ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಗೆ ಶೀಘ್ರದಲ್ಲೇ ದೇಶೀಯ ತಂತ್ರಜ್ಞಾನದ ಹೊಸ ಗುಂಡು ನಿರೋಧಕ ಜಾಕೆಟ್‌ಗಳು

ಉಳಿತಾಯವಾಗಲಿದೆ ವಾರ್ಷಿಕ ₹ 20 ಸಾವಿರ ಕೋಟಿ
Last Updated 9 ಜೂನ್ 2017, 13:50 IST
ಅಕ್ಷರ ಗಾತ್ರ

ಚೆನ್ನೈ: ಸಂಪೂರ್ಣ ದೇಶೀಯವಾಗಿ ತಯಾರಿಸಿದ ಹೊಸ ಗುಂಡು ನಿರೋಧಕ ಜಾಕೆಟ್‌ಗಳು ಭಾರತೀಯ ಸೇನೆಗೆ ಲಭ್ಯವಾಗುವ ದಿನಗಳು ಹತ್ತಿರವಾಗಿವೆ.

ಕಡಿಮೆ ವೆಚ್ಚದಲ್ಲಿ ಗುಂಡು ನಿರೋಧಕ ಜಾಕೆಟ್‌ಗಳನ್ನು ತಯಾರಿಸುವ ದೇಶೀಯ ತಂತ್ರಜ್ಞಾನವನ್ನು ಬಂಗಾಳ ಮೂಲದ ಪ್ರೊ. ಶಂತನು ಭೌಮಿಕ್‌ ಅಭಿವೃದ್ಧಿಪಡಿಸಿದ್ದಾರೆ.

ದೇಶೀಯ ತಂತ್ರಜ್ಞಾನದಿಂದ ಜಾಕೆಟ್‌ ತಯಾರಿಸುವ ಯೋಜನೆಗೆ ರಕ್ಷಣಾ ಇಲಾಖೆಯು ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಕಾರ್ಯಾಲಯವು ಇದಕ್ಕೆ ಅಂತಿಮ ಒಪ್ಪಿಗೆ ನೀಡಿದರೆ ಪೂರ್ಣ ಪ್ರಮಾಣದಲ್ಲಿ ಈ ಜಾಕೆಟ್‌ಗಳ ತಯಾರಿಕೆ ಕಾರ್ಯ ಆರಂಭವಾಗಲಿದೆ.

‘ಭಾರತದಲ್ಲಿ ತಯಾರಿಸಿ’ (ಮೇಕ್‌ ಇನ್‌ ಇಂಡಿಯಾ) ಅಭಿಯಾನದಡಿ ಈ ಯೋಜನೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ.

ಇದೇ ಮೊದಲು
ಜಾಕೆಟ್‌ಗಳ ತಯಾರಿಕೆ ಕಾರ್ಯ ಆರಂಭವಾದರೆ ಸೇನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಶೀಯ ತಂತ್ರಜ್ಞಾನದಿಂದ, ದೇಶದಲ್ಲೇ ತಯಾರಿಸಿದ ಜಾಕೆಟ್‌ಗಳು ಇವು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿವೆ.

ಅತಿ ಹಗುರ ಜಾಕೆಟ್‌
ಈಗ ಬಳಕೆಯಲ್ಲಿರುವ ಜಾಕೆಟ್‌ಗಳಿಗಿಂತ ಸಾಕಷ್ಟು ಕಡಿಮೆ ತೂಕದ ಜಾಕೆಟ್‌ಗಳನ್ನು ತಯಾರಿಸುವ ತಂತ್ರಜ್ಞಾನ ಇದಾಗಿದೆ. ಈಗ ಭಾರತೀಯ ಸೇನೆ, ಬಿಎಸ್‌ಎಫ್‌, ಸಿಆರ್‌ಪಿಎಫ್‌ ಸೈನಿಕರು ಹಾಗೂ ಪೊಲೀಸರು ಬಳಸುತ್ತಿರುವ ಗುಂಡು ನಿರೋಧಕ ಜಾಕೆಟ್‌ಗಳ ತೂಕ 15 ಕೆ.ಜಿ.ಯಿಂದ 18 ಕೆ.ಜಿ. ವರೆಗಿದೆ. ಆದರೆ, ಹೊಸ ತಂತ್ರಜ್ಞಾನದಿಂದ ತಯಾರಾಗುವ ಜಾಕೆಟ್‌ಗಳು 1.5 ಕೆ.ಜಿ. ತೂಕ ಇರಲಿವೆ.

ಕಾರ್ಬನ್‌ ಫೈಬರ್‌ ಯುಕ್ತ, 20 ಪದರ ಹೊಂದಿದ ಈ ಹೊಸ ಜಾಕೆಟ್‌ಗಳನ್ನು 57 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲೂ ಯೋಧರು ಧರಿಸಬಹುದಾಗಿದೆ.

ವಾರ್ಷಿಕ ₹ 20 ಸಾವಿರ ಕೋಟಿ ಉಳಿತಾಯ
ಈ ಹೊಸ ತಂತ್ರಜ್ಞಾನದಿಂದ ತಯಾರಿಸುವ ಪ್ರತಿ ಜಾಕೆಟ್‌ನ ಬೆಲೆ ₹ 50 ಸಾವಿರ ಆಗಲಿದೆ. ಭಾರತ ಸದ್ಯ ಅಮೆರಿಕದಿಂದ ತರಿಸಿಕೊಳ್ಳುತ್ತಿರುವ ಪ್ರತಿ ಜಾಕೆಟ್‌ನ ಬೆಲೆ ₹ 1.5 ಲಕ್ಷ. ಹೀಗಾಗಿ ಹೊಸ ಜಾಕೆಟ್‌ಗಳಿಂದ ಸೇನೆಗೆ ವಾರ್ಷಿಕ ₹ 20 ಸಾವಿರ ಕೋಟಿ ಉಳಿತಾಯವಾಗಲಿದೆ ಎನ್ನಲಾಗಿದೆ.

ಪ್ರೊ. ಶಂತನು ಅವರು ಸದ್ಯ ಕೊಯಮತ್ತೂರಿನ ಅಮೃತಾ ವಿಶ್ವವಿದ್ಯಾಲಯದ ವೈಮಾಂತರಿಕ್ಷ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಈ ಯೋಜನೆಯನ್ನು ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರಿಗೆ ಅರ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT