ನಿಧಾನವೇ ಪ್ರಧಾನ; ಪ್ರಯಾಸದ ಪ್ರಯಾಣ

7

ನಿಧಾನವೇ ಪ್ರಧಾನ; ಪ್ರಯಾಸದ ಪ್ರಯಾಣ

Published:
Updated:
ನಿಧಾನವೇ ಪ್ರಧಾನ; ಪ್ರಯಾಸದ ಪ್ರಯಾಣ

ನೂರೊಂದು ನೆನಪು

ನಿರ್ಮಾಪಕರು: ಸೂರಜ್ ದೇಸಾಯಿ, ಮನೀಶ್ ದೇಸಾಯಿ

ನಿರ್ದೇಶಕ: ಕುಮಾರೇಶ್‌ ಎಂ.

ತಾರಾಗಣ: ಚೇತನ್, ಮೇಘನಾ ರಾಜ್, ರಾಜ್ ವರ್ಧನ್, ಯಶ್ ಶೆಟ್ಟಿ

‘ಮನುಷ್ಯ ಸಾವಿನ ದವಡೆಯಲ್ಲಿದ್ದಾಗ ಬದುಕೋಕೆ ಒದ್ದಾಡೋವಷ್ಟು, ತಾನು ಕಳೆದುಕೊಡ ಪ್ರೀತಿ ಮರಳಿ ಸಿಗುವ ಅವಕಾಶವಿದ್ದಾಗ ಅದನ್ನು ಪಡೆದುಕೊಳ್ಳಲು ಹೋರಾಡುವುದಿಲ್ಲ. ಹಾಗೊಮ್ಮೆ ಹೋರಾಡಿದರೆ, ಪ್ರೀತಿ ನಿಜವಾಗಿದ್ದರೆ ಅದು ಖಂಡಿತ ಸಿಕ್ಕೇ ಸಿಗುತ್ತದೆ’– ಇದು ‘ನೂರೊಂದು ನೆನಪು’ ಚಿತ್ರದ ಒಂದು ಎಳೆಯ ಕಥೆ. ಆದರೆ ಈ ಮಾತನ್ನು ನಿಜವಾಗಿಸಲು ನಿರ್ದೇಶಕ ಕುಮರೇಶ್ ಮಾಡಿದ ಪ್ರಯತ್ನಗಳು ನಿರೀಕ್ಷಿತ ಫಲ ನೀಡಿಲ್ಲ.

ಸುಹಾಸ್ ಶ್ರೀವಲ್ಕರ್ ಅವರ ‘ದುನಿಯಾದಾರಿ’ ಮರಾಠಿ ಕೃತಿಯನ್ನು ಆಧರಿಸಿ ‘ನೂರೊಂದು ನೆನಪು’ ಹರಿಬಿಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಕುಮರೇಶ್.

ಶ್ರೇಯಸ್ ಬಹಾದ್ದೂರ್ (ಚೇತನ್) ತನಗೆ ಇಷ್ಟವಿಲ್ಲದಿದ್ದರೂ ತಾಯಿ ಹೇಳಿದ ಕಾಲೇಜಿಗೆ ಸೇರುತ್ತಾನೆ. ಅಲ್ಲಿ ಅವನ ಸ್ನೇಹ ಬೆಳೆಯುವುದು ಇಡೀ ಕಾಲೇಜನ್ನೇ ನಡುಗಿಸುವ ದಯಾನಂದ(ರಾಜ್ ವರ್ಧನ್)ನ  ಜೊತೆ. ಮುಂದೆ, ಶ್ರುತಿ ಅರಸ್ (ಮೇಘನಾ ರಾಜ್) ಪ್ರೇಮಕ್ಕಾಗಿ ಹಂಬಲಿಸುತ್ತಾನೆ. ಹೀಗೆ ಶ್ರೇಯಸ್ ಎಂಬ ಹುಡುಗನ ಸುತ್ತ ಅನೇಕ ಪಾತ್ರಗಳು, ಉಪಕಥೆಗಳು ತೆರೆದುಕೊಳ್ಳುತ್ತವೆ. ಶ್ರೇಯಸ್ ಅನುಭವಿಸುವ ಸ್ನೇಹ, ಪ್ರೀತಿ, ತ್ಯಾಗ ಎಲ್ಲವೂ ತೆರೆಯ ಮೇಲೆ ಬರುತ್ತವೆ. ಎಂಥದ್ದೇ ಸಂದರ್ಭವನ್ನೂ ಶಾಂತವಾಗಿ ಎದುರಿಸುವ ಶಾಂತಮೂರ್ತಿ ಈ ಶ್ರೇಯಸ್.

ಯಾವುದೇ ರಾಗ–ದ್ವೇಷ, ಭಾವೋದ್ವೇಗವಿಲ್ಲದೆ ಇಲ್ಲದೆ ಕಥೆ ಹೇಳಬೇಕು ಎಂದು ನಿರ್ದೇಶಕರು ಅಂದುಕೊಂಡಂತಿದೆ. ಇದಕ್ಕೆ ಬದ್ಧರಾದ ಪರಿಣಾಮ ನಿರೂಪಣೆ ಸಪಾಟಾಗಿ ಸಾಗುತ್ತದೆ. ತೆರೆಯ ಮೇಲೆ ದೃಶ್ಯಾವಳಿಗಳು ನಿಧಾನ ಗತಿಯಲ್ಲಿ ಓಡುತ್ತಿದ್ದರೂ ನೋಡುಗನ ಮನದಾಳದಲ್ಲಿ ಯಾವ ಭಾವಗಳೂ ಮೂಡುವುದಿಲ್ಲ. ನಿರ್ದೇಶಕರು ಸಿನಿಮಾದ ಸಾಧ್ಯತೆಗಳನ್ನು ಕೈಚೆಲ್ಲಿದ್ದಾರೆ. ಕಣ್ಮುಚ್ಚಿ ಕೂತು ರೇಡಿಯೊದಲ್ಲಿ ಬರುವ ಕಥೆ ಕೇಳುವಷ್ಟೇ ಅನಾಯಾಸವಾಗಿ ಸಿನಿಮಾವನ್ನೂ ‘ಕೇಳಬಹುದು’.

ಗಗನ್ ಬಡೇರಿಯ ಸಂಗೀತ ಮತ್್ತು ಎಸ್.ಕೆ. ರಾವ್ ಛಾಯಾಗ್ರಹಣ ಗಮನ ಸೆಳೆಯುತ್ತವೆ. ನಟನೆಯಲ್ಲಿ ಚೇತನ್, ಮೇಘನಾ, ಹೊಸ ನಟ ರಾಜ್ ವರ್ಧನ್ ಖುಷಿ ನೀಡುತ್ತಾರೆ. ಆದರೆ ನಟ ರವಿಶಂಕರ್ ಅವರನ್ನು ಅತಿಯಾಗಿ ಅನುಕರಿಸಲು ಹೋದ ಯಶ್ ಶೆಟ್ಟಿ ತನ್ನ ನೈಜ ಅಭಿನಯವನ್ನು ಹೊರತರಲು ಮರೆತಂತಿದೆ. ನಾಯಕನಿಗೆ ಹೆಚ್ಚು ಪ್ರಾಮುಖ್ಯ ನೀಡಿ, ಉಳಿದ ಪಾತ್ರಗಳನ್ನು ನಗಣ್ಯ ಮಾಡುವ ಚಾಳಿ ಇಲ್ಲಿಲ್ಲ. ಎಲ್ಲ ಮುಖ್ಯ ಪಾತ್ರಗಳಿಗೆ ಸಮಾನ ಅವಕಾಶ ನೀಡಲಾಗಿದೆ.

‘ಪಿಚ್ಚರ್ ಮುಗೀತು, ಥಿಯೇಟರ್ ಖಾಲಿ ಮಾಡು’ ಎಂದು ದಯಾನಂದ ಮಧ್ಯಂತರದಲ್ಲೇ ಹೇಳುತ್ತಾನೆ. ಅದುವರೆಗೂ ತೆರೆಯಲ್ಲಿ ಏನು ನಡೆಯಿತು ಎಂಬ ಗೊಂದಲವಿರುವ ಪ್ರೇಕ್ಷಕ, ದಯಾನಂದನ ಮಾತನ್ನು ಹೌದು ಎಂದು ನಂಬಿಕೊಂಡು ಎದ್ದು ನಡೆದರೆ ತೀರಾ ಕಳೆದುಕೊಳ್ಳುಂಥದ್ದೇನೂ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry