ಕನ್ನಡ ದುಬಾರಿ, ಪರಭಾಷೆ ಸೋವಿ!

7

ಕನ್ನಡ ದುಬಾರಿ, ಪರಭಾಷೆ ಸೋವಿ!

Published:
Updated:
ಕನ್ನಡ ದುಬಾರಿ, ಪರಭಾಷೆ ಸೋವಿ!

ರಾಜಧಾನಿ ಬೆಂಗಳೂರಿನಿಂದ ಬಹುದೂರದಲ್ಲಿರುವ ಮೂಡುಬಿದಿರೆ ಅಥವಾ ಸುಳ್ಯದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳ ಪಾಲಿಗೆ ಸಿನಿಮಾ ಎಂಬುದು ವಾರಾಂತ್ಯದ ವೇಳೆಗೆ ಸಿಗುವ ಕನಿಷ್ಠ ಮನರಂಜನೆ. ವಿದ್ಯಾರ್ಥಿ ನಿಲಯದಲ್ಲಿ ಟಿ.ವಿ. ಕೂಡ ಇದ್ದರೆ, ಅದರ ಮೂಲಕವೂ ಸಿನಿಮಾ ವೀಕ್ಷಣೆ ಸಾಧ್ಯ. ಆದರೆ, ಸಿನಿಮಾ ಮಂದಿರಗಳಿಗೆ ತೆರಳಿ ಸಿನಿಮಾ ನೋಡುವುದು ಈ ವಿದ್ಯಾರ್ಥಿಗಳ ಪಾಲಿಗೆ ‘ಲಕ್ಷುರಿ’ ಅಲ್ಲ.

ಈ ಮಾತು ರಾಜ್ಯದ ಎಲ್ಲ ಪ್ರದೇಶಗಳ ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಂತಹ ನಗರಗಳ ಹವಾನಿಯಂತ್ರಿತ ಮಲ್ಟಿಪ್ಲೆಕ್ಸ್‌ಗಳಲ್ಲಿ ದುಬಾರಿ ದರ ಪಾವತಿಸಿ ಸಿನಿಮಾ ವೀಕ್ಷಿಸುವವರಿಗೆ ಇದು ‘ಲಕ್ಷುರಿ’ ಆಗಿರಬಹುದು. ಎಲ್ಲರಿಗೂ ಅಲ್ಲ.

ಆದರೆ, ಜುಲೈ 1ರಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ಸಿನಿಮಾ ವೀಕ್ಷಣೆಯನ್ನು ‘ಲಕ್ಷುರಿ’ ಎಂದು ಪರಿಗಣಿಸಿದಂತಿದೆ. ಜೊತೆಗೆ, ಸಿನಿಮಾ ವೀಕ್ಷಣೆಗೆ ಶೇ 28ರಷ್ಟು ತೆರಿಗೆ ವಿಧಿಸುತ್ತದೆ. ಈ ವ್ಯವಸ್ಥೆಯಿಂದ ಕರ್ನಾಟಕದಲ್ಲಿ ಈಗ ಶೇ 28ರಷ್ಟಕ್ಕಿಂತ ಹೆಚ್ಚು ಮನರಂಜನಾ ತೆರಿಗೆ ಪಾವತಿಸುತ್ತಿರುವ ಅನ್ಯಭಾಷಾ ಚಲನಚಿತ್ರಗಳಿಗೆ ಲಾಭವಾಗಲಿದೆ. ಏಕೆಂದರೆ, ಅನ್ಯಭಾಷಾ ಚಲನಚಿತ್ರಗಳು ಇನ್ನು ಮುಂದೆ ಶೇ 28ರಷ್ಟು ತೆರಿಗೆ ಪಾವತಿಸಿದರೆ ಸಾಕು. ಆದರೆ...

ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಮನರಂಜನಾ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆದಿರುವ ಕನ್ನಡ ಚಿತ್ರರಂಗ ಜುಲೈ 1ರಿಂದ ಜಿಎಸ್‌ಟಿ ವ್ಯವಸ್ಥೆಯಡಿ ಶೇ 28ರಷ್ಟು ತೆರಿಗೆ ಪಾವತಿಸಬೇಕಾದ ಅನಿವಾರ್ಯಕ್ಕೆ ಸಿಲುಕಲಿದೆ.

‘ಈ ಪ್ರಮಾಣದ ತೆರಿಗೆ ಪಾವತಿಸಲು ಪ್ರಾದೇಶಿಕ ಸಿನಿಮಾ ಉದ್ಯಮಕ್ಕೆ ಸಾಧ್ಯವಾಗದು. ಈ ಪ್ರಮಾಣದ ತೆರಿಗೆ ವಿಧಿಸಿದರೆ ನಾವು ಈ ಉದ್ದಿಮೆಯಿಂದ ಹೊರಹೋಗಬೇಕಾಗುತ್ತದೆ. ಸಿನಿಮಾಗಳಿಗೆ ಶೇ 12ರಿಂದ 15ರಷ್ಟಕ್ಕಿಂತ ಹೆಚ್ಚಿನ ತೆರಿಗೆ ವಿಧಿಸಬಾರದು’ ಎಂದು ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಹೇಳಿದ್ದಾರೆ.

ಸಿನಿಮಾಗಳಿಗೆ ಶೇ 28ರಷ್ಟು ತೆರಿಗೆ ವಿಧಿಸುವ ತೀರ್ಮಾನಕ್ಕೆ ಸರ್ಕಾರ ಅಂಟಿಕೊಂಡರೂ ಕಮಲ್ ಅವರು ಚಿತ್ರೋದ್ಯಮ ತೊರೆಯಲಿಕ್ಕಿಲ್ಲ. ಆದರೆ, ಪ್ರಾದೇಶಿಕ ಭಾಷೆಗಳನ್ನು ಬಾಲಿವುಡ್ ಅಥವಾ ಹಾಲಿವುಡ್ ಸಿನಿಮಾಗಳ ಜೊತೆ ಒಂದೇ ತಕ್ಕಡಿಯಲ್ಲಿ ಇಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಗಳು ಮೂಡಿವೆ.

‘ಹಾಲಿವುಡ್‌ ಹಾಗೂ ಬಾಲಿವುಡ್‌ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಕನ್ನಡ ಸಿನಿಮಾಗಳಿಗೆ ಇರುವುದು ತೀರಾ ಸೀಮಿತ ಮಾರುಕಟ್ಟೆ. ದೊಡ್ಡ ಮಾರುಕಟ್ಟೆ ಇರುವ ದೈತ್ಯನನ್ನು, ಸೀಮಿತ ಮಾರುಕಟ್ಟೆ ಹಾಗೂ ಸೀಮಿತ ಆರ್ಥಿಕ ಶಕ್ತಿ ಹೊಂದಿರುವ ಸಣ್ಣವನ ಜೊತೆ ಸ್ಪರ್ಧೆಗೆ ಇಳಿಸುವುದು ಯುಕ್ತ ಕ್ರಮವಲ್ಲ’ ಎನ್ನುತ್ತಾರೆ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌.

ಸಿನಿಮಾ ವೀಕ್ಷಣೆಯನ್ನು ‘ಭೋಗ’ ಎಂದು ಪರಿಗಣಿಸುವುದೇ ಸಾಂಪ್ರದಾಯಿಕ ಮನಸ್ಥಿತಿಯ ಪ್ರತೀಕದಂತೆ ಇದೆ ಎನ್ನುತ್ತಾರೆ ನಿರ್ದೇಶಕ ಗಿರೀಶ್ ಕಾಸರವಳ್ಳಿ. ‘ಸಿನಿಮಾ ಮಂದಿರದಲ್ಲಿ ಪ್ರದರ್ಶನ ಕಾಣುವ ಸಿನಿಮಾ ಒಳ್ಳೆಯದಾಗಿರಬಹುದು ಅಥವಾ ಕೆಟ್ಟದ್ದೇ ಆಗಿರಬಹುದು. ಆದರೆ, ಎಲ್ಲಾ ಸಿನಿಮಾಗಳನ್ನು ಭೋಗವೆಂದು ಪರಿಗಣಿಸಲಾಗದು. ಸಿನಿಮಾ ಎಂಬ ಮಾಧ್ಯಮ ಭೋಗ ಎನ್ನುವುದಾದರೆ ಸಾಹಿತ್ಯ ಅಥವಾ ರಂಗಭೂಮಿ ಕೂಡ ಭೋಗದಂತೆ ಕಾಣಿಸುವುದಿಲ್ಲವೇ’ ಎಂದು ಕಾಸರವಳ್ಳಿ ಪ್ರಶ್ನಿಸುತ್ತಾರೆ.

ಕನ್ನಡ ಸಿನಿಮಾಗಳನ್ನು ಕರ್ನಾಟಕದಲ್ಲಿ ಜಿಎಸ್‌ಟಿ ವ್ಯಾಪ್ತಿಗೆ ತರಲೇಬಾರದು ಎನ್ನುವುದು ಕರ್ನಾಟಕ ಚಲನಚಿತ್ರ ವಾಣಿಜ್ಯೋದ್ಯಮ ಮಂಡಳಿಯ ಆಗ್ರಹ. ಈ ಆಗ್ರಹವನ್ನು ಮಂಡಳಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ಈಗಾಗಲೇ ಇರಿಸಿದೆ. ಒಂದು ವೇಳೆ, ತೆರಿಗೆ ವಿಧಿಸಲೇಬೇಕು ಎಂದಿದ್ದರೆ ಶೇಕಡ 5ರಷ್ಟು ತೆರಿಗೆ ವಿಧಿಸಬೇಕು ಎಂದು ಮಂಡಳಿ ಆಗ್ರಹಿಸಿದೆ.

‘ನಮ್ಮ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪೂರಕ ಸ್ಪಂದನೆ ಸಿಕ್ಕಿದೆ. ಏನಾಗುತ್ತದೆ ಎಂಬುದನ್ನು ನೋಡೋಣ. ಶೇಕಡ 28ರಷ್ಟು ತೆರಿಗೆ ವಿಧಿಸಿದ್ದೇ ಆದಲ್ಲಿ, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳ ಸಿನಿಮಾ ಉದ್ಯಮ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ’ ಎನ್ನುತ್ತಾರೆ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು.

ಸಿನಿಮಾ ಎಂಬುದು ದೃಶ್ಯ ಮಾಧ್ಯಮ. ಸಿನಿಮಾ ರೀತಿಯಲ್ಲೇ ದೃಶ್ಯಗಳ ಮೂಲಕ ಜನರಿಗೆ ಸಂದೇಶ ರವಾನಿಸುವ ಇನ್ನೊಂದು ಮಾಧ್ಯಮ ಟಿ.ವಿ. ಇದಕ್ಕೆ ಅತ್ಯವಶ್ಯಕವಾಗಿರುವುದು ಕೇಬಲ್‌ ಅಥವಾ ಡಿಟಿಎಚ್ ಸಂಪರ್ಕ. ಕೇಬಲ್‌ ಹಾಗೂ ಡಿಟಿಎಚ್‌ ಸೇವೆಗಳಿಗೆ ಜಿಎಸ್‌ಟಿ ಮಂಡಳಿ ನಿಗದಿ ಮಾಡಿರುವುದು ಶೇಕಡ 18ರಷ್ಟು ತೆರಿಗೆ. ಅಂದರೆ, ಒಂದೇ ಸ್ವರೂಪದ ಎರಡು ಮಾಧ್ಯಮಗಳಿಗೆ ವಿಭಿನ್ನ ತೆರಿಗೆ ಪ್ರಮಾಣ ನಿಗದಿ ಮಾಡಲಾಗಿದೆ.

ಜಿಎಸ್‌ಟಿ ಜಾರಿಗೆ ಬಂದ ನಂತರ ಕೇಬಲ್‌ ಹಾಗೂ ಡಿಟಿಎಚ್‌ ಸೇವೆಗಳ ತಿಂಗಳ ಶುಲ್ಕ ಕಡಿಮೆ ಆಗುವ ನಿರೀಕ್ಷೆ ಇದೆ. ಅಂದರೆ, ಮನೆಯಲ್ಲೇ ಕುಳಿತು ಧಾರಾವಾಹಿ, ರಿಯಾಲಿಟಿ ಶೋ, ಕ್ರಿಕೆಟ್ ವೀಕ್ಷಣೆಗೆ ತೆರಬೇಕಿರುವ ಶುಲ್ಕ ಕಡಿಮೆ ಆಗಬಹು. ಆದರೆ, ಹೊರಗೆ ಹೋಗಿ ಸಿನಿಮಾ ನೋಡಲು ಹೆಚ್ಚಿನ ದರ ಪಾವತಿಸಬೇಕು!

ಜಿಎಸ್‌ಟಿ ಜಾರಿಗೆ ಬಂದ ನಂತರ, ಕನ್ನಡ ಭಾಷೆಯ ಚಲನಚಿತ್ರಗಳ ಟಿಕೆಟ್ ದರ ಹೆಚ್ಚಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಅನುಮಾನ ಇಲ್ಲ. ಇದು ಸಿನಿಮಾ ಮಂದಿರಗಳಿಗೆ ತೆರಳಿ ಸಿನಿಮಾ ವೀಕ್ಷಿಸುವ ಹವ್ಯಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಆಗ, ಸಿನಿಮಾ ಪ್ರತಿಗಳನ್ನು ನಕಲು (ಪೈರಸಿ) ಮಾಡುವುದು ಹೆಚ್ಚುವ ಅಪಾಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಅದರಲ್ಲೂ ಕುತೂಹಲದ ಸಂಗತಿಯೆಂದರೆ, ಬರಲಿರುವ ಜಿಎಸ್‌ಟಿ ವ್ಯವಸ್ಥೆಯು ಕರ್ನಾಟಕದಲ್ಲಿ ಹಾಲಿವುಡ್, ಬಾಲಿವುಡ್ ಅಥವಾ ಪರಭಾಷಾ ಸಿನಿಮಾಗಳ ಟಿಕೆಟ್‌ ದರಗಳನ್ನು ಈಗಿನದ್ದಕ್ಕಿಂತ ಕಡಿಮೆ ಮಾಡುವ, ಕನ್ನಡ ಸಿನಿಮಾ ಟಿಕೆಟ್ ದರಗಳನ್ನು ಈಗಿರುವುದಕ್ಕಿಂತ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry