ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀತಿ ಹುಟ್ಟಿಸಿದ ಪ್ಲಾಸ್ಟಿಕ್‌ ಅಕ್ಕಿ, ಮೊಟ್ಟೆ, ಸಕ್ಕರೆ

ಮಂಡ್ಯ, ಮದ್ದೂರು, ನಾಗಮಂಗಲದಲ್ಲಿ ಹಬ್ಬಿದ ವದಂತಿ
Last Updated 9 ಜೂನ್ 2017, 20:01 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧೆಡೆ ಪ್ಲಾಸ್ಟಿಕ್‌ ಅಕ್ಕಿ, ಮೊಟ್ಟೆ ಹಾಗೂ ಸಕ್ಕರೆ ಪತ್ತೆಯಾದ ಬಗ್ಗೆ ವರದಿಯಾಗುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಮದ್ದೂರು ತಾಲ್ಲೂಕಿನ ನಗರಕೆರೆ ಗ್ರಾಮದ ಎಳನೀರು ವ್ಯಾಪಾರಿ ಕೃಷ್ಣ ಎಂಬುವವರ ಮನೆ ಸೇರಿ ವಿವಿಧೆಡೆ ಪ್ಲಾಸ್ಟಿಕ್‌ ಅಕ್ಕಿ ಪತ್ತೆಯಾಗಿರುವ ಬಗ್ಗೆ ಹಲವು ಊಹಾಪೋಹಗಳು ಸೃಷ್ಟಿಯಾಗಿವೆ. ಈ ಬಗ್ಗೆ ಒಂದು ವಾರದಿಂದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಹಲವು ಫೋಟೊ, ವೀಡಿಯೊ ಹರಿದಾಡುತ್ತಿವೆ. ಕೃಷ್ಣ ಅವರು ಸ್ಥಳೀಯ ಅಂಗಡಿಯಲ್ಲಿ ₹ 1,200 ದರದಲ್ಲಿ 25 ಕೆ.ಜಿಯ ಅಕ್ಕಿ ಬ್ಯಾಗ್‌ ಕೊಂಡಿದ್ದಾರೆ. ಅದೇ ಅಕ್ಕಿಯಿಂದ ಅನ್ನ ಮಾಡಿ ಎರಡು ದಿನ ಊಟ ಮಾಡಿದ್ದಾರೆ. ಮನೆಯ ಎಲ್ಲರಿಗೂ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

‘ಚನ್ನಪಟ್ಟಣ, ರಾಮನಗರದಲ್ಲಿ ಪ್ಲಾಸ್ಟಿಕ್‌ ಅಕ್ಕಿ ಪತ್ತೆಯಾಗಿರುವ ಬಗ್ಗೆ ಕೇಳಿದ್ದೆ. ಹೀಗಾಗಿ ಅನ್ನವನ್ನು ಉಂಡೆ ಮಾಡಿ ನೆಲಕ್ಕೆ ಬಡಿದಾಗ ಅದು ಮೇಲಕ್ಕೆ ಹಾರಿತು. ಆ ಅಕ್ಕಿಯಿಂದ ಅನ್ನ ತಿನ್ನುವುದನ್ನು ನಿಲ್ಲಿಸಿದೆವು. ಎಲ್ಲರಿಗೂ ಹೊಟ್ಟೆನೋವು ನಿಂತು ಹೋಯಿತು. ನಂತರ ಅನುಮಾನಗೊಂಡು ಕಸ್ತೂರಿ ಕನ್ನಡ ಜನಪರ ವೇದಿಕೆ ಕಾರ್ಯಕರ್ತರ ಗಮನಕ್ಕೆ ತಂದೆ’ ಎಂದು ಕೃಷ್ಣ ತಿಳಿಸಿದರು.

‘ಅಕ್ಕಿ ನೋಡಲು ಸಹಜವಾಗಿಯೇ ಇದೆ. ಆದರೆ ಅನ್ನ ಮಾಡಿದಾಗ ಅಂಟು ಅಂಟಾಗಿ ಇರುವುದು ತಿಳಿದು ಬಂದಿದೆ. ಪ್ರಯೋಗಾಲಯದಿಂದ ವರದಿ ಬಂದ ನಂತರ ಅದರ ಬಗ್ಗೆ ನಿಖರವಾಗಿ ಹೇಳಬಹುದು’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಇನ್‌ಸ್ಪೆಕ್ಟರ್‌ ನಾಗರಾಜು ಹೇಳಿದರು.

ನಾಗಮಂಗಲದಲ್ಲಿ ಪ್ಲಾಸ್ಟಿಕ್‌ ಮೊಟ್ಟೆ: ನಾಗಮಂಗಲ ಪಟ್ಟಣದಲ್ಲಿ ಪ್ಲಾಸ್ಟಿಕ್‌ ಮೊಟ್ಟೆ ಪತ್ತೆಯಾಗಿರುವ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಪಾಲಗ್ರಹಾರ ರಸ್ತೆಯ ತಿಬ್ಬಾದೇವಿ ಚಿಲ್ಲರೆ ಅಂಗಡಿಯಲ್ಲಿ ಮೋಹನ್‌ ಎಂಬುವವರು ಡಜನ್‌ ಕೋಳಿಮೊಟ್ಟೆ ಕೊಂಡಿದ್ದಾರೆ. ಮೊಟ್ಟೆ ಬೇಯಿಸಿದಾಗ ಎಂಟು ಮೊಟ್ಟೆ ಚೆನ್ನಾಗಿದ್ದವು. ಮೂರು ಮೊಟ್ಟೆಗಳಲ್ಲಿ ಪ್ಲಾಸ್ಟಿಕ್‌ ಪೊರೆ ಕಂಡು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಪರಿವೀಕ್ಷಕ ಶ್ರೀನಿವಾಸ ಮೂರ್ತಿ, ಆಹಾರ ಇಲಾಖೆ ಶಿರಸ್ತೇದಾರ್‌ ಪ್ರಕಾಶ್‌ ಮೂರ್ತಿ ಪರಿಶೀಲಿಸಿದರು. ಅನುಮಾನ ಇರುವ ಮೊಟ್ಟೆಗಳನ್ನು ಮೈಸೂರಿನ ಸಿಎಫ್‌ಟಿಆರ್‌ಐಗೆ ಕಳುಹಿಸಿರುವುದಾಗಿ ಡಾ. ಟಿ.ಎನ್‌.ಧನಂಜಯ ತಿಳಿಸಿದರು.

(ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಬಳಿ ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ಎನ್ನಲಾಗಿರುವ ಸಕ್ಕರೆ)

ಪ್ಲಾಸ್ಟಿಕ್‌ ಸಕ್ಕರೆ ಪತ್ತೆ?

ಮದ್ದೂರು ಪಟ್ಟಣದ ಗೆಜ್ಜಲಗೆರೆ ಗ್ರಾಮದ ಬಳಿ ಶುಕ್ರವಾರ ಪ್ಲಾಸ್ಟಿಕ್‌ ಸಕ್ಕರೆ ಪತ್ತೆಯಾಗಿದೆ ಎಂದು ಗ್ರಾಮಸ್ಥರು ತಹಶೀಲ್ದಾರ್‌ ಕಚೇರಿಯಲ್ಲಿ ದೂರು ನೀಡಿದ್ದಾರೆ.

ಮೈಸೂರು– ಬೆಂಗಳೂರು ಹೆದ್ದಾರಿಯಲ್ಲಿ ಟಾಟಾ ಏಸ್‌ ವಾಹನ ಸಕ್ಕರೆ ಸಾಗಿಸುತ್ತಿತ್ತು. ರಸ್ತೆ ವಿಭಜಕಕ್ಕೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಒಂದು ಸಕ್ಕರೆ ಮೂಟೆ ಕೆಳಕ್ಕೆ ಬಿದ್ದು ಸಕ್ಕರೆ ಚೆಲ್ಲಾಡಿದೆ. ಚಾಲಕ ಮೂಟೆ ಎತ್ತಿ ವಾಹನದೊಳಕ್ಕೆ ಹಾಕಿಕೊಂಡು ಮುಂದಕ್ಕೆ ಹೋಗಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ ಸಕ್ಕರೆಯನ್ನು ನೋಡಿದಾಗ ಅದು ಪಾಸ್ಟಿಕ್‌ ಸಕ್ಕರೆಯಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಪ್ಲಾಸ್ಟಿಕ್‌ ಎನ್ನಲಾದ ಸಕ್ಕರೆಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಸಕ್ಕರೆ ಸಾಗಿಸುತ್ತಿದ್ದ ವಾಹನದ ಗುರುತು ಪತ್ತೆಯಾಗಿದ್ದು ವಿಚಾರಣೆ ನಡೆಸಲಾಗುವುದು’ ಎಂದು ಮದ್ದೂರು ತಹಶೀಲ್ದಾರ್‌ ಹರ್ಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT