ರೌಡಿ ನಾಗರಾಜ್, ಆತನ ಮಕ್ಕಳಿಗೆ ಆಶ್ರಯ ನೀಡಿದ್ದವ ಸೆರೆ

7

ರೌಡಿ ನಾಗರಾಜ್, ಆತನ ಮಕ್ಕಳಿಗೆ ಆಶ್ರಯ ನೀಡಿದ್ದವ ಸೆರೆ

Published:
Updated:
ರೌಡಿ ನಾಗರಾಜ್, ಆತನ ಮಕ್ಕಳಿಗೆ ಆಶ್ರಯ ನೀಡಿದ್ದವ ಸೆರೆ

ಬೆಂಗಳೂರು: ಶ್ರೀರಾಮಪುರದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ತಪ್ಪಿಸಿಕೊಂಡಿದ್ದ ರೌಡಿ ನಾಗರಾಜ್‌ ಹಾಗೂ ಆತನ ಮಕ್ಕಳಿಗೆ ಆಶ್ರಯ ನೀಡಿದ್ದ ರಮೇಶ್‌ ಎಂಬುವರು ಶ್ರೀರಾಮಪುರ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ.

ಲಗ್ಗೆರೆಯ ಖಾಸಗಿ ಶಾಲೆಯೊಂದರ ಮಾಲೀಕರಲ್ಲಿ ಒಬ್ಬರಾದ ಅವರು ನಾಗರಾಜ್‌ನೊಂದಿಗೆ ಹಲವು ವರ್ಷಗಳಿಂದ ಒಡನಾಟವಿಟ್ಟುಕೊಂಡಿದ್ದರು. ಉದ್ಯಮಿ ಅಪಹರಣ ಹಾಗೂ ಹಳೇ ನೋಟು ಬದಲಾವಣೆ ಆರೋಪದಡಿ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಅವರನ್ನು  ಶ್ರೀರಾಮಪುರ ಪೊಲೀಸರು ಗುರುವಾರ ಬಂಧಿಸಿ, ಹೆಣ್ಣೂರು ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಉದ್ಯಮಿ ಉಮೇಶ್‌ ಅವರನ್ನು ಅಪಹರಿಸಿ ಸುಲಿಗೆ ಮಾಡಿದ್ದ ಆರೋಪದಡಿ ನಾಗರಾಜ್‌ ಮನೆಯ ಮೇಲೆ ಏಪ್ರಿಲ್‌ 14ರಂದು ದಾಳಿ ಮಾಡಲಾಗಿತ್ತು.  ಈ ವೇಳೆ ತಪ್ಪಿಸಿಕೊಂಡಿದ್ದ ನಾಗರಾಜ್‌ ಹಾಗೂ ಆತನ ಮಕ್ಕಳು, ಮುರುಗನ್‌ ಎಂಬುವರ ಆಟೊದಲ್ಲಿ ರಮೇಶ್‌ ಅವರ ಲಗ್ಗೆರೆಯ  ಮನೆಗೆ ಹೋಗಿದ್ದರು’.

‘ಮೂವರೂ ಅವರ ಮನೆ ಯಲ್ಲೇ  ಮೂರು ದಿನ ಉಳಿದಿದ್ದರು.  ಬಳಿಕ ಅಲ್ಲಿಂದಲೇ ತಮಿಳುನಾಡಿಗೆ ಹೋಗಿ ತಲೆಮರೆಸಿಕೊಂಡಿದ್ದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಮಾರುತಿ ವ್ಯಾನ್‌ನಿಂದ ಪತ್ತೆ: ತಮಿಳುನಾಡಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ್ದ ನಾಗರಾಜ್‌ ಹಾಗೂ ಆತನ ಮಕ್ಕಳ ಬಳಿ ಮಾರುತಿ ವ್ಯಾನ್‌ ಪತ್ತೆಯಾಗಿತ್ತು. ಆ ವ್ಯಾನ್‌ ಮಾಲೀಕ ರಮೇಶ್‌ ಎಂಬುದು ತನಿಖೆಯಿಂದ ಗೊತ್ತಾಗಿತ್ತು.

‘ರಮೇಶ್‌ ತಲೆಮರೆಸಿಕೊಂಡಿದ್ದರಿಂದ ವಿಚಾರಣೆಗೆ ಒಳಪಡಿಸಲು ಸಾಧ್ಯವಾಗಿರಲಿಲ್ಲ. ಲಗ್ಗೆರೆಯ ಮನೆಗೆ ಬಂದಿದ್ದಾರೆ ಎಂಬ ಮಾಹಿತಿ ತಿಳಿದು ಗುರುವಾರ ಸ್ಥಳಕ್ಕೆ ಹೋಗಿ ಬಂಧಿಸಿದೆವು. ಅವರ ವಿಚಾರಣೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಸಂಗ್ರಹಿಸಬೇಕಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ಮೂರು ಕಾರು ಜಪ್ತಿ: ರೌಡಿ ನಾಗರಾಜ್‌ ಹೆಸರಿನಲ್ಲಿದೆ ಎನ್ನಲಾದ ಡಾಬಸ್‌ಪೇಟೆಯ ಫಾರ್ಮ್‌ಹೌಸ್‌ ಮೇಲೆ ದಾಳಿ ನಡೆಸಿದ್ದ ಶ್ರೀರಾಮಪುರ ಪೊಲೀಸರು, ಮೂರು ಕಾರುಗಳನ್ನು ಜಪ್ತಿ ಮಾಡಿದ್ದಾರೆ.

‘ಕೃತ್ಯಕ್ಕೆ ಬಳಸಿದ್ದ ಕಾರುಗಳು ಫಾರ್ಮ್‌ಹೌಸ್‌ನಲ್ಲಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದರು. ಅದರನ್ವಯ ಫಾರ್ಮ್‌ಹೌಸ್‌ನಲ್ಲಿ ತಪಾಸಣೆ ನಡೆಸಿ ಇನ್ನೋವಾ, ಹೊಂಡಾ ಸಿಟಿ, ಸ್ವಿಫ್ಟ್‌ ಡಿಸೈರ್‌ ಕಾರುಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

‘ಫಾರ್ಮ್‌ಹೌಸ್‌ನ ಮೂಲ ಮಾಲೀಕರು ರಾಜಣ್ಣ ಎಂಬುದು ಗೊತ್ತಾಗಿದೆ. ಅವರು ನಾಗರಾಜ್‌ನ ಹಳೇ ಸ್ನೇಹಿತರು. ಅವರಿಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆಯಾಗಿತ್ತು. ರಾಜಣ್ಣ ಅವರನ್ನು ಬೆದರಿಸಿ ಹೊರಹಾಕಿದ್ದ ನಾಗರಾಜ್‌,  ಫಾರ್ಮ್‌ಹೌಸ್‌ ತನ್ನದಾಗಿಸಿ ಕೊಂಡಿದ್ದ. ಈ ಬಗ್ಗೆ ರಾಜಣ್ಣ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ಅದರ ವಿಚಾರಣೆ ನಡೆಯುತ್ತಿದೆ’ ಎಂದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry