ಕೋಚ್ ನೇಮಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಇಲ್ಲ: ಸಿಒಎ ನಿರ್ಧಾರ

7

ಕೋಚ್ ನೇಮಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಇಲ್ಲ: ಸಿಒಎ ನಿರ್ಧಾರ

Published:
Updated:
ಕೋಚ್ ನೇಮಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಇಲ್ಲ: ಸಿಒಎ ನಿರ್ಧಾರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ನೇಮಕಾತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬಿಸಿಸಿಐಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಯ ಮೂಲಗಳು ತಿಳಿಸಿವೆ.

‘ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರು ಇರುವ ಕ್ರಿಕೆಟ್ ಸಲಹಾ ಸಮಿತಿಯು ನಡೆಸಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಸಿಒಎ ಯಾವುದೇ ರೀತಿಯಲ್ಲಿ ಪಾತ್ರ ವಹಿಸುವುದಿಲ್ಲ’ ಎಂದು ತಿಳಿಸಿವೆ.

ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಒಪ್ಪಂದದ ಅವಧಿಯು ಚಾಂಪಿಯನ್ಸ್‌ ಟ್ರೋಫಿಯ ನಂತರ ಮುಗಿಯಲಿದೆ. ನೂತನ ಕೋಚ್ ಆಯ್ಕೆಯಾಗಿ ಬಿಸಿಸಿಐ ಹೋದ ತಿಂಗಳು ಅರ್ಜಿ ಆಹ್ವಾನಿಸಿತ್ತು.

ಅನಿಲ್ ಕುಂಬ್ಳೆ ಅವರೂ ಅರ್ಜಿ ಹಾಕಿದ್ದಾರೆ. ಹಿರಿಯ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ಲಾಲಚಂದ್ ರಜಪೂತ್ ಅವರೂ ಸ್ಪರ್ಧೆಯಲ್ಲಿದ್ದಾರೆ.

ಕಳೆದ 12 ತಿಂಗಳಲ್ಲಿ ಕುಂಬ್ಳೆ ಮಾರ್ಗದರ್ಶನದಲ್ಲಿ ತಂಡವು ಉತ್ತಮ ಸಾಧನೆ ಮಾಡಿದೆ. ಆದ್ದರಿಂದ ಅವರನ್ನೇ ಮುಂದುವರಿಸುವುದು ಸೂಕ್ತ ಎಂದು ಗುರುವಾರ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಅವರು ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರಿಗೆ ಪತ್ರ ಬರೆದಿದ್ದರು.  ಕುಂಬ್ಳೆ ಅವರನ್ನೇ ಮತ್ತೊಂದು ಅವಧಿಗೆ ಮುಂದುವರಿಸಲು ಸಿಒಎ ಮತ್ತು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಗೆ ಒಲವು ಇದೆ ಎನ್ನಲಾಗಿದೆ.

‘ಸಿಎಸಿಯೂ ಕುಂಬ್ಳೆ ಪರವಾಗಿದ್ದರೆ ಆಯ್ಕೆ ಪ್ರಕ್ರಿಯೆ, ಅರ್ಜಿ ಆಹ್ವಾನಗಳ ಅವಶ್ಯಕತೆಯಾದರೂ ಏನಿತ್ತು. ಅದರಲ್ಲೂ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಕೆಲವೇ ದಿನಗಳ ಮುನ್ನ ಅರ್ಜಿ ಕರೆದಿದ್ದು ಸೂಕ್ತವೇ. ಮಾರ್ಚ್‌ ಅಂತ್ಯದಲ್ಲಿ ಆಸ್ಟ್ರೇಲಿಯಾ ಎದುರಿನ ಸರಣಿ ಮುಗಿದಾಗಲೇ ಪ್ರಕ್ರಿಯೆ ನಡೆಸಬೇಕಿತ್ತು’ ಎಂದು ಕೆಲವು ಮೂಲಗಳು ಪ್ರಶ್ನಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry