ಐದು ತಿಂಗಳಲ್ಲಿ 50 ಸಾವಿರ ಶೌಚಾಲಯ ಗುರಿ

7

ಐದು ತಿಂಗಳಲ್ಲಿ 50 ಸಾವಿರ ಶೌಚಾಲಯ ಗುರಿ

Published:
Updated:
ಐದು ತಿಂಗಳಲ್ಲಿ 50 ಸಾವಿರ ಶೌಚಾಲಯ ಗುರಿ

ಬೀದರ್‌: ‘ಜಿಲ್ಲೆಯಲ್ಲಿ ಅಕ್ಟೋಬರ್‌ 2ರೊಳಗೆ 50 ಸಾವಿರ ಶೌಚಾಲಯ ನಿರ್ಮಾಣ ಮಾಡಬೇಕು ಹಾಗೂ ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಲು ಒತ್ತುಕೊಡಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಅಧ್ಯಕ್ಷ ನಂಜಯ್ಯನಮಠ ಎಸ್‌.ಜಿ. ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಕೈಗೊಳ್ಳಲಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಗಳ ಭೌತಿಕ ಪರಿಶೀಲನಾ ಸಭೆಯಲ್ಲಿ ಹಾಗೂ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 2,79,197 ಕುಟುಂಬಗಳಿವೆ. 2012ರಲ್ಲಿ ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಶೇ 10ರಷ್ಟು ಅಂದರೆ 30,453 ಮನೆಗಳಿಗೆ ಮಾತ್ರ ವೈಯಕ್ತಿಕ ಶೌಚಾಲಯ ಇದ್ದವು. ನಂತರ 2,48,744 ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. 22,158 ಶೌಚಾಲಯಗಳು ನಿರ್ಮಾಣದ ಹಂತದಲ್ಲಿ ಇವೆ’ ಎಂದು ತಿಳಿಸಿದರು.

‘ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವಲ್ಲಿ ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್‌ ಕೊನೆಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕಲಬುರ್ಗಿ ಹಾಗೂ ರಾಯಚೂರು ಜಿಲ್ಲೆಗಳು ಇವೆ. ಗ್ರಾಮಸ್ಥರು ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಆಸಕ್ತಿಯಿಂದ ಮುಂದೆ ಬರುತ್ತಿಲ್ಲ. ಬಯಲು ಶೌಚದಿಂದ ಆರೋಗ್ಯದ ಮೇಲೆ ಆಗುವ ದಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಜಾಗೃತಿ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಕಲಬುರ್ಗಿ ಜಿಲ್ಲೆಯ ಇಟಗಾ ಗ್ರಾಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾ ಅವರು ಗ್ರಾಮದ ಪ್ರಮುಖರ ಮನವೊಲಿಸಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಮಾಡಿದ್ದಾರೆ. ಅಧಿಕಾರಿಗಳು ಆಸಕ್ತಿಯಿಂದ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಎಲ್ಲ ಗ್ರಾಮಗಳ ಎಲ್ಲ ಮನೆಗಳಿಗೂ ಶೌಚಾಲಯ ನಿರ್ಮಿಸಬಹುದಾಗಿದೆ’ ಎಂದರು.

‘ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳ ಗ್ರಾಮಗಳಲ್ಲಿ ಸ್ವಚ್ಛತೆಯ ಅರಿವು ಕಡಿಮೆ ಇದೆ. ಬಯಲು ಶೌಚದಿಂದಾಗಿಯೇ ಹೆಚ್ಚು ಜನ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗಾಗಿ  ₹20 ಸಾವಿರದಿಂದ  ₹30 ಸಾವಿರ ಖರ್ಚು ಮಾಡುತ್ತಾರೆ. ಮಗಳ ಮದುವೆಗೆ ₹1.5 ಲಕ್ಷವರೆಗೂ ಖರ್ಚು ಮಾಡುತ್ತಾರೆ. ಆದರೆ, ₹10 ಸಾವಿರ ಖರ್ಚು ಮಾಡಿ ಶೌಚಾಲಯ ಕಟ್ಟಿಸಿಕೊಳ್ಳುತ್ತಿಲ್ಲ’ ಎಂದು ಹೇಳಿದರು.

‘ಬೀದರ್‌ ಜಿಲ್ಲೆಯ ಜನ ಶುದ್ಧ ನೀರಿನ ಘಟಕಗಳನ್ನೂ ಬಳಸಿಕೊಳ್ಳುತ್ತಿಲ್ಲ. ದುಡ್ಡುಕೊಟ್ಟು ನೀರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಅಶುದ್ಧ ನೀರು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದ ವಿಷಾದ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 186 ಗ್ರಾಮ ಪಂಚಾಯಿತಿಗಳು ಇದ್ದರೂ ಶುದ್ಧ ನೀರಿನ ಘಟಕಗಳ ಸಂಖ್ಯೆ 145 ಮಾತ್ರ ಇವೆ.  ಕೆಲ ಗ್ರಾಮಗಳ ಜನ ಶುದ್ಧ ನೀರನ್ನೂ ಬಳಸುತ್ತಿಲ್ಲ. ಜಿಲ್ಲೆಯ 41 ಗ್ರಾಮಗಳಲ್ಲಿ ಘಟಕಗಳೇ ಸ್ಥಾಪನೆಯಾಗಿಲ್ಲ. ಉಡುಪಿ, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ 8, 10 ಶುದ್ಧ ನೀರಿನ ಘಟಕಗಳು ಇದ್ದರೂ ಮತ್ತೆ ಹೊಸ ಘಟಕಗಳನ್ನು ಕೇಳುತ್ತಿದ್ದಾರೆ. ಬೀದರ್‌ ಜಿಲ್ಲೆಯಲ್ಲಿ ಜನ ಶುದ್ಧ ನೀರಿನ ಘಟಕದ ವಿಷಯದಲ್ಲಿ ಆಸಕ್ತಿ ಹೊಂದಿಲ್ಲ’  ಎಂದು ಸಮಿತಿಯ ಸದಸ್ಯ ಆರ್‌.ಎಚ್‌.ತಿಪ್ಪೇಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಸೆಲ್ವಮಣಿ, ಸ್ವಚ್ಛ ಭಾರತ ಮಿಷನ್‌ ಯೋಜನೆಯ ಜಿಲ್ಲಾ ನೋಡೆಲ್‌ ಅಧಿಕಾರಿ ಡಾ.ಗೌತಮ ಅರಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ದತ್ತಾತ್ರಿ ಪೋಲಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

* * 

ಜಿಲ್ಲೆಯಲ್ಲಿ 718 ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. 74 ಯೋಜನೆಗಳು ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿವೆ.

ದತ್ತಾತ್ರಿ ಪೋಲಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry