ಮರಳಿಗೆ ಒಂದೇ ದರ ನಿಗದಿಗೆ ಆಗ್ರಹ: ಬಿಜೆಪಿ ಸದಸ್ಯರಿಂದ ಧರಣಿ

7

ಮರಳಿಗೆ ಒಂದೇ ದರ ನಿಗದಿಗೆ ಆಗ್ರಹ: ಬಿಜೆಪಿ ಸದಸ್ಯರಿಂದ ಧರಣಿ

Published:
Updated:
ಮರಳಿಗೆ ಒಂದೇ ದರ ನಿಗದಿಗೆ ಆಗ್ರಹ: ಬಿಜೆಪಿ ಸದಸ್ಯರಿಂದ ಧರಣಿ

ಬೆಂಗಳೂರು: ಮರಳಿಗೆ ರಾಜ್ಯದಾದ್ಯಂತ ಏಕ ರೂಪದ ದರ ನಿಗದಿ ಮಾಡುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಧರಣಿ ನಡೆಸಿದರು.

ಬಿಜೆಪಿ ಸದಸ್ಯ ಎಂ.ಬಿ. ಭಾನುಪ್ರಕಾಶ್‌ ಮರಳು ಗಣಿಗಾರಿಕೆಯಿಂದ ಸರ್ಕಾರಕ್ಕೆ ಬಂದ ಅದಾಯ ಕುರಿತು ಕೇಳಿದ ಪ್ರಶ್ನೆ ವಿಷಯಾಂತರವಾಗಿ ಗದ್ದಲಕ್ಕೆ ಕಾರಣವಾಯಿತು.

ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ‘ಮರಳು ಹೆಸರಿನಲ್ಲಿ ಸುಲಿಗೆ ನಡೆಯುತ್ತಿದೆ. ಒಂದು ಲೋಡ್‌ಗೆ ₹ 20,000 ಸಾವಿರದಿಂದ ₹ 1 ಲಕ್ಷವರೆಗೆ ವಸೂಲಿ ಮಾಡಲಾಗುತ್ತಿದೆ. ಅಕ್ರಮ ತಡೆಗಟ್ಟಲು ಹೋದ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಯುತ್ತಿದೆ. ಉಡುಪಿ ಜಿಲ್ಲಾಧಿಕಾರಿಯೇ ತಮ್ಮ ಮೇಲೆ ಹಲ್ಲೆ ಯತ್ನ ನಡೆಯಿತು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳಿಗೇ ರಕ್ಷಣೆ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.

‘ಮರಳು ಬ್ಲಾಕ್‌ಗಳು ಇದುವರೆಗೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದ್ದವು. ಐದಾರು ತಿಂಗಳ ಹಿಂದೆ ಗಣಿ ಇಲಾಖೆಗೆ ಹಸ್ತಾಂತರಗೊಂಡಿವೆ.  ನಿಯಮಗಳಲ್ಲಿ ಬದಲಾವಣೆ ತಂದು  ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಾಗುವುದು’ ಎಂದು ವಿನಯ್‌ ಕುಲಕರ್ಣಿ ಕೊಟ್ಟ ಉತ್ತರಕ್ಕೆ ವಿರೋಧ ಪಕ್ಷದ ನಾಯಕರು ತೃಪ್ತರಾಗಲಿಲ್ಲ.

‘ಮರಳು ಸಿಗದೆ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅಕ್ರಮ ಮರಳು ಸಾಗಣೆ ಮಾಡುವ ಲಾರಿಗಳಿಗೆ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಸೆಲ್ಯೂಟ್‌ ಹೊಡೆದು ಬಿಡುತ್ತಿದ್ದಾರೆ’ ಎಂದು ಈಶ್ವರಪ್ಪ ಆರೋಪಿಸಿದರು.

‘ಪ್ರಶ್ನೋತ್ತರ ವೇಳೆಯಲ್ಲಿ ಧರಣಿ ಮಾಡುವುದು ಸರಿಯಲ್ಲ. ಈ ಬಗ್ಗೆ ಬೇರೆ ಸಮಯದಲ್ಲಿ ಚರ್ಚೆ ಮಾಡೋಣ’ ಎಂದು ಸಭಾನಾಯಕ ಜಿ. ಪರಮೇಶ್ವರ್‌ ಹೇಳಿದರು.

‘ಒಂದು ತಿಂಗಳು ಸಮಯ ಕೊಡುತ್ತೇವೆ. ಮರಳಿಗೆ ರಾಜ್ಯದಾದ್ಯಂತ ಒಂದೇ ದರ ನಿಗದಿ ಮಾಡಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಬೇರೆ ಮಾರ್ಗದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದೂ ಈಶ್ವರಪ್ಪ ಎಚ್ಚರಿಸಿದ ಬಳಿಕ ಧರಣಿ ಕೊನೆಗೊಂಡಿತು.

ಮರಳಿನ ಅಭಾವ ನಿವಾರಣೆ: ‘ರಾಜ್ಯದಲ್ಲಿ 322 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅದರಲ್ಲಿ 222 ಬ್ಲಾಕ್‌ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗಾಗಲೇ 11 ಬ್ಲಾಕ್‌ಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಬ್ಲಾಕ್‌ಗಳಲ್ಲಿಯೂ ಗಣಿಗಾರಿಕೆ ಆರಂಭ ಆಗಲಿದ್ದು, ಮರಳಿನ ಅಭಾವ ನಿವಾರಣೆಯಾಗುತ್ತದೆ’ ಎಂದು ವಿನಯ್‌ ಕುಲಕರ್ಣಿ ಹೇಳಿದರು.

ಆಶ್ರಯ ಮನೆಗಳನ್ನು ಕಟ್ಟುವವರಿಗೆ, ಸರ್ಕಾರಿ ಕಾಮಗಾರಿಗಳಿಗೆ ಮರಳು ಮೀಸಲಿಡಲಾಗುತ್ತದೆ. ಇದಕ್ಕೆ ಲೋಕೋಪಯೋಗಿ ಇಲಾಖೆ ನಿಗದಿ ಮಾಡಿದ ರಿಯಾಯಿತಿ ದರದಲ್ಲಿಯೇ ಮರಳು ಒದಗಿಸಲಾಗುವುದು ಎಂದರು.

ಮರಳು ಗಣಿಗಾರಿಕೆಯಿಂದ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಕ್ಕೆ ₹ 532ಕೋಟಿ ಆದಾಯ ಬಂದಿದೆ. ಅನಧಿಕೃತ ಸಾಗಣೆ ಪ್ರಕರಣಗಳನ್ನು ಪತ್ತೆ ಹಚ್ಚಿ ಮೂರು ವರ್ಷಗಳಲ್ಲಿ ₹ 35.61 ಕೋಟಿ ದಂಡ ವಿಧಿಸಲಾಗಿದೆ ಎಂದೂಸಚಿವರು ವಿವರಿಸಿದರು.

ಭಾನುಪ್ರಕಾಶ್ ಮಾತನಾಡಿ, ‘ಮರಳು ಬ್ಲಾಕ್‌ ಟೆಂಡರ್ ಪಡೆದವರು ದರ ಪ್ರದರ್ಶಿಸಬೇಕು ಎಂದಿದೆ. ಆದರೆ, ಎಲ್ಲೂ ದರ ಪ್ರದರ್ಶನ ಆಗುತ್ತಿಲ್ಲ. ಸಾಗಣೆ ವಾಹನಗಳಿಗೆ ಜಿಪಿಎಸ್‌ ಅಳವಡಿಸಿ, ನಿಗಾ ವಹಿಸಬೇಕು’ ಎಂದು  ಆಗ್ರಹಿಸಿದರು.

ಮುಖ್ಯಾಂಶಗಳು

* ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಅಕ್ರಮ ಮರಳುಗಾರಿಕೆ

*  ತಿಂಗಳೊಳಗೆ 222 ಬ್ಲಾಕ್‌ಗಳಲ್ಲಿ ಮರಳು ಗಣಿಗಾರಿಕೆ ಆರಂಭ

*  ಆಶ್ರಯ ಮನೆ, ಸರ್ಕಾರಿ ಕಾಮಗಾರಿಗಳಿಗೆ ಮರಳು ಮೀಸಲು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry