ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ದಿನಗಳಲ್ಲಿ ಎರಡು ದಿನ ನೀರಿಲ್ಲ!

Last Updated 10 ಜೂನ್ 2017, 6:04 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿನಗರದ 12 ವಲಯಗಳ ಪೈಕಿ, 4 ವಲಯಗಳಿಗೆ 24x7 ಕುಡಿವ ನೀರು ಪೂರೈಕೆ ಪ್ರಾರಂಭವಾಗಿ ಐದು ದಿನಗಳು ಕಳೆದಿವೆ. ಸದ್ಯ ‘ಪಿ ಆ್ಯಂಡ್‌ ಟಿ’ ಕ್ವಾಟರ್ಸ್‌, ಹುಡ್ಕೊ ಕಾಲೊನಿ, ಕೆ.ಸಿ.ಪಾರ್ಕ್‌, ರಾಜೀವ್‌ ಗಾಂಧಿ ನಗರದ ಜನತೆ ನಿರಂತರ ಕುಡಿವ ನೀರಿನ ಭಾಗ್ಯ ಪಡೆಯುತ್ತಿದ್ದಾರೆ.

ಆದರೆ, ಕಳೆದ 5 ದಿನಗಳಲ್ಲಿ ನೀರು ಪೂರೈಕೆಯಾಗಿರುವುದು 3 ದಿನಗಳು ಮಾತ್ರ. ‘ಎರಡು ದಿನ ನೀರೇ ಬರಲಿಲ್ಲ. ಅಲ್ಲಲ್ಲಿ ಪೈಪ್‌ಲೈನ್‌ ಸೋರಿಕೆ ಇರುವುದರಿಂದ ದುರಸ್ತಿ ಕಾರ್ಯ ಮುಂದುವರಿದಿದೆ. ಹೀಗಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮೂರುದಿನ ನೀರು ಬಂತು, ಅದೂ ಸರಾಸರಿ ಒಂದೂವರೆ ಗಂಟೆ ಕಾಲ ಮಾತ್ರ’ ಹುಡ್ಕೊ ಮತ್ತು ರಾಜೀವ್‌ಗಾಂಧಿ ನಗರದ ನಿವಾಸಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ತರಾತುರಿಯಲ್ಲಿ 24x7 ಯೋಜನೆಗೆ ಚಾಲನೆ ನೀಡಿದ್ದಾರೆ. ನೀರು ಪೂರೈಕೆ ಇನ್ನೂ ಪ್ರಾಯೋಗಿಕ ಹಂತದಲ್ಲೇ ಇದೆ. ಹಲವೆಡೆ ಸೋರಿಕೆ ಇದೆ. ಪರೀಕ್ಷೆಗಾಗಿ ಹರಿಸುತ್ತಿರುವ ನೀರಿನಲ್ಲಿ ಬಹುಪಾಲ ಸೋರಿಕೆಯಿಂದ ಚರಂಡಿ ಪಾಲಾಗುತ್ತಿದೆ. ಪೈಪ್‌ಲೈನ್‌ ಅಳವಡಿಕೆ ಕೂಡ ಸಮರ್ಪಕವಾಗಿ ಆಗಿಲ್ಲ. ಮನೆಗಳಲ್ಲಿ ಅಳವಡಿಸಿರುವ 24x7 ನಳದ ಸಂಪರ್ಕ ಜೋರಾಗಿ ಗಾಳಿ ಬೀಸಿದರೆ ನೆಲಕ್ಕೆ ಬೀಳು ವಂತಿದೆ’ ಎಂದು ತಮ್ಮ ಹೆಸರು ಬಹಿ ರಂಗಪಡಿಸಲು ಇಚ್ಛಿಸದ ಹುಡ್ಕೊ ಕಾಲೊನಿ ನಿವಾಸಿ ದೂರಿದರು.

‘ಪ್ರಾಯೋಗಿಕ ಪರೀಕ್ಷೆ ವೇಳೆ ಕೆಲವು ಕಡೆಗಳಲ್ಲಿ ಪೈಪ್‌ಲೈನ್‌ ಸೋರಿಕೆ ಕಂಡು ಬಂದಿದೆ. ಇದನ್ನು ಪತ್ತೆ ಹಚ್ಚಿ ಸರಿಪಡಿ ಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ದುರಸ್ತಿಯಿಂದ ನೀರು ಪೂರೈಕೆಯಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿದೆ.  ನಾಲ್ಕೂ ವಲಯಗಳಲ್ಲಿ ಸೋರಿಕೆ ಸಮಸ್ಯೆಯನ್ನು ಇನ್ನೊಂದು ವಾರದಲ್ಲಿ ಸರಿಪಡಿಸಿ, ನಿರಂತರ ನೀರು ಪೂರೈಕೆ ಮಾಡಲಾಗು ವುದು’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜೂನ್ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡಿದ್ದರು. ನಾಲ್ಕೂ ವಲಯ ಗಳಲ್ಲಿ ವಿವಿಧ ಕಡೆಗಳಲ್ಲಿ ಪೈಪ್‌ಲೈನ್‌ ಸೋರಿಕೆ ಕಂಡು ಬಂದಿದೆ.  ‘ಪಿ ಅಂಡ್‌ ಟಿ ಕ್ವಾಟರ್ಸ್‌’ ಮತ್ತು ರಾಜೀವ್ ಗಾಂಧಿ ನಗರದಲ್ಲಿ ಬೆಳಿಗ್ಗೆ 11ರಿಂದ 12 ಗಂಟೆ ವರೆಗೆ, ಹುಡ್ಕೊ ಕಾಲೊನಿ ಹಾಗೂ ಆನಂದ ನಗರದಲ್ಲಿ ಸಂಜೆ 6ರಿಂದ 7 ಗಂಟೆವರೆಗೆ ಮಾತ್ರ 24x7 ನೀರು ಪೂರೈಕೆಯಾಗಿದೆ.

‘ಹೆಸರಿಗೆ 24x7, ಆದರೆ, ನೀರು ಯಾವಾಗ ಬರುತ್ತದೆ ಎನ್ನುವುದನ್ನು ಕಾಯುತ್ತಾ ಕೂರಬೇಕು. ಪ್ರಾಯೋಗಿಕ ಪರೀಕ್ಷೆಗಾಗಿ ಹರಿಸುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ.  ಗೃಹ ಬಳಕೆಗೆ ಮಾತ್ರ ಬಳಸಿಕೊಳ್ಳಬಹುದು. ಕುಡಿವ ನೀರಿಗಾಗಿ  ಶುದ್ಧ ಕುಡಿವ ನೀರಿನ ಘಟಕ ಗಳಿಗೆ ಅಲೆದಾಡುವುದು ತಪ್ಪಿಲ್ಲ’ ಎಂದು ‘ಪಿ ಅಂಡ್‌ ಟಿ’ ಕ್ವಾಟರ್ಸ್‌ ನಿವಾಸಿ ಪುಷ್ಪಾ ಶೀಲವಂತ ಪ್ರತಿಕ್ರಿಯಿಸಿದರು.

‘ಹುಡ್ಕೊ ಕಾಲೊನಿಯಲ್ಲಿ ಅಳವಡಿ ಸಿರುವ 24x7  ನಳದಲ್ಲಿ ಜೂನ್ 4ರಿಂದ 9ರ ನಡುವೆ 3ದಿನ ಅರ್ಧ ಗಂಟೆ ನೀರು ಬಂದಿದೆ. ವಾರ್ಡ್‌ನಲ್ಲಿ ಎಲ್ಲಾದರೂ ಒಂದು ಕಡೆ ಪೈಪ್‌ಲೈನ್‌ ಸೋರಿಕೆ ಕಂಡು ಬಂದರೆ, ನಂತರ ಆ ಲೈನ್‌ಗೆ ನೀರು ಬಿಡುವುದಿಲ್ಲ. ಕೆಲ ಬಾರಿ ಬೆಳಿಗ್ಗೆಯಿಂದ ಸಂಜೆವರೆಗೂ ಕಾದರೂ ನಳದಲ್ಲಿ ಒಂದು ಹನಿ ನೀರು ಬಂದಿಲ್ಲ’ ಎಂದು ಹುಡ್ಕೊ ಕಾಲೊನಿಯ ನಿವಾಸಿ ದೀಪಾ ಅಣ್ಣಿಗೇರಿ ಬೇಸರ ವ್ಯಕ್ತಪಡಿಸಿದರು.

ಅಸಮರ್ಪಕ ನಳ ಅಳವಡಿಕೆ; ದೂರು–‘24X7 ಪ್ರಾಯೋಗಿಕ ಪರೀಕ್ಷೆ ನೀರನ್ನು ಪಾತ್ರೆ, ಬಟ್ಟೆ ತೊಳೆಯಲು ಬಳಕೆ ಮಾಡಿ ಕೊಳ್ಳುತ್ತಿದ್ದೇವೆ. ಒಂದು ದಿನ ನೀರು ಬಂದರೆ, ಮುರುದಿನ ಬರುವುದಿಲ್ಲ. ನೀರು ಬಂದಾಗೊಮ್ಮೆ ನಳ ಅಲಗಾಡಲು ಆರಂಭವಾಗುತ್ತದೆ. ಕಬ್ಬಿಣದ ನಳ ಇದ್ದರೂ, ಅದನ್ನು ಸಮರ್ಪಕವಾಗಿ ಅಳ ವಡಿಸಿಲ್ಲ. ಸುಮ್ಮನೆ ಕೂರಿಸಿ ಹೋಗಿ ದ್ದಾರೆ. ನಳ ಸಂಪರ್ಕವನ್ನು ನಗರಸಭೆ ಅಧಿಕಾರಿಗಳು ಪರಿಶೀಲಿಸಿ, ಶಾಶ್ವತವಾಗಿ ಅಳವಡಿಸುವ ವ್ಯವಸ್ಥೆ ಮಾಡಬೇಕು. ಇಲ್ಲ ವಾದರೆ, ಖಂಡಿತವಾಗಿ ಒಂದೆರಡು ತಿಂಗಳಲ್ಲಿ ರಾಜೀವ್ ಗಾಂಧಿ ನಗರದಲ್ಲಿ ಅಳವಡಿಸಿರುವ ನಳಗಳು ಕಿತ್ತು ಬರು ತ್ತವೆ’ ಎಂದು ವಾರ್ಡ್‌ ನಿವಾಸಿಗಳಾದ ಲಲಿತಾ ಕಡ ಬೂರ, ಫರೀದಾ ಬೆಟಗೇರಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT