ಚುನಾವಣೆಗೆ ಸಜ್ಜಾಗಿ: ಶಾಸಕರಿಗೆ ಸೂಚನೆ

7
ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಚುನಾವಣೆಗೆ ಸಜ್ಜಾಗಿ: ಶಾಸಕರಿಗೆ ಸೂಚನೆ

Published:
Updated:
ಚುನಾವಣೆಗೆ ಸಜ್ಜಾಗಿ: ಶಾಸಕರಿಗೆ ಸೂಚನೆ

ಬೆಂಗಳೂರು: ‘ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಬೆಂಗಳೂರಿನ ಕಡೆಗೆ ಶಾಸಕರು ತಲೆ ಹಾಕಕೂಡದು. ನಿಮ್ಮ ಕ್ಷೇತ್ರಗಳಿಗೆ ತೆರಳಿ ಜನರ ಅಹವಾಲುಗಳಿಗೆ ಸ್ಪಂದಿಸಿ, ಅವರ ಮನಸ್ಸು ಗೆಲ್ಲುವ ಕೆಲಸ ಮಾಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುವಂತೆ ಸ್ಪಷ್ಟ ಸಂದೇಶ ನೀಡಿದರು.

‘ಎಲ್ಲ ಶಾಸಕರು ತಕ್ಷಣವೇ ಬೂತ್‌ಮಟ್ಟದ ಸಮಿತಿ ರಚಿಸಬೇಕು. ಕ್ಷೇತ್ರದಲ್ಲಿಯೇ ಮೊಕ್ಕಾಂ ಮಾಡಿ  ತಳಮಟ್ಟದ ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸಬೇಕು. ಬೂತ್‌ ಮಟ್ಟದ ಸಮಿತಿ ರಚಿಸಿದ ಬಗ್ಗೆ  ಒಂದು ತಿಂಗಳ ಒಳಗೆ ವರದಿ ಕೊಡಬೇಕು’ ಎಂದೂ ನಿರ್ದೇಶನ ನೀಡಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಮಾಡಬೇಕು. ಶಾಸಕರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸಿಕೊಂಡು ಮುನ್ನಡೆಯಬೇಕು’ ಎಂದು ಸಲಹೆ ನೀಡಿದ್ದಾರೆ.

‘ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದನ್ನು  ಇನ್ನಷ್ಟು ಗಟ್ಟಿಗೊಳಿಸಲು ಶಾಸಕರು ಶ್ರಮಿಸಬೇಕು. ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ನನ್ನ ಗಮನಕ್ಕೆ ತನ್ನಿ’ ಎಂದೂ ಹೇಳಿದ್ದಾರೆ.

‘ಈಗಾಗಲೇ 50 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೆ ನಡೆಸಲಾಗಿದೆ. ಪಕ್ಷದ ಪರ ವಾತಾವರಣ ಇಲ್ಲದ ಕಡೆಗಳಲ್ಲಿ ವಿಶೇಷ ರಣತಂತ್ರ ರೂಪಿಸಲಾಗುತ್ತಿದೆ’ ಎಂದೂ ಅವರು ಹೇಳಿದ್ದಾರೆ.

‘ಅಲ್ಲಲ್ಲಿ ಮಳೆ ಆಗುತ್ತಿರುವುದರಿಂದ ಬರದ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತಿದೆ. ಆದರೂ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ಕಾಂಗ್ರೆಸ್ ಪಕ್ಷದ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು. ಎಐಸಿಸಿ ವರಿಷ್ಠರು ಜಿಲ್ಲೆಗಳಿಗೆ ಭೇಟಿ ನೀಡಿ, ಪಕ್ಷದ ಸಂಘಟನೆಗೆ ಒತ್ತು ನೀಡಲಿದ್ದಾರೆ’ ಎಂದೂ ತಿಳಿಸಿದ್ದಾರೆ.

ಸಚಿವ – ಶಾಸಕನ ಮಧ್ಯೆ ವಾಗ್ವಾದ

ಉಪನ್ಯಾಸಕರೊಬ್ಬರ ವರ್ಗಾವಣೆ ವಿಷಯ ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್ ಮತ್ತು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು. ಹುಣಸೂರು ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಲ್ಲಿ 150 ವಿದ್ಯಾರ್ಥಿಗಳಿದ್ದಾರೆ. ಆದರೂ ಕಾಲೇಜಿನ ಗಣಿತ ವಿಜ್ಞಾನ ಉಪನ್ಯಾಸಕ ವಿದ್ಯಾರ್ಥಿಗಳ ಕೊರತೆ ನೆಪ ಹೇಳಿ ಸಚಿವರ ಪ್ರಭಾವದಿಂದ ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ತೊಂದರೆಗೀಡಾದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಸಚಿವರ ಗಮನಕ್ಕೂ ತಂದಿದ್ದಾರೆ. ಆದರೂ ಉಪನ್ಯಾಸಕರ ಪರ ಸಚಿವರು ನಿಂತಿದ್ದಾರೆ ಎಂದು ದೂರಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಮುಖ್ಯಮಂತ್ರಿ ಮಧ್ಯಪ್ರವೇಶಿಸಿದರು. ಬಳಿಕ ಇಬ್ಬರ ವಾಗ್ವಾದ ತಣ್ಣಗಾಯಿತು.

ಕೃಷಿ ಸಾಲ ಮನ್ನಾಕ್ಕೆ ಶಾಸಕರ ಆಗ್ರಹ

ರೈತರ ಸಾಲ ಮನ್ನಾ ಮಾಡದೇ ಇದ್ದರೆ ಚುನಾವಣೆ ಎದುರಿಸುವುದು ಕಷ್ಟವಾಗಲಿದೆ. ಆ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಿ ಎಂದು ಹಲವು ಶಾಸಕರು ಸಭೆಯಲ್ಲಿ ಒತ್ತಾಯಿಸಿದ್ದಾರೆ. ಈ ಬೇಡಿಕೆಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡ ಮುಖ್ಯಮಂತ್ರಿ, ‘ಇನ್ನೂ ಸಮಯ ಇದೆ’ ಎಂದೂ ಪ್ರತಿಕ್ರಿಯಿಸಿದ್ದಾರೆ.

‘ಸಹಕಾರಿ ಸಂಘ ಮತ್ತು ಬ್ಯಾಂಕುಗಳಿಂದ ಸಾಲ ಪಡೆದಿರುವ ರೈತರ ಪ್ರಮಾಣ ಶೇ 22 ರಷ್ಟಿದೆ. ಉಳಿದವರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದವರು. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲಮನ್ನಾ ಮಾಡಿದರೆ, ಅದೇ ದಿನ ಸಹಕಾರಿ ಸಾಲ ಮನ್ನಾ ಮಾಡಲಾಗುವುದು’ ಎಂದೂ ಮುಖ್ಯಮಂತ್ರಿ ಪುನರುಚ್ಚರಿಸಿದ್ದಾರೆ. ‘ಕೇವಲ ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲ ಮನ್ನಾ ಮಾಡಿದರೆ ಹೆಚ್ಚಿನ ರೈತರಿಗೆ ಉಪಯೋಗ ಆಗುವುದಿಲ್ಲ’ ಎಂದೂ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry