿಯನ್ನು ದಾಟಲು ಹೆಣಗಾಡಿದ ಮಕರೋವಾ ಎಂದೂ ಟೆನಿಸ್ ತ್ಯಜಿಸುವಷ್ಟು ಹತಾಶರಾಗಲಿಲ್ಲ. 2011ರಲ್ಲಿ ಆಸ್ಟ್ರೇಲಿಯಾ ಓಪನ್‌ನಲ್ಲಿ 19ನೇ ಶ್ರೇಯಾಂಕದ ಆಟಗಾರ್ತಿ ಅನಾ ಇವಾನೊವಿಕ್ ಮಂಡಿಯೂರಿ ಕೂರುವಂತೆ ಮಾಡಿದರು. ಮೊದಲ ಸುತ್ತಿನ ಆ ಪಂದ್ಯ ಎರಡೂಮುಕ್ಕಾಲು ಗಂಟೆ ನಡೆಯಿತು. ಅದು ಕೊಟ್ಟ ಆತ್ಮವಿಶ್ವಾಸದಿಂದ 13ನೇ ಶ್ರೇಯಾಂಕದ ನಾದಿಯಾ ಪೆಟ್ರೊವಾ ಅವರನ್ನೂ ಮಣಿಸಿ ನಾಲ್ಕನೇ ಸುತ್ತು ತಲುಪಿದರು. ಆಗ 3ನೇ ರ್‍ಯಾಂಕಿಂಗ್‌ನ ಕಿಮ್ ಕ್ಲೈಸ್ಟರ್ಸ್ ಸವಾಲು ಎದುರಾಯಿತು. ಅಲ್ಲಿ ಸೋತರೂ ಖುಷಿಯಿಂದ ಹೊರಬಂದರು.

ಮರುವರ್ಷ ಇನ್ನೊಂದು ಪರ್ವಕಾಲ. ಅದೇ ಆಸ್ಟ್ರೇಲಿಯಾ ಓಪನ್. ಗೆದ್ದರೆ ಕ್ವಾರ್ಟರ್‌ಫೈನಲ್ಸ್. ಎದುರಲ್ಲಿ ದೈತ್ಯೆ ಸೆರೆನಾ ವಿಲಿಯಮ್ಸ್. 13 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದ ಅಮೆರಿಕದ ಆಟಗಾರ್ತಿ ಎದುರು ರಷ್ಯಾದ ಈ ಹುಡುಗಿ ಪೀಚಾಗಿ ಕಾಣುತ್ತಿದ್ದರು. ಆಟ ಕಳೆಗಟ್ಟಿತು. ಕಳೆದುಕೊಳ್ಳುವುದು ಏನೂ ಇಲ್ಲ ಎಂಬಂತೆ ಆಡಿದ ಮಕರೋವಾ ಅಮೆರಿಕ ಕಣ್ಮಣಿಯನ್ನು ಮಣಿಸಿದರು. ಗ್ರ್ಯಾಂಡ್ ಸ್ಲಾಮ್ ಟೆನಿಸ್‌ನಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್ ಪ್ರವೇಶಿಸಿ, ಬೀಗಿದರು.

ಮಿಶ್ರ ಡಬಲ್ಸ್‌ನಲ್ಲಿ ಮೂರು ಸಲ ಚಾಂಪಿಯನ್ ಆದ ಅನುಭವ ಬೆನ್ನಿಗಿಕ್ಕಿಕೊಂಡಿರುವ ಮಕರೋವಾ ಅವರಿಗೆ ಈಗ 29 ವಯಸ್ಸು. 24 ವರ್ಷ ಹರಿಸಿದ ಬೆವರಿಗೆ ಏನು ಅರ್ಥ ಎನ್ನುವುದನ್ನು ಚೆನ್ನಾಗಿ ಬಲ್ಲರು. ಎರಡು ವರ್ಷಗಳ ಹಿಂದೆ ಫ್ರೆಂಚ್ ಓಪನ್‌ನಲ್ಲಿ ಅನಾ ಇವಾನೊವಿಕ್ ಎದುರು ಕ್ವಾರ್ಟರ್‌ಫೈನಲ್ ತಲುಪಲು ಶ್ರಮಹಾಕಿ ಆಡಿದ್ದರು. ಸೋತ ನಂತರ ಇನ್ನೊಂದು ನಿಟ್ಟುಸಿರು ಹೊರಹಾಕಿ, ‘ಮುಂದಿನ ವರ್ಷ ನೋಡೋಣ’ ಎಂದಿದ್ದರು. ಕಳೆದ ವರ್ಷ ಜನವರಿಯಲ್ಲಿ ಡಬಲ್ಸ್‌ನಿಂದ ಬ್ರೇಕ್ ತೆಗೆದುಕೊಂಡು ಒಬ್ಬರೇ ಆಡುವ ಕಡೆ ನಿಗಾ ವಹಿಸಿದರು.

ಫ್ರೆಂಚ್ ಓಪನ್‌ನಲ್ಲಿ ಮೊನ್ನೆ ಏಂಜಲಿಕ್ ಕೆರ್ಬರ್ ವಿರುದ್ಧ ಮೊದಲ ಸುತ್ತಿನಲ್ಲಿ ಮಕರೋವಾ ಗೆದ್ದಾಗ ಟೆನಿಸ್ ಅಭಿಮಾನಿಗಳೆಲ್ಲ ಎದ್ದುನಿಂತು ಚಪ್ಪಾಳೆ ಹೊಡೆದರು. ವಿಶ್ವದ ಮೊದಲ ರ್‍ಯಾಂಕ್ ಆಟಗಾರ್ತಿ ಕೆರ್ಬರ್. ನಂಬರ್ ಒನ್ ಆಟಗಾರ್ತಿ ಫ್ರೆಂಚ್ ಓಪನ್‌ನ ಮೊದಲ ಸುತ್ತಿನಲ್ಲಿ ಎಂದೂ ಸೋತಿರಲಿಲ್ಲ.

ತನ್ನ ಮೊದಲ ಸುತ್ತಿನ ಸೋಲುಗಳಿಂದಲೇ ಹೆಚ್ಚು ಸುದ್ದಿಯಾಗಿದ್ದ ಮಕರೋವಾ, ಈ ಬಾರಿ ಗೆಲುವಿನ ಮೂಲಕ ಆಟವಿನ್ನೂ ಬಾಕಿ ಇದೆ ಎಂದು ಸಾರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry