ಡಿಸಿಪಿ ಆನಂದ್ ವಿರುದ್ಧ ಇಲಾಖಾ ವಿಚಾರಣೆ

7
ಬಡೇರಿಯಾ ಜಾಮೀನಿಗೆ ತಕರಾರು ತೆಗೆಯದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಮೇಲೆ ಒತ್ತಡ ಹೇರಿದ ಆರೋಪ

ಡಿಸಿಪಿ ಆನಂದ್ ವಿರುದ್ಧ ಇಲಾಖಾ ವಿಚಾರಣೆ

Published:
Updated:
ಡಿಸಿಪಿ ಆನಂದ್ ವಿರುದ್ಧ ಇಲಾಖಾ ವಿಚಾರಣೆ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಐಎಎಸ್ ಅಧಿಕಾರಿ ಗಂಗಾರಾಂ ಬಡೇರಿಯಾ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಮೇಲೆ ಒತ್ತಡ ಹೇರಿದ್ದ ಆರೋಪದಡಿ ಸಿಸಿಬಿ ಡಿಸಿಪಿ ಆಗಿದ್ದ ಎಚ್‌.ಡಿ.ಆನಂದ್‌ಕುಮಾರ್ ವಿರುದ್ಧ ಇಲಾಖಾ ಮಟ್ಟದ ವಿಚಾರಣೆಗೆ ಡಿಜಿಪಿ  ಆದೇಶಿಸಿದ್ದಾರೆ.

ಈ ಸಂಬಂಧ ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥ ಚರಣ್‌ರೆಡ್ಡಿ ಅವರು ಎರಡು ವಾರಗಳ ಹಿಂದೆ ಡಿಜಿಪಿ ಆರ್.ಕೆ.ದತ್ತ ಅವರಿಗೆ ದೂರು ಕೊಟ್ಟಿದ್ದಾರೆ.

ಆಗಿದ್ದೇನು, ಆರೋಪವೇನು?: ಎಸ್‌ಐಟಿ ಅಧಿಕಾರಿಗಳು ಮೇ 15ರಂದು ಬಡೇರಿಯಾ ಅವರನ್ನು ಬಂಧಿಸಿದ್ದರು. ಹತ್ತು ದಿನಗಳ ಪೊಲೀಸ್ ಕಸ್ಟಡಿ ಮುಗಿದ ಬಳಿಕ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.

ಎಸ್‌ಐಟಿ ವಶದಲ್ಲಿದ್ದಾಗಲೇ ಬಡೇರಿಯಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಎದೆನೋವು ಎಂದು ಆಸ್ಪತ್ರೆಗೂ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಎಸ್‌ಐಟಿ ಆ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿತ್ತು.

ಜಾಮೀನು ಅರ್ಜಿ ವಿಚಾರಣೆಗೆ ಬರುವ ಮುನ್ನ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರ ಕಚೇರಿಗೆ ತೆರಳಿದ್ದ ಆನಂದ್, ‘ಯಾವ ಮಾನದಂಡದಡಿ ತಕರಾರು ಸಲ್ಲಿಸಿದ್ದೀರಿ. ಅದಕ್ಕೆ ವಿವರಣೆ ಕೊಡಿ’ ಎಂದಿದ್ದರು. ಅದಕ್ಕೆ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ‘ಬಡೇರಿಯಾ ಅವರಿಗೆ ಅನುಕೂಲವಾಗುವಂತೆ ವಕಾಲತ್ತು ವಹಿಸಿ’ ಎಂದು ಕೋರಿದ್ದರು. ಕೊನೆಗೆ ಅರ್ಜಿಯ ವಿಚಾರಣೆ ವೇಳೆ ಆನಂದ್ ಖುದ್ದು ನ್ಯಾಯಾಲಯಕ್ಕೆ ತೆರಳಿ, ಕೋರ್ಟ್ ಕಲಾಪ ವೀಕ್ಷಿಸಿದ್ದರು ಎಂದು ಎಸ್‌ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

ಕಲಾಪ ಮುಗಿದ ಬಳಿಕ ಆ ವಕೀಲರು ಡಿಸಿಪಿ ಪ್ರಭಾವ ಬೀರಿದ್ದ ವಿಷಯವನ್ನು ಚರಣ್‌ರೆಡ್ಡಿ ಅವರ ಗಮನಕ್ಕೆ ತಂದಿದ್ದರು. ಆಗ, ‘ಇಲಾಖೆಯ ಕಾನೂನುಬದ್ಧ ಕೆಲಸಗಳು ಹಾಗೂ ನ್ಯಾಯ ವ್ಯವಸ್ಥೆ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆನಂದ್‌ಕುಮಾರ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಚರಣ್‌ರೆಡ್ಡಿ ಡಿಜಿಪಿಗೆ ದೂರು ಕೊಟ್ಟಿದ್ದರು.

ಅದರನ್ವಯ ಇಲಾಖಾ ವಿಚಾರಣೆ  ಶುರುವಾಗಿದ್ದು, ಜೂನ್ 7ರಂದು ಆನಂದ್ ಅವರನ್ನು ಜಿಲ್ಲಾ ಹೆಚ್ಚುವರಿ ಎಸ್ಪಿಯಾಗಿ ತುಮಕೂರಿಗೆ ವರ್ಗಾವಣೆ ಮಾಡಲಾಗಿದೆ. ಬಡೇರಿಯಾ ಅವರಿಗೆ ಜೂನ್ 2ರಂದು ಜಾಮೀನು ಸಿಕ್ಕಿದೆ.

ಹಿಂದೆಯೂ ಇಲಾಖಾ ತನಿಖೆ

2009ರಲ್ಲಿ ದೇವನಹಳ್ಳಿ ಉಪ ವಿಭಾಗದ ಎಸಿಪಿ ಆಗಿದ್ದ ಆನಂದ ಕುಮಾರ್, ಪ್ರಕರಣವೊಂದರ ಇತ್ಯರ್ಥಕ್ಕಾಗಿ ದೂರುದಾರರಿಂದ ₹1 ಲಕ್ಷ ಪಡೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

2016ರಲ್ಲಿ ಅವರು ಸಿಸಿಬಿ ಡಿಸಿಪಿಯಾಗಿದ್ದಾಗ ಇಂದಿರಾ ನಗರದ ಕ್ಲಬ್‌ವೊಂದರ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಜಪ್ತಿ ಮಾಡಿದ್ದ ಹಣದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಪ್ಪು ಲೆಕ್ಕ ಕೊಟ್ಟ ಆರೋಪ ಅವರ ಮೇಲಿತ್ತು.

ಈ ಪ್ರಕರಣದಲ್ಲೂ ಅವರವಿರುದ್ಧ ಇಲಾಖಾ ತನಿಖೆಗೆ ಆದೇಶವಾಗಿದ್ದು, ಅದು ವಿಚಾರಣೆ ಹಂತದಲ್ಲಿದೆ.

ಗೆಳೆತನದ ಕಾರಣಕ್ಕೆ ನೆರವು

‘ಗೃಹ ಸಚಿವ ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ಪ್ರಭು ಹಾಗೂ ಬಡೇರಿಯಾ ಹತ್ತಿರದ ಸಂಬಂಧಿಗಳು. ಇನ್ನು ಪ್ರಭು ಹಾಗೂ ಆನಂದ್ ಆಪ್ತ ಸ್ನೇಹಿತರು. ಈ ಗೆಳೆತನದ ಕಾರಣಕ್ಕೆ ಬಡೇರಿಯಾ ಅವರಿಗೆ ಜಾಮೀನು ಕೊಡಿಸಲು ಸಹಕರಿಸಿರಬಹುದು’ ಎಂದು ಎಸ್‌ಐಟಿ ಶಂಕೆ ವ್ಯಕ್ತಪಡಿಸಿದೆ.

ಮುಖ್ಯಾಂಶಗಳು

* ಆರೋಪದ ಬೆನ್ನಲ್ಲೇ ತುಮಕೂರಿಗೆ ವರ್ಗ

* ಖುದ್ದು ಕೋರ್ಟ್ ಕಲಾಪ ವೀಕ್ಷಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry