ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.8 ಕೋಟಿ ಜಪ್ತಿ, ಖೋಟಾ ನೋಟುಗಳೂ ಪತ್ತೆ

ಮಫ್ತಿಯಲ್ಲಿ ಪೊಲೀಸರ ಕಾರ್ಯಾಚರಣೆ
Last Updated 9 ಜೂನ್ 2017, 20:20 IST
ಅಕ್ಷರ ಗಾತ್ರ

ಬೆಂಗಳೂರು: ಶೇ 30ರ ಕಮಿಷನ್ ಆಧಾರದ ಮೇಲೆ ನೋಟುಗಳ ಬದಲಾವಣೆಗೆ ಹೊರಟಿದ್ದ ಆರು ಮಂದಿಯನ್ನು ಬಂಧಿಸಿರುವ ಮೈಕೊ ಲೇಔಟ್ ಪೊಲೀಸರು, ₹ 2.80 ಕೋಟಿ ಮೊತ್ತದ ರದ್ದಾದ ನೋಟುಗಳು ಹಾಗೂ ₹ 2 ಲಕ್ಷ ಮೊತ್ತದ ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ವಕೀಲ ಮರಿರೆಡ್ಡಿ (60), ಸಿವಿಲ್ ಎಂಜಿನಿಯರ್ ಬಾನೂಜಿ (59), ರಿಯಲ್ ಎಸ್ಟೇಟ್ ಉದ್ಯಮಿಗಳಾದ ದಿನೇಶ್ (30), ಚಂದ್ರಶೇಖರ್ (60), ಹರೀಶ್ (50) ಹಾಗೂ ಆಟೊ ಚಾಲಕ ಜಿ.ದಿನೇಶ್ (40) ಎಂಬುವರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಜಿ.ದಿನೇಶ್‌ ಅವರ ಆಟೊದಲ್ಲಿ ಹಳೇ ನೋಟುಗಳನ್ನು ಸಾಗಿಸುತ್ತಿದ್ದ ಬಗ್ಗೆ ಗುರುವಾರ ಸಂಜೆ ನಮ್ಮ ಬಾತ್ಮೀದಾರರಿಂದ ಮಾಹಿತಿ ಸಿಕ್ಕಿತು. ಕೂಡಲೇ ಮಫ್ತಿಯಲ್ಲಿ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿ, ವಿಜಯಾ ಬ್ಯಾಂಕ್ ಕಾಲೊನಿಯ ಬಿಬಿಎಂಪಿ ಮೈದಾನದ ಬಳಿ ಆಟೊ ತಡೆದರು. ಪರಿಶೀಲಿಸಿದಾಗ ಎರಡು ಚೀಲಗಳಲ್ಲಿ ನೋಟುಗಳು ಪತ್ತೆಯಾದವು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ದಿನೇಶ್ ಹಣ ತೆಗೆದುಕೊಂಡು ಹೋಗುತ್ತಿದ್ದರೆ, ಉಳಿದ ಐದು ಮಂದಿ ಮೂರು ಬೈಕ್‌ಗಳಲ್ಲಿ ಅವರನ್ನು ಹಿಂಬಾಲಿಸಿ ಬರುತ್ತಿದ್ದರು. ಸಿಬ್ಬಂದಿ ಆಟೊ ಅಡ್ಡಗಟ್ಟುತ್ತಿದ್ದಂತೆಯೇ ಆ ಐದೂ ಮಂದಿ ಚಾಲಕನಿಗೆ ನೆರವಾಗುವವರಂತೆ ಬಂದರು. ಮಫ್ತಿಯಲ್ಲಿದ್ದ ಕಾರಣ ಆಟೊ ತಡೆದವರು ಪೊಲೀಸರು ಎಂಬುದು ಅವರಿಗೆ ಗೊತ್ತಾಗಿರಲಿಲ್ಲ. ಅವರೆಲ್ಲ ಒಂದೇ  ಗ್ಯಾಂಗ್‌ನವರು ಎಂಬುದನ್ನು ಅರಿತ ಸಿಬ್ಬಂದಿ, ತಕ್ಷಣ ಎಲ್ಲರನ್ನೂ ವಶಕ್ಕೆ ಪಡೆದರು’ ಎಂದು
ಮಾಹಿತಿ ನೀಡಿದರು.

‘ಹಣ ಚಿತ್ತೂರಿನ ಉದ್ಯಮಿ ರಮೇಶ್ ಎಂಬುವರಿಗೆ ಸೇರಿದ್ದು. ಮೈಕೊ ಲೇಔಟ್‌ನ ಮಹಿಳೆಯೊಬ್ಬರು ಎನ್‌ಆರ್‌ಐ ಕೋಟಾದಡಿ ನೋಟುಗಳನ್ನು ಬದಲಾವಣೆ ಮಾಡಿಸುವುದಾಗಿ ಹೇಳಿದ್ದರು. ಹೀಗಾಗಿ, ಅವರ ಮನೆಗೆ ಹೊರಟಿದ್ದೆವು’ ಎಂದು ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ. ಈಗ ರಮೇಶ್‌ ಅವರ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದ್ದು, ಆ ಮಹಿಳೆ ಕೂಡ ಸಂಪರ್ಕಕ್ಕೆ
ಸಿಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಎನ್‌ಆರ್‌ಐ ಗಡುವು ಭೀತಿ

ಹತ್ತು ದಿನಗಳಿಂದ ಈಚೆಗೆ ನಗರದಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದ ಕಬ್ಬನ್‌ಪಾರ್ಕ್‌, ಬಸವನಗುಡಿ ಹಾಗೂ ಪುಟ್ಟೇನಹಳ್ಳಿ ಪೊಲೀಸರು, 15 ಮಂದಿಯನ್ನು ಬಂಧಿಸಿ ₹ 8.27 ಕೋಟಿ ಮೊತ್ತದ ಹಳೇ ನೋಟುಗಳನ್ನು ಜಪ್ತಿ ಮಾಡಿದ್ದರು.

‘ಎನ್‌ಆರ್‌ಐಗಳಿಗೆ ಹಳೇ ನೋಟುಗಳನ್ನು ಬದಲಾಯಿಸಿಕೊಳ್ಳಲು ಸರ್ಕಾರ ಜೂನ್ 30ರವರೆಗೆ ಗಡುವು ನೀಡಿದೆ. ಆ ಕಾಲಮಿತಿ ಮೀರಿದರೆ ಯಾವ ಮಾರ್ಗದಿಂದಲೂ ನೋಟುಗಳ ಬದಲಾವಣೆ ಸಾಧ್ಯವಿಲ್ಲ. ಇದನ್ನು ಅರಿತ ಆರೋಪಿಗಳು, ಎನ್‌ಆರ್‌ಐ ಏಜೆಂಟ್‌ಗಳನ್ನು ಬಳಸಿಕೊಂಡುಈ ದಂಧೆ ಮುಂದುವರಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

* ₹ 1,000 ಮುಖಬೆಲೆಯ 100 ಹಾಗೂ ₹ 500 ಮುಖ ಬೆಲೆಯ 200 ಖೋಟಾ ನೋಟುಗಳೂ ಪತ್ತೆಯಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ

–ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT