ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗಾಕ್ಕರ ಕಿವಿಮಾತು ಗೆಲುವಿಗೆ ಪ್ರೇರಣೆ: ಮ್ಯಾಥ್ಯೂಸ್‌

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ನೆಟ್ಸ್‌ನಲ್ಲಿ ಮಾಜಿ ನಾಯಕ ಕುಮಾರ ಸಂಗಕ್ಕಾರ ನೀಡಿದ ಕೆಲವು ಅಮೂಲ್ಯ ಮಾಹಿತಿಗಳು ಭಾರತದ ವಿರುದ್ಧ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಲು ಪ್ರೇರಣೆಯಾದವು ಎಂದು ಶ್ರೀಲಂಕಾ ತಂಡದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್‌ ಹೇಳಿದ್ದಾರೆ.

ಸಂಗಕ್ಕಾರ ಇಂಗ್ಲೆಂಡ್‌ನ ಕೌಂಟಿ ಪಂದ್ಯಗಳಲ್ಲಿ ಸರೆ ತಂಡದ ಪರವಾಗಿ ಆಡುತ್ತಿದ್ದು ಚಾಂಪಿಯನ್ಸ್‌ ಟ್ರೋಫಿಯ ಗುರುವಾರದ ಪಂದ್ಯಕ್ಕೂ ಮುನ್ನ ಮ್ಯಾಥ್ಯೂಸ್ ಬಳಗದ ಜೊತೆ ಕೆಲ ಕಾಲ ಕಳೆದಿದ್ದರು.

ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಸಂಗಕ್ಕಾರ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಮ್ಯಾಥ್ಯೂಸ್‌ ‘ತಂಡದ ಆಟಗಾರರಿಗೆ ಸಂಗಕ್ಕಾರ ಮಹತ್ವದ ಮಾಹಿತಿಗಳನ್ನು ನೀಡಿದ್ದರು. ಇಂಗ್ಲೆಂಡ್ ನೆಲದಲ್ಲಿ ಪ್ರಭಾವಿ ಆಟ ಆಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದರು’ ಎಂದರು.

‘ಅವರು ನೀಡಿದ ಸಲಹೆಗಳು ಅಂಗಳದಲ್ಲಿ ನೆರವಿಗೆ ಬಂದವು. ಅವರ ಜೊತೆ ಹೆಚ್ಚು ಸಮಯ ಮಾತನಾಡಿದ್ದ ಕುಶಾಲ್ ಮೆಂಡಿಸ್‌ ಪಂದ್ಯದಲ್ಲಿ 89 ರನ್ ಸಿಡಿಸಿದರು’ ಎಂದು ಮ್ಯಾಥ್ಯೂಸ್ ಹೇಳಿದರು.

‘ಭಾರತದ ವಿರುದ್ಧದ ನಮ್ಮ ಗೆಲುವು ಯಾರಿಗೂ ನಿರೀಕ್ಷಿತವಾಗಿರಲಿಕ್ಕಿಲ್ಲ. ಜನರು ನಮ್ಮ ತಂಡದ ಬಗ್ಗೆ ಏನು ಅಂದುಕೊಂಡಿದ್ದಾರೆ, ಎದುರಾಳಿಗಳು ನಮ್ಮನ್ನು ಯಾವ ರೀತಿ ನೋಡುತ್ತಾರೆ ಇತ್ಯಾದಿ ವಿಷಯಗಳ ಬಗ್ಗೆ ನಾವು ಯೋಚಿಸಲಿಲ್ಲ’ ಎಂದು ಹೇಳಿದ ಮ್ಯಾಥ್ಯೂಸ್‌ ‘ಗಾಯದ ಸಮಸ್ಯೆ, ನಿರಂತರ ಸೋಲು ಮತ್ತಿತರ ಸಮಸ್ಯೆಗಳಿಗೆ ಸಿಲುಕಿದ್ದ ತಂಡಕ್ಕೆ ಈ ಜಯ ಉತ್ತೇಜನ ನೀಡಿದೆ’ ಎಂದರು. 

ಇತ್ತೀಚೆಗೆ ಸಂಭವಿಸಿದ ಭಾರಿ ನೆರೆಗೆ ನೂರಾರು ಜನರು ಜೀವ ಕಳೆದುಕೊಂಡ ಕಾರಣ ದುಃಖದಲ್ಲಿರುವ ಶ್ರೀಲಂಕನ್ನರಿಗೆ ಈ ಜಯ ಸಮಾಧಾನ ತಂದಿರಲೂಬಹುದು ಎಂದು ಕೂಡ ಅವರು ಅಭಿಪ್ರಾಯಪಟ್ಟರು.

ಚೆನ್ನಾಗಿ ಆಡಿದರೂ ಸೋತೆವು
ನಾವು ಉತ್ತಮ ಮೊತ್ತ ಕಲೆ ಹಾಕಿದ್ದೆವು. ಬೌಲರ್‌ಗಳು ಚೆನ್ನಾಗಿ ಬೌಲಿಂಗ್ ಮಾಡಿದ್ದರು. ಆದರೆ ಶ್ರೀಲಂಕಾ ಆಟಗಾರರು ನಮ್ಮನ್ನು ಮೀರಿಸುವಂತೆ ಆಡಿ, ಜಯ ಕಸಿದುಕೊಂಡರು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.

‘ನಮ್ಮವರನ್ನು ಟೀಕಿಸುವುದಕ್ಕಿಂತ ಎದುರಾಳಿಗಳನ್ನು ಅಭಿನಂದಿಸಿ ಮುಂದಿನ ಪಂದ್ಯಕ್ಕಾಗಿ ಸಿದ್ಧಗೊಳ್ಳುವುದು ಒಳ್ಳೆಯದು. ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಪಂದ್ಯ ನಮಗೆ ಅತ್ಯಂತ ಮಹತ್ವದ್ದು. ಗುರುವಾರ ಬೌಲರ್‌ಗಳು ಪರಿಣಾಮ ಬೀರದ ಕಾರಣ ಮುಂದಿನ ಪಂದ್ಯದಲ್ಲಿ ಹೆಚ್ಚು ರನ್‌ ಗಳಿಸಲು ಶ್ರಮಿಸಬೇಕಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT