ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ರಸ್ತೆಯ ನೆನಪುಗಳು

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

–ಬಿ.ಕೆ. ಜಗನ್ನಾಥ

**

ಕೆಂಪೇಗೌಡ ರಸ್ತೆಯಲ್ಲಿ 1950ರ ದಶಕದಲ್ಲಿ ಆರಂಭಗೊಂಡ ‘ಕೆಂಪೇಗೌಡ ಚಿತ್ರ ಮಂದಿರ’ ಸುಮಾರು 50 ವರ್ಷ ಸತತವಾಗಿ ಕನ್ನಡ ಚಿತ್ರ ಪ್ರದರ್ಶಿಸಿ ಕನ್ನಡಿಗರ ಮನೆ ಮಾತಾಗಿತ್ತು.

ಮೈಸೂರು ಬ್ಯಾಂಕ್ ವೃತ್ತದಿಂದ ಸುಭಾಷ್ ನಗರದವರೆಗೆ (ಈಗಿನ ಕೆಂಪೇಗೌಡ ಬಸ್ ನಿಲ್ದಾಣ) ಸುಮಾರು ಒಂದು ಕಿ.ಮೀ. ಉದ್ದದ ರಸ್ತೆಯಲ್ಲಿ ಈ ಹಿಂದೆ ಸ್ಟೇಟ್, ಪ್ರಭಾತ್, ಜೈ ಹಿಂದ್, ಸಾಗರ್, ಕೆಂಪೇಗೌಡ, ಕಲ್ಪನಾ, ಅಲಂಕಾರ್, ಹಿಮಾಲಯ, ಮೆಜೆಸ್ಟಿಕ್, ಗೀತಾ, ತ್ರಿವೇಣಿ, ಅಪರ್ಣ, ಕಪಾಲಿ, ತ್ರಿಭುವನ್ ಚಿತ್ರಮಂದಿರಗಳಿದ್ದುವು.

ಅಲಂಕಾರ್, ಕಲ್ಪನಾ ಚಿತ್ರಮಂದಿರಗಳಲ್ಲಿ ಹಿಂದಿ ಚಿತ್ರಗಳು ತೆರೆ ಕಾಣುತ್ತಿದ್ದವು. ಉಳಿದ ಬಹುಪಾಲು ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿದ್ದವು. ಕೆಲ ಚಿತ್ರಗಳು ಬೆಂಗಳೂರಿನ ಇತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಕೆಲ ವಾರಗಳು ಪ್ರದರ್ಶನ ಕಂಡ ನಂತರ ಕೆಂಪೇಗೌಡ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಾಣುತ್ತಿದ್ದವು. ಹೀಗೆ ಸ್ಥಳಾಂತರಗೊಂಡ ಚಿತ್ರಗಳು 50ರಿಂದ 100 ದಿನ ಪ್ರದರ್ಶನ ಕಂಡ ನಿದರ್ಶನಗಳು ಹಲವು.

ನಗರ ಬೆಳೆದಂತೆ ಮನರಂಜನೆಯ ಕೇಂದ್ರವಾಗಿದ್ದ ಹಲವು ಚಿತ್ರಮಂದಿರಗಳು ಕಣ್ಮರೆಯಾಗಿವೆ. ಸ್ಟೇಟ್ ಚಿತ್ರಮಂದಿರ ಭೂಮಿಕಾ ಎಂದೂ, ಜೈಹಿಂದ್ ಚಿತ್ರಮಂದಿರ ಮೇನಕಾ ಎಂದೂ ಹೆಸರು ಬದಲಿಸಿಕೊಂಡವು. ಕಲ್ಪನಾ, ಅಲಂಕಾರ್, ಸಾಗರ್, ಹಿಮಾಲಯ, ಮೆಜೆಸ್ಟಿಕ್, ಗೀತಾ ಟಾಕೀಸ್‌ಗಳು ಮಾಯವಾದವು. ‘ಕೆಂಪೇಗೌಡ’ ಚಿತ್ರ ಮಂದಿರ’ವೂ ಇಲ್ಲವಾಯಿತು.

ಕನ್ನಡ ಸಿನಿಮಾ ನೋಡಲು ಬರುತ್ತಿದ್ದ ಪ್ರೇಕ್ಷಕರು ಕೆಂಪೇಗೌಡ ಚಿತ್ರ ಮಂದಿರದ ನೆಲಮಹಡಿಯಲ್ಲಿದ್ದ ‘ವಿಷ್ಣು ಭವನ್’ ಹೋಟೆಲ್‌ನಲ್ಲಿ ರುಚಿಯಾದ ತಿಂಡಿ ಸೇವಿಸಿ ಸಂತಸ ಪಡುತ್ತಿದ್ದರು. ಮಸಾಲೆ ದೋಸೆ, ಚಟ್ನಿ, ಬ್ರೆಡ್ ರೋಸ್ಟ್ ಜೊತೆಗೆ  ಸಾಗು, ಜಾಮ್ ಮತ್ತು ಆಹ್ಲಾದಕರವಾದ ಕಾಫಿ ‘ವಿಷ್ಣುಭವನ್’ ವಿಶೇಷವಾಗಿತ್ತು. ವರನಟ ಡಾ.ರಾಜ್‌ಕುಮಾರ್ ನಟಿಸಿದ್ದ ‘ಬಂಗಾರದ ಮನುಷ್ಯ’ ಚಿತ್ರ ಸ್ಟೇಟ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ, ನಂತರ ಕೆಂಪೇಗೌಡ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿತು. ಅಶ್ವತ್ಥ್ ಅವರು ನಟಿಸಿದ್ದ ‘ನಮ್ಮ ಮಕ್ಕಳು’ ಚಿತ್ರವೂ ಈ ಚಿತ್ರಮಂದಿರದಲ್ಲಿ ದಾಖಲೆ ಬರೆದಿತ್ತು.

1975ರ ಸುಮಾರಿಗೆ ಬಿಡುಗಡೆಯಾದ ವರನಟ ರಾಜ್‌ಕುಮಾರ್ ನಟಿಸಿದ್ದ ಅದ್ದೂರಿ ವರ್ಣರಂಚಿತ ಚಿತ್ರ ‘ಮಯೂರ’ ಕೆಂಪೇಗೌಡ ರಸ್ತೆಯ ಸ್ಟೇಟ್ ಮತ್ತು ಸಾಗರ್ ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಿ ಎರಡೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನಗೊಂಡಿದ್ದು ಮತ್ತೊಂದು ವಿಶೇಷ.

ಕೆಂಪೇಗೌಡ ಚಿತ್ರಮಂದಿರ ನಾನಾ ಕಾರಣದಿಂದ ಮುಚ್ಚಿರುವುದು ಚಲನಚಿತ್ರ ಪ್ರಿಯರಿಗೆ ನೋವು ತಂದಿದೆ. ಕೆಂಪೇಗೌಡರ ಹೆಸರಲ್ಲಿ ಇದ್ದ ಒಂದೇ ಒಂದು ಚಿತ್ರಮಂದಿರ ಮುಚ್ಚಿ ಹತ್ತಾರು ವರ್ಷವೇ ಆಗಿದೆ. ಆದರೆ ಯಾವುದೇ ಸಂಘ-ಸಂಸ್ಥೆ ಕೆಂಪೇಗೌಡರ ಹೆಸರಿನ ಚಿತ್ರಮಂದಿರ ಉಳಿಸಬೇಕೆಂದು ಹೋರಾಡಿದ ನಿದರ್ಶನಗಳು ಕಾಣುತ್ತಿಲ್ಲ.

ಬೆಂಗಳೂರಿನ ಯಾವುದೇ ಬಡಾವಣೆಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಒಂದು ರಂಗಮಂದಿರವಾಗಲಿ, ಚಿತ್ರಮಂದಿರವಾಗಲಿ ಇಲ್ಲ. ಸರ್ಕಾರವಾಗಲಿ, ಸಂಘ ಸಂಸ್ಥೆಯಾಗಲೀ, ಬೆಂಗಳೂರಿಗೆ ಕಳಶಪ್ರಾಯವಾಗಿರುವ ಕೆಂಪೇಗೌಡ ರಸ್ತೆಯಲ್ಲೇ ಒಂದು ಚಿತ್ರಮಂದಿರವನ್ನು ಸ್ಥಾಪಿಸಿದರೆ ನಾಡಪ್ರಭುವಿಗೆ ಗೌರವಾರ್ಪಣೆ ಸಲ್ಲಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT