ಉದ್ದೇಶಿತ ಉಕ್ಕಿನ ಮೇಲ್ಸೆತುವೆ ಮೇಲೆ ತೂಗಾಡುತ್ತಿದೆ 26 ಮರಗಳ ಭವಿಷ್ಯ

7
ಬಸವೇಶ್ವ ರ ವೃತ್ತದ ಯೋಜನೆ ಕೈಬಿಟ್ಟು ಹೊಸ ಯೋಜನೆ ಕೈಹಿಡಿದ ಸರ್ಕಾರ

ಉದ್ದೇಶಿತ ಉಕ್ಕಿನ ಮೇಲ್ಸೆತುವೆ ಮೇಲೆ ತೂಗಾಡುತ್ತಿದೆ 26 ಮರಗಳ ಭವಿಷ್ಯ

Published:
Updated:
ಉದ್ದೇಶಿತ ಉಕ್ಕಿನ ಮೇಲ್ಸೆತುವೆ ಮೇಲೆ ತೂಗಾಡುತ್ತಿದೆ 26 ಮರಗಳ ಭವಿಷ್ಯ

ಬೆಂಗಳೂರು: ಭ್ರಷ್ಟಾಚಾರದ ಆರೋಪ, ಪರಿಸರ ಪ್ರೇಮಿಗಳ ವಿರೋಧದಿಂದ ವಿವಾದಕ್ಕೀಡಾಗಿದ್ದ ಉಕ್ಕಿನ ಮೇಲ್ಸೇತುವೆ ಯೋಜನೆ  ಕೈಬಿಟ್ಟಿದ್ದ ಸರ್ಕಾರ, ಇದೀಗ ಮತ್ತೊಂದು ಉಕ್ಕಿನ ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಿದೆ. ಇದರಿಂದಾಗಿ 26 ಮರಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. 

ಶಿವಾನಂದ ವೃತ್ತ ಹಾಗೂ ಜೆ.ಸಿ. ರಸ್ತೆಯಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಬಿಬಿಎಂಪಿ 2011ರಲ್ಲಿ ಪ್ರಸ್ತಾವ ಸಿದ್ಧಪಡಿಸಿತ್ತು. ಶಿವಾನಂದ ವೃತ್ತದಲ್ಲಿನ ಸಂಚಾರ ದಟ್ಟಣೆ ತಪ್ಪಿಸಲು ₹19.85 ಕೋಟಿ ವೆಚ್ಚದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಿಸುವ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.  ಶೇಷಾದ್ರಿಪುರ ಕಡೆಯಿಂದ ರೇಸ್‌ಕೋರ್ಸ್‌ ಕಡೆಗೆ ಸಾಗುವ ಮಾರ್ಗದಲ್ಲಿ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ.

‘ಈ ಮಾರ್ಗದಲ್ಲಿ ಗಂಟೆಗೆ ಸಾವಿರಾರು ಕಾರುಗಳು ಸಂಚರಿಸುತ್ತವೆ. ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ ಇರುವ ಕುಮಾರಕೃಪಾ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಇದೆ. ಹೀಗಾಗಿ ಮೇಲ್ಸೇತುವೆ ಹಾಗೂ ಗ್ರೇಡ್‌ ಸಪರೇಟರ್‌ ನಿರ್ಮಾಣ ಅನಿವಾರ್ಯವಾಗಿದೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಯೋಜನೆಯ ಭೂಸ್ವಾಧೀನ, ಒಳಚರಂಡಿ ಮಾರ್ಗಗಳ ಸ್ಥಳಾಂತರಕ್ಕೆ ₹32 ಕೋಟಿ ಆಗಲಿದೆ’ ಎಂದು ಅವರು ಹೇಳಿದರು.

‘ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸದೆ ಬಿಬಿಎಂಪಿ ಯೋಜನೆ ಅನುಷ್ಠಾನ  ಮಾಡಲು ಮುಂದಾಗಿದೆ. ನಗರ ಕೇಂದ್ರ ಪ್ರದೇಶದಲ್ಲಿ (ಸಿಬಿಡಿ) ಸೇತುವೆ ನಿರ್ಮಿಸುವುದು ಸರಿಯಲ್ಲ. ಉಕ್ಕಿನ ಸೇತುವೆಯಿಂದ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರ ಆಗುವುದಿಲ್ಲ’ ಎಂದು ಸಿಟಿಜನ್ ಫಾರ್ ಬೆಂಗಳೂರು ಸಂಘಟನೆಯ ಪದಾಧಿಕಾರಿಗಳು ಪ್ರತಿಪಾದಿಸಿದ್ದಾರೆ.

ವಿವಾದ: ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ₹1,800 ಕೋಟಿ ವೆಚ್ಚದಲ್ಲಿ  ಉಕ್ಕಿನ ಮೇಲ್ಸೇತುವೆ  ನಿರ್ಮಿಸಲು ಸರ್ಕಾರ ಮುಂದಾಗಿತ್ತು.

ಯೋಜನೆ ಅನುಷ್ಠಾನಕ್ಕಾಗಿ ನೂರಾರು ಮರಗಳನ್ನು ಕಡಿಯಬೇಕಾಗುತ್ತದೆ ಹಾಗೂ ಉಕ್ಕಿನ ಸೇತುವೆ ಪರಿಸರಕ್ಕೆ ಹಾನಿಕರ ಎಂಬ ಕಾರಣಕ್ಕೆ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ವಿರೋಧಿಸಿ ಸರಣಿ ಹೋರಾಟ ನಡೆದಿದ್ದವು.

ಆದರೂ ಸರ್ಕಾರ ಹಿಡಿದ ಪಟ್ಟು ಸಡಿಲಿಸಿರಲಿಲ್ಲ. ‘ಯೋಜನೆ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ದೊಡ್ಡ ಮೊತ್ತದ ‘ಕಿಕ್‌ಬ್ಯಾಕ್‌’ ಸಂದಾಯವಾಗಿದೆ. ಅದಕ್ಕಾಗಿಯೇ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಪಟ್ಟು ಹಿಡಿದಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪ ಮಾಡಿದ್ದರು.

ಯೋಜನೆ ಜಾರಿ ಮಾಡಿದರೆ ಶಾಶ್ವತವಾಗಿ ಕಳಂಕ ಅಂಟಿಕೊಳ್ಳುತ್ತದೆ ಎಂಬ ಆತಂಕದಿಂದ  ಸರ್ಕಾರ ಯೋಜನೆಯಿಂದ ಹಿಂದೆ ಸರಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry