ಆಸ್ಟ್ರೇಲಿಯಾಕ್ಕೆ ಮಹತ್ವದ ಹೋರಾಟ

7
ಇಂದು ಇಂಗ್ಲೆಂಡ್‌ ವಿರುದ್ಧ ಪಂದ್ಯ; ರೂಟ್‌, ಅಲೆಕ್ಸ್‌ ಹೇಲ್ಸ್‌ ಆಕರ್ಷಣೆ

ಆಸ್ಟ್ರೇಲಿಯಾಕ್ಕೆ ಮಹತ್ವದ ಹೋರಾಟ

Published:
Updated:
ಆಸ್ಟ್ರೇಲಿಯಾಕ್ಕೆ ಮಹತ್ವದ ಹೋರಾಟ

ಬರ್ಮಿಂಗ್‌ಹ್ಯಾಮ್‌:  ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ತಮ್ಮ ಅಂತಿಮ ಪಂದ್ಯದಲ್ಲಿ ಶನಿವಾರ ಮುಖಾಮುಖಿಯಾಗಲಿವೆ.

ಕ್ರಿಕೆಟ್‌ ಲೋಕದ ಬಲಿಷ್ಠ ತಂಡಗಳ ಈ ಹೋರಾಟಕ್ಕೆ ಎಜ್‌ಬಾಸ್ಟನ್‌ ಅಂಗಳದಲ್ಲಿ ವೇದಿಕೆ ಸಿದ್ಧಗೊಂಡಿದೆ. ಸೆಮಿಫೈನಲ್‌ ಪ್ರವೇಶಿಸುವ ಕನಸು ಹೊತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಈ ಹಣಾಹಣಿ ಮಹತ್ವದ್ದೆನಿಸಿದೆ.

ತಾನಾಡಿರುವ ಎರಡೂ ಪಂದ್ಯಗಳಲ್ಲೂ ಗೆದ್ದಿರುವ ಇಂಗ್ಲೆಂಡ್‌ ಈಗಾಗಲೇ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದು, ಅಂತಿಮ ಪಂದ್ಯದಲ್ಲೂ ಎದುರಾಳಿಗಳನ್ನು ಹಣಿದು ಅಜೇಯ ವಾಗಿ ಗುಂಪು ಹಂತದ ಹೋರಾಟ ಮುಗಿಸುವ ಲೆಕ್ಕಾಚಾರ ಹೊಂದಿದೆ.

ಆಸ್ಟ್ರೇಲಿಯಾ ತಂಡ ಆಡಿರುವ ಎರಡೂ ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಸ್ಮಿತ್‌ ಬಳಗದ ಖಾತೆಯಲ್ಲಿ ಎರಡು ಪಾಯಿಂಟ್ಸ್‌ ಇದ್ದು ಆಂಗ್ಲರ ನಾಡಿನ ವಿರುದ್ಧ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ಟೂರ್ನಿಯಿಂದಲೇ ಹೊರ ಬೀಳಲಿದೆ. 

ಕಾಂಗರೂಗಳ ನಾಡಿನ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಡೇವಿಡ್‌ ವಾರ್ನರ್‌, ಆ್ಯರನ್‌ ಫಿಂಚ್‌ ಮತ್ತು ನಾಯಕ ಸ್ಮಿತ್‌ ಅವರು ಅಗ್ರ ಕ್ರಮಾಂಕ ದಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ಐಪಿಎಲ್‌ ಹತ್ತನೇ ಆವೃತ್ತಿಯಲ್ಲಿ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದ್ದ ವಾರ್ನರ್‌ ಮತ್ತು ಫಿಂಚ್‌ ಅವರು ತಂಡಕ್ಕೆ ಸ್ಫೋಟಕ ಆರಂಭ ನೀಡಬಲ್ಲ ಸಮರ್ಥರಾಗಿದ್ದಾರೆ. ಸ್ಮಿತ್‌ ಕೂಡ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಬಲ್ಲರು. ಮೊಸಸ್‌ ಹೆನ್ರಿಕ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಟ್ರಾವಿಸ್‌ ಹೆಡ್‌ ಮತ್ತು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ವೇಡ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಬೌಲಿಂಗ್‌ನಲ್ಲೂ ಆಸ್ಟ್ರೇಲಿಯಾ ಶಕ್ತಿಯುತವಾಗಿದೆ. ಮಿಷೆಲ್‌ ಸ್ಟಾರ್ಕ್‌, ಜೋಶ್‌ ಹ್ಯಾಜಲ್‌ವುಡ್‌ ಮತ್ತು ಪ್ಯಾಟ್‌ ಕಮಿನ್ಸ್‌ ಅವರು ವೇಗದ ವಿಭಾಗದ ಆಧಾರ ಸ್ತಂಭಗಳಾಗಿದ್ದಾರೆ.

ಎಡಗೈ ವೇಗಿ ಸ್ಟಾರ್ಕ್‌, ಬಾಂಗ್ಲಾ ದೇಶ ವಿರುದ್ಧದ ಹಿಂದಿನ ಪಂದ್ಯದಲ್ಲಿ 4 ವಿಕೆಟ್‌ ಪಡೆದು ಮಿಂಚಿದ್ದರು. ಹ್ಯಾಜಲ್‌ವುಡ್‌ ಮತ್ತು ಕಮಿನ್ಸ್‌ ಕೂಡ ರನ್‌ ನಿಯಂತ್ರಿಸುವ  ಜೊತೆಗೆ ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು.

ಲೆಗ್‌ ಸ್ಪಿನ್ನರ್‌ ಆ್ಯಡಮ್‌ ಜಂಪಾ, ಹೆನ್ರಿಕ್ಸ್‌ ಮತ್ತು ಮ್ಯಾಕ್ಸ್‌ವೆಲ್‌ ಕೂಡ ಎದುರಾಳಿ ಬ್ಯಾಟ್ಸ್‌ಮನ್‌ಗಳ ರನ್‌ ಗಳಿಕೆಗೆ ಕಡಿವಾಣ ಹಾಕಬಲ್ಲರು.

‘ಹ್ಯಾಟ್ರಿಕ್‌’ ಜಯದ ಹಂಬಲ: ಎಯೊನ್‌ ಮಾರ್ಗನ್‌ ಸಾರಥ್ಯದ ಇಂಗ್ಲೆಂಡ್‌ ತಂಡ ‘ಹ್ಯಾಟ್ರಿಕ್‌’ ಗೆಲುವಿನ ಕನವರಿಕೆಯಲ್ಲಿದೆ.ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 305ರನ್‌ಗಳ ಗುರಿ ಬೆನ್ನಟ್ಟಿ ಗೆದ್ದಿದ್ದ ಮಾರ್ಗನ್‌ ಪಡೆ, ಎರಡನೇ ಪಂದ್ಯದಲ್ಲಿ 87ರನ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿತ್ತು.

ಈ ಎರಡೂ ಪಂದ್ಯಗಳಲ್ಲೂ ಆತಿಥೇಯ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳು ಪರಾಕ್ರಮ ಮೆರೆದಿದ್ದರು. ಆರಂಭಿಕ ಆಟಗಾರ ಜೇಸನ್‌ ರಾಯ್‌ ಅವರನ್ನು ಬಿಟ್ಟು ಉಳಿದೆಲ್ಲಾ ಬ್ಯಾಟ್ಸ್‌ ಮನ್‌ಗಳು  ಅಬ್ಬರಿಸಿದ್ದರು.

ಅಲೆಕ್ಸ್‌ ಹೇಲ್ಸ್‌ ಮತ್ತು ಜೋ ರೂಟ್‌ ಅವರು ಈ ಬಾರಿಯ ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು ಆರನೇ ಸ್ಥಾನಗಳಲ್ಲಿದ್ದಾರೆ. ಮಾರ್ಗನ್‌ ಅವರು ಎರಡು ಪಂದ್ಯಗಳಿಂದ 88ರನ್‌ ಕಲೆಹಾಕಿದ್ದಾರೆ.ಬೆನ್‌ ಸ್ಟೋಕ್ಸ್‌, ಜಾಸ್‌ ಬಟ್ಲರ್‌ ಮತ್ತು ಮೋಯಿನ್‌ ಅಲಿ ಅವರೂ  ಸ್ಫೋಟಕ ಆಟಕ್ಕೆ ಹೆಸರಾಗಿದ್ದು ಆಸ್ಟ್ರೇಲಿಯಾ ಬೌಲಿಂಗ್‌ ಶಕ್ತಿಗೆ ಪೆಟ್ಟು ನೀಡಲು ಕಾಯುತ್ತಿದ್ದಾರೆ.

ಬೌಲಿಂಗ್‌ನಲ್ಲೂ ಇಂಗ್ಲೆಂಡ್‌ ತಂಡ ಬಲಶಾಲಿಯಾಗಿದೆ. ಜೇಕ್‌ ಬಾಲ್‌, ಮಾರ್ಕ್‌ವುಡ್‌, ಲಿಯಾಮ್‌ ಫ್ಲಂಕೆಟ್‌, ಬೆನ್‌ ಸ್ಟೋಕ್ಸ್‌ ಮತ್ತು ಆದಿಲ್‌ ರಶೀದ್‌ ಅವರು ತವರಿನ ಅಂಗಳದಲ್ಲಿ ಕಾಂಗರೂಗಳ ನಾಡಿನ  ಬ್ಯಾಟ್ಸ್‌ಮನ್‌ಗಳ ಹೆಡೆಮುರಿಕಟ್ಟುವ ಉತ್ಸಾಹದಲ್ಲಿದ್ದಾರೆ.

ಆರಂಭ: ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry