ಅನ್ನಲೋಕದ ವೈವಿಧ್ಯ

7

ಅನ್ನಲೋಕದ ವೈವಿಧ್ಯ

Published:
Updated:
ಅನ್ನಲೋಕದ ವೈವಿಧ್ಯ

-ಲೀಲಾ ಚಂದ್ರಶೇಖರ

**

ಸಬ್ಬಸ್ಸಿಗೆ ಸೊಪ್ಪಿನ ಚಿತ್ರಾನ್ನ

ಬೇಕಾಗುವ ಸಾಮಾಗ್ರಿಗಳು


ಸಬ್ಬಸ್ಸಿಗೆ ಸೊಪ್ಪು – 2 ಕಟ್ಟು, ಹೆಚ್ಚಿದ ಈರುಳ್ಳಿ – 1, ಬೆಳ್ಳುಳ್ಳಿ  –20 ಎಸಳು, ಅನ್ನ – 1 ಕಪ್‌ ಅಕ್ಕಿಯಿಂದ ತಯಾರಿಸಿದ್ದು, ತೆಂಗಿನಕಾಯಿ ತುರಿ – ಸ್ವಲ್ಪ

ಒಗ್ಗರಣೆಗೆ

ಇಂಗು, ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೆಬೇಳೆ, ಕರಿಬೇವು, ಒಣ ಮತ್ತು ಹಸಿಮೆಣಸಿನಕಾಯಿ, ಉಪ್ಪು – ರುಚಿಗೆ, ಎಣ್ಣೆ – ಸ್ವಲ್ಪ

ತಯಾರಿಸುವ ವಿಧಾನ

ಮೊದಲು ಬಾಣಲಿಯಲ್ಲಿ ಎಣ್ಣೆಯನ್ನು ಬಿಸಿಮಾಡಿಕೊಂಡು ಅನ್ನವನ್ನು ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳು ಹಾಕಿ ಒಗ್ಗರಣೆ ರೆಡಿ ಮಾಡಿಕೊಳ್ಳಿ. ನಂತರ ಅದಕ್ಕೆ ಉಪ್ಪು, ನಿಂಬೆರಸ ಸೇರಿಸಿ. ಆರಿದ ಮೇಲೆ ಆ ಮಿಶ್ರಣವನ್ನು ಅನ್ನಕ್ಕೆ ಸೇರಿಸಿ ಚೆನ್ನಾಗಿ ಕಲೆಸಿ. ಇದು ಬಾಣಂತಿಯರಿಗೆ ಬಹಳ ಒಳ್ಳೆಯದು. ಈ ಚಿತ್ರಾನ್ನ ತುಪ್ಪದಿಂದ ಮಾಡಿ ಬಾಣಂತಿಯರಿಗೆ ಕೊಟ್ಟರೆ ಎದೆಹಾಲಿನ ಉತ್ಪತ್ತಿಯಾಗುತ್ತದೆ.

***

ಪುದೀನಾ ಚಿತ್ರಾನ್ನ

ಬೇಕಾಗುವ ಸಾಮಗ್ರಿಗಳು

ಹೆಚ್ಚಿದ ಪುದೀನಾ ಎಲೆ – 2 ಕಪ್‌, ದಪ್ಪಗೆ ಹೆಚ್ಚಿದ ಈರುಳ್ಳಿ–  2, ಹಸಿಮೆಣಸಿನಕಾಯಿ ಪೇಸ್ಟ್‌ ಮತ್ತು ಉಪ್ಪು–  ರುಚಿಗೆ, ಎಣ್ಣೆ –  ಸ್ವಲ್ಪ

ಒಗ್ಗರಣೆಗೆ

ಇಂಗು, ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೇಬೇಳೆ, ಕಡಲೆಬೀಜ (ಬೇಕಿದ್ದರೆ). ಒಂದು ಪಾವು ಅಕ್ಕಿಯ ಅನ್ನ ನಿಂಬೆರಸ ಅಥವಾ ಹುಳಿಮಾವಿನಕಾಯಿಯ ತುರಿ.

ತಯಾರಿಸುವ ವಿಧಾನ

ಎಣ್ಣೆಯನ್ನು ಬಿಸಿ ಮಾಡಿ ಒಗ್ಗರಣೆ ಸಾಮಾನುಗಳನ್ನೆಲ್ಲಾ ಹಾಕಿ ಒಗ್ಗರಿಸಿ. ನಂತರ ಈರುಳ್ಳಿ, ಪುದೀನಾಸೊಪ್ಪು ಹಾಕಿ ಬಾಡಿಸಿ. ಆ ಮಿಶ್ರಣಕ್ಕೆ ಅನ್ನ–ನಿಂಬೆರಸ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಬೇಕಿದ್ದರೆ ಕಾಯಿತುರಿಯನ್ನು ಸಹ ಹಾಕಿಕೊಳ್ಳಬಹುದು.

**

ಎಲೆಕೋಸಿನ ಬಾತ್

ಬೇಕಾಗುವ ಸಾಮಗ್ರಿಗಳು

ಉದ್ದಕ್ಕೆ ಹೆಚ್ಚಿದ ಎಲೆಕೋಸು – 1 ಕಪ್‌, ಅಕ್ಕಿ – ಒಂದು ಕಪ್‌, ವಾಂಗಿಬಾತ್ ಪುಡಿ – ಸ್ವಲ್ಪ, ಉಪ್ಪು – ರುಚಿಗೆ, ಎಣ್ಣೆ – ಸ್ವಲ್ಪ, ಒಣಕೊಬ್ಬರಿಯ ತುರಿ ಮತ್ತು ನಿಂಬೆರಸ  – ಸ್ವಲ್ಪ

ತಯಾರಿಸುವ ವಿಧಾನ

ಸಣ್ಣ ಕುಕ್ಕುರ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ.  ಅದಕ್ಕೆ ಇಂಗು, ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ 4 ತುಂಡು, ಕರಿಬೇವು, ಉದ್ದಿನಬೇಳೆ, ಕಡ್ಲೆಬೇಳೆ ಹಾಕಿ ಬಾಡಿಸಿ ಎಲೆಕೋಸು ಹಾಕಿ ಹುರಿಯಿರಿ. ತೊಳೆದ ಅಕ್ಕಿ ಹಾಕಿ ಹುರಿದು ಎರಡು ಪಾವು ನೀರು ಹಾಕಿ ಉಪ್ಪು ವಾಂಗಿಭಾತ್‌ ಪುಡಿಯನ್ನು ಸೇರಿಸಿ. ಸಣ್ಣ ಉರಿಯಲ್ಲಿಟ್ಟು ಒಂದು ಕೂಗು ಕೂಗಿಸಿ. ಇದು ತುಂಬಾ ಬೇಗ ತಯಾರುಗುವ ತಿಂಡಿ. ಅಲ್ಲದೇ ತಿನ್ನಲು ರುಚಿಯಾಗಿರುತ್ತದೆ. ತಿನ್ನುವ ಮೊದಲು ಕೊಬ್ಬರಿತುರಿ, ನಿಂಬೆರಸಗಳನ್ನು ಸೇರಿಸಿಕೊಳ್ಳಿ.

**

ಪಾಲಕ್ ಬಾತ್‌

ಬೇಕಾಗುವ ಸಾಮಗ್ರಿ

ಪಾಲಕ್‌ ಸೊಪ್ಪು – 1 ಕಟ್ಟು, ಅಕ್ಕಿ –  1 ಪಾವು, ಬೆಳ್ಳುಳ್ಳಿ – 5ರಿಂದ 6 ಎಸಳು, ಜೀರಿಗೆ – ಸ್ವಲ್ಪ, ಜೀರಿಗೆ ಪುಡಿ – ಅರ್ಧ ಚಮಚ, ಗರಂ ಮಸಾಲಾ – ಒಂದು ಚಿಟಿಕೆ, ಹಸಿ ಬಟಾಣಿ – ಸ್ವಲ್ಪ, ಒಗ್ಗರಣೆಗೆ- ಎಣ್ಣೆ, ಇಂಗು, ಸಾಸಿವೆ

ತಯಾರಿಸುವ ವಿಧಾನ

ಒಂದು ಸಣ್ಣ ಕುಕ್ಕರ್‌ನಲ್ಲಿ ಎಣ್ಣೆ ಬಿಸಿಮಾಡಿ. ಒಗ್ಗರಣೆ ಸಾಮಾನುಗಳನ್ನು ಹಾಕಿ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಅರ್ಧ ಚಮಚ, ಬಟಾಣಿ ಹಾಕಿ, ಕೊನೆಗೆ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಬಾಡಿಸಿ. ಜೀರಿಗೆ ಪುಡಿ, ಗರಂ ಮಸಾಲ, ಮತ್ತು ಉಪ್ಪು ಹಾಕಿ ಎರಡು ಅಥವಾ ಎರಡೂವರೆ ಪಾವು ನೀರು ಹಾಕಿ ತೊಳೆದ ಅಕ್ಕಿ ಹಾಕಿ ಚೆನ್ನಾಗಿ ಕಲೆಸಿ. ಕುಕ್ಕರ್ ಮುಚ್ಚಿ ಸಣ್ಣ ಉರಿಯಲ್ಲಿ ಒಂದು ಕೂಗು ಕೂಗಿಸಿ. ಈ ಬಾತ್‌ಗೆ ಜೀರಿಗೆ ಪುಡಿಯನ್ನು ಹಾಕಿರುವುದರಿಂದ ವಿಶಿಷ್ಟ ರೀತಿಯ ರುಚಿಯನ್ನು ಕೊಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry