ರಾಂಪುರ ಕೆರೆಯಲ್ಲೂ ನೊರೆ ಸಮಸ್ಯೆ

7
ಎರಡು ಕೋಡಿಗಳಲ್ಲೂ ತುಂಬಿಕೊಂಡ ಹೂಳು

ರಾಂಪುರ ಕೆರೆಯಲ್ಲೂ ನೊರೆ ಸಮಸ್ಯೆ

Published:
Updated:
ರಾಂಪುರ ಕೆರೆಯಲ್ಲೂ ನೊರೆ ಸಮಸ್ಯೆ

ಬೆಂಗಳೂರು: ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಕೆರೆಗೆ ಒಳಚರಂಡಿ ನೀರು ಸೇರುತ್ತಿದ್ದು, ಇಲ್ಲಿಯೂ ನೊರೆ ಸಮಸ್ಯೆ ಕಾಣಿಸಿಕೊಂಡಿದೆ.

‘ಒಂದು ವರ್ಷದಿಂದಲೂ ಕೆರೆಯಲ್ಲಿ ಆಗಾಗ ನೊರೆ ಕಾಣಿಸಿಕೊಳ್ಳುತ್ತಲೇ ಇದ್ದು, ದುರ್ನಾತ ಬೀರುತ್ತಿರುವುದರಿಂದ ಕೆರೆ ಅಕ್ಕಪಕ್ಕದಲ್ಲಿ ವಾಸಿಸುವುದೇ ಕಷ್ಟವಾಗಿದೆ’ ಎಂದು ಸ್ಥಳೀಯರು ದೂರಿದರು.

ಬಿಜೆಪಿ ಮುಖಂಡ ಎಂ.ಕೆಂಪೇಗೌಡ ,‘ಈ ಕೆರೆ ಕೃಷ್ಣರಾಜಪುರ ಕ್ಷೇತ್ರದ ಕೆ.ಚೆನ್ನಸಂದ್ರ ವ್ಯಾಪ್ತಿಗೂ ಸೇರಿದೆ. ದೊಡ್ಡ ಗುಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೇ ನಂ 71ರಲ್ಲಿರುವ ಈ ಕೆರೆ ಒಟ್ಟು 107 ಎಕರೆ ವಿಸ್ತೀರ್ಣವನ್ನು ಹೊಂದಿದೆ’ ಎಂದು ಹೇಳಿದರು.

ಸುತ್ತಮುತ್ತಲಿನ ಆದೂರು, ವೀರೇನ ಹಳ್ಳಿ, ಕಿತಗನೂರು, ಮೇಡಹಳ್ಳಿ, ಕನಕನಗರ, ಕೆ.ಚೆನ್ನಸಂದ್ರ, ಬಿಳಿಶಿವಾಲೆ, ಭೈರತಿ, ಬಿದರಹಳ್ಳಿ ಸೇರಿ ಹತ್ತಾರು ಗ್ರಾಮಗಳ ಜನರು ಈ ಕೆರೆಯನ್ನು ಆಶ್ರಯಿಸಿದ್ದಾರೆ.

ರಾಂಪುರ ಕೆರೆಗೆ ಎರಡು ಕೋಡಿಗಳಿವೆ. ಆ ಎರಡೂ ಕೋಡಿಗಳು ಹೂಳು ತುಂಬಿಕೊಂಡಿದ್ದು, ಕಸದ ರಾಶಿಯೂ ಶೇಖರಣೆಗೊಂಡಿದೆ. ಇದರಿಂದಾಗಿ ಕೆರೆಯೊಳಗಿನ ಕಲುಷಿತ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ನೊರೆ ಹೆಚ್ಚಾಗಿ ಕೆರೆ ಕೋಡಿ ಪಕ್ಕದಲ್ಲಿನ ರಸ್ತೆಯ ಮೇಲೆ ತೂರಿಕೊಂಡು ಬರುತ್ತದೆ.

‘ಮಳೆ ಸುರಿಯುತ್ತಿರುವುದರಿಂದ ಕೆರೆಯಲ್ಲಿ ನೊರೆಯ ಪ್ರಮಾಣವೂ ಹೆಚ್ಚಾಗಿದೆ. ಸ್ಥಳೀಯ ಪಂಚಾಯಿತಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕೆರೆ ಸಮಸ್ಯೆ ಬಗೆಹರಿಸಬೇಕು’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.

‘ಕೃಷ್ಣರಾಜಪುರದ ಹೊರಮಾವು, ರಾಮೂರ್ತಿನಗರ, ಗೆದ್ದಲಹಳ್ಳಿ ಹಾಗೂ ಹೆಬ್ಬಾಳದಲ್ಲಿನ ವಸತಿ ಸಮುಚ್ಚಯಗಳ ಒಳಚರಂಡಿ ನೀರು ಶುದ್ಧೀಕರಣಗೊಳ್ಳದೆ ಕೆರೆಗೆ ಬಂದು ಸೇರುತ್ತಿದೆ. ಈ ಕಾರಣ ಕೆರೆ ಗಬ್ಬೆದ್ದು ನಾರುತ್ತಿದೆ. ಕೆರೆಯಲ್ಲಿನ ನೊರೆ ಹೆಚ್ಚಾಗುತ್ತಿದ್ದಂತೆ ಹಗಲು ವೇಳೆಯಲ್ಲೂ ಸೊಳ್ಳೆಗಳ ಕಾಟ ಉಂಟಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ಕೆರೆಯ ಒಡಲಿಗೆ ಬಿಬಿಎಂಪಿ ತ್ಯಾಜ್ಯ

ಕೃಷ್ಣರಾಜಪುರ ಕ್ಷೇತ್ರದ ಬಿಬಿಎಂಪಿ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ಪಾಲಿಕೆ ನೌಕರರು ಲಾರಿಗಳಲ್ಲಿ ತುಂಬಿಕೊಂಡು ಬಂದು ರಾತ್ರಿ ವೇಳೆಯಲ್ಲಿ  ಕೆ.ಚೆನ್ನಸಂದ್ರದ ಬಳಿಯಲ್ಲಿ ಕೆರೆಯ ದಂಡೆಯ ಮೇಲೆ ಸುರಿಯುತ್ತಿದ್ದಾರೆ.

‘ದಿನವೂ ನೂರಾರು ಲಾರಿಗಳಷ್ಟು ಕಸ ಕೆರೆಯ ದಂಡೆಯಲ್ಲಿ ಸಂಗ್ರಹಗೊಂಡು ದುರ್ವಾಸನೆ ಬರುತ್ತದೆ. ಇದರಿಂದಾಗಿ ಕೆರೆ  ಏರಿ ಮೇಲೆ ಸಂಚರಿಸಲು ಕಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ ಕಸ ಸುರಿಯುವುದನ್ನು ತಕ್ಷಣ ನಿಲ್ಲಿಸದಿದ್ದರೆ, ತೀವ್ರ ಹೋರಾಟ ನಡೆಸಲಾಗುವುದು’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry