ಭಾವದಲೆಯ ಮೇಲೆ ಮನಸಿನ ಓಲೆ

7

ಭಾವದಲೆಯ ಮೇಲೆ ಮನಸಿನ ಓಲೆ

Published:
Updated:
ಭಾವದಲೆಯ ಮೇಲೆ ಮನಸಿನ ಓಲೆ

-ರಾಜೇಶ್ವರಿ ಚೆನ್ನಾಂಗೋಡು

**

ನಾನು ಗಾಬರಿಯಾಗಿದ್ದೆ, ನಿನ್ನೆಯ ತನಕ ನನ್ನಂತೆಯೇ ನನ್ನೊಡನಿದ್ದ ಪರಮಾಪ್ತ ಗೆಳೆಯ ಈಗ ಗಂಡನೆಂಬ ಹೆಸರಿನಡಿಗೆ ಅವನಷ್ಟಕ್ಕವನು ಹಿಂದಿನಂತೆಯೇ ಇದ್ದ. ಆದರೆ... ಅವನೀಗ ನನ್ನ ಗಂಡ. ನಾನು ಅವನ ಹೆಂಡತಿಯಾಗಿದ್ದೆ. ಹಾಗಾಗಬೇಕೆಂದು ಹಲವು ವರ್ಷಗಳಿಂದ ಕನಸು ಕಂಡಿದ್ದೆವು ನಿಜ. ಆದರೆ ನನಗಂತೂ ಹಾಗಾಗುವುದು ಎಂದರೇನೆಂದು ತಿಳಿದಿದ್ದು ಮದುವೆಯೆಂಬ ಹೊಸ್ತಿಲು ದಾಟಿದಾಗಲೇ! ನಾನು ‘ಅಯ್ಯೋ ಶಿವವೇ’ ಎಂದು ಮೈಕುಡುಗಿ ಕುಳಿತೆ. ಹೊಸತೇನೂ ಇಲ್ಲದೇ, ಹಳೆಯವರಾಗೇ ಉಳಿಯುವಂತಹ, ನನ್ನನ್ನು ನಾನಾಗೇ ಉಳಿಸಿಕೊಳ್ಳುವಂತಹ ವೈವಾಹಿಕ ಜೀವನ ಬೇಕೆಂದು ನನಗೆ ಸ್ಪಷ್ಟವಾಗೆ ತಿಳಿಯಿತು. ಹಾಗಾಗಿ ನಾನು ಹೊಸತನದ, ನವೀನ ಅನುಭವಗಳ, ಸಂತಸದ ಬದಲು ಹಳೆಯದುನ್ನು ಉಳಿಸಿಕೊಳ್ಳುವ ಹುಚ್ಚಿಗೆ ಬಿದ್ದೆ. ಅಲ್ಲಿ ಸಾಕಷ್ಟು ಪ್ರಶ್ನೆಗಳಿದ್ದವು, ಉತ್ತರಗಳ ಗೋಜಲಿತ್ತು, ಆದರೆ ಹಳೆತನದ ಸುಖವೂ ಇತ್ತು.

ಮೊದಲು ಬಂದಪ್ಪಳಿಸಿದ ನವೀನತೆ ಎಂದರೆ ‘ನನ್ನ ಮನೆ’ಯಿಂದ ನನ್ನನ್ನು ಅವನ ಮನೆಗೆ ‘ಕೊಟ್ಟದ್ದು’. ಹೌದು, ‘ರಮೇಶನ ಮಗನಿಗೆ ಕುಂಟಿಕ್ಕಾನದ ಮಹೇಶನ ಮಗಳನ್ನು ತಂದದ್ದು’ ಅಂತೆಲ್ಲ ನಮ್ಮಜ್ಜಿಯ ಜೊತೆ ಹೋಗುತ್ತಿದ್ದ, ‘ಜಂಭಾರ’ಗಳೆಂದು ಕರಾಡಬ್ರಾಹ್ಮಣರ ಭಾಷೆಯಲ್ಲಿ ಕರೆಯಲ್ಪಡುತ್ತಿದ್ದ ಮದುವೆ-ಮುಂಜಿ ಇತ್ಯಾದಿ ಸಮಾರಂಭಗಳಲ್ಲಿ ತುಂಬಾ ಸಾಮಾನ್ಯವಾಗಿ ನಾನು ಕೇಳುತ್ತಲೇ ಬಂದಿದ್ದ ಮಾತು – ಅಂದು ನನ್ನನ್ನೂ ನುಂಗಲು ಬಾಯ್ತೆರೆದು ಬಂತು. ನಾನು ಓಡಿ ಹೋದೆ. ನನ್ನನ್ನು ಕೊಡಲು ನಾನೇನು ಅಕ್ಕಿಮೂಟೆಯೇ? ನಮ್ಮ ಮನೆಯಲ್ಲಿ ನಾನು ಚಿಕ್ಕವಳಿದ್ದಾಗ ದನವೊಂದಿತ್ತು, ಸಾಕಲು ತ್ರಾಣವಿಲ್ಲದೇ ಅದನ್ನು ನಮ್ಮಜ್ಜ ಮಾರಿಬಿಟ್ಟರು. ಅದನ್ನು ಕೊಂಡವರು ಹುಲ್ಲು ತಿನ್ನಲು ಗುಡ್ಡೆಗೆ ಬಿಟ್ಟರೆ ಸಾಕು, ಅದು ನಮ್ಮ ಮನೆಯ ಗೇಟಿನ ಮುಂದೆ ಬಂದು ನಿಂತುಬಿಡುತ್ತಿತ್ತು, ‘ಕೊಟ್ಟವರು ನೀವು, ಕೊಂಡವರು ಅವರು. ನಾನೇಕೆ ಹೋಗಬೇಕು? ನನ್ನನ್ನು ಕೇಳಿದಿರೇ?’ ಎಂದು ಅದು ಯೋಚಿಸಿದ್ದಿರಬೇಕು. ಕೊಡಲು ನಾವ್ಯಾರು? ನಮ್ಮ ಮನೆ ಅದರ ಮನೆಯೂ ಹೌದು ತಾನೆ? ಅದೆಂತು ಕೊಟ್ಟರೋ!! ನನಗಂತೂ ಅರ್ಥವಾಗಿರಲಿಲ್ಲ. ನಾನೀಗ ನನ್ನಮ್ಮನಿಗೆ ಅರ್ಥವಾಗುವ ಭಾಷೆಯಲ್ಲಿ (ದನದ ಭಾಷೆ ನಮಗೆಲ್ಲ ಅರ್ಥವಾಗಿತ್ತು, ಆದರೂ ಕೊಟ್ಟಿದ್ದೆವು, ಕೊಟ್ಟು ಹಿಂಸೆ ಪಟ್ಟುಕೊಂಡಿದ್ದೆವು) ಕೇಳಿದೆ: ‘ಕೊಡಲು ನೀವ್ಯಾರಮ್ಮಾ’ ಅಂತ. ಹಠಮಾರಿ ನಾನು. ಹೀಗೆಂದು ಹಿಂದೊಬ್ಬರು ಜೋಯಿಸರು ನನ್ನ ಜಾತಕ ನೋಡಿ ಹೇಳಿದ್ದರು, ಅವರ ಕೈಯಲ್ಲಿದ್ದ ಕವಡೆಗಳನ್ನು ಚೌಕಗಳಾಗಿ ಹಂಚಿಡುತ್ತಾ. ಅಮ್ಮ ಆಗಲೂ ನಕ್ಕಿದ್ದರು, ಈಗಿನಂತೇ...

ಮುಂದಿನ ಹೊಸತನ – ನನ್ನ ಮನೆಯ ವಿಳಾಸ ನನಗರಿವಿಲ್ಲದಂತೆ ಬದಲಾಗಿದ್ದು. ನಾನೆಲ್ಲೇ ಇರಲಿ, ನನ್ನ ಮನೆ ಮಾತ್ರ ಅವನ ಮನೆ, ಮತ್ತು ನಿನ್ನೆಯವರೆಗೆ ನನ್ನದಾಗಿದ್ದ ನನ್ನ ಮನೆ, ಈಗ ಅಮ್ಮನ ಮನೆಯಾಗಿದೆ. ‘ಹೌದಮ್ಮಾ, ನಿನ್ನ ಮನೆಗೆ ಹೋಗಿ ಬಂದ್ಯಾ’ ಅಂತ ನಮ್ಮಜ್ಜಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿಳಿದಿದಾಗ ಕೇಳಿದರು. ನಾನು ‘ನನ್ನ ಮನೆಯಲ್ಲೇ ಇದೀನಲ್ಲಜ್ಜೀ’ ಅಂದೆ. ‘ಅದಲ್ಲಮ್ಮಾ, ಈಗಿನ ನಿನ್ನ ಮನೆಗೆ...’ ‘ಅಲ್ಲಜ್ಜಿ, ನನ್ನನ್ನು ಮನೆಯಿಂದ ಹೊರಗಟ್ಟಿದ್ದು ಯಾವಾಗ, ನನಗೇ ತಿಳಿದಿರಲಿಲ್ಲವಲ್ಲಾ’ ಎಂದೆ. ಅಲ್ಲಿಗೆ ಕೊನೆಯ ಪಕ್ಷ ನನ್ನ ಮುಂದೆ ನಡೆಯುವ ಮಾತುಕತೆಗಳಲ್ಲಾದರೂ ನನ್ನ ಮನೆ ನನಗೆ ಹಿಂದಿರುಗಿ ಸಿಕ್ಕಿತು. ನಾನು ಮತ್ತೆ ನನ್ನ ಮನೆಯವಳಾದೆ, ಅವನ ಮನೆ ಅವನದ್ದಾಯ್ತು.

ಇಂಥ ಅಲೆಗಳು ಬಂದಪ್ಪಳಿಸಿದ್ದು ಒಂದೆರಡಲ್ಲ. ಮದುವೆಯೆಂಬುದು ನನ್ನನ್ನು ಮುಳುಗಿಸಲು ಬಂದ ಸುನಾಮಿಯೆಂದು ಅರಿವಾದಾಗ ದೂರದ ಕಾಡಿಗೆ ಗಾಬರಿಯಿಂದ ಓಡಿ ಹೋದೆ. ಕೇರಳವೆಂಬ ನನ್ನೂರಿನ ಆತ್ಮಕ್ಕೆ, ಬೆಟ್ಟಗಳ ತಪ್ಪಲಿನ ಕಾಡಿಗೆ. ಅಲ್ಲಿ ಕಾಡಿನಲ್ಲಿ ನಡೆದೆ, ಆನೆ, ಕಾಡೆಮ್ಮೆ, ಜಿಂಕೆಗಳ ಮಧ್ಯೆ ನಡೆದೆ, ಬತ್ತಿಹೋಗುತ್ತಿರುವ ಜಲಾಶಯದ, ಮುಳುಗಿ ಹೋಗಲಿರುವ ಬೆಟ್ಟಗಳ ನಡುವೆ ನಡೆದೆ. ಬಿದಿರ ತೆಪ್ಪದಲ್ಲಿ ತೇಲಿದೆ. ಹೊಸ ಜನರನ್ನು ಕಂಡೆ. ಸ್ನೇಹದ ಕಾಡುಗಳಿನ್ನೂ ಜೀವಂತವೆಂದು ತಿಳಿದು ಕುಣಿದೆ. ಆದರೆ ಇದು ಮಧುಚಂದ್ರವೇನಾಗಿರಲಿಲ್ಲ; ಮತ್ತೆ, ಎಲ್ಲ ಟಿಕೇಟುಗಳೂ ನನಗೊಬ್ಬಳಿಗಾಗೇ ಇತ್ತು. ರಾತ್ರಿಗಳಲ್ಲೆಲ್ಲ ನಾನೊಬ್ಬಳೇ ಅಲ್ಲಿನ ಕೋಣೆಗಳಲ್ಲಿ ಮಲಗಿದ್ದೆ, ನನ್ನ ಪ್ರತಿ ಕ್ಷಣದಲ್ಲೂ ನಾನು ಗಗನದಾಳದಲ್ಲಿ ಸ್ವಚ್ಛಂದವಾಗಿ ತೇಲಿದ್ದೆ. ಆಗೊಮ್ಮೆ ಈಗೊಮ್ಮೆ ದೂರದ ಭೂಖಂಡದ ತುದಿಯಲ್ಲಿ, ಸಾಗರದ ಬಳಿಯಲ್ಲಿ ಕುಳಿತು ಲೆಕ್ಕವನ್ನೂ  ಭೌತಶಾಸ್ತ್ರವನ್ನೂ ಸವಿಯುತ್ತಿದ್ದ ನನ್ನ ಗೆಳೆಯ ಗಂಡನೆಂಬ ಹೊಸಜನ್ಮವೆತ್ತುವ ಬದಲು ಇನ್ನೂ ಗೆಳೆಯನಾಗೇ ಜೀವ ಉಳಿಸಿಕೊಂಡ;  ನಾನು ಉಳಿಸಿಕೊಂಡೆ. ಆ ಧೈರ್ಯವನ್ನು ನನ್ನಲ್ಲಿ  ತುಂಬಿಸಿಟ್ಟದ್ದು ಅವನೇ. ‘ಒಬ್ಬಳೇ ಹೋಗೇ, ಅದೇ ಒಂದು ಸುಖ, ಅನನ್ಯ ಅನುಭವ’ ಎಂದೆಲ್ಲ ಹೇಳಿ ರೆಕ್ಕೆ ಬಿಚ್ಚಿ ಹಾರಾಡಲು ಹುರಿದುಂಬಿಸಿದ.

ಹೌದು, ಮದುವೆಯೆಂಬುದು ಹೀಗೆ; ಹಳೆಯ ಆ ಹುಡುಗಿಯ ಅದೇ ಹಳೆಯ ಹುರುಪಿನಲ್ಲಿ ಬದುಕಲು ಬಿಟ್ಟು, ‘ನಿನಗೆ ಯಾವುದು ಮನೆಯೋ ಅಲ್ಲಿರು, ನಾವೆಲ್ಲ ನಿನ್ನ ಮನೆಯವರಾಗಲು ನಿನಗಿನ್ನೊಂದಿಷ್ಟು ಸಮಯ ಬೇಕಿರಬಹುದು, ನಿನ್ನ ತೀರ್ಮಾನಗಳನ್ನು ತೆಗೆದುಕೋ, ಸಹಾಯ ಬೇಕಿದ್ದರೆ ನಾವಿದ್ದೇವೆ, ನಿನ್ನವರಾಗಿ’ ಎಂದು ಹೇಳುವಂಥ ಮೃದುವಾದ, ಸುಲಭವಾದ, ಸೊಗಸಾದ, ನಿಧಾನವಾದ, ಹೊಸದು ಎಂದು ಎನಿಸುವ ಮೊದಲೇ, ಯಾರಿಗೂ ತಿಳಿಯದಂತೆ ಅವನು ಹಳೆಯವನಾಗಿಹೋದ. ಆದರೂ ಅಮರವಾದ ಸುಖವೊಂದಾಗಬಾರದೇಕೆ? ನಾವ್ಯಾಕೆ ಮದುವೆಯ ದಿನವೇ ಹೆಣ್ಣನ್ನು ಗಂಡಿನ ಮನೆಗೆ ಹೊತ್ತೊಯ್ಯುವುದು? ಅವಳಲ್ಲೇ ಇರಬೇಕೆಂದು ಹಠ ಹೂಡುವುದು? ಗಂಡನ ಮನೆಯವರನ್ನು ಬೇರೆ ಮಾಡಿದರೆ ವಿಚ್ಛೇದನ ನೀಡಬಹುದೆಂಬ ಕಾನೂನು ಮಾಡಿದಾಗ, ಹೆಣ್ಣನ್ನು ಹೊತ್ತೊಯ್ದು, ಅವಳ ಮನೆಯವರೆಲ್ಲರಿಗೂ ಅಳಲೆಂದೇ ‘ಬಿದಾಯೀ’ ಎಂಬ ಪುಟ್ಟ slot ಕೊಡುವುದನ್ನು ಕಂಡಾಗ ನಾನು ನಗದೆ ಇರುವುದೆಂತು? ತುಂಬ ಹುಡುಗಿಯರೇ ಹೇಳಿದರು: ‘ಇವೆಲ್ಲ ನಿನಗೇಕೆ ಇಷ್ಟು ದೊಡ್ಡ ವಿಷಯವಾಗುತ್ತೆ? ನಾವೆಲ್ಲ ಮದುವೆಯಾಗಿಲ್ಲವೇ?’ ‘ನಿಜ, ನೀವೆಲ್ಲ, ನಿಮ್ಮ ಹಿಂದಿನವರೂ ಮುಂದಿನವರೂ ಎಲ್ಲರೂ ಮದುವೆಯಾಗಿದ್ದಾರೆ, ಮದುವೆಯಾಗುತ್ತಾರೆ – ಅವರಿಗೇನೂ ಪ್ರಶ್ನೆಗಳಿರುವುದೂ ಇಲ್ಲ, ಆದರೆ ನನಗೆ ಇಬಾರದೆಂಬ ನಿಯಮ ಇದೆಯೇ? ಇದ್ದರೂ ಮುಚ್ಚಿಡು ಎಂಬ ನಿರ್ದೇಶನವೇಕೆ?’

ಮದುವೆ ಹೀಗೆ ನನ್ನನ್ನೇ ಕೊಚ್ಚಿಕೊಂಡು ಹೋಗಬಾರದೆಂದು ಅನಿಸಿದ ಬಳಿಕ, ನಾನೀಗ ಮದುವೆಯೆಂದಾಗಿ ಮೂರು ತಿಂಗಳಾಗಲು ಇನ್ನೆರಡು ದಿನವಿರುವಾಗ, ನನ್ನ ಈಗಿನ ದಿನಚರಿ ಹೀಗಿದೆ: ನನ್ನ ಅಧ್ಯಯನದ ನಡುವಿನ ಪುಟ್ಟದೊಂದು ವಿರಾಮಕ್ಕೆಂದು ಬೆಂಗಳೂರಲ್ಲಿನಲ್ಲಿರುವೆ. ನನ್ನದೇ ಆಗಿದ್ದ, ಆಗಿರುವ, ಆಗಿಯೇ ಮುಂದೆಯೂ ಇರುವ ನನ್ನ ಮನೆಯಲ್ಲಿರುವೆ. ದೂರದ ಊರಲ್ಲಿ ಗಂಡ ಅವನ ಅಧ್ಯಯನದಲ್ಲಿದ್ದಾನೆ. ನಾವಿಬ್ಬರೂ ಜೊತೆಗಿರುವ ಕನಸುಗಳನ್ನು ಕಾಣುತ್ತೇವೆ. ಓಡಿ ಅವನ ಬಳಿಗೆ ತಲುಪಬೇಕೆಂದೂ ಅನಿಸುವುದಿದೆ. ಆದರೆ ದೂರವಿದ್ದೇವಲ್ಲಾ? ಬದುಕೆಲ್ಲಾ ಅನರ್ಥವಾಯಿತಲ್ಲಾ? ಛೇ! – ಅಂತೆಲ್ಲ ಅನಿಸಿಲ್ಲ. ದೂರವಿರುವ ಸುಖ ನಮಗೂ ಹಿಡಿಸಿದೆ. ಬೆಳಗ್ಗೆಗಿಂತಲೂ ಮಧ್ಯಾಹ್ನಕ್ಕೇ ಹತ್ತಿರವಾದ ಹನ್ನೊಂದು ಗಂಟೆಗೆ ನಿದ್ರೆಯಿಂದೇಳುತ್ತೇನೆ. ನನ್ನ ಗೆಳೆಯ–ಗೆಳತಿಯರ ಜೊತೆಗೆ ಊರೆಲ್ಲಾ ಸುತ್ತಿ ಬರುತ್ತೇನೆ.

ರಾತ್ರಿ ಹನ್ನೆರಡರ ಬಳಿಕ ನನ್ನ ಮೊಬೈಲಿನ ತೆರೆ ಮೇಲೆ ಬೆಳಕಿದ್ದರೂ ಅದು ಅವನ ಸಂದೇಶಗಳು ತರುವ ಪ್ರೇಮದ ಬೆಳಕೇ ಆಗಬೇಕೆಂದೇನಿಲ್ಲ – ಗೆಳೆಯರಿರುತ್ತಾರೆ, male homo sapiens ಕೂಡ ಆ ಸಂದೇಶಗಳನ್ನು ಕಳುಹಿಸಲು ಹಿಂಜರಿಯುವುದಿಲ್ಲ. ನಾನೆಲ್ಲಿದ್ದೇನೆಂದು ತಿಳಿದೇ ತೀರಬೇಕೆಂಬ ಗತ್ತಿನ ಬದಲು, ಎಲ್ಲಿದ್ದರೂ ನಿಭಾಯಿಸಲು ಶಕ್ತಳಾಗಿದ್ದೇನೆಂಬ ನಂಬಿಕೆ ಅವನಲ್ಲಿದೆ. ಅವನು ನನ್ನ ರಕ್ಷಣೆಯ ಹೆಸರಲ್ಲಿ ನಾನೆಲ್ಲಿದ್ದೇನೆಂದು ಕೇಳಿದ್ದಿಲ್ಲ; ನಾನೇ  ಹೇಳಿದ್ದಿದೆ. ‘ನೋಡು, ಹೀಗಿದೆ ನನ್ನ ಈ ಕ್ಷಣದ ಲೋಕ; ಈಗ ಸಂತಸದಲ್ಲಿ ಮುಳುಗಿದ್ದೇನೆ. ಈಗ ನಾಟಕ ನೋಡಿ ಬಂದೆ. ಮುಂದೆ ನೀನು ಬಂದಾಗ ನಾವು ರಂಗಶಂಕರಕ್ಕೆ ಹೋಗಬೇಕಲ್ಲ. ನಾನೀಗ ಬಸ್ಸಿನಲ್ಲಿರುವೆ. ಒಂದು ರೂಪಾಯಿ ಚಿಲ್ಲರೆ ಬರಬೇಕಿತ್ತು; ಬಂದಿಲ್ಲ. ಅದಕ್ಕೇ ಕಂಡಕ್ಟರ್‌ ಜೊತೆ ಜಗಳವಾಡಿದ್ದೇನೆ. ನಾನೀಗ ಅಮ್ಮನೊಡನೆ ಜಗಳವಾಡಿದೆ; ಅಳುತ್ತಿದ್ದೇನೆ. ನಮ್ಮಣ್ಣನ ಮದುವೆ ಕಣೋ, ಬರಲಾಗುವುದೋ ಇಲ್ಲವೋ ಎಂಬ ಸಂಶಯದ ಸಂಕಟದಲ್ಲಿದ್ದೇನೆ.. ಹೀಗೇ ಸಣ್ಣ ಪುಟ್ಟ ಸುಖ ದುಃಖಗಳನ್ನೆಲ್ಲ ಹಂಚಿಕೊಳ್ಳುತ್ತೇನೆ. ಸಂದೇಶಗಳಲ್ಲಿ ಹಲವು ಅವನ ಮೊಬೈಲನ್ನಷ್ಟೇ ತಲುಪುತ್ತವೆ, ಉದ್ದವಾಗಿದ್ದಾಗ, ಅಥವಾ ಅವನಿಗೆ ನೀರಸವೆನಿಸಿದಾಗ ಅವನು ಓದುವುದೂ ಇಲ್ಲ. ಅವನು ನೆಟ್ಟು ಬೆಳೆಸಿದ ಪುಟ್ಟ ಗಿಡಗಳು ಬೆಳೆದಾಗೆಲ್ಲ ಆ ಚಿತ್ರಗಳು ನನ್ನನ್ನು ತಲಪುತ್ತವೆ. ನಾನೇ ಇಲ್ಲಿ ಬೆಳೆದು, ಎಲೆ ಬಿಡುತ್ತೇನೆ. ನನ್ನುಸಿರು ನನ್ನಲ್ಲಿದೆ; ಅವನದ್ದು ಅವನಲ್ಲಿ. ಮತ್ತೆ ನಮ್ಮ ನಡುವೆ ಉಸಿರಿಗೆ ಜಾಗವಿದೆ; ಉಸಿರುಗಟ್ಟಿಸುವಂಥ ಬಂಧನವಿಲ್ಲ. ಯಾರೋ ಮತ್ತೆ ಕೇಳುತ್ತಾರೆ: ‘ನಿನ್ನ ಮನೆಗೆ ಹೋಗಿ ಬಂದೆಯೇ?’ ನಾನು ನನಗಾದರೂ ಸ್ಪಷ್ಟವಾಗಿರಲಿ ಅಂತ  ಹೇಳುತ್ತೇನೆ: ‘ನಾನು ಅವನ ಮನೆಗೆ ಹೋಗಿದ್ದೆ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry