ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿಯ ‘ಮಹಾ ಜಾಗೃತಿ’

Last Updated 9 ಜೂನ್ 2017, 19:48 IST
ಅಕ್ಷರ ಗಾತ್ರ

ಸಾಮಾನ್ಯ ಜನರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನೆಲೆಯಲ್ಲಿ ರೂಪಿಸಲಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA, ಮ–ನರೇಗ) ದೇಶದಲ್ಲಿ ಸ್ವಾತಂತ್ರ್ಯಾನಂತರ ಜಾರಿಯಾದ ಮಹತ್ವಪೂರ್ಣ ಜನಪರ ಕಾಯ್ದೆ.

ಉದ್ಯೋಗ ಪಡೆಯುವ ಹಕ್ಕನ್ನು ಮೊದಲ ಬಾರಿಗೆ ಕಾನೂನು ಸಮ್ಮತಗೊಳಿಸಿದ್ದಲ್ಲದೆ, ಉದ್ಯೋಗ ನೀಡುವ ಹೊಣೆಯನ್ನೂ ಹೇಳಿತು. ಆದರೆ ಈ ಯೋಜನೆ ಪೂರ್ಣಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗದೆ ದೇಶದಾದ್ಯಂತ ಬಹುಪಾಲು ಭ್ರಷ್ಟಾಚಾರದ ಮಹಾಮಾರಿಗೆ ಬಲಿಯಾಗುತ್ತಿದೆ.

ಹೀಗಿದ್ದೂ ಕೆಲವು ಚಳವಳಿಯ ಸಂಗಾತಿಗಳು ದೇಶದೆಲ್ಲೆಡೆ ಅಲ್ಲಲ್ಲಿ ಈ ಖಾತ್ರಿ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕಲಬುರ್ಗಿಯ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿ ಜಂಟಿಯಾಗಿ ನಡೆಸಿದ ಮ–ನರೇಗದ ಜಾಗೃತಿ ಆಂದೋಲನ ಈ ನಿಟ್ಟಿನಲ್ಲಿ ವಿಶಿಷ್ಟವಾಗಿದೆ.

ಈ ಅಭಿಯಾನದ ಆರಂಭಿಕ ಕೆಲಸಗಳು 2015ರಲ್ಲಿ ಶುರುವಾದವು. ಇದರ ಪರಿಣಾಮ 4.74 ಲಕ್ಷ ಉದ್ಯೋಗ ಸೃಷ್ಟಿಸಿ, ಕಾರ್ಮಿಕರಿಗೆ ಸುಮಾರು ₹ 80 ಕೋಟಿ ಹಣವನ್ನು ಪಾವತಿ ಮಾಡಲಾಯಿತು. ಮ–ನರೇಗ ಕಾಯ್ದೆಯಲ್ಲಿ ಕೂಲಿ ಮತ್ತು ಸಾಮಗ್ರಿ ವೆಚ್ಚದ ಅನುಪಾತ 60ಃ40ರಷ್ಟು ಇದ್ದರೂ ಜಿಲ್ಲೆಯ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ 85ಃ15ರ ಅನುಪಾತದಲ್ಲಿ ಅನುಷ್ಠಾನಗೊಳಿಸಲಾಯಿತು.

ಇದರಿಂದಾಗಿ ಕಲಬುರ್ಗಿ ಜಿಲ್ಲೆಯಾದ್ಯಂತ ಸುಮಾರು 8 ಸಾವಿರ ಕೂಲಿ ಕಾರ್ಮಿಕರು ಕೆಲಸ ಪಡೆದರು. ಮ–ನರೇಗದ ಅನ್ವಯ 100 ದಿನಗಳ ಉದ್ಯೋಗ ಕಲ್ಪಿಸಲು ಅವಕಾಶವಿದೆ. ಆದರೆ ಬರಪೀಡಿತ ಪ್ರದೇಶದಲ್ಲಿ 150  ದಿನಗಳ ಉದ್ಯೋಗವನ್ನು ಕಲ್ಪಿಸಲಾಯಿತು.

ಈ ಯೋಜನೆಯಡಿ ರೈತರಿಗೆ ಉಪಯೋಗವಾಗುವ ಬದು, ಕೃಷಿ ಹೊಂಡ ಮುಂತಾದ ವೈಯಕ್ತಿಕ ಕಾಮಗಾರಿಗಳ ಜತೆ ಕೆರೆ ನಿರ್ಮಾಣ, ಹೂಳೆತ್ತುವುದು, ಅರಣ್ಯೀಕರಣ ಮತ್ತು ಅರಣ್ಯ ಸಂರಕ್ಷಣೆಯಂತಹ ಸಮುದಾಯ ಆಧಾರಿತ ಕೆಲಸಗಳೂ ನಡೆದವು. ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವಾಗ ಜಮೀನಿನ ರೈತರೇ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿದರೆ, ಅವರಿಗೂ ಜಾಬ್ ಕಾರ್ಡ್ ನೀಡಲಾಯಿತು.

ಅಫಜಲಪೂರ ತಾಲ್ಲೂಕಿನ ಮಾಶಾಳ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸಿದ 10 ಜನ ಕೂಲಿ ಕಾರ್ಮಿಕರಿಗೆ ಹೈದರಾಬಾದಿನಲ್ಲಿ ಇಟ್ಟಿಗೆ ತಯಾರಿಕೆಯ ತರಬೇತಿ ನೀಡಲಾಯಿತು. ಯೋಜನೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ 30  ಜನರಿಗೊಬ್ಬರಂತೆ ಕಾಯಕ ಬಂಧುಗಳನ್ನು ನೇಮಿಸಲಾಗಿತ್ತು. ಇವರು ಕಾರ್ಮಿಕರಿಗೆ ಪ್ರತಿದಿನ ಕೆಲಸ ಕೊಟ್ಟು, ಪೂರ್ಣಗೊಂಡ ಕಾಮಗಾರಿಯ ಅಳತೆ ಪಡೆಯುತ್ತಿದ್ದರು.

ಹೀಗೆ 2015ರಲ್ಲಿ ನಡೆದ ಮ–ನರೇಗ ಜಾಗೃತಿಯ ಪ್ರಯೋಗ ಈ ಕುರಿತ ಒಂದು ಸ್ವತಂತ್ರ ಅಭಿಯಾನ ಹುಟ್ಟಿಕೊಳ್ಳಲು ಕಾರಣವಾಯಿತು. ಪರಿಣಾಮವಾಗಿ 2016ರ ಮೇ 2ರಂದು ಪ್ರಾರಂಭಗೊಂಡ ಜಾಗೃತಿ ಅಭಿಯಾನ ಜೂನ್ 1ರವರೆಗೆ ನಿರಂತರವಾಗಿ ಹಗಲುರಾತ್ರಿಯೆನ್ನದೆ ನಡೆಯಿತು. ಆಯಾ ಊರಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಊರಿನ ಜನರು ಸಭೆಗಳಲ್ಲಿ ಭಾಗವಹಿಸಿ ತಮ್ಮ ಕಷ್ಟ ನೋವುಗಳನ್ನು ತೋಡಿಕೊಂಡು ಅಧಿಕಾರಿಗಳು ಮತ್ತು ಚುನಾಯಿತರ ವಂಚನೆಗಳನ್ನು ಬಹಿರಂಗಪಡಿಸಿದರು.

‘ಅಭಿಯಾನ’ದ ಮಾತುಗಳನ್ನು ಆಲಿಸಿದರು. ಬತ್ತಿದ ಕಂಗಳಲ್ಲಿ ಭರವಸೆ ತುಂಬಿಕೊಂಡರು. ಅಭಿಯಾನಕ್ಕೆ ಎಲ್ಲಾ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸಹಕರಿಸಿದರು. ಹೀಗೆ 25 ಗ್ರಾಮ ಪಂಚಾಯಿತಿಗಳಿಗೆ ಸೇರುವ 56 ಹಳ್ಳಿಗಳಲ್ಲಿ 150ಕ್ಕೂ ಹೆಚ್ಚು ಸಭೆಗಳು ನಡೆದವು. 9000ಕ್ಕೂ ಹೆಚ್ಚು ಜನರಿಗೆ ತಿಳಿವಳಿಕೆ ನೀಡಲಾಯಿತು. ಇದರ ಪರಿಣಾಮವಾಗಿ 7,166 ಅರ್ಜಿ ಸಲ್ಲಿಕೆಯಾದವು. 12,448 ಜನರಿಗೆ ಉದ್ಯೋಗ ದೊರೆಯಿತು. 3 ಲಕ್ಷ ಮಾನವ ದಿನಗಳು ಸೃಷ್ಟಿಯಾದವು.

ಅನಕ್ಷರತೆ ಮತ್ತು ತುರ್ತು ಅಗತ್ಯಗಳ ಹಿನ್ನೆಲೆಯಲ್ಲಿ ಸುಮಾರು 4,200 ಜನರ ಫಾರಂ ಸಂಖ್ಯೆ 6ನ್ನು ಅಭಿಯಾನದ ಸದಸ್ಯರೇ ತುಂಬಿಕೊಟ್ಟರು. ಇದರಿಂದ ಅಂದಾಜು 10 ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸ ದೊರಕುವಂತಾಯಿತು. ಗೊಬ್ಬೂರು, ಹೊನ್ನಳ್ಳಿ, ಧುತ್ತರಗಾಂವ್, ವೈಜಾಪುರ, ನರೋಣಾ, ಶುಕ್ರವಾಡಿ, ತಡಕಲ್, ಕುಮಸಿ ಮತ್ತು ಸಾಲೇಗಾಂವ್ ಮುಂತಾದ ಗ್ರಾಮಗಳ 23 ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿಯನ್ನು ತೆಗೆದುಕೊಳ್ಳಲಾಯಿತು.

ಹೀಗೆ ಉದ್ಯೋಗ ದೊರಕಿರುವ ಪ್ರತಿಯೊಬ್ಬ ಕಾರ್ಮಿಕರಿಗೆ ದಿನಕ್ಕೆ ₹ 234 ಮಜೂರಿಯಂತೆ ಒಟ್ಟು ₹ 10.06 ಲಕ್ಷ ನಿತ್ಯವೂ ಜನರ  ಕೈ ಸೇರುತ್ತಿತ್ತು. ಇದು 2000 ಕುಟುಂಬಗಳಿಗೆ ಜೀವನಾಧಾರ ದೊರಕಿಸಿಕೊಟ್ಟಿತು. ಕೆರೆ, ಗೋಕಟ್ಟೆಗಳಲ್ಲಿ ಹೂಳೆತ್ತುವುದರಿಂದ ಮಳೆಗಾಲದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯವೂ ಹೆಚ್ಚಿತು. ನೂರಾರು ರೈತರು ಬದು ನಿರ್ಮಾಣ ಮಾಡಿಕೊಂಡರು.

ಈ ಅಭಿಯಾನದ ಕೆಲಸ 2017 ರಲ್ಲಿ ಮತ್ತಷ್ಟು ಸಿದ್ಧತೆಯೊಂದಿಗೆ, ಖಚಿತ ನಿರ್ಧಾರಗಳೊಂದಿಗೆ ಆರಂಭವಾಯಿತು. ಏಪ್ರಿಲ್ 17ರಿಂದ ಅಧಿಕೃತವಾಗಿ ಚಿಂಚೋಳಿ ತಾಲ್ಲೂಕಿನ ಗಡಿ ಪ್ರದೇಶದ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಮ–ನರೇಗ ಜಾರಿಗೊಳಿಸಲು ಶ್ರಮಿಸುವುದಾಗಿ ಸಂಘಟನೆಗಳು ತೀರ್ಮಾನಿಸಿದವು.

ಇದರಲ್ಲಿ 6 ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ 18 ಗ್ರಾಮ ಮತ್ತು 19 ತಾಂಡಾಗಳಲ್ಲಿ ಉದ್ಯೋಗ ಖಾತ್ರಿ ಕೆಲಸದ ಅಭಿಯಾನ ಯಶಸ್ವಿಯಾಗಿ ಆರಂಭವಾಗಿದೆ. 4,377 ಜನರು ಉದ್ಯೋಗಕ್ಕಾಗಿ ಅರ್ಜಿಯನ್ನು ಭರ್ತಿ ಮಾಡಿ ಕೆಲಸ ಪಡೆದಿದ್ದಾರೆ. ಅಂತೆಯೇ 2016ರಲ್ಲಿ ಆರಂಭಿಸಿದ ಅಭಿಯಾನದ ಪ್ರದೇಶಗಳಲ್ಲಿಯೂ ಉದ್ಯೋಗ ಖಾತ್ರಿಯ ಕೆಲಸಗಳು ನಡೆದಿವೆ.

‘ತವರ ಋಣ ತೀರಿಸೋಣ’ ಯೋಜನೆಯಡಿಯಲ್ಲಿ ತಾಜಸುಲ್ತಾನಪುರ ಗ್ರಾಮದಿಂದ ಪ್ರಾಯೋಗಿಕವಾಗಿ 25 ಮಂದಿ ಮಹಿಳೆಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ ಎಂಟು ಮಹಿಳೆಯರು ಜವಾಬ್ದಾರಿ ನಿರ್ವಹಿಸಿದ್ದಾರೆ. ಆಳಂದ ತಾಲ್ಲೂಕಿನ ಶಿರೂರ ಗ್ರಾಮ ಪಂಚಾಯಿತಿಯ ಕುಡಕಿ, ಗುಡೂರ ಮತ್ತು ಮಾಡ್ಯಾಳ, ಅಫಜಲಪೂರ ತಾಲ್ಲೂಕಿನ ಬಿದನೂರ, ಗೊಬ್ಬೂರ, ಗೊಬ್ಬೂರ ವಾಡಿ, ಅವರಳ್ಳಿ, ಹಾವನೂರ, ನಿಂಬರ್ಗಾ ಮುಂತಾದ ಹಳ್ಳಿಗಳಲ್ಲಿ ಮ–ನರೇಗ ಕಾಮಗಾರಿ ನಡೆಯಿತು.

ಬಿದನೂರ ಕೆರೆಯೊಂದರಲ್ಲಿಯೇ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿದರು. ಫೆಬ್ರುವರಿ 22 ರಂದು 21 ಗ್ರಾಮಗಳಿಂದ ಬಂದ ಮ–ನರೇಗ ಕಾರ್ಮಿಕರ ಸಮಾವೇಶ ನಡೆಯಿತು. ಫೆಬ್ರುವರಿ  23 ರಂದು ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿ ಐದು ಗ್ರಾಮ ಪಂಚಾಯಿತಿಯ  ಕಾರ್ಮಿಕರ ಸಮಾವೇಶ ಯಶಸ್ವಿಯಾಯಿತು.

ಹಿಂದಿನ ವರ್ಷಗಳಲ್ಲಿ ಈ ಅಭಿಯಾನದ ಸದಸ್ಯರು ಕೆರೆ, ನೀರು, ಕೆಲಸ ಮತ್ತು ಕೂಲಿಯನ್ನು ಮುಖ್ಯ ಆದ್ಯತೆಯಾಗಿ ಪರಿಗಣಿಸಿದ್ದರು. ಈ ಬಾರಿ ವಲಸೆ, ಗಡಿಪ್ರದೇಶ, ಕೆಲಸ ಮತ್ತು ಕೂಲಿಯನ್ನು ಆದ್ಯತೆಯಾಗಿ ಕೈಗೆತ್ತಿಕೊಂಡಿದ್ದಾರೆ. ಹೀಗಾಗಿ ಚಿಂಚೋಳಿ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ದಟ್ಟಾರಣ್ಯ, ಗಡಿಭಾಗ (ತೆಲಂಗಾಣ ರಾಜ್ಯ), ತಾಂಡಾಗಳಲ್ಲಿ ತಂಡದ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಅಭಿಯಾನದ ಸದಸ್ಯರು ಈಚಿನ  ಇಪ್ಪತ್ತು ದಿನಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಅವರ ಮನೆಗಳಿಗೆ ಒಂದು ದಿನದ ಮಟ್ಟಿಗೆ ಹೋಗಿ ಬಂದಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿಯೇ ವಾಸ್ತವ್ಯ ಮಾಡಿ ಮ–ನರೇಗ ಅಭಿಯಾನ ನಡೆಸುತ್ತಿದ್ದಾರೆ. ಈ ಬಗೆಯ ಕೂಡುಶಕ್ತಿಯ ಸಾಮೂಹಿಕ ಅಭಿಯಾನಕ್ಕೆ ಕೈಜೋಡಿಸಿದವರು ಹಲವರು. ಇಂಥ ಪ್ರಯೋಗ ಬೇರೆಡೆಗೂ ವಿಸ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT