ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಕ್ಕೆ ಬೇಕು ಸೌಹಾರ್ದ

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ಈಗ ಕೌಟುಂಬಿಕ ಸಾಮರಸ್ಯ ಹದಗೆಡುತ್ತಿರುವುದಕ್ಕೆ ಅಥವಾ ಕೌಟುಂಬಿಕ ಸಮಸ್ಯೆಗಳಿಗೆ ಅವಿಭಕ್ತ ಕುಟುಂಬ ಕಣ್ಮರೆಯಾಗುತ್ತಿರುವುದು ಕಾರಣ ಎಂದು ನನಗನಿಸುವುದಿಲ್ಲ. ಈಗಿನ ಕಾಲಕ್ಕೆ ಅವಿಭಕ್ತ ಕುಟುಂಬ ಹೆಚ್ಚು ಪ್ರಸ್ತುತವಲ್ಲ. ಏಕೆಂದರೆ ಈಗ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಬೇರೆ ಬೇರೆ ರೀತಿಯ ವಿದ್ಯೆಗಳನ್ನು ಕಲಿತು ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಲು ಇಚ್ಛಿಸುತ್ತಾನೆ. ಅದಕ್ಕೆ ಅನುಕೂಲಗಳನ್ನು ಸಮಾಜ ಒದಗಿಸಿದೆ. ಪ್ರತಿಯೊಬ್ಬರೂ ಸ್ವತಂತ್ರವಾಗಿ ಜೀವನ ನಡೆಸಲು ಇಚ್ಛಿಸುತ್ತಾರೆ; ಮತ್ತು ಅದಕ್ಕೆ ಅರ್ಹರೂ ಆಗಿರುತ್ತಾರೆ. ಆದ್ದರಿಂದ ಕುಟುಂಬದ ಎಲ್ಲ ಸದಸ್ಯರೂ ಒಂದೇ ಸೂರಿನಡಿಯಲ್ಲಿ ವಾಸಿಸಲು ಒಂದೇ ಉದ್ಯೋಗವನ್ನು ನಡೆಸಲು ಸಾಧ್ಯವಿಲ್ಲ. ಆದರೆ ಕುಟುಂಬದ ಸದಸ್ಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಂಡು ಬೆಳೆಸಿಕೊಳ್ಳಬೇಕು. ಕುಟುಂಬದ ಆಚಾರ–ವಿಚಾರ, ಸಂಪ್ರದಾಯ, ಆಸ್ತಿಪಾಸ್ತಿಗಳ ಬಗ್ಗೆ, ಸಂದು ಹೋದ ಹಿರಿಯರ ಬಗ್ಗೆ ಕುಟುಂಬದ ಸದಸ್ಯರೆಲ್ಲರಿಗೂ ಹೆಮ್ಮೆ, ಅಭಿಮಾನವಿರಬೇಕು. ಯಾವ ಉದ್ಯೋಗಗಳನ್ನು ಕ್ಯೆಗೊಂಡಿದ್ದರೂ, ಎಲ್ಲೇ ದೂರದಲ್ಲಿ ನೆಲೆಸಿದ್ದರೂ ಕುಟುಂಬದ ಪ್ರತಿ ಸದಸ್ಯರ ನಡುವೆ ಸಂಬಂಧವಿರಬೇಕು.

ಪರಸ್ಪರ ಕಷ್ಟಸುಖಗಳನ್ನು ಹಂಚಿಕೊಳ್ಳುವಂತಿರಬೇಕು. ವಿಶ್ವವೇ ಒಂದು ಗ್ರಾಮದಂತಿರುವ ಈಗಿನ ಅತ್ಯುತ್ತಮ ಸಂಪರ್ಕ ಮಾಧ್ಯಮಗಳಿಂದ ಇದು ಅಸಾಧ್ಯವೇನಲ್ಲ. ಹಬ್ಬ–ಹರಿದಿನಗಳಲ್ಲಿ, ಊರಜಾತ್ರೆಯ ಸಮಯದಲ್ಲಿ, ಕುಟುಂಬದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರುವುದು, ಕಷ್ಟಸುಖದ ಸಮಯದಲ್ಲಿ ಪರಸ್ಪರ ಸಹಾಯಹಸ್ತವನ್ನು ನೀಡುವುದು, ಕುಟುಂಬದ ಹಿರಿಯರು ಹಾಗೂ ಕಿರಿಯರು ಒಟ್ಟು ಸೇರುವಂತಹ ಸ್ಥಿತಿ ನಿರ್ಮಾಣ ಮಾಡಬೇಕು. ಇಂಥವುಗಳಿಂದ ಕುಟುಂಬದ ಸಾಮರಸ್ಯ ಉತ್ತಮಗೊಳ್ಳುತ್ತದೆ. 

ಒಟ್ಟಿನಲ್ಲಿ ಸಮಾಜದ ಉತ್ತಮ ಸ್ವಾಸ್ಥ್ಯಕ್ಕೆ ಅಡಿಪಾಯವಾದ ಕುಟುಂಬಪದ್ಧತಿ ಉತ್ತಮವಾಗಿರಬೇಕಾದರೆ ಕುಟುಂಬದ ಸದಸ್ಯರಲ್ಲಿ ಭಾವನಾತ್ಮಕ ಸಂಬಂಧವಿರಬೇಕು. ತಮ್ಮ ದೇಶದ ಬಗ್ಗೆ ಆ ದೇಶದಲ್ಲಿ ನೆಲೆಸಿರುವವರಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳಿದ್ದು, ದೇಶಾಭಿಮಾನ ಜಾಗೃತವಾಗಿದ್ದರೆ ಆ ದೇಶ ಹೇಗೆ ಸದೃಢವಾಗಿರುತ್ತದೋ ಹಾಗೆಯೇ ಆಯಾ ಕುಟುಂಬದ ಸದಸ್ಯರಲ್ಲಿ ಪರಸ್ಪರ ಅಭಿಮಾನ ಪ್ರೀತಿ ವಿಶ್ವಾಸಗಳಿದ್ದರೆ ಕೌಟುಂಬಿಕ ಸಮಸ್ಯೆಗಳು ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.
-ಬಿ. ಶೋಭಾ ಅರಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT