ಸಮೀಪಿಸುತ್ತಿದೆ ಜಿಎಸ್‌ಟಿ ಡೆಡ್‌ಲೈನ್: ಇನ್ನೂ ಪೂರ್ಣಗೊಂಡಿಲ್ಲ ಸಿದ್ಧತೆ

7

ಸಮೀಪಿಸುತ್ತಿದೆ ಜಿಎಸ್‌ಟಿ ಡೆಡ್‌ಲೈನ್: ಇನ್ನೂ ಪೂರ್ಣಗೊಂಡಿಲ್ಲ ಸಿದ್ಧತೆ

Published:
Updated:
ಸಮೀಪಿಸುತ್ತಿದೆ ಜಿಎಸ್‌ಟಿ ಡೆಡ್‌ಲೈನ್: ಇನ್ನೂ ಪೂರ್ಣಗೊಂಡಿಲ್ಲ ಸಿದ್ಧತೆ

ನವದೆಹಲಿ: ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜುಲೈ 1ರಿಂದ ಜಾರಿಯಾಗಲಿದ್ದು, ಇದಕ್ಕೆ ಬೇಕಾದ ಪೂರ್ಣ ಪ್ರಮಾಣದ ಸಿದ್ಧತೆ ದೇಶದಲ್ಲಿ ಇನ್ನೂ ಆಗಿಲ್ಲ ಎಂದು ಇಂಡಿಯಾಸ್ಪೆಂಡ್‌ ವೆಬ್‌ಸೈಟ್ ವಿಶ್ಲೇಷಣಾತ್ಮಕ ವರದಿ ಮಾಡಿದೆ.

ಜಿಎಸ್‌ಟಿ ಜಾರಿಯಿಂದ ಸಣ್ಣ ಪ್ರಮಾಣದ ಉತ್ಪಾದನಾ ಕಂಪೆನಿಗಳಿಗೆ ಹೊರೆಯಲಾಗಲಿದೆ. ಕೇವಲ ಒಂದು ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸಣ್ಣ ಪ್ರಮಾಣದ ಉತ್ಪಾದನಾ ಕಂಪೆನಿಯೊಂದು ಈಗ ಸಲ್ಲಿಸುವ ತೆರಿಗೆ ರಿಟರ್ನ್ಸ್‌ಗಿಂತ ಎರಡಕ್ಕಿಂತಲೂ ಹೆಚ್ಚುಪಟ್ಟು ತೆರಿಗೆ ರಿಟರ್ನ್ಸ್‌ ಸಲ್ಲಿಸಬೇಕಾಗಲಿದೆ. ಈಗ 13 ತೆರಿಗೆ ರಿಟರ್ನ್ಸ್‌ ಸಲ್ಲಿಸುವ ಸಣ್ಣ ಪ್ರಮಾಣದ ಉತ್ಪಾದನಾ ಕಂಪೆನಿಯೊಂದು ಇನ್ನು ಮುಂದೆ ವರ್ಷದಲ್ಲಿ 37 ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ (ತಿಂಗಳಿಗೆ ಮೂರು ಮತ್ತು ವಾರ್ಷಿಕ ಒಂದು) ಎಂದು ವರದಿ ಹೇಳಿದೆ. ಜತೆಗೆ, ಬ್ಯಾಂಕುಗಳು, ಕೈಗಾರಿಕೆಗಳು, ಹಣಕಾಸು ವೃತ್ತಿನಿರತರು ಇನ್ನೂ ಜಿಎಸ್‌ಟಿಗೆ ಸಿದ್ಧರಾಗಿಲ್ಲ ಎಂದಿದೆ.

ಜಿಎಸ್‌ಟಿ ಎದುರಿಸಬೇಕಾದರೆ ಈಗಿರುವ ಸಂಪೂರ್ಣ ವ್ಯವಸ್ಥೆ ಬದಲಾಗಬೇಕಿದೆ ಎಂದು ‘ಚಾರ್ಟಡ್ ಅಕೌಂಟಟ್ಸ್ ಆಫ್ ಇಂಡಿಯಾ’ದ ಮಾಜಿ ಅಧ್ಯಕ್ಷ ಕೆ. ರಘು ಅಭಿಪ್ರಾಯಪಟ್ಟಿದ್ದಾರೆ.

ಪರೋಕ್ಷ ತೆರಿಗೆ ವ್ಯವಸ್ಥೆ ಜಾರಿಗೆ ತಮ್ಮ ಸಿಬ್ಬಂದಿ ಇನ್ನೂ ತಯಾರಾಗಿಲ್ಲ ಎಂದು 237 ಬ್ಯಾಂಕುಗಳನ್ನು ಪ್ರತಿನಿಧಿಸುವ ಭಾರತೀಯ ಬ್ಯಾಂಕರುಗಳ ಸಂಘಟನೆ ಈಗಾಗಲೇ ಸಂಸದೀಯ ಸಮಿತಿಗೆ ಮಾಹಿತಿ ನೀಡಿದೆ.

‘ಈಗ ಎಲ್ಲ ವ್ಯವಹಾರವೂ ಆನ್‌ಲೈನ್ ಮೂಲಕ ನಡೆಯುತ್ತಿದೆ. ಇದನ್ನು ನಿರಂತರವಾಗಿ ಅಪ್‌ಡೇಟ್ ಮಾಡಬೇಕಿದೆ. ಒಂದು ಉದ್ಯಮ ವರ್ಷಕ್ಕೆ 37 ತೆರಿಗೆ ರಿಟರ್ನ್ಸ್‌ ಸಲ್ಲಿಕೆ ಮಾಡಬೇಕಾಗುತ್ತದೆ’ ಎಂದು ಎಕಾನಮಿಕ್ ಟೈಮ್ಸ್ ವರದಿ ಉಲ್ಲೇಖಿಸಿ ಇಂಡಿಯಾಸ್ಪೆಂಡ್‌ ಮಾಹಿತಿ ನೀಡಿದೆ.

ಶೆಕಡ 5, 12, 18 ಮತ್ತು 28ರಂತೆ ಸರ್ಕಾರವು ಜಿಎಸ್‌ಟಿ ದರ ನಿಗದಿಪಡಿಸಿದೆ. ಇದನ್ನು ಅಳವಡಿಸಿಕೊಳ್ಳಬೇಕಾದರೆ ಇಡೀ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಬೇಕಿದೆ. ಹೊಸ ತೆರಿಗೆ ನಿಯಮಗಳ ಬಗ್ಗೆ ಸಿಬ್ಬಂದಿಯನ್ನು ತರಬೇತುಗೊಳಿಸಬೇಕಿದೆ. ಈ ವಿಚಾರದಲ್ಲಿ ಸವಾಲು ಎದುರಾಗಲಿದೆ ಎಂದು ವರದಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry