ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಕಡ್ಡಾಯ: ಸುಪ್ರೀಂಕೋರ್ಟ್‌

7
ಆಧಾರ್ ನೋಂದಣಿ ಮಾಡಿಸದವರಿಗೆ ತಾತ್ಕಾಲಿಕ ವಿನಾಯಿತಿ

ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಕಡ್ಡಾಯ: ಸುಪ್ರೀಂಕೋರ್ಟ್‌

Published:
Updated:
ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಕಡ್ಡಾಯ: ಸುಪ್ರೀಂಕೋರ್ಟ್‌

ನವದೆಹಲಿ: ಪ್ಯಾನ್‌ ಕಾರ್ಡ್‌ಗೆ ಅರ್ಜಿ  ಮತ್ತು ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ (ಐಟಿಆರ್‌) ಸಲ್ಲಿಸುವಾಗ ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಎತ್ತಿಹಿಡಿದಿದೆ.

ಆದರೆ,  ಆಧಾರ್‌ ಸಂಖ್ಯೆ ಇಲ್ಲದವರಿಗೆ  ಇದರಿಂದ  ತಾತ್ಕಾಲಿಕ ವಿನಾಯಿತಿ ನೀಡಿದೆ. ಆಧಾರ್‌ ಸಂಖ್ಯೆ ಜೊತೆಗೆ ತಳಕುಹಾಕಿಕೊಂಡಿರುವ ಖಾಸಗಿತನ ಹಕ್ಕುಗಳಿಗೆ ಸಂಬಂಧಿಸಿದ ವಿಚಾರವನ್ನು ಸಂವಿಧಾನ ಪೀಠ ಇತ್ಯರ್ಥ ಪಡಿಸುವವರೆಗೆ ಸುಪ್ರೀಂ ಕೋರ್ಟ್‌, ಈ ಕಾನೂನಿಗೆ ಭಾಗಶಃ ತಡೆಯಾಜ್ಞೆ ನೀಡಿದೆ.

ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ,ಪ್ಯಾನ್‌ ಕಾರ್ಡ್‌ನೊಂದಿಗೆ ಆಧಾರ್‌  ಜೋಡಣೆ  ಕಡ್ಡಾಯವಾಗಲಿದೆ.   

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ ‘139ಎಎ’ಯು, ಪ್ಯಾನ್‌ ಕಾರ್ಡ್‌ ಪಡೆಯಲು ಮತ್ತು ಆದಾಯ ಲೆಕ್ಕಪತ್ರ ಸಲ್ಲಿಕೆಗೆ ಜುಲೈ 1ರಿಂದ ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸುತ್ತದೆ.

ಈ ಸಂಬಂಧ ಕಾನೂನು ರೂಪಿಸುವ ಸಂಸತ್ತಿನ ಅಧಿಕಾರವನ್ನು ಸಮರ್ಥಿಸಿಕೊಂಡ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರಿದ್ದ ನ್ಯಾಯಪೀಠ, ಆದಾಯ ತೆರಿಗೆ ಕಾಯ್ದೆ ಮತ್ತು ಆಧಾರ್‌ ಕಾಯ್ದೆಗಳ ಆಕ್ಷೇಪಾರ್ಹ ನಿಯಮಗಳ ನಡುವೆ ಯಾವುದೇ ವೈರುಧ್ಯ ಇಲ್ಲ’ ಎಂದು ಅಭಿಪ್ರಾಯ ಪಟ್ಟಿದೆ.

ಆಧಾರ್‌ಗೆ ಸಂಬಂಧಿಸಿದ ಖಾಸಗಿತನ ಹಕ್ಕಿನ ವಿಚಾರಗಳನ್ನು ಸಂವಿಧಾನ ಪೀಠ ಇತ್ಯರ್ಥ ಪಡಿಸುವವರೆಗೆ ಆಧಾರ್‌ ಸಂಖ್ಯೆ ಹೊಂದಿರದ ಪ್ಯಾನ್‌ ಕಾರ್ಡ್‌ಗಳನ್ನು ಅಸಿಂಧು ಎಂದು ಪರಿಗಣಿಸಬಾರದು ಎಂದೂ ಹೇಳಿದೆ.

ಹೊಸ ಕಾನೂನಿಗೆ ಭಾಗಶಃ ತಡೆಯಾಜ್ಞೆ ನೀಡಿರುವುದರಿಂದ ಹಿಂದಿನ ವಹಿವಾಟಿಗೆ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 

ಸೋರಿಕೆ ತಡೆಯಿರಿ: ಆಧಾರ್‌ ಯೋಜನೆಯಲ್ಲಿನ ಖಾಸಗಿತದ ಹಕ್ಕು ಮತ್ತು ಇತರ ವಿಚಾರಗಳನ್ನು ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಸಂವಿಧಾನ ಪೀಠವೇ ಅದನ್ನು ಇತ್ಯರ್ಥ ಪಡಿಸಲಿದೆ ಎಂದು ಹೇಳಿದೆ. ಆಧಾರ್‌ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ಆತಂಕಗಳ ಬಗ್ಗೆ ಪ್ರಸ್ತಾಪಿಸಿದ ನ್ಯಾಯಪೀಠ, ದತ್ತಾಂಶಗಳು ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಆಧಾರ್‌–ಪ್ಯಾನ್‌ ಜೋಡಣೆ ಹೇಗೆ?

*ಆದಾಯ ತೆರಿಗೆ ಇಲಾಖೆಯ ಇ–ಫೈಲಿಂಗ್‌ ವೆಬ್‌ಸೈಟ್‌ಗೆ ಭೇಟಿ ನೀಡಿ, ‘ಲಿಂಕ್‌–ಆಧಾರ್‌’ ಆಯ್ಕೆ ಒತ್ತಿ

*ಪ್ಯಾನ್‌ ಸಂಖ್ಯೆ ಮತ್ತು ಆಧಾರ್‌ ಸಂಖ್ಯೆ ನೀಡಿ

*ಹೆಸರು ಬದಲಾವಣೆ ಅಥವಾ ಅಕ್ಷರ ದೋಷ ಇದ್ದರೆ, ಆಧಾರ್‌ ವೆಬ್‌ಸೈಟ್‌ಗೆ ಲಾಗ್‌ ಇನ್‌ ಆಗಿ. ಪ್ಯಾನ್‌ ಕಾರ್ಡ್‌ನ ಸ್ಕ್ಯಾನ್‌  ಮಾಡಿದ ಪ್ರತಿಯನ್ನು ಅಪ್‌ಲೋಡ್‌ ಮಾಡಿ, ಹೆಸರು ಬದಲಾವಣೆಗೆ ಮನವಿ ಮಾಡಿ

*ಹೊಸ ಪ್ಯಾನ್‌ ಕಾರ್ಡ್‌ಗೆ ಅರ್ಜಿ ಹಾಕುವಾಗ ಅರ್ಜಿಯಲ್ಲಿ ಆಧಾರ್‌ ಸಂಖ್ಯೆ ನಮೂದಿಸಿಯೂ ಜೋಡಣೆ ಮಾಡಬಹುದು

*ಎಸ್‌ಎಂಎಸ್‌ ಮೂಲಕವೂ ಜೋಡಣೆ ಮಾಡಬಹುದು (UIDPAN<ಆಧಾರ್‌ಸಂಖ್ಯೆ><ಪ್ಯಾನ್‌ ಸಂಖ್ಯೆ>ಬರೆದು 567678 ಅಥವಾ 56161 ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸಬೇಕು)

ಸುಪ್ರೀಂ ಕೋರ್ಟ್‌ ಹೇಳಿದ್ದು

* ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಜೋಡಣೆ ಸಂವಿಧಾನ ನೀಡಿರುವ ಸಮಾನತೆ ಮತ್ತು ವೃತ್ತಿಯ ಹಕ್ಕಿನ ಉಲ್ಲಂಘನೆ ಅಲ್ಲ

* ಆಧಾರ್‌ ಜೋಡಣೆ ಮಾಡದ ಪ್ಯಾನ್‌ ಕಾರ್ಡ್‌ಗಳನ್ನು ಅಸಿಂಧು ಎಂದು ಪರಿಗಣಿಸುವಂತಿಲ್ಲ

* ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌  ನೀಡಲೇಬೇಕು

* ಆಧಾರ್‌ ಇಲ್ಲದ ಪ್ಯಾನ್‌ ಕಾರ್ಡ್‌ದಾರರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವಂತಿಲ್ಲ

* ಆಧಾರ್‌ ದತ್ತಾಂಶ ಸೋರಿಕೆ ಆಗದಂತೆ ಸರ್ಕಾರ ಖಾತರಿ ನೀಡಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry