‘ಆರ್‌ಟಿಇ’ ಸರ್ಕಾರಿ ಶಾಲೆ ಮುಚ್ಚುವ ಸ್ಕೀಂ

7
ಜನರ ಹಿತಕ್ಕಾಗಿ ಸದನಗಳು ಬಳಕೆಯಾಗುತ್ತಿಲ್ಲ: ಸಚಿವ ಕೆ.ಆರ್‌. ರಮೇಶ ಕುಮಾರ್‌ ವಿಷಾದ

‘ಆರ್‌ಟಿಇ’ ಸರ್ಕಾರಿ ಶಾಲೆ ಮುಚ್ಚುವ ಸ್ಕೀಂ

Published:
Updated:
‘ಆರ್‌ಟಿಇ’ ಸರ್ಕಾರಿ ಶಾಲೆ ಮುಚ್ಚುವ ಸ್ಕೀಂ

ಬೆಂಗಳೂರು: ‘ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆ ಆಗಿದೆ’ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ ಕುಮಾರ್‌ ಹೇಳಿದರು.

ಇಲಾಖಾವಾರು ಬೇಡಿಕೆಗಳ ಮೇಲೆ ವಿಧಾನಸಭೆಯಲ್ಲಿ ಮಾತನಾಡಿದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಮೇಶ ಕುಮಾರ್‌, ಇಡೀ ಶಿಕ್ಷಣ ವ್ಯವಸ್ಥೆ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಬಲಿಯಾಗಿರುವ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು.

‘ಶ್ರೀನಿವಾಸಪುರ ತಾಲ್ಲೂಕಿನಲ್ಲಿರುವ 24 ಸರ್ಕಾರಿ ಪ್ರೌಢಶಾಲೆಗಳಿಗೆ ಎಲ್ಲ ಸೌಲಭ್ಯಗಳನ್ನೂ ಕೊಡಿಸಿದ್ದೇವೆ. 14ಕ್ಕೂ ಹೆಚ್ಚು ಶಾಲೆಗಳಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬರುತ್ತಿದೆ. ಶಾಲೆಗಳನ್ನು ಚೆನ್ನಾಗಿ ನಡೆಸಲು, ಮೂಲಸೌಕರ್ಯ ಕಲ್ಪಿಸಲು ನಾವು ಮನಸ್ಸು ಮಾಡಬೇಕು. ಆರ್‌ಟಿಇ ಬಂದ ಮೇಲೆ ಖಾಸಗಿ ಶಾಲೆಗಳಿಗೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ’ ಎಂದರು.

‘ರೌಡಿಗಳು, ಅಮಾನತುಗೊಂಡಿರುವ ಕಂಡಕ್ಟರ್‌ಗಳು, ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ.  ಶಿಕ್ಷಣ ಸಂಸ್ಥೆಗಳನ್ನು ನಡೆಸುವವರೂ ಇಲ್ಲಿಯೇ (ಸದನದಲ್ಲಿ) ಇದ್ದೇವೆ. ಇನ್ನು ಸರ್ಕಾರಿ ಶಾಲೆಗಳು ಉಳಿಯುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಶಿಕ್ಷಣದ ಬಗ್ಗೆ, ಸರ್ಕಾರಿ ಶಾಲೆ ಮುಚ್ಚುವ ಬಗ್ಗೆ ಮಾತನಾಡುವುದು ನಾವೇ. ಶಾಸನ ಮಾಡುವವರೂ ನಾವೇ. ಖಾಸಗಿ ಶಾಲೆಗಳಿಗೆ ಸಂಬಂಧಿಸಿದ ಫೈಲ್‌ಗಳನ್ನು ಒತ್ತಡ ಹಾಕಿ ಅನುಮೋದನೆ ಕೊಡಿಸುವುದೂ ನಾವೇ. ಆದರೆ, ನಾವು ಯಾರೂ ಕ್ಯಾಪಿಟೇಶನ್‌ ಬಗ್ಗೆ ಮಾತೇ ಆಡುವುದಿಲ್ಲ’ ಎಂದು ಹೇಳುತ್ತಾ ಸದನವನ್ನು ವಿಮರ್ಶೆಗೆ ಗುರಿ ಮಾಡಿದರು.

‘ಗ್ರಾಮ ಪಂಚಾಯಿತಿಯಿಂದ ಲೋಕಸಭೆವರೆಗೆ ಎಲ್ಲ ಸಂಸ್ಥೆಗಳು ಕೆಲವರ ಸ್ವಾರ್ಥಕ್ಕೆ ಮಾತ್ರ ಬಳಕೆಯಾಗುತ್ತಿವೆ. ಜನರ ಹಿತಕ್ಕಾಗಿ ಸದನಗಳು ಬಳಕೆಯಾಗುತ್ತಿಲ್ಲ. ಹಿಂದೆ ವ್ಯಾಪಾರ ಮತ್ತು ರಾಜಕಾರಣದ ಮಧ್ಯೆ ಸ್ಪಷ್ಟವಾಗಿ ಕಾಣುವ ಗೆರೆ ಇತ್ತು. ಇಂದು ಆ ಗೆರೆ ಮರೆಯಾಗಿದ್ದು, ಎಲ್ಲವೂ ವ್ಯಾಪಾರ ಆಗಿಬಿಟ್ಟಿದೆ’ ಎಂದು ವಿಷಾದಿಸಿದರು.

‘ಅತ್ಯಂತ ಗೌರವಸ್ಥರು, ಜ್ಞಾನ, ವಿದ್ವತ್‌ನಲ್ಲಿ ಸಾಧನೆ ಮಾಡಿದವರು ಹಿಂದೆ ವಿಶ್ವವಿದ್ಯಾಲಯಗಳ ಕುಲಪತಿಗಳಾಗುತ್ತಿದ್ದರು. ಆಕರ್ಷಕ ವ್ಯಕ್ತಿತ್ವ, ವಾಕ್ಚಾತುರ್ಯ ಇರುವವರನ್ನು ಅಡ್ವೊಕೇಟ್‌ ಜನರಲ್ ಆಗಿ ನೇಮಕ ಮಾಡಲಾಗುತ್ತಿತ್ತು. ಇಂದು ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿದು ಹೋಗಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry