ಲಾಭ – ನಷ್ಟದ ಲೆಕ್ಕದಲ್ಲಿ ಗ್ರಾಹಕ

7

ಲಾಭ – ನಷ್ಟದ ಲೆಕ್ಕದಲ್ಲಿ ಗ್ರಾಹಕ

Published:
Updated:
ಲಾಭ – ನಷ್ಟದ ಲೆಕ್ಕದಲ್ಲಿ ಗ್ರಾಹಕ

ದೇಶದ ಅರ್ಥ ವ್ಯವಸ್ಥೆಯ ಸಮಗ್ರ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಿಸಲಿರುವ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು, ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದೆ.

ಹೊಸ ವ್ಯವಸ್ಥೆ ಜಾರಿಗೆ ಬರಲು ಕೇವಲ 21 ದಿನಗಳಷ್ಟೇ  ಬಾಕಿ ಉಳಿದಿವೆ. ಚಿನ್ನವನ್ನು ಶೇ 3ರಷ್ಟು ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಬಳಕೆಯ ಸರಕುಗಳನ್ನೆಲ್ಲ ತೆರಿಗೆ ವ್ಯಾಪ್ತಿಗೆ ತರುವ ಸವಾಲಿನ ಕೆಲಸಗಳೆಲ್ಲ ಪೂರ್ಣಗೊಂಡಿವೆ.

ಇಡೀ ದೇಶವನ್ನು ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆಯನ್ನಾಗಿ ಈ ಹೊಸ ವ್ಯವಸ್ಥೆ ಪರಿವರ್ತಿಸಲಿದೆ. ದೇಶದ ಅರ್ಥ ವ್ಯವಸ್ಥೆಯ ಒಟ್ಟಾರೆ ಗತಿಯನ್ನೇ ಬದಲಿಸುವ ವಿಶಿಷ್ಟ ಶಕ್ತಿಯೂ ಇದಕ್ಕಿದೆ. ಪರೋಕ್ಷ ತೆರಿಗೆ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಗಳಿಗೆಯೂ ಇದಾಗಿದೆ.

ಉದ್ಯಮ ವಹಿವಾಟಿಗೆ ಪಾರದರ್ಶಕತೆಯ ಸ್ಪರ್ಶ ನೀಡುವ, ತೆರಿಗೆ ಕುರಿತ ಅಸ್ಪಷ್ಟತೆಗಳನ್ನೆಲ್ಲ ದೂರ ಮಾಡಲಿರುವ ಜಿಎಸ್‌ಟಿಯು, ದೇಶಿ ಅರ್ಥ ವ್ಯವಸ್ಥೆಯನ್ನು ಹಲವು ಬಗೆಗಳಲ್ಲಿ ಬಲಪಡಿಸಲಿದೆ. ತೆರಿಗೆ ಪಾವತಿ ದಕ್ಷತೆ ಹೆಚ್ಚಿಸಿ, ವೆಚ್ಚ ಉಳಿಸಿ, ಉಪಭೋಗ ಹೆಚ್ಚಿಸಲಿದೆ. ಇದರಿಂದ ಉತ್ಪನ್ನಗಳೆಲ್ಲ ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ದೊರೆಯಲಿವೆ. ತಯಾರಕರು, ಮಾರಾಟಗಾರರು ಮತ್ತು ಗ್ರಾಹಕರೂ ಇದರ ಪ್ರಯೋಜನ ಪಡೆಯಲಿದ್ದಾರೆ.

ಸದ್ಯಕ್ಕೆ ಜಾರಿಯಲ್ಲಿ ಇರುವ ಬಹುಹಂತದ ತೆರಿಗೆ ವ್ಯವಸ್ಥೆ ಕೊನೆಗೊಳ್ಳಲಿದೆ, ಸರಕು ಮತ್ತು ಸೇವೆಗಳ ಬೆಲೆಗಳು ದೇಶದಾದ್ಯಂತ ಒಂದೇ ರೀತಿಯಲ್ಲಿ ಇರಲಿವೆ. ಸರಕುಗಳು ದೇಶದಾದ್ಯಂತ ಮುಕ್ತವಾಗಿ ಸಾಗಾಟಗೊಳ್ಳಲಿವೆ. ಸುಸ್ಥಿರ ವಹಿವಾಟು ಸುಲಭಗೊಳಿಸಲಿದೆ, ಹೊಸ  ಬಂಡವಾಳ ಹೂಡಿಕೆ ಉತ್ತೇಜಿಸಲಿದೆ. ತೆರಿಗೆ ಮೇಲೆ ತೆರಿಗೆಯ ಹೊರೆಗಳನ್ನು ದೂರ ಮಾಡಲಿದೆ. ದಿನಬಳಕೆಯ ಅವಶ್ಯಕ ಸರಕುಗಳ ಬೆಲೆ ತಗ್ಗಿಸಿ ಜನಸಾಮಾನ್ಯರಿಗೆ ನೆಮ್ಮದಿಯನ್ನೂ ನೀಡಲಿದೆ.

ಗ್ರಾಹಕರಿಗೆ ಲಾಭ

ವಿವಿಧ ಬಗೆಯ ಸರಕುಗಳ ಮೇಲಿನ ತೆರಿಗೆ ಭಾರ ಕಡಿಮೆಯಾಗಲಿರುವುದು ಗ್ರಾಹಕರ ಪಾಲಿನ ಅತಿದೊಡ್ಡ ಗೆಲುವಾಗಿರಲಿದೆ. ಸದ್ಯಕ್ಕೆ ವಿವಿಧ ತೆರಿಗೆ ದರಗಳ ಒಟ್ಟಾರೆ ಹೊರೆಯು ಶೇ 25 ರಿಂದ ಶೇ 30ರಷ್ಟು ಇದೆ.

ಪ್ರತಿಯೊಂದು ಕುಟುಂಬ ಬಳಸುವ ಆಹಾರ ಧಾನ್ಯ, ಬೇಳೆಕಾಳು, ಮೈದಾ, ಕಡಲೆ ಹಿಟ್ಟು, ಹಾಲು, ಉಪ್ಪು, ತರಕಾರಿ ಮತ್ತು ಹಣ್ಣುಗಳು ಅಗ್ಗವಾಗಲಿವೆ. ಜಿಎಸ್‌ಟಿ ವಿನಾಯಿತಿ ಕೊಟ್ಟ ಕಾರಣಕ್ಕೆ, ಇವುಗಳ ಬೆಲೆಗಳು ಸದ್ಯದ ಬೆಲೆಗಿಂತ ಶೇ 4 ರಿಂದ 5ರಷ್ಟು ಅಗ್ಗವಾಗಲಿವೆ.

ಹೊಸ ವ್ಯವಸ್ಥೆಯಲ್ಲಿ, ಸರಕುಗಳು ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರಗಳಿಗೆ ದೊರೆಯಲಿವೆ. ಇದು ಆರ್ಥಿಕ ಚಟುವಟಿಕೆಗಳು ಗರಿಗೆದರಲು ತಕ್ಷಣ ಉತ್ತೇಜನ ನೀಡಲಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 1 ರಿಂದ ಶೇ 2ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚುವುದರಿಂದ ವಹಿವಾಟಿನ ಪ್ರಮಾಣ ಏರಿಕೆ ಕಾಣಲಿದೆ. ತೆರಿಗೆ ತಪ್ಪಿಸುವ ಪ್ರವೃತ್ತಿಯೂ ಕಡಿಮೆಯಾಗಲಿದೆ. ತೆರಿಗೆ ಸ್ವರೂಪದಲ್ಲಿನ ಪಾರದರ್ಶಕತೆಯು ಒಟ್ಟಾರೆ ತೆರಿಗೆ ಆಡಳಿತವನ್ನು ಸುಲಲಿತಗೊಳಿಸಲಿದೆ.

ಕುಟುಂಬದ ಬಜೆಟ್‌ಗೆ ಭಾರ

ಬಹುತೇಕ ಸರಕುಗಳ ಬೆಲೆಗಳು ಅಗ್ಗವಾಗಲಿದ್ದರೂ, ಗ್ರಾಹಕರ ವೆಚ್ಚ ಮಾಡುವ ಸಾಮರ್ಥ್ಯ ಆಧರಿಸಿ ಕೆಲ ಸರಕು ಮತ್ತು ಸೇವೆಗಳಿಗೆ ಬಳಕೆದಾರರು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಇದು ಕುಟುಂಬದ ತಿಂಗಳ ಬಜೆಟ್‌ ಮೇಲೂ ಕೆಲಮಟ್ಟಿಗೆ ಪರಿಣಾಮ ಬೀರಲಿದೆ.

ಹೋಟೆಲ್‌ ಉದ್ದಿಮೆ ಮೇಲೆ ಶೇ 12 ರಿಂದ ಶೇ 18ರಷ್ಟು ತೆರಿಗೆ ವಿಧಿಸಲಾಗಿದೆ. ಹೀಗಾಗಿ ವಿಹಾರಾರ್ಥ ಪಂಚತಾರಾ ಹೋಟೆಲ್‌ಗಳಲ್ಲಿ ರಜಾ ದಿನಗಳನ್ನು ಕಳೆಯುವುದು, ವಾತಾನುಕೂಲಿ (ಏ.ಸಿ) ಸೌಲಭ್ಯದ ರೆಸ್ಟೊರಂಟ್‌ಗಳಲ್ಲಿ ಊಟ ಮಾಡುವುದು ಗ್ರಾಹಕರ ಜೇಬಿಗೆ ಭಾರವಾಗಲಿದೆ.

ಜೋಡಿಯೊಂದು ವಾರಾಂತ್ಯದಲ್ಲಿ ಪ್ಯಾಕೇಜ್‌ ಯೋಜನೆಯಡಿ ಮಾಡುತ್ತಿದ್ದ ₹ 10ರಿಂದ 12 ಸಾವಿರ ವೆಚ್ಚವು ಇನ್ನು ಮುಂದೆ ಗರಿಷ್ಠ  ₹20 ಸಾವಿರದವರೆಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಆತಿಥ್ಯ ಮತ್ತು ಪ್ರವಾಸೋದ್ಯಮ ವಹಿವಾಟಿಗೆ ಜಿಎಸ್‌ಟಿ ಭಾರಿ ಹೊಡೆತ ನೀಡಲಿದೆ ಎನ್ನುವ ಕಾರಣಕ್ಕೆ ಬೆಂಗಳೂರಿನಲ್ಲಿ ಅನೇಕ ರೆಸ್ಟೊರಂಟ್‌ಗಳು ಕಳೆದ ತಿಂಗಳು ಬಂದ್‌ ಕೂಡ ಆಚರಿಸಿದ್ದವು.

ಆತಿಥ್ಯ ಉದ್ದಿಮೆಗೆ ಮಾರಕ

ವಾಹನ ತಯಾರಿಕೆ, ಹೋಟೆಲ್‌ ಮತ್ತು ವಿಮೆ ಉದ್ಯಮಗಳ ಪಾಲಿಗೆ ಜಿಎಸ್‌ಟಿ ದರಗಳು ದುಬಾರಿಯಾಗಿ ಪರಿಣಮಿಸಿವೆ. ಮೋಟಾರ್‌ ವಾಹನಗಳು ಅದರಲ್ಲೂ ವಿಶೇಷವಾಗಿ ವಿದ್ಯುತ್‌ ಮತ್ತು ಇಂಧನ ಚಾಲಿತ ಹೈಬ್ರಿಡ್‌ ವಾಹನ, ಪ್ರವಾಸೋದ್ಯಮ ಮತ್ತು ಹೋಟೆಲ್‌ಗಳ ಮೇಲೆ ವಿಧಿಸಿರುವ ತೆರಿಗೆಗಳು ವಹಿವಾಟಿಗೆ ಧಕ್ಕೆ ಒದಗಿಸಲಿವೆ ಎನ್ನುವ ಆತಂಕ ದೇಶದ ಪ್ರಮುಖ ಉದ್ಯಮ ವಲಯದಿಂದ ವ್ಯಕ್ತವಾಗಿದೆ.

ಹೈಬ್ರಿಡ್‌ ವಾಹನಗಳನ್ನು ಗರಿಷ್ಠ ಮಟ್ಟದ ತೆರಿಗೆ ಮತ್ತು ಶೇ15ರಷ್ಟು ಸೆಸ್‌ ವ್ಯಾಪ್ತಿಗೆ ತರಲಾಗಿದೆ. ವಾಹನ ತಯಾರಿಕಾ ಉದ್ಯಮವು ಈ ತೆರಿಗೆ ದರ ವಿರುದ್ಧ ಒಕ್ಕೊರಲಿನಿಂದ ದನಿ ಎತ್ತಿದೆ.

ಸರ್ಕಾರದ ‘ಚಿಂತಕರ ಚಾವಡಿ’ಯಾಗಿರುವ ನೀತಿ ಆಯೋಗವು ಕೂಡ ಇಂತಹ ವಾಹನಗಳ ಮೇಲಿನ ಗರಿಷ್ಠ ತೆರಿಗೆಗೆ ವಿರೋಧ ದಾಖಲಿಸಿದೆ. ಹೈಬ್ರಿಡ್‌ ಮತ್ತು ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆಗೆ ಉತ್ತೇಜನ ನೀಡುವ ಸರ್ಕಾರ, ಇನ್ನೊಂದೆಡೆ ಅವುಗಳ ಮೇಲೆ ಗರಿಷ್ಠ ಮಟ್ಟದ ತೆರಿಗೆ ವಿಧಿಸಲು ಹೊರಟಿದೆ.

ಪಂಚತಾರಾ ಹೋಟೆಲ್‌ ಮತ್ತು ಪ್ರತಿ ದಿನ ₹5,000ದಂತೆ ಕೋಣೆ ಬಾಡಿಗೆ ವಿಧಿಸುವ ಹೋಟೆಲ್‌ಗಳನ್ನು ಗರಿಷ್ಠ ಮಟ್ಟದ ಸೇವಾ ತೆರಿಗೆ ವ್ಯಾಪ್ತಿಗೆ ತಂದಿರುವುದನ್ನು ಹೋಟೆಲ್‌ ಉದ್ಯಮವು ವಿರೋಧಿಸಿದೆ.

ದೇಶದಲ್ಲಿನ ವಿಮೆ ಸೌಲಭ್ಯ ವಿಸ್ತರಣೆಯು ಜಾಗತಿಕ  (ಶೇ 6.2) ಸರಾಸರಿಗಿಂತ  ಕಡಿಮೆ (ಶೇ 3.5) ಇದೆ. ಇಂತಹ ಸಂದರ್ಭದಲ್ಲಿ ವಿಮೆ ವಹಿವಾಟಿನ ಮೇಲಿನ ತೆರಿಗೆಯನ್ನು ಶೇ 15 ರಿಂದ ಶೇ 18ಕ್ಕೆ ಹೆಚ್ಚಿಸುವುದರಿಂದ ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗಲಿದೆ.

ವಿವಿಧ ವಲಯಗಳ ಮೇಲಾಗುವ ಪ್ರಭಾವ

ಬಾಡಿಗೆ ಟ್ಯಾಕ್ಸಿ:
ಓಲಾ, ಉಬರ್‌ ಬಾಡಿಗೆ ಟ್ಯಾಕ್ಸಿಗಳ ಸೇವೆ ಅಗ್ಗವಾಗಲಿವೆ. ತೆರಿಗೆ ದರ ಶೇ 6ರಿಂದ ಶೇ 5ಕ್ಕೆ ಇಳಿಯಲಿದೆ.

ಚಿನ್ನ: ಬೆಳ್ಳಿ ಮತ್ತು ವಜ್ರದ ಮೇಲೆ ಶೇ 3ರಷ್ಟು ತೆರಿಗೆ ವಿಧಿಸಲಾಗಿದೆ. ಸದ್ಯಕ್ಕೆ ಚಿನ್ನದ ಮೇಲೆ ಶೇ 1 ರಷ್ಟು ಅಬಕಾರಿ ಸುಂಕ ಮತ್ತು ಹಲವು ರಾಜ್ಯಗಳಲ್ಲಿ ಶೇ 1ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಇದೆ.  ಈಗ ಶೇ 3ರಷ್ಟು ಜಿಎಸ್‌ಟಿ ಕಾರಣಕ್ಕೆ ಚಿನ್ನ ಖರೀದಿ ತುಟ್ಟಿಯಾಗಲಿದೆ.

ವಿಮೆ: ಆರೋಗ್ಯ, ಕಾರ್‌ ವಿಮೆ ಕಂತುಗಳು ದುಬಾರಿಯಾಗಿ ಪರಿಣಮಿಸಲಿವೆ. ಸದ್ಯಕ್ಕೆ ಶೇ 15ರಷ್ಟು ಇರುವ ತೆರಿಗೆ ದರ ಶೇ 18ಕ್ಕೆ ಏರಲಿದೆ.

ಬ್ಯಾಂಕಿಂಗ್‌ ಸೇವೆ: ಹಣಕಾಸು ಮತ್ತು ಬ್ಯಾಂಕಿಂಗ್‌ನ ಹಲವಾರು ಸೇವೆಗಳು.

ಹೋಟೆಲ್‌ ಬುಕ್ಕಿಂಗ್‌: ಜನರು ಆಯ್ಕೆ ಮಾಡಿಕೊಳ್ಳುವ ಹೋಟೆಲ್‌ಗಳ ದರ್ಜೆ ಮತ್ತು ಅವುಗಳ ಒಂದು ದಿನದ ಬಾಡಿಗೆ ದರ ಆಧರಿಸಿ ತೆರಿಗೆ ದರ ನಿರ್ಧಾರವಾಗಲಿದೆ. ಕೋಣೆ ಬಾಡಿಗೆಯು ₹1000ಕ್ಕಿಂತ ಕಡಿಮೆ ಇದ್ದರೆ ತೆರಿಗೆ ವಿನಾಯಿತಿ ಇದೆ. ₹ 1,000 ದಿಂದ ₹ 2,500 ಇದ್ದರೆ ಶೇ 12, ₹2,500 ರಿಂದ  ₹5,000ಕ್ಕೆ ಶೇ 18 , ₹5000 ಕ್ಕಿಂತ ಹೆಚ್ಚಿನ ಬಾಡಿಗೆಯ ಪಂಚತಾರಾ ಹೋಟೆಲ್‌ಗಳಿಗೆ ಶೇ 28ರಷ್ಟು ತೆರಿಗೆ ಪಾವತಿಸಬೇಕು.

ರೆಸ್ಟೊರಂಟ್ಸ್‌: ಹೋಟೆಲ್‌ಗಳ ವಾರ್ಷಿಕ ವಹಿವಾಟು ಮತ್ತು ಏರ್‌ಕಂಡೀಷನ್‌ ಸೌಲಭ್ಯ ಆಧರಿಸಿ ತೆರಿಗೆ ದರ ನಿಗದಿಪಡಿಸಲಾಗಿದೆ. ವಾರ್ಷಿಕ ₹  50 ಲಕ್ಷಕ್ಕಿಂತ ಕಡಿಮೆ ವಹಿವಾಟು ನಡೆಸುವ ರೆಸ್ಟೊರಂಟ್‌ಗಳ ಮೇಲೆ ಶೇ 5, ಏ.ಸಿ. ಯೇತರ ರೆಸ್ಟೊರಂಟ್ಸ್‌ ಶೇ 12, ಮದ್ಯ ಸರಬರಾಜು ಮಾಡುವ ಏ.ಸಿ ಸೌಲಭ್ಯ ಇರುವ ರೆಸ್ಟೊರಂಟ್ಸ್‌ ಶೇ 18  ಮತ್ತು ಪಂಚತಾರಾ ಹೋಟೆಲ್‌ಗಳ ರೆಸ್ಟೊರಂಟ್‌ಗಳು ಶೇ 28ರ ತೆರಿಗೆ ವ್ಯಾಪ್ತಿಗೆ ಬರಲಿವೆ.

ಟೆಲಿಫೋನ್‌ ಬಿಲ್‌: ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಳಕೆಯ ಬಿಲ್‌ ಹೆಚ್ಚಳಗೊಳ್ಳಲಿದೆ. ಸದ್ಯಕ್ಕೆ ದೂರಸಂಪರ್ಕ ಸೇವೆಗಳ ಮೇಲೆ ಶೇ 15ರಷ್ಟು ತೆರಿಗೆ ಇದೆ. ಅದೀಗ ಶೇ 18ಕ್ಕೆ ಏರಿಕೆಯಾಗಲಿದೆ.

ಔಷಧಿಗಳು: ಮಲೇರಿಯಾ, ಕ್ಷಯ, ಮಧುಮೇಹ, ಎಚ್‌ಐವಿ ಸೋಂಕು ತಡೆಗೆ ಬಳಸುವ ಜೀವರಕ್ಷಕ ಔಷಧಿ– ಮಾತ್ರೆಗಳ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಿರುವುದರಿಂದ ಕೆಲ ಮಟ್ಟಿಗೆ ದುಬಾರಿಯಾಗಲಿವೆ.

ರಿಯಾಯಿತಿಗೆ ಒಳಪಡುವ ದಿನಬಳಕೆ ಸರಕುಗಳು

ಹಾಲು, ಮೊಸರು, ಪನೀರ್‌, ಗೋಧಿ, ಅಕ್ಕಿ ಮೆಟ್ರೊ ಪ್ರಯಾಣ, ಧಾರ್ಮಿಕ ಯಾತ್ರೆ, ಹಜ್‌ ಯಾತ್ರೆ ಶಿಕ್ಷಣ ಮತ್ತು ಆರೋಗ್ಯ ಸೇವೆ ದವಸ ಧಾನ್ಯ, ಮೊಟ್ಟೆ, ಮಾಂಸ

ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇರುವ ಉತ್ಪನ್ನಗಳು

ಪೆಟ್ರೋಲ್‌, ಡೀಸೆಲ್‌, ನೈಸರ್ಗಿಕ ಅನಿಲ, ವಿಮಾನ ಇಂಧನ, ಮದ್ಯ ಮತ್ತು ವಿದ್ಯುತ್‌ –ಈ ಸರಕುಗಳಿಗೆ ಸಂಬಂಧಿಸಿದಂತೆ ಸದ್ಯ ಜಾರಿಯಲ್ಲಿ ಇರುವ ವ್ಯಾಟ್‌ ಮತ್ತು  ಕೇಂದ್ರೀಯ ಅಬಕಾರಿ ಸುಂಕಗಳು ಮುಂದುವರೆಯಲಿವೆ.

ಜಿಎಸ್‌ಟಿಯ ವೈಶಿಷ್ಟ್ಯಗಳು

* ವರ್ಷಕ್ಕೆ  ₹ 20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.

* ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.

* ಸರಕು ಮತ್ತು ಸೇವೆಗಳ ತೆರಿಗೆ ದರಗಳು, ನಾಲ್ಕು ಹಂತಗಳಲ್ಲಿ (ಶೇ 5, 12, 18 ಮತ್ತು 28) ನಿಗದಿ.

* ವಿಲಾಸಿ ಸರಕು,  ತಂಪು ಪಾನೀಯ ಮತ್ತು  ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.

* ಜಿಎಸ್‌ಟಿ  ಗರಿಷ್ಠ ದರ ಶೇ 40ರಷ್ಟಕ್ಕೆ ನಿಗದಿ.

ಲಕ್ಷಣಗಳು

* ಹತ್ತಾರು ತೆರಿಗೆಗಳು ರದ್ದಾಗಿ ಒಂದೇ ಬಗೆಯ ತೆರಿಗೆ ವ್ಯವಸ್ಥೆ.

* ಸಂಕೀರ್ಣ ಸ್ವರೂಪದ ತೆರಿಗೆ ವ್ಯವಸ್ಥೆ ರದ್ದು.

* ವ್ಯಾಪಾರಿಗಳು ಮತ್ತು ಉದ್ಯಮಿಗಳ ತೆರಿಗೆ ವಂಚನೆಗೆ ಕೊನೆ .

* ತೆರಿಗೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳ.

* ಅಭಿವೃದ್ಧಿಗೆ ತೊಡಕಾಗಿದ್ದ ಸಂಕೀರ್ಣ ಸ್ವರೂಪದ ತೆರಿಗೆ ವ್ಯವಸ್ಥೆ ಸರಳ.

* ಸರಕುಗಳ ಸಾಗಣೆ ವೆಚ್ಚ ಇಳಿಕೆ

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry