ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಯಲ್ಲೇ ರಾತ್ರಿ ಕಳೆದ ಗರ್ಭಿಣಿ, ಬಾಣಂತಿಯರು!

Last Updated 10 ಜೂನ್ 2017, 4:49 IST
ಅಕ್ಷರ ಗಾತ್ರ

ಶಿವಮೊಗ್ಗ: ತಾವು ನೆಲೆನಿಂತಿರುವ ಭೂಮಿ ಯಾರ ಒಡೆತನಕ್ಕೆ ಸೇರಿದೆ ಎಂಬ ಕನಿಷ್ಠ ಅರಿವೂ ಇಲ್ಲದೆ ಕಳೆದ ಮೂರು ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ 17 ಕುಟುಂಬಗಳು ಒಂದೇ ದಿನದಲ್ಲಿ ಬೀದಿಗೆ ಬಿದ್ದಿವೆ. ಕೂಲಿ ಮಾಡಿ ಕಷ್ಟಪಟ್ಟು ದುಡಿದು ಕಟ್ಟಿಕೊಂಡಿದ್ದ ಸೂರುಗಳು ನೆಲಸಮವಾಗಿವೆ. ವರ್ಷಾನುಗಟ್ಟಲೆ ಅಲೆದಾಡಿ ಮಂಜೂರು ಮಾಡಿಸಿ ಕೊಡಿದ್ದ ವಿದ್ಯುತ್ ಸೌಕರ್ಯ, ನೀರು, ಕಾಂಕ್ರಿಟ್‌ ರಸ್ತೆ, ಶೌಚಾಲಯಗಳು ವ್ಯರ್ಥವಾಗಿವೆ.

ಸರ್ಕಾರವೇ ನೀಡಿದ್ದ ಪಡಿತರ ಚೀಟಿ, ಆಧಾರ್‌ ಕಾರ್ಡ್‌ಗಳಲ್ಲಿನ ವಿಳಾಸ ಈಗ ಉಪಯೋಗಕ್ಕೆ ಬಾರದ ದಾಖಲೆಗಳಾಗಿವೆ. ಗರ್ಭಿಣಿಯರು, ಬಾಣಂತಿಯರು, ವೃದ್ಧರು, ಪುಟ್ಟ ಮಕ್ಕಳು ಮುಂಗಾರು ಮಳೆಯಲ್ಲೇ ತೋಯ್ದು, ಇಡೀ ರಾತ್ರಿ ಬೀದಿಯಲ್ಲೇ ಕಳೆದಿದ್ದಾರೆ. –ಇದು ಶಿವಮೊಗ್ಗ ನಗರಪಾಲಿಕೆ ವ್ಯಾಪ್ತಿಯ ಹನುಮಂತನಗರದಲ್ಲಿ ಕೋರ್ಟ್‌ ಆದೇಶದಂತೆ ಮನೆ ಕಳೆದುಕೊಂಡ ಪರಿಶಿಷ್ಟ ಜಾತಿ ಹಾಗೂ ಮುಸ್ಲಿಂ ಸಮುದಾಯದ ಕುಟುಂಬಗಳ ಚಿತ್ರಣ.

ಸವಳಂಗ ರಸ್ತೆ– ರೈಲುನಿಲ್ದಾಣ ಸಂಪರ್ಕಿಸುವ 100 ಅಡಿ ರಸ್ತೆಗೆ ತಾಗಿಕೊಂಡಂತೆ ಇರುವ ಈ ಪ್ರದೇಶ 30 ವರ್ಷಗಳ ಹಿಂದೆ ಜಾಲಿಪೊದೆಗಳ ಕುರುಚಲು ಕಾಡು. ಮನೆಗೆಲಸ, ಮದುವೆ ಮನೆಗಳಲ್ಲಿ ಕಸಮುಸುರೆ ಮಾಡುವ ಮಹಿಳೆಯರು, ಕಟ್ಟಡ ಕಾರ್ಮಿಕರು, ಕೆಲವು ಆಟೊಚಾಲಕರು ಇಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು.

ಕ್ರಮೇಣ ಗುಡಿಸಲ ಜಾಗದಲ್ಲಿ ತಗಡು, ಹೆಂಚಿನ ಮನೆಗಳು ತಲೆ ಎತ್ತಿದ್ದವು. ಹಲವಾರು ವರ್ಷ ಮೂಲ ಸೌಕರ್ಯಗಳಿಲ್ಲದೆ ನೆಲೆಸಿದ್ದ ಜನರ ಹೋರಾಟದ ಫಲವಾಗಿ ನಗರಾಡಳಿತ ನೀರು, ಶೌಚಾಲಯ, ಯುಜಿಡಿ, ಕಾಂಕ್ರಿಟ್‌ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿತ್ತು. ಈಗ ಎಲ್ಲವನ್ನೂ ನಾಶ ಮಾಡಲಾಗಿದೆ.

ಹೊರಗೆ ಕಳುಹಿಸಲು ಬಲಪ್ರಯೋಗ: ಹನುಮಂತನಗರದ ಈ ಕುಟುಂಬಗಳನ್ನು ಮನೆಯಿಂದ  ದಿಢೀರ್ ಹೊರಹಾಕಲಾಗಿದೆ. ಕೋರ್ಟ್‌ ಆದೇಶದಂತೆ ಪೊಲೀಸ್‌ ಸರ್ಪಗಾವಲಿನ ಮಧ್ಯೆ ಜಮೀನು ಮಾಲೀಕನ ಕಡೆಯವರು ತೆರವುಗೊಳಿಸಿದ್ದಾರೆ. ಮನೆ ತೆರವುಗೊಳಿಸಲು ಒಪ್ಪದಿದ್ದವರನ್ನು ಬಲಪ್ರಯೋಗದ ಮೂಲಕ ಹೊರ ಕಳುಹಿಸಲಾಗಿದೆ. ಸಾಮಗ್ರಿಗಳನ್ನು ಬೀದಿಗೆ ಎಸೆಯಲಾಗಿದೆ.

ಅರ್ಧ ಜಾಗ ಖಾಸಗಿ ಸ್ವತ್ತು: ಸರ್ವೆ ನಂಬರ್‌ 87/2ರಲ್ಲಿ ಇರುವ ಈ ಪ್ರದೇಶವನ್ನು ಹಿಂದೆ ಮುಳ್ಳಕೆರೆ ಎಂದು ಕರೆಯಲಾಗುತ್ತಿತ್ತು. ಅದರಲ್ಲಿ 19 ಗುಂಟೆ ಎಚ್‌.ಜಿ. ಚಂದ್ರಶೇಖರಪ್ಪ ಅವರಿಗೆ ಸೇರಿದೆ. ಈಗ ಬೀದಿಗೆ ಬಿದ್ದಿರುವ ಕುಟುಂಬಗಳು ಕಟ್ಟಿಕೊಂಡಿರುವ ಮನೆಗಳ ಅರ್ಧ ಭಾಗ ಮಾತ್ರ ಅವರಿಗೆ ಸೇರಿದೆ. ಹಾಗಾಗಿ, ಕೋರ್ಟ್‌ ಈಚೆಗೆ ಮನೆಗಳ ತೆರವಿಗೆ ಆದೇಶ ನೀಡಿತ್ತು. 

ಮಾನವೀಯತೆ ಮರೆತ ಆಡಳಿತ: ಕೋರ್ಟ್‌ ಆದೇಶದ ಪ್ರಕಾರ ಬಡವರ ಮನೆಗಳನ್ನು ತೆರವುಗೊಳಿಸುವ ಮುನ್ನ ಸರ್ಕಾರ ಈ ಬಡ ಕುಟುಂಬಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಬೀದಿಯಲ್ಲೇ ರಾತ್ರಿ ಕಳೆದರೂ ಕನಿಷ್ಠ ಊಟದ ವ್ಯವಸ್ಥೆ ಮಾಡಿಲ್ಲ. ‘ಪತಿ, ಮಗನ ಜತೆ ವಾಸಿಸುತ್ತಿದ್ದೆ. 10 ವರ್ಷಗಳ ಹಿಂದೆ ಮಗ ತೀರಿಕೊಂಡ. ಎರಡು ವರ್ಷಗಳ ಹಿಂದೆ ಪತಿಯೂ ಇಲ್ಲವಾದರು. ಬದುಕಿಗೆ ಆಸರೆಯಾಗಿದ್ದ ಮನೆಯನ್ನೂ ಕಳೆದುಕೊಂಡಿದ್ದೇನೆ. ನಾನು ಬದುಕಿ ಏನು ಮಾಡುವುದು?’ ಎಂದು ಕಣ್ಣೀರಿಟ್ಟರು ರಾಜಮ್ಮ.

‘ನಾನೀಗ 5 ತಿಂಗಳ ಗರ್ಭಿಣಿ. ಮಹಿಳಾ ಪೊಲೀಸರು ಗರ್ಭಿಣಿ ಎಂದು ದಯೆ ತೋರದೇ ನಿಷ್ಕರುಣೆಯಿಂದ ಎಳೆದು ಹಾಕಿದರು. ರಾತ್ರಿ ಸುರಿವ ಮಳೆಯಲ್ಲೇ ಬೀದಿಯಲ್ಲಿ ಮಲಗಿದ್ದೆ. ಇಂತಹ ಸಂಕಷ್ಟ ಯಾರಿಗೂ ಬರುವುದು ಬೇಡ’ ಎಂದು ಬಿಕ್ಕಳಿಸಿದರು ಸ್ವಾತಿ ಪ್ರಮೋದ್‌.

‘ಯಾರಿಗೂ ಕಾನೂನು ತಿಳಿವಳಿಕೆ ಇಲ್ಲ. ಹೋರಾಟ ನಡೆಸಲು ಹಣವಿಲ್ಲ. ಯಾರೂ ನೆರವು ನೀಡಿಲ್ಲ. ಯಾವುದೇ ಮಾಹಿತಿ ನೀಡದೇ ಬೀದಿಗೆ ಹಾಕಿದ್ದಾರೆ’ ಎಂದು
ದೇವಿಬಾಯಿ, ಸರೋಜಮ್ಮ, ಶಹನಾಜ್‌, ದಿವ್ಯಾ, ರತ್ನಾಬಾಯಿ, ಮಲ್ಲಮ್ಮ, ಅನ್ವರ್ ಖಾನ್, ರುದ್ರಮ್ಮ, ಧರ್ಮಾನಾಯ್ಕ, ವಜೀರ್ ಸಾಬ್, ರಾಜು, ರಾಮಾನಾಯ್ಕ ಅವರ ಕುಟುಂಬಗಳೂ ಕಣ್ಣೀರು ಸುರಿಸಿದವು.

* * 

ವಿವಾದ ಕೋರ್ಟ್‌ನಲ್ಲಿ ಇರುವ ಮಾಹಿತಿ ಇತ್ತು. ಆದರೆ, ತೆರವಿನ ಆದೇಶ ಗಮನಕ್ಕೆ ಬಂದಿಲ್ಲ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದೇನೆ.  ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುತ್ತೇನೆ.
ಎನ್‌.ಏಳುಮಲೈ, ಮೇಯರ್

* * 

ಸಂತ್ರಸ್ತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು  ಹಾಗೂ ಊಟದ ವ್ಯವಸ್ಥೆ ಮಾಡಲು ನಗರ ಪಾಲಿಕೆಗೆ ಸೂಚಿಸಲಾಗಿದೆ.
ಕೆ.ಚನ್ನಬಸಪ್ಪ,
ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT