ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಸಂಭ್ರಮದ ಕಾರಹುಣ್ಣಿಮೆ ಆಚರಣೆ

Last Updated 10 ಜೂನ್ 2017, 5:52 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮ ಹಾಗೂ ಸಂತಸದಿಂದ ಆಚರಿಸಲಾಯಿತು. ರಾಸುಗಳಿಗೆ ಸಿಂಗರಿಸಿದ ರೈತರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡರು. ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ತಿಂಡಿ ತಿನಿಸು ಸಿದ್ಧಪಡಿಸಲಾಗಿತ್ತು. ಬೆಳಿಗ್ಗೆಯಿಂದ ರಾಸುಗಳ ಅಲಂಕಾರ, ಮನೆ ಸ್ವಚ್ಛತೆ, ಕೃಷಿ ಪರಿಕರಗಳ ವಿಶೇಷ ಪೂಜೆ, ಎತ್ತಿನ ಗಾಡಿ ಓಟ, ಯುವಕರ ಸಂಭ್ರಮ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣಕ್ಕೆ ಕಾರಣವಾಯಿತು.

ರೈತರು ಗುರುವಾರ ರಾತ್ರಿಯೇ ಹೊನ್ನು ಹುಗ್ಗಿ ಕುಟ್ಟಿ, ವಿಶೇಷವಾಗಿ ಸಿಹಿ ಚಟ್ನಿ ತಯಾರಿಸಿ ರಾಸುಗಳಿಗೆ ನೀಡಿದರು. ಶುಕ್ರವಾರ ಬೆಳಿಗ್ಗೆ ಮಹಿಳೆಯರು ಮನೆ ಸ್ವಚ್ಛಗೊಳಿಸಿದರು. ರೈತರು ರಾಸುಗಳನ್ನು ಶುಚಿಗೊಳಿಸಿ, ಅವುಗಳಿಗೆ ಬೆಳಿಗ್ಗೆ ಸಿಹಿ, ಮೊಟ್ಟೆ ಹಾಕಲಾಯಿತು.

ನಂತರ ಕೊಂಬಿಗೆ ಬಣ್ಣ (ವಾರ್ನಿಸ್)ಬಳಿದರು. ಹೊಸ ದಾರದಿಂದ ತಯಾರಿಸಿದ ಮೊಗುಡ, ಮೊಗರಾಣಿ, ಗೊಂಡೆ, ಟೊಂಕದ ದಾರವನ್ನು ಎತ್ತುಗಳಿಗೆ ಹಾಕಿ ಅಲಂಕರಿಸಿದ ರೈತರು ಸಂತಸಪಟ್ಟರು. ಕೊರಳಲ್ಲಿ ಗೆಜ್ಜೆ ಸರ ಹಾಗೂ ವಿವಿಧ ರೀತಿಯ ಅಲಂಕಾರಿಕ ವಸ್ತುಗಳನ್ನು ಹಾಕಿದರು.ಕೃಷಿ ಚಟುವಟಿಕೆಯ ಪರಿಕರಗಳಾದ ಕೂರಿಗೆ, ಕುಂಟಿ, ಬುಕ್ಕಾ ಹಗ್ಗ, ಮಂಡಿ, ನೊಗ ಸೇರಿದಂತೆ ಇನ್ನಿತರ ಎಲ್ಲ ಸಾಮಾಗ್ರಿಗಳನ್ನು ಪೂಜೆ ಸಲ್ಲಿಸಿದರು. ಕೆಲ ಗ್ರಾಮಗಳಲ್ಲಿ ಶನಿವಾರ ಹಬ್ಬ ಆಚರಿಸಲಾಗುತ್ತದೆ.   

ಕಮಲಾಪುರ ವರದಿ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ರೈತರು ಸಂಭ್ರದಿಂದ ಕಾರು ಹುಣ್ಣಿಮೆ ಆಚರಿಸಿದರು. ರಾಸುಗಳಿಗೆ ಬಣ್ಣ ಬಳಿದು ಘೊಂಡ್ಯಾ, ಗೆಜ್ಜಿ ಸರ, ಮತಾಟಿಗಳನ್ನು ಕಟ್ಟಿ ಸಿಂಗರಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತು, ಬಂಡಿಗಳನ್ನು ಓಡಿಸಿ ಸಂಭ್ರಮಿಸಿದರು. ಬಂಡಿಗಳ ಓಟದ ಸ್ಪರ್ಧೆ ನಡೆಯಿತು. ಮುಂಗಾರು ಆರಂಭದಲ್ಲಿ ಬರುವ ಈ ಹಬ್ಬ ರೈತರಿಗೆ ಬಿತ್ತನೆ ಸಿದ್ಧತೆಗೆ ಅಣಿ ಮಾಡುತ್ತದೆ. ಹೀಗಾಗಿ ರೈತರೆಲ್ಲ ಕೃಷಿ ಸಲಕರಣೆಗಳನ್ನು ಸಜಾವು ಮಾಡಿ ಒಂದೆಡೆ ಸೇರಿಸಿ ಪೂಜೆ ಮಾಡಿದರು. ನಾವದಗಿ ಮತ್ತಿತರ ಗ್ರಾಮಗಳಲ್ಲಿ ಯುವಕರಿಗಾಗಿ ಬಂಡೆ ಎತ್ತುವ ಸ್ಪರ್ಧೇ ಏರ್ಪಡಿಸಲಾಗಿತ್ತು.

ಆಳಂದ ವರದಿ: ರೈತಾಪಿ ವರ್ಗದ ಕಾರಹುಣ್ಣಿಮೆ ಹಬ್ಬದ ಸಂಭ್ರಮವು ಶುಕ್ರವಾರ ತಾಲ್ಲೂಕಿನ ವಿವಿಧೆಡೆ ಕಂಡುಬಂತು. ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆಯು ರಾಸುಗಳ ಮೆರವಣಿಗೆಯಲ್ಲಿ ರೈತರು ಸಡಗರದಿಂದ ಪಾಲ್ಗೊಳ್ಳುವುದಕ್ಕೆ ಕಾರಣವಾಯಿತು. ರೈತರು ಕಾರಹುಣ್ಣಿಮೆ ಹಬ್ಬದ ಪ್ರಯುಕ್ತ ಬೆಳಿಗ್ಗೆ ತಮ್ಮ ರಾಸುಗಳ ಮೈ ತೊಳೆದರು. ಅವುಗಳಿಗೆ ವಿಶೇಷ ಪೂಜೆ ಹಾಗೂ ಪ್ರಸಾದ ನೀಡಿ ಭಕ್ತಿ ಸಮರ್ಪಿಸಿದರು.

ಎತ್ತುಗಳ ಉತ್ಸವಕ್ಕೆಂದು ವಿವಿಧ ಬಣ್ಣಗಳಿಂದ ಅವುಗಳನ್ನು ಅಲಂಕರಿಸಿದರು. ಹೊಸ ನೂಲಿನ ಹಗ್ಗ, ಮತಾಟಿ, ಗೋಂಡ್ಯಾ, ಜ್ಯೂಲ್‌ ಹಾಕಿ ರಾಸುಗಳನ್ನು ಶೃಂಗರಿಸಿ ಗ್ರಾಮದ ಮಂದಿರಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಪೂಜೆ ಸಲ್ಲಿಸಿದರು. ಪಟ್ಟಣದ ನಾಲ್ಕು ಅಗಸಿ ಬಾಗಿಲಲ್ಲಿ ಸಾಂಪ್ರಾದಾಯಿಕ ಮನೆತನದವರ ರಾಸುಗಳನ್ನು ಸಿಂಗರಿಸಿ ಮೆರವಣಿಗೆ ಮುಖಾಂತರ ತಂದು ಕಾರಹುಣ್ಣಿಮೆ ಕರಿ ಹರಿಯುವ ಪದ್ಧತಿ ನಡೆಯಿತು.

ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಜಾ ಭಜಂತ್ರಿ, ಡಿಜೆ ಮೂಲಕ ತಮ್ಮ ರಾಸುಗಳನ್ನು ಮೆರವಣಿಗೆಗೆ ತಂದರು. ಇದೇ ರೀತಿ ತಾಲ್ಲೂಕಿನ ಮಾದನ ಹಿಪ್ಪರಗಾ, ನಿಂಬರ್ಗಾ, ಮಾಡಿಯಾಳ, ಖಜೂರಿ, ಕಡಗಂಚಿ, ನರೋಣಾ, ಕೋರಳ್ಳಿ, ಜಿಡಗಾ ಮತ್ತಿತರ ಗ್ರಾಮಗಳಲ್ಲೂ ಸಂಭ್ರಮದಿಂದ ರೈತರು ಕಾರಹುಣ್ಣಿಮೆ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಿದರು. ಪೊಲೀಸ್‌ ಬಿಗಿ ಬಂದೋಬಸ್ತ್‌ ಒದಗಿಸಲಾಗಿತ್ತು.

ತುಂತರು ಮಳೆಯಲ್ಲಿ ಹುಣ್ಣಿಮೆ ಆಚರಿಸಿದ ರೈತರು
ಸೇಡಂ:ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಶುಕ್ರವಾರ ವಿಶಿಷ್ಟವಾಗಿ ಕಾರಹುಣ್ಣಿಮೆ ಆಚರಿಸಲಾಯಿತು. ಸಂಜೆ 5ಕ್ಕೆ ಸುರಿಯುತ್ತಿರುವ ತುಂತುರು ಮಳೆಯಲ್ಲೇ ರೈತರು ಹಬ್ಬದ ಸಡಗರದಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆ 8 ರಿಂದ ಗ್ರಾಮದ ರೈತರು ಸುಮಾರು 50 ಜೋಡಿ ಎತ್ತುಗಳ ಮೆರವಣಿಗೆ ಕೈಗೊಂಡರು.

ಮಧ್ಯಾಹ್ನ 2 ರಿಂದ 4ರವರೆಗೆ ಎತ್ತಿನ ಗಾಡಿ ಓಡಿಸಲಾಯಿತು. ಸಂಜೆ 5ಕ್ಕೆ ಗ್ರಾಮದ ಮುಖಂಡ ಮದುಸೂದನರೆಡ್ಡಿ ಮಾಲಿ ಪಾಟೀಲ ಅವರ ಎತ್ತುಗಳು ಕರಿ ಕಡಿದವು. ನಂತರ ಅವರ ಎತ್ತುಗಳ ಗ್ರಾಮ ಪ್ರಮುಖ ಬೀದಿಗಳಲ್ಲಿ 5 ಸುತ್ತು ಮೆರವಣಿಗೆ ನಡೆಯಿತು.

ಮುಧೋಳ ಗ್ರಾಮದಲ್ಲಿ ನಡೆದ ಕಾರಹುಣ್ಣಿಮೆಗೆ ಸುತ್ತಮುತ್ತಲಿನ ಶಿಲಾರಕೋಟ್, ನಾಡೆಪಲ್ಲಿ, ಗೋಪನಪಲ್ಲಿ, ಆಡಕಿ, ಬಟಗೇರಾ, ಬೊಂದೆಂಪಲ್ಲಿ, ಕೊತ್ತಪಲ್ಲಿ ಸೇರಿದಂತೆ ವಿವಿಧ ತಾಂಡಾಗಳ ಜನರು ರಾಸುಗಳ ಸಮೇತ ಬಂದರು.

ಮನೆಯ ಮಾಳಿಗೆ, ಬಿಲ್ಡಿಂಗ್ ಸೇರಿದಂತೆ ಕಟ್ಟಡಗಳ ಮೇಲೆ ನಿಂತು ಕರಿ ಕಡಿಯುವುದು ನೋಡಿದರು. ಮಹಿಳೆಯರೂ ಸಹ ಕಾರಹುಣ್ಣಿಮೆಯ ಆಚರಣೆ ನೋಡಲು ನೆರೆದಿದ್ದರು.
ಗ್ರಾಮದ ಮುಖಂಡ ಬೀಮರೆಡ್ಡಿ ದಳಪತಿ, ವೆಂಕಟಯ್ಯ ಕುಸುಮ, ಲಕ್ಷ್ಮಿಕಾಂತರಾವ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟರಾವ ಮಿಸ್ಕಿನ್, ಶ್ರೀನಿವಾಸರೆಡ್ಡಿ ಪೊಲಿಸ್ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ಫಿರಂಗಿ, ಸಿಪಿಐ ತಮ್ಮರಾಯ ಪಾಟೀಲ, ಸಾಯಪ್ಪ ದಾಮರಗಿದ್ದಾ, ಮನೋಹರ್ ಹೊನಕೇರಿ ಇದ್ದರು.

* * 

ಈ ವರ್ಷ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಸುರಿದಿರುವ ಕಾರಣ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿದೆ. 
ಸಾಯಪ್ಪ ದಾಮರಗಿದ್ದಾ
ಸದಸ್ಯ, ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT