26 ನಿಮಿಷ ನಿಲ್ದಾಣದಲ್ಲೇ ನಿಂತ ರೈಲು

7
ವಿದ್ಯುತ್‌ ಸಂಪರ್ಕ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ

26 ನಿಮಿಷ ನಿಲ್ದಾಣದಲ್ಲೇ ನಿಂತ ರೈಲು

Published:
Updated:
26 ನಿಮಿಷ ನಿಲ್ದಾಣದಲ್ಲೇ ನಿಂತ ರೈಲು

ಬೆಂಗಳೂರು: ವಿದ್ಯುತ್‌ ಸಂಪರ್ಕ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ  ತಾಂತ್ರಿಕ ದೋಷದಿಂದಾಗಿ ರಾಜಾಜಿನಗರ– ಸಂಪಿಗೆ ರಸ್ತೆ ಮೆಟ್ರೊ ನಿಲ್ದಾಣಗಳ ನಡುವೆ ಶುಕ್ರವಾರ 26 ನಿಮಿಷ ಕಾಲ ಮೆಟ್ರೊ  ರೈಲು ಸಂಪರ್ಕ ಸ್ಥಗಿತಗೊಂಡಿತು.

ನಾಗಸಂದ್ರದಿಂದ ಶ್ರೀರಾಮಪುರ ನಿಲ್ದಾಣಕ್ಕೆ ಬೆಳಿಗ್ಗೆ 11.20ಕ್ಕೆ ಬಂದಿದ್ದ ರೈಲು ಅಲ್ಲೇ ನಿಂತಿತು. ಐದು ನಿಮಿಷವಾದರೂ ರೈಲು ಹೊರಡದ ಕಾರಣ ಪ್ರಯಾಣಿಕರು ಆತಂಕಕ್ಕೊಳಗಾದರು.  ಬೋಗಿಗಳ ಬಾಗಿಲುಗಳು ತೆರೆದೇ ಇದ್ದವು.

‘ರೈಲು ಐದೇ ನಿಮಿಷದಲ್ಲಿ  ಹೊರಡಲಿದೆ ಎಂಬ ಪ್ರಕಟಣೆ ಕೇಳಿಸಿತು. ಐದು ನಿಮಿಷದ ಬಳಿಕವೂ ರೈಲು ಹೊರಡಲಿಲ್ಲ. ನಂತರ ರೈಲಿನೊಳಗಿದ್ದ ಫಲಕದಲ್ಲಿ ‘ತುರ್ತು ಪರಿಸ್ಥಿತಿ’  ಹಾಗೂ ‘ಸೇವೆ ವಿಳಂಬವಾಗಬಹುದು’ ಎಂಬ ವಾಕ್ಯಗಳು ಕಾಣಿಸಿಕೊಂಡವು. ಆಗ ಏನು ಮಾಡಬೇಕೆಂದೇ ತೋಚಲಿಲ್ಲ’ ಎಂದು  ಪ್ರಯಾಣಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಪಿಗೆ ರಸ್ತೆಯಲ್ಲೂ ಒಂದು ರೈಲು 26 ನಿಮಿಷಗಳವರೆಗೆ ನಿಂತಿತ್ತು. ಕುವೆಂಪು ರಸ್ತೆಯಲ್ಲಿ  ಪ್ರಯಾಣಿಕರು ರೈಲಿಗಾಗಿ ಕಾದು ಸುಸ್ತಾದರು.

ತೊಂದರೆ ಅನುಭವಿಸಿದ ಪ್ರಯಾಣಿಕರು  ಗಲಾಟೆ ಮಾಡಲಾರಂಭಿಸಿದರು. ಬಳಿಕ  ಬೆಂಗಳೂರು ಮೆಟ್ರೊ ರೈಲು ನಿಗಮದ ಸಿಬ್ಬಂದಿ ಪ್ರಯಾಣಿಕರಿಗೆ ಟಿಕೆಟ್‌ ಹಣವನ್ನು ಮರಳಿಸಿದರು.

‘ತಾಂತ್ರಿಕ ದೋಷದಿಂದಾಗಿ ಬೆಳಿಗ್ಗೆ 11.20ರಿಂದ 11.56ರವರೆಗೆ ರಾಜಾಜಿನಗರ ಮತ್ತು ಸಂಪಿಗೆ ರಸ್ತೆ ನಿಲ್ದಾಣಗಳ ನಡುವೆ ರೈಲು ಸಂಚಾರ ಸ್ಥಗಿತಗೊಂಡಿತು’ ಎಂದು  ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌  ತಿಳಿಸಿದ್ದಾರೆ.

‘ದೋಷ ಕಾಣಿಸಿಕೊಂಡಾಗ ರೈಲುಗಳು ನಿಲ್ದಾಣದಲ್ಲೇ ಇದ್ದವು. ಹಾಗಾಗಿ ಮಾರ್ಗ ಮಧ್ಯೆ ಪ್ರಯಾಣಿಕರನ್ನು  ಇಳಿಸುವ ಪ್ರಮೇಯ ಉಂಟಾಗಲಿಲ್ಲ. ನಾಗಸಂದ್ರದಿಂದ ರಾಜಾಜಿನಗರದವರೆಗೆ  ರೈಲು ಸಂಚಾರ ಎಂದಿನಂತೆ ಮುಂದುವರಿಯಿತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry