ಹೈಟೆಕ್ ಆಯ್ತು ಸರ್ಕಾರಿ ಶಾಲೆ!

7
ಪ್ರಜಾವಾಣಿ ವರದಿಗೆ ಸ್ಪಂದಿಸಿದ ಒಸಾಟ್ ಸಂಸ್ಥೆ

ಹೈಟೆಕ್ ಆಯ್ತು ಸರ್ಕಾರಿ ಶಾಲೆ!

Published:
Updated:
ಹೈಟೆಕ್ ಆಯ್ತು ಸರ್ಕಾರಿ ಶಾಲೆ!

ಹೊಳಲ್ಕೆರೆ: ಬಿರುಕು ಬಿಟ್ಟ ಗೋಡೆಗಳು. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತಲೆಯ ಮೇಲೆ ಚಾವಣಿ ಕುಸಿದು ಬೀಳುವ ಆತಂಕ. ಶಿಥಿಲ ಕಟ್ಟಡವನ್ನು ನೆಲಸಮಗೊಳಿಸಿದ ನಂತರ ಮರದ ಕೆಳಗೆ ಕುಳಿತು ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು. ಮಳೆ, ಗಾಳಿ, ಬಿಸಿಲಿಗೆ ಜಗ್ಗದೆ ಪಾಠ ಮಾಡುತ್ತಿದ್ದ ಶಿಕ್ಷಕರು.

-ತಾಲ್ಲೂಕಿನ ಅಮೃತಾಪುರದ ಸರ್ಕಾರಿ ಶಾಲೆಯ ಒಂದೂವರೆ ವರ್ಷದ ಹಿಂದಿನ ಚಿತ್ರಣವಿದು.

ಆದರೆ ಈಗ ಇಲ್ಲಿ ಅಂತಹ ಪರಿಸ್ಥಿತಿ ಇಲ್ಲ. ಶಾಲೆಯ ಸ್ವರೂಪವೇ ಬದಲಾಗಿದೆ. ಪಾಳು ಕೊಠಡಿಗಳಿದ್ದ ಜಾಗದಲ್ಲಿ 4 ಕೊಠಡಿಗಳ ಹೈಟೆಕ್ ಕಟ್ಟಡ ತಲೆಯೆತ್ತಿ ನಿಂತಿದೆ. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಗೊಂಡಿದೆ. ಜೂನ್ 10ರಂದು ಕಟ್ಟಡ ಉದ್ಘಾಟನೆ ಆಗಲಿದೆ.

ಪ್ರಜಾವಾಣಿ ವರದಿಗೆ ಸ್ಪಂದನೆ: 2015ರ ನ. 6ರಂದು ‘ಪ್ರಜಾವಾಣಿ’ಯಲ್ಲಿ ‘ಮರದ ಕೆಳಗೆ ಪಾಠ, ತಪ್ಪಲಿಲ್ಲ ವಿದ್ಯಾರ್ಥಿಗಳಿಗೆ ಸಂಕಟ’ ಎಂಬ ಶೀರ್ಷಿಕೆಯ ಸುದ್ದಿ ಪ್ರಕಟವಾಗಿತ್ತು. ಸುದ್ದಿಯಲ್ಲಿ ಇಲ್ಲಿನ ಶಾಲೆಯ ದಯನೀಯ ಸ್ಥಿತಿ ಬಿಚ್ಚಿಡಲಾಗಿತ್ತು. ಪತ್ರಿಕೆಯಲ್ಲಿ ಸುದ್ದಿ ನೋಡಿದ ಅಮೆರಿಕದ ಒಸಾಟ್ (OSAAT-One Time At A School)  ಸ್ವಯಂಸೇವಾ ಸಂಸ್ಥೆ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಮುಂದಾಯಿತು. ಸಂಸ್ಥೆಯ ಸದಸ್ಯರು ಗ್ರಾಮಕ್ಕೆ ಭೇಟಿ ನೀಡಿ ಶಾಲೆ ಸ್ಥಿತಿಗತಿಯ ಪರಿಶೀಲನೆ ನಡೆಸಿದರು.

2017ರ ಫೆಬ್ರುವರಿಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಂದರ ಕಟ್ಟಡ ಹಾಗೂ ಶೌಚಾಲಯ ನಿರ್ಮಾಣವಾಗಿವೆ.

ಒಸಾಟ್– ಶಿಕ್ಷಣ ಕ್ಷೇತ್ರದ ಓಯಸಿಸ್: ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ಬಜಗೋಳಿಯ ವಾದಿರಾಜ ಭಟ್ 2003ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಒಸಾಟ್ ಸಂಸ್ಥೆ ಹುಟ್ಟು ಹಾಕಿದ್ದರು. ದೇಶದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರ ಎಂದು ಅರಿತಿದ್ದ ಅವರು ಗ್ರಾಮೀಣ ಶಾಲೆಗಳ ಪುನಶ್ಚೇತನಕ್ಕೆ ಮುಂದಾದರು.

‘1994ರಿಂದ 2005ರವರೆಗೆ ನಾನು ಮತ್ತು ನನ್ನ ಗೆಳೆಯರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದೆವು. ನಮಗೆ ಜನ್ಮ, ಅನ್ನ, ಅಕ್ಷರ ನೀಡಿದ ತಾಯ್ನಾಡಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆ ಹುಟ್ಟು ಹಾಕಿದೆವು. ನಮ್ಮ ದುಡಿಮೆಗೆ ಕಾರಣವಾದ ಶಿಕ್ಷಣ ಕ್ಷೇತ್ರಕ್ಕೆ ಒಂದಿಷ್ಟು ಹಣ ಖರ್ಚು ಮಾಡಬೇಕು ಎಂದು ತೀರ್ಮಾನಿಸಿದೆವು.

ಅಮೆರಿಕದಲ್ಲಿ ನಾಟ್ಯರಾಗ ಎಂಬ ತಂಡದಿಂದ ಕಲಾ ಪ್ರದರ್ಶನ ಏರ್ಪಡಿಸಿ, ಅದರಿಂದ ಬಂದ ಹಣವನ್ನು ಭಾರತದ ಶಾಲೆಗಳ ಅಭಿವೃದ್ಧಿಗೆ ಬಳಸುತ್ತೇವೆ.  ಸ್ಯಾನ್‌ಡಿಸ್ಕ್, ಶೋರ್ಟೆಲ್, ಜಿ.ಕೆ.ನೆಕ್ಸಸ್‌ ಕಂಪೆನಿಗಳು ಆರ್ಥಿಕ ನೆರವು ನೀಡುತ್ತವೆ’ ಎನ್ನುತ್ತಾರೆ ವಾದಿರಾಜ ಭಟ್.

‘ಕೇವಲ ನಾಲ್ಕು ಜನರಿಂದ ಸಂಸ್ಥೆ ಆರಂಭಿಸಲಾಯಿತು. ಈಗ ಅಮೆರಿಕ ಹಾಗೂ ಭಾರತ– ಎರಡೂ ಕಡೆ ಸಂಸ್ಥೆ ಕೆಲಸ ಮಾಡುತ್ತಿದೆ.

64 ಕೊಠಡಿ ನಿರ್ಮಾಣ: ಒಸಾಟ್ ಸಂಸ್ಥೆಯಿಂದ ಇದುವರೆಗೆ 18 ಶಾಲೆಗಳಲ್ಲಿ 64 ಬೋಧನಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಬಜಗೋಳಿ, ಬನ್ನೇರುಘಟ್ಟ, ಭದ್ರಾವತಿಯ ಬೊಮ್ಮನಕಟ್ಟೆ, ಮೈಸೂರಿನ ನಜರ್‌ಬಾದ್, ಕೋಲೇನಹಳ್ಳಿ, ಮುರುಕವಾಡ, ತರಿಕೆರೆ ತಾಲ್ಲೂಕಿನ ಶಾನುಭೋಗನ ಹಳ್ಳಿ, ವಿಜಯಪುರ ಜಿಲ್ಲೆಯ ಮುಟ್ಟಗಿ, ಕೊಟ್ಟಲಗಿ, ಮಾಲೂರು ತಾಲ್ಲೂಕಿನ ಯಶವಂತಪುರ, ದೊಡ್ಡ ಕಲ್ಲಹಳ್ಳಿ, ನೀಲಕಂಠ ಅಗ್ರಹಾರ, ಚನ್ನರಾಯ ಪಟ್ಟಣ ತಾಲ್ಲೂಕಿನ ಜಂಬೂರು, ಕುರುವಿನ ಕೊಪ್ಪ, ಹಾಗೂ ಹೊಳಲ್ಕೆರೆ ತಾಲ್ಲೂಕಿನ ಅಮೃತಾಪುರದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದೆ.ಕೆಲವು ಕಡೆ ಶೌಚಾಲಯ, ಗ್ರಂಥಾಲಯ, ಅಡುಗೆಮನೆ, ಶಿಕ್ಷಕರ ಕೊಠಡಿ, ಕಾಂಪೌಂಡ್‌ಗಳನ್ನು ನಿರ್ಮಿಸಲಾಗಿದೆ. ಪೀಠೋಪಕರಣಗಳನ್ನು ಒದಗಿಸಲಾಗಿದೆ.

ಸರ್ಕಾರಕ್ಕೆ ಸಲಹೆ: ‘ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಗಮನ ಹರಿಸಬೇಕು. ಸುಸಜ್ಜಿತ ಕೊಠಡಿ, ಶೌಚಾಲಯ, ಅಗತ್ಯ ಶಿಕ್ಷಕರನ್ನು ಒದಗಿಸಬೇಕು. ನಮ್ಮ ಅಭಿಯಾನ ಮುಂದುವರಿಯುತ್ತದೆ. ದುಸ್ಥಿತಿಯಲ್ಲಿರುವ ಶಾಲೆಗಳನ್ನು ಗುರುತಿಸಿ ಕಟ್ಟಡ ನಿರ್ಮಿಸಿಕೊಡುತ್ತೇವೆ. ನಮಗೆ ಜಾಗ, ಕಾಂಪೌಂಡ್, ನೀರಿನ ವ್ಯವಸ್ಥೆ ಮಾಡಿಕೊಟ್ಟರೆ ಅನುಕೂಲ ಆಗುತ್ತದೆ ಎನ್ನುತ್ತಾರೆ’ ವಾದಿರಾಜ ಭಟ್.

‘ಪ್ರಜಾವಾಣಿಗೆ ಚಿರಋಣಿ’

ಒಂದೂವರೆ ವರ್ಷದ ಹಿಂದೆ ಶಾಲೆಯ ಚಿತ್ರಣವೇ ಬೇರೆ ಇತ್ತು. ಮಕ್ಕಳು ಮರದ ಕೆಳಗೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇತ್ತು. ಪೋಷಕರು ತಮ್ಮ ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದರು. ಆಗ ಪ್ರಜಾವಾಣಿ ನಮ್ಮ ಶಾಲೆಯ ಬಗ್ಗೆ ಬೆಳಕು ಚೆಲ್ಲಿದ್ದರಿಂದ ಒಸಾಟ್ ಸಂಸ್ಥೆಯವರು ನಾಲ್ಕು ಕೊಠಡಿ ನಿರ್ಮಿಸಿದ್ದಾರೆ. ಈಗ ಶಾಲೆಯಲ್ಲಿ 95 ವಿದ್ಯಾರ್ಥಿಗಳು ಓದುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ‘ಪ್ರಜಾವಾಣಿ’ ಹಾಗೂ ಒಸಾಟ್ ಸಂಸ್ಥೆಗೆ ಋಣಿ ಆಗಿರುತ್ತಾರೆ ಎಂದು ಮುಖ್ಯ ಶಿಕ್ಷಕ ಸಿದ್ದಪ್ಪ ಭಾವನಾತ್ಮಕವಾಗಿ ಹೇಳುತ್ತಾರೆ.

–ಸಾಂತೇನಹಳ್ಳಿ ಕಾಂತರಾಜ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry