ಸಭಾಪತಿ ಸ್ಥಾನದಿಂದ ಶಂಕರಮೂರ್ತಿ ಇಳಿಸುವುದು ಖಚಿತ

7
ವಿಧಾನಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಮೋಟಮ್ಮ, ಉಗ್ರಪ್ಪ ಹೆಸರು ಮುಂಚೂಣಿಗೆ

ಸಭಾಪತಿ ಸ್ಥಾನದಿಂದ ಶಂಕರಮೂರ್ತಿ ಇಳಿಸುವುದು ಖಚಿತ

Published:
Updated:
ಸಭಾಪತಿ ಸ್ಥಾನದಿಂದ ಶಂಕರಮೂರ್ತಿ ಇಳಿಸುವುದು ಖಚಿತ

ಬೆಂಗಳೂರು: ವಿಧಾನಪರಿಷತ್ತಿನ ಸಭಾಪತಿ ಸ್ಥಾನದಿಂದ ಡಿ.ಎಚ್. ಶಂಕರಮೂರ್ತಿ ಇಳಿಸಲು ಕಾರ್ಯತಂತ್ರ ಹೆಣೆದಿರುವ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯವನ್ನು ಇದೇ 13ರಂದು ಸದನದಲ್ಲಿ ಮಂಡಿಸಲು ಸಿದ್ಧತೆ ನಡೆಸಿದೆ.

ಆಡಳಿತ ಪಕ್ಷದ ಮುಖ್ಯಸಚೇತಕ ಐವನ್ ಡಿಸೋಜ, ವಿ.ಎಸ್‌. ಉಗ್ರಪ್ಪ ಮತ್ತಿತರರು ಅವಿಶ್ವಾಸ ನಿರ್ಣಯ ಮಂಡಿಸುವ ಸೂಚನೆಯನ್ನು ಮಾರ್ಚ್‌ 30 ರಂದು ಪರಿಷತ್ತಿನ ಕಾರ್ಯದರ್ಶಿಗೆ ಸಲ್ಲಿಸಿದ್ದರು.

ನಿಯಮಗಳ ಅನ್ವಯ ಸೂಚನೆ ಸ್ವೀಕರಿಸಿದ 14 ದಿನಗಳಾದ ತರುವಾಯ ಪರಿಷತ್ತಿನ ಕಾರ್ಯಕಲಾಪ ಪಟ್ಟಿಯಲ್ಲಿ ‘ಅವಿಶ್ವಾಸ ನಿರ್ಣಯ ಮಂಡನೆ ಪ್ರಸ್ತಾಪ’ ಎಂಬ ವಿಷಯ ಉಲ್ಲೇಖವಾಗಿರಬೇಕು.

ನಿರ್ಣಯ ಪ್ರಸ್ತಾಪಿಸಲು ಅವಕಾಶ ನೀಡಬೇಕಾದರೆ 10 ಸದಸ್ಯರು ಎದ್ದು ನಿಂತು ಬೆಂಬಲ ಸೂಚಿಸಬೇಕು. ‘ಇದೇ 13ಕ್ಕೆ 14 ದಿನ ಕಳೆಯುತ್ತದೆ. ಅಂದು ಕಾರ್ಯಕಲಾಪ ಪಟ್ಟಿಯಲ್ಲಿ ವಿಷಯ ನಮೂದಾಗಿದ್ದರೆ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಆರಂಭಿಸಲು ಅವಕಾಶ ಕೋರಲಾಗುವುದು. ಪಟ್ಟಿಯಲ್ಲಿ ವಿಷಯ ಇಲ್ಲದೆ ಇದ್ದರೆ ಸದನದಲ್ಲಿಯೇ ಪ್ರಸ್ತಾಪಿಸಿ, ಅವಕಾಶ ನೀಡಬೇಕು ಎಂದು ಪಟ್ಟು ಹಿಡಿಯಲು ಪಕ್ಷ ನಿರ್ಧರಿಸಿದೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ಕುರಿತು ಅನೌಪಚಾರಿಕ  ಚರ್ಚೆ ನಡೆದಿದೆ. ‘ಇದೇ ಅಧಿವೇಶನದಲ್ಲಿಯೇ ಶಂಕರಮೂರ್ತಿ ಅವರನ್ನು ಇಳಿಸಲೇಬೇಕು. ಇದಕ್ಕೆ ಬೆಂಬಲ ನೀಡುವಂತೆ ಕೋರಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಜತೆ ಚರ್ಚಿಸಿದ್ದಾರೆ. ನೇರವಾಗಿ ಬೆಂಬಲ ನೀಡದೇ ಇದ್ದರೂ ವಿಶ್ವಾಸ ನಿರ್ಣಯ ಮತಕ್ಕೆ ಹಾಕುವ ವೇಳೆ ಅನುಕೂಲಕಾರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಗೌಡರು ಭರವಸೆ ನೀಡಿದ್ದಾರೆ’ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ  ಚರ್ಚೆ ನಡೆಯಿತು ಎಂದು ಗೊತ್ತಾಗಿದೆ.

‘ಇದೇ ಅಧಿವೇಶನದಲ್ಲಿ ಶಂಕರಮೂರ್ತಿ ಅವರನ್ನು ಇಳಿಸುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ. ಸಿದ್ದರಾಮಯ್ಯ ಒಪ್ಪಿಗೆ ಮೇರೆಗೆ ಈ ನಡೆಯನ್ನು ಪಕ್ಷ ಕೈಗೊಂಡಿದೆ’ ಎಂದು ಪರಿಷತ್ತಿನ ಹಿರಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಭಾಪತಿ ಸ್ಥಾನಕ್ಕೆ ಯಾರು?: ಶಂಕರಮೂರ್ತಿ ಅವರಿಂದ ತೆರವಾಗುವ ಸ್ಥಾನಕ್ಕೆ ಮೊದಲು ಎಸ್.ಆರ್. ಪಾಟೀಲ ಅವರ ಹೆಸರು ಮುಂಚೂಣಿಯಲ್ಲಿತ್ತು. ಅವರನ್ನು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಿಸಿರುವುದರಿಂದ ಅವರ ಬದಲು ವಿ.ಎಸ್‌. ಉಗ್ರಪ್ಪ, ಮೋಟಮ್ಮ ಹಾಗೂ ಪ್ರತಾಪ ಚಂದ್ರ ಶೆಟ್ಟಿ  ಅವರ ಹೆಸರು ಮೊದಲ ಸಾಲಿಗೆ ಬಂದಿದೆ.

ಎಚ್.ಎಂ. ರೇವಣ್ಣ ಹೆಸರು ಪ್ರಸ್ತಾಪವಾಗಿತ್ತಾದರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಅವರು ಸಭಾಪತಿ ಯಾಗಲು ನಿರಾಕರಿಸಿದ್ದಾರೆ.

ಹೀಗಾಗಿ ಸಭಾಪತಿ ಸ್ಥಾನ ಖಾಲಿಯಾದಲ್ಲಿ  ಮೋಟಮ್ಮ ಅಥವಾ ಉಗ್ರಪ್ಪ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಶಂಕರಮೂರ್ತಿ ಇಳಿಸಲು ದೇವೇಗೌಡರು ಸಹಮತ ವ್ಯಕ್ತಪಡಿಸಿರುವುದನ್ನು ಜೆಡಿಎಸ್‌ ಮೂಲಗಳು ಖಚಿತಪಡಿಸಿಲ್ಲ.

‘ಈ ವಿಷಯದಲ್ಲಿ ನಮಗಿನ್ನೂ ಗೊಂದಲವಿದೆ. ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಷ್ಟೇ ನಮ್ಮ ಕೆಲಸ’ ಎಂದು ಆ ಪಕ್ಷದ ಸದಸ್ಯರೊಬ್ಬರು ತಿಳಿಸಿದರು.

ಹೆಚ್ಚಿದ ಕಾಂಗ್ರೆಸ್‌ ಬಲ: ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರ ಬಲ 33ಕ್ಕೆ ಏರಿದೆ. ಇದರ ಜತೆಗೆ  ಎಂ.ಡಿ. ಲಕ್ಷ್ಮೀನಾರಾಯಣ, ಬೈರತಿ ಸುರೇಶ್‌, ವಿವೇಕರಾವ ಪಾಟೀಲ ಸಹ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಬಲ 36 ಕ್ಕೆ ಏರಿದೆ. ಬಿಜೆಪಿಯ ಸದಸ್ಯೆಯಾಗಿದ್ದ ವಿಮಲಾಗೌಡ ನಿಧನರಾಗಿದ್ದರಿಂದಾಗಿ ಒಂದು ಸ್ಥಾನ ಖಾಲಿ ಇದೆ. ಸಭಾಪತಿ ಸೇರಿ ಬಿಜೆಪಿ ಸದಸ್ಯರ ಬಲ 23. ಜೆಡಿಎಸ್‌ ಬಲ 13. ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.

75 ಸದಸ್ಯ ಬಲದ ಪರಿಷತ್ತಿನಲ್ಲಿ ಕಾಂಗ್ರೆಸ್‌ ಪಕ್ಷ ಬಹುಮತ ಹೊಂದಿದೆ. ಇದರ ಆಧಾರದಲ್ಲಿಯೇ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಮತಕ್ಕೆ ಹಾಕಿದಾಗ, ಸದನದಲ್ಲಿ ಹಾಜರಿರುವ ಸದಸ್ಯರಿಂದ ಹೆಚ್ಚು ಮತ ಪಡೆದವರು ಸಭಾಪತಿಯಾಗಿ ಆಯ್ಕೆಯಾಗುತ್ತಾರೆ. ಸದಸ್ಯರ ಗೈರು ಹಾಜರಿ, ಸಭಾತ್ಯಾಗದಂತಹ ತಂತ್ರ ಬಳಸಿ ಸಭಾಪತಿ ಆಯ್ಕೆಯಲ್ಲಿ ಮೇಲುಗೈ ಸಾಧಿಸಲು ಸಾಧ್ಯವಿದೆ. ಇದನ್ನೇ ಬಳಸಲು ಪಕ್ಷ ಮುಂದಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry