ಏನಾದ್ರೂ ಕೇಳ್ಬೋದು

7

ಏನಾದ್ರೂ ಕೇಳ್ಬೋದು

Published:
Updated:
ಏನಾದ್ರೂ ಕೇಳ್ಬೋದು

1. ನನ್ನ ಹೆಸರು ಜಯರಾಂ. ನಾನು ಎಂ.ಎ., ಬಿ.ಇಡಿ. ಮಾಡಿದ್ದೇನೆ. ನನಗೆ 32 ವರ್ಷ. ಮದುವೆ ಆಗಿದೆ. ನನ್ನ ಪತ್ನಿಯದ್ದು ಎಂ.ಎ., ಬಿ.ಇಡಿ. ಆಗಿದೆ. ನಾನು ಬಡತನದಲ್ಲಿ ಹುಟ್ಟಿ ಬೆಳೆದವನು. ಕಷ್ಟಪಟ್ಟು ಓದಿದರೂ ಸರಿಯಾದ ಕೆಲಸ ಸಿಗಲಿಲ್ಲ. ಮನೆ, ತಂಗಿಯ ಮದುವೆ ಜವಾಬ್ದಾರಿ – ಇವೆಲ್ಲಾ ನನ್ನ ಹೆಗಲ ಮೇಲಿತ್ತು. ಕೆಲಸ ಸಿಗಲಿಲ್ಲ ಅಂತ ಸುಮ್ಮನೇ ಕೂರದೇ  ಜಮೀನಿನಲ್ಲಿ ಬೋರ್ ಹಾಕಿಸಿ, ಒಂದು ಹಸುವನ್ನು ತಂದು ಸಾಕಿಕೊಂಡಿರುವೆ. ಬರುವ ಆದಾಯದಿಂದ ಬದುಕುತ್ತಿರುವೆ. ಆದರೆ ನನ್ನ ಹೆಂಡತಿಗೆ ನಾನಿನ್ನೂ ನೆಲೆ ಕಂಡುಕೊಂಡಿಲ್ಲ ಎಂದು ತುಂಬ ಕೋಪ. ನನಗೆ ತುಂಬ ಕೆಟ್ಟದಾಗಿ ಬಯ್ತಾಳೆ. ನಾನು ಎಷ್ಟು ಹೇಳಿದರೂ ಅವಳಿಗೆ ಅರ್ಥಾವೇ ಆಗೋಲ್ಲ.  ನನಗೆ ಅವಳು ಎಂದರೆ ತುಂಬ ಇಷ್ಟ. ಹಾಗಾಗಿ ಅವಳಿಗೆ ಬೈಯುವುದಕ್ಕೂ ಮನಸ್ಸಾಗುತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ.

ಹಳ್ಳಿಗೆ ಹಿಂದಿರುಗಿ, ಹಳ್ಳಿಯಲ್ಲಿ ಸುಸ್ಥಿರ ಜೀವನವನ್ನು ನಡೆಸುತ್ತೇನೆ ಎಂದು ನೀವು ತೆಗೆದುಕೊಂಡ ನಿರ್ಧಾರ ಶ್ಲಾಘನೀಯ. ಆ ಜೀವನ ನಿಮಗೆ ತೃಪ್ತಿ ನೀಡುತ್ತದೆ. ಅದಲ್ಲದೇ ನಿಮ್ಮ ಊರಿಗೆ ಮರಳಿದ್ದೀರಿ. ನಿಮ್ಮ ಹೆಂಡತಿಯ ಮನವೊಲಿಸಿ. ನೀವು ಹೇಗೆ ಸ್ವತಂತ್ರ ಜೀವನ ನಡೆಸುತ್ತಿದ್ದೀರಿ ಎಂಬುದನ್ನು ತಿಳಿಸಿ ಹೇಳಿ. ಅವರು ನಿಮಗೆ ಸಹಕಾರ ನೀಡಿದರೆ ಇಬ್ಬರು ಸೇರಿ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ವೈಬ್‌ಸೈಟ್‌ಗಳಿಗೆ ಭೇಟಿ ನೀಡಿ. ಅದರಲ್ಲಿ ಕೃಷಿಗೆ ಸಂಬಂಧಿಸಿದ ಅನೇಕ ಮಾಹಿತಿ ಹಾಗೂ ಯೋಜನೆಗಳ ಬಗ್ಗೆ ವಿವರಗಳಿರುತ್ತದೆ. ನಿಮಗೆ ಆಸಕ್ತಿ ಇರುವ ಕೃಷಿಕರ ಗುಂಪಿಗೆ ಸೇರಿಕೊಳ್ಳಿ. ಆ ಗುಂಪಿನ ಸದಸ್ಯರೊಂದಿಗೆ ಸಂಪರ್ಕ ಬೆಳೆಸಿ. ನಿಮ್ಮ ಹೆಂಡತಿಯನ್ನು ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿ. ಇದರಿಂದ ಕೃಷಿಯ ಬಗ್ಗೆ ಅವರಿಗಿರುವ ದೃಷ್ಟಿಕೋನವನ್ನು ಬದಲಾಯಿಸಬಹುದು. ಉನ್ನತ ಹುದ್ದೆಯಲ್ಲಿರುವವರು ಕೂಡ ಕೆಲಸವನ್ನು ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡು, ಅದರಲ್ಲಿ ಯಶಸ್ಸು ಸಾಧಿಸಿದ ಅನೇಕರು ನಮ್ಮ ನಡುವೆ ಇದ್ದಾರೆ. ಅಂತಹವರನ್ನು ನಿಮ್ಮ ಹೆಂಡತಿಗೆ ತೋರಿಸಿ. ಅಂತಹವರ ಜೊತೆ ಮಾತನಾಡಲು ಅವಕಾಶ ಕಲ್ಪಿಸಿ. ಆಗ ಅವರಿಗೆ ನೀವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೀರಿ ಎಂದು ಅವರಿಗೆ ಅನ್ನಿಸಬಹುದು. ಉದಾಹರಣೆಗಳನ್ನು ನೀಡುವ ಮೂಲಕ, ಸರಿಯಾದ ರೀತಿಯಲ್ಲಿ ಹೇಳಿದರೆ ಅವರು ಖಂಡಿತ ಅರ್ಥಮಾಡಿಕೊಳ್ಳುತ್ತಾರೆ. ಆಗಲೂ ಅವರು ನಿಮ್ಮ ನಿರ್ಧಾರವನ್ನು ದೂಷಿಸಿದರೆ ಮನೆಯ ಹಿರಿಯರೊಂದಿಗೆ ಮಾತನಾಡಿ ಅಥವಾ ಅವರ ತಂದೆ ತಾಯಿಯ ಬಳಿ ಅವರ ಮನವೊಲಿಸುವಂತೆ ಕೇಳಿಕೊಳ್ಳಿ. ಅದರೊಂದಿಗೆ ಅವರು ಮನೆಯ ಸಮೀಪ ಇರುವ ಶಾಲೆಗೆ ಶಿಕ್ಷಕಿಯಾಗಿ ಸೇರಲಿ. ಅದರಿಂದ ಅವರು ತಮ್ಮ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಮನೆಯಲ್ಲಿ ಕೃಷಿಭೂಮಿ ಇದ್ದರೂ ಕೆಲಸಕ್ಕಾಗಿ ಪರದಾಡುವ ಅನೇಕ ಯುವಕರಿಗೆ ನೀವು ಮಾದರಿಯಾಗಿದ್ದೀರಿ. ನಿಮಿತ್ತ ಮಾತ್ರಕ್ಕಾಗಿ ಪಟ್ಟಣಗಳಲ್ಲಿ ಕೆಲಸಮಾಡುವವರು ಹಳ್ಳಿಗೆ ಹಿಂದಿರುಗಿ ಕೃಷಿಯನ್ನು ಆಯ್ಕೆ ಮಾಡಬಹುದು.

2. ನನ್ನ ಹೆಸರು ನವ್ಯಾ. ನನಗೆ ಈಗ 19 ವರ್ಷ. 15 ವರ್ಷ ಇದ್ದಾಗಲೇ ನನಗೆ ಮದುವೆ ಮಾಡಿದರು. ಓದಬೇಕು ಎಂದು ತುಂಬಾ ಆಸೆಯಿತ್ತು. ಆದರೆ ಯಾರು ಸಪೋರ್ಟ್ ಮಾಡಲಿಲ್ಲ. ನನಗೆ ಪತ್ರಿಕೋದ್ಯಮದಲ್ಲಿ ಪದವಿ ಗಳಿಸಬೇಕು ಎಂಬುದು ಕನಸು. ಮನಯಲ್ಲಿ ತುಂಬಾ ಕಷ್ಟ. ನನ್ನ ಹಾಗೂ ಗಂಡನ ಮಧ್ಯೆ ಹೊಂದಾಣಿಕೆ ಇಲ್ಲ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ಸಾಯುವುದಕ್ಕೂ ಪ್ರಯತ್ನಿಸಿದ್ದೆ. ದಯವಿಟ್ಟು ನನಗೆ ಪರಿಹಾರ ತಿಳಿಸಿ.

ಜೀವನಕ್ಕಿಂತ ಅಮೂಲ್ಯವಾದುದು ಏನು ಇಲ್ಲ. ಹಾಗಾಗಿ ಎಂದೂ ಕೆಟ್ಟ ಯೋಚನೆಗಳನ್ನು ಮಾಡಬೇಡಿ. ನೀವಿನ್ನು ತುಂಬಾ ಚಿಕ್ಕವರು. ಬದುಕಿನಲ್ಲಿ ಇನ್ನು ಸಾಗಬೇಕಾದ ದಾರಿ ತುಂಬಾ ದೂರವಿದೆ. ಯಾವುದೇ ಕೆಲಸವನ್ನಾದರೂ ಜಾಣತನದಿಂದ ಮಾಡಿ. ಕುಟುಂಬದವರೊಂದಿಗೆ ಬೆರೆಯಲು ಪ್ರಯ್ನತಿಸಿ. ಉತ್ತಮ ಸಂವಹನ ಮತ್ತು ಪ್ರೀತಿಯಿಂದ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ. ಗಂಡ ಹಾಗೂ ಮನೆಯರೊಂದಿಗೆ ಮಾತನಾಡಿ. ಓದಿನ  ಆಸಕ್ತಿಯನ್ನು ಅವರಿಗೆ ತಿಳಿಸಿ, ಅವರನ್ನು ಒಪ್ಪಿಸಲು ಪ್ರಯ್ನತಿಸಿ. ಆಮೇಲೂ ಅವರು ಒಪ್ಪದಿದ್ದರೆ ದೂರಶಿಕ್ಷಣದ ಮೂಲಕ ಕಲಿಕೆ ಮುಂದುವರಿಸಿ.  ಕೆಟ್ಟ ಯೋಚನೆಗಳಿಂದ ದೂರವಾಗುವಂತೆ ಮಾಡಲು ಒಳ್ಳೆಯ ಪುಸ್ತಕಗಳನ್ನು ಓದಿ. ಇನ್ನು ವಯಸ್ಸು ಚಿಕ್ಕದಿರುವುದರಿಂದ ಎಲ್ಲಾ ಕೆಲಸಗಳಲ್ಲಿ  ಕ್ರಿಯಾಶೀಲರಾಗಿ ನಿಮ್ಮನ್ನು ತೊಡಗಿಸಿಕೊಳ್ಳಿ.

3. ನನ್ನ ಹೆಸರು ಸಹನಾ. ನನಗೆ 18 ವರ್ಷ. ಕಳೆದೆರಡು ವರ್ಷದಿಂದ ಪಿಸಿಓಡಿ ಸಮಸ್ಯೆಯಿಂದ ನರಳುತ್ತಿದ್ದೇನೆ. ನನಗೆ ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ. ಮನಸ್ಸನ್ನು ಒಂದು ವಿಷಯದ ಮೇಲೆ ಕೇಂದ್ರಿಕರಿಸಲು ಸಾಧ್ಯವಾಗುತ್ತಿಲ್ಲ. ದೈಹಿಕವಾಗಿ ಕ್ರಿಯಾಶೀಲವಾಗಿರಲು ಸಾಧ್ಯವಾಗುತ್ತಿಲ್ಲ. ತುಂಬಾ ಯೋಚನೆ ಮಾಡುತ್ತೇನೆ. ಸುಮ್ಮಸುಮ್ಮನೆ ದುಃಖ ಆಗುತ್ತದೆ. ನಾನು ಏನು ಮಾಡಬೇಕು ತಿಳಿಸಿ.

ಪಿಸಿಓಡಿ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಹಾರ್ಮೋನುಗಳ ಅಸಮತೋಲನ, ಅನುಚಿತ ಡಯೆಟ್‌, ಒತ್ತಡ ಮತ್ತು ಅಸಹಜ ಜೀವನಶೈಲಿ – ಈ ಎಲ್ಲಾ ಕಾರಣಗಳಿಂದ ಈ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ನೀವು ತಿಳಿಸಿದಂತೆ ಜಡತ್ವ, ಏಕಾಗ್ರತೆ ಕಡಿಮೆಯಾಗುವುದು ಮುಂತಾದ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ನೀವು ಓದು ಹಾಗೂ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಪಿಸಿಓಡಿಗೆ ಸಂಬಂಧಿಸಿದ ವೈದ್ಯರನ್ನು ಕಂಡು ಹಾರ್ಮೋನ್‌ನ ಮಟ್ಟವನ್ನು ಸರಿಪಡಿಸಿಕೊಳ್ಳಿ. ಸರಿಯಾದ ರೀತಿಯಲ್ಲಿ ಡಯೆಟ್‌ ಮತ್ತು ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮಗೆ ಕ್ರಿಯಶೀಲರಾಗಿ, ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ. ಪ್ರಾಣಾಯಾಮ ಮಾಡುವುದರಿಂದ ದೇಹ ಹಾಗೂ ಮನಸ್ಸು ಎರಡು ರಿಲಾಕ್ಸ್ ಆಗುತ್ತದೆ. ಇದಕ್ಕಾಗಿ ವ್ಯಥೆ ಪಡಬೇಡಿ.

4. ನನ್ನ ಹೆಸರು ಶರತ್. 18 ವಯಸ್ಸು. ನಾನು ಮಾನಸಿಕವಾಗಿ ತುಂಬ ನೊಂದಿದ್ದೇನೆ. ಕಾರಣ ನನ್ನ ಮೈ ಬಣ್ಣ ಕಪ್ಪು.  ನನ್ನ ಸ್ನೇಹಿತರು ಜೊತೆ ಇರುವಾಗ ಕೆಲವರು ನನ್ನನ್ನು ಟೀಕಿಸುತ್ತಾರೆ. ಪದೇ ಪದೇ ಅದೇ ಮಾತನ್ನು ಒತ್ತಿ ಹೇಳಿದರೆ ನನಗೆ ನೋವಾಗುತ್ತದೆ. ಆ ಕ್ಷಣದಲ್ಲಿ ಏನು ಮಾಡಬೇಕೆಂದು ತೋಚದೇ ಅಳುತ್ತೇನೆ. ನಾನು ಏನು ಮಾಡಲಿ. ದಯವಿಟ್ಟು ಪರಿಹಾರ ತಿಳಿಸಿ.

ನಾವು ಹುಟ್ಟುವಾಗಲೇ ಬಣ್ಣದೊಂದಿಗೆ ಹುಟ್ಟುತ್ತೇವೆ. ಯಾವ ಬಣ್ಣದಲ್ಲಿ ಹುಟ್ಟಿರುತ್ತೇವೋ ಅದೇ ನಮ್ಮ ಬಣ್ಣ. ಅದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಮೊದಲು  ಅದನ್ನು ಸ್ವೀಕರಿಸುವ ಮನೋಭಾವ ನಿಮ್ಮದಾಗಬೇಕು. ನಂತರವಷ್ಟೇ ನೀವು ಇತರರನ್ನು ಎದುರಿಸಲು ಸಾಧ್ಯ. ಜನರು ನಿಮ್ಮನ್ನು ಹೇಗೆ ಟೀಕಿಸುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಆತ್ಮಗೌರವವನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಧನಾತ್ಮಕ ಭಾವನೆಗಳನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಿ. ಆಗ ನೀವು ಸಮಾಜದಲ್ಲಿ ಆತ್ಮವಿಶ್ವಾಸದಿಂದ ಮುನ್ನೆಡೆಯಲು ಸಾಧ್ಯ. ನಿಮ್ಮ ವರ್ತನೆ, ಓದು ಹಾಗೂ ಕೆಲಸದಲ್ಲಿ ಬುದ್ಧಿವಂತಿಕೆ ತೋರಿ. ಇದರಿಂದ ನಿಮ್ಮ ಬಗ್ಗೆ ಟೀಕಿಸಲು ಜನರು ಭಯ ಬೀಳುತ್ತಾರೆ. ಆಗಲೂ ನಿಮ್ಮನ್ನು ಹೀಗೆಳೆದರೆ ಅಂತಹವರಿಂದ ದೂರವಿರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry