ಐಎಸ್‌ ಉಗ್ರರ ನಿಗ್ರಹಕ್ಕೆ ಸಂಘಟಿತ ಯತ್ನ ಬೇಕು

7

ಐಎಸ್‌ ಉಗ್ರರ ನಿಗ್ರಹಕ್ಕೆ ಸಂಘಟಿತ ಯತ್ನ ಬೇಕು

Published:
Updated:
ಐಎಸ್‌ ಉಗ್ರರ ನಿಗ್ರಹಕ್ಕೆ ಸಂಘಟಿತ ಯತ್ನ ಬೇಕು

ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಉಪಟಳ ಮತ್ತೆ ಹೆಚ್ಚಿದೆ. ಒಂದು ವಾರದಿಂದ ಈಚೆಗೆ ಅವರು ವಿಶ್ವದ ಅನೇಕ ಕಡೆ ದಾಳಿ ನಡೆಸಿದ್ದಾರೆ. ಬಹಳಷ್ಟು ಸಾವು ನೋವುಗಳಿಗೂ ಕಾರಣರಾಗಿದ್ದಾರೆ.

ಇದು, ತಮ್ಮ ಶಕ್ತಿ ಇನ್ನೂ ಕಡಿಮೆಯಾಗಿಲ್ಲ ಎಂದು ತೋರಿಸುವ ಅಥವಾ ತಮಗೆ ಆಗುತ್ತಿರುವ ಹಿನ್ನಡೆಯನ್ನು ಮುಚ್ಚಿಕೊಳ್ಳುವ ಪ್ರಯತ್ನವೂ ಇರಬಹುದೇನೋ ಎಂಬ ಅನುಮಾನಕ್ಕೆ ಎಡೆ ಮಾಡುವಂತಿದೆ.

ಬ್ರಿಟನ್ನಿನ ರಾಜಧಾನಿ ಲಂಡನ್, ಆಸ್ಟ್ರೇಲಿಯಾದ ಮೆಲ್ಬರ್ನ್ ಮಾತ್ರವಲ್ಲದೆ ಇಸ್ಲಾಮಿಕ್ ದೇಶ ಇರಾನನ್ನೂ ಐಎಸ್ ಉಗ್ರರು ಬಿಟ್ಟಿಲ್ಲ. ಉಗ್ರರಿಗೆ ಇರಾನ್ ಆಶ್ರಯ ನೀಡುತ್ತಿದೆ ಎಂದು ಕಳೆದು ತಿಂಗಳು ಸೌದಿ ಅರೇಬಿಯದಲ್ಲಿ ನಡೆದ 50ಕ್ಕೂ ಹೆಚ್ಚು ದೇಶಗಳ ಅಮೆರಿಕ- ಅರಬ್ ಇಸ್ಲಾಮಿಕ್ ಶೃಂಗಸಭೆ ಆರೋಪಿಸಿತ್ತು.

ಇರಾನ್‌ನಲ್ಲಿ ಸೌಮ್ಯ ಸಂಪ್ರದಾಯವಾದಿ ನಾಯಕ ಹಸನ್ ರೌಹಾನಿ ಆಗತಾನೆ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದರು. ಅವರ ಸಹಾಯವನ್ನೂ ಪಡೆದು ಉಗ್ರರನ್ನು ಸದೆ ಬಡಿಯುವ ಅವಕಾಶ ಇತ್ತು. ಆದರೆ ಅಮೆರಿಕದ ಒತ್ತಡ ಮತ್ತು ಸುನ್ನಿ- ಷಿಯಾ ಅಂತಃಕಲಹದ ಪ್ರಭಾವವೇ ಮೇಲಾಗಿ ಇರಾನ್ ವಿರೋಧಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು.

ಈಗ ನೋಡಿದರೆ ಇರಾನ್ ಸಂಸತ್ ಕಟ್ಟಡ ಮತ್ತು ಅದರ ಅತ್ಯುನ್ನತ ಧಾರ್ಮಿಕ ಮುಖಂಡರಾಗಿದ್ದ ಅಯತೊಲ್ಲಾ ರುಹೊಲ್ಲಾ ಖೊಮೇನಿ ಸಮಾಧಿ ಮೇಲೆ ಐಎಸ್ ಉಗ್ರರು ದಾಳಿ ಮಾಡಿ 12 ಮಂದಿಯನ್ನು ಬಲಿ ತೆಗೆದುಕೊಂಡಿದ್ದಾರೆ. ಅಂದರೆ, ಉಗ್ರರಿಗೆ ಆಶ್ರಯ- ನೆರವು ಒದಗಿಸುತ್ತಿದೆ ಎಂಬ  ಟೀಕೆಗಳಿಗೆ ಆಹಾರವಾಗಿದ್ದ ದೇಶವೇ ಉಗ್ರರ  ದಾಳಿಗೆ ನಲುಗುವಂತಾಗಿದೆ.

ಭಯೋತ್ಪಾದಕರಿಗೆ ತರಬೇತಿ ಕೊಟ್ಟು ನಮ್ಮ ದೇಶದೊಳಗೆ ನುಗ್ಗಿಸುತ್ತಿದ್ದ ನೆರೆಯ ಪಾಕಿಸ್ತಾನದಲ್ಲಿಯೂ ಚೀನಾದ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನನ್ನು ಐಎಸ್ ಉಗ್ರರು ಕೊಂದು ಹಾಕಿದ್ದಾರೆ. ಇದರರ್ಥ, ಉಗ್ರರಿಗೆ ಯಾರೂ, ಯಾವುದೂ ಲೆಕ್ಕಕ್ಕಿಲ್ಲ. ಅಮಾಯಕರನ್ನು ಕೊಲ್ಲುವುದು, ತಮ್ಮ ಧಾರ್ಮಿಕ ಸಿದ್ಧಾಂತಗಳನ್ನು ಜನರ ಮೇಲೆ ಹೇರುವುದೊಂದೇ ಅವರ ಗುರಿ. ಉಗ್ರರನ್ನು ಪೋಷಿಸುವ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಎಲ್ಲ ದೇಶಗಳಿಗೂ ಇದೊಂದು ಎಚ್ಚರಿಕೆಯ ಪಾಠ.

ವಿವಿಧೆಡೆ ಉಗ್ರರ ಹಾವಳಿ ಹೆಚ್ಚುತ್ತಿದ್ದರೆ, ಇತ್ತ ಕೊಲ್ಲಿಯನ್ನು ಒಳಗೊಂಡ ಪಶ್ಚಿಮ ಏಷ್ಯಾ ಭಾಗದಲ್ಲಿ ರಾಜಕೀಯ ನಿರ್ಧಾರಗಳಿಂದಾಗಿ ಉದ್ವಿಗ್ನತೆ ತಲೆದೋರಿದೆ. ಅರಬ್ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ.

ಐಎಸ್ ಉಗ್ರರಿಗೆ ನೆರವು ಮತ್ತು ಇರಾನ್ ಜತೆ ಬಾಂಧವ್ಯ ವೃದ್ಧಿಯ ಆರೋಪ ಹೊರಿಸಿ ಕತಾರ್ ವಿರುದ್ಧ  ಆರು ದೇಶಗಳು ದಿಗ್ಬಂಧನ ಹೇರಿವೆ. ಎಲ್ಲ ರೀತಿಯ ಸಂಬಂಧ ಕಡಿದುಕೊಂಡಿವೆ. ಆದರೆ ಇದು ಕತಾರ್‌ಗೆ ಮಾತ್ರ ಸಂಬಂಧಪಟ್ಟಿದ್ದು ಎಂದು ನಾವು ಸುಮ್ಮನಿರುವ ಸ್ಥಿತಿಯೂ ಇಲ್ಲ. ಏಕೆಂದರೆ ಅಲ್ಲಿ ಸುಮಾರು 6.5 ಲಕ್ಷ ಭಾರತೀಯರಿದ್ದಾರೆ. ಅಲ್ಲಿನ ಪ್ರತಿಯೊಂದು ಬೆಳವಣಿಗೆಯೂ ನಮ್ಮ ಮೇಲೆ ಪ್ರಭಾವ ಬೀರುತ್ತದೆ.

ಇರಾಕ್ ಹಾಗೂ ಸಿರಿಯಾಗಳಲ್ಲಿ ಐಎಸ್ ವಿರುದ್ಧದ ಹೋರಾಟದಲ್ಲಿ ಇರಾನ್ ತೊಡಗಿಕೊಂಡಿದ್ದರೂ ಪ್ರಾದೇಶಿಕ ಬಿಕ್ಕಟ್ಟುಗಳಿಂದ ಅದು ಈವರೆಗೆ ದೂರವೇ ಉಳಿದಿತ್ತು. ಆದರೆ ಪಶ್ಚಿಮ ಏಷ್ಯಾದ ಯಾವ ರಾಷ್ಟ್ರವೂ ಭಯೋತ್ಪಾದನಾ ದಾಳಿಗಳಿಂದ ದೂರ ಇಲ್ಲ ಎಂಬಂತಹ ಸ್ಥಿತಿ ಇಂದಿನದು.

ಹೀಗಾಗಿ ಈ ಸವಾಲನ್ನು ಒಟ್ಟಾಗಿ ಎದುರಿಸಬೇಕಿದೆ. ಆದರೆ ಇದು ಸಾಧ್ಯವಾಗುತ್ತಿಲ್ಲ. ಈಗ ಸುನ್ನಿ–ಷಿಯಾ ಬಣಗಳ ನೆಲೆಯಲ್ಲಿ ಪ್ರಾದೇಶಿಕ ಸಂಘರ್ಷಗಳು ಹೆಚ್ಚುವುದು ದುರಂತ. ಪಶ್ಚಿಮ ಏಷ್ಯಾ, ಸುನ್ನಿ –ಷಿಯಾ ಮುಸ್ಲಿಮರ ಸಂಘರ್ಷದ ತಾಣವಾಗುವುದು ಬೇಡ. ಇಂತಹ ಸಂಘರ್ಷ ಐಎಸ್‌ನಂತಹ  ಭಯೋತ್ಪಾದನಾ ಗುಂಪುಗಳಿಗೆ ಮತ್ತಷ್ಟು ಬಲ ತುಂಬುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry