9 ಕೆರೆಗಳಿಗೆ ಕಾಯಕಲ್ಪದ ಯೋಜನೆ

7

9 ಕೆರೆಗಳಿಗೆ ಕಾಯಕಲ್ಪದ ಯೋಜನೆ

Published:
Updated:
9 ಕೆರೆಗಳಿಗೆ ಕಾಯಕಲ್ಪದ ಯೋಜನೆ

ವಿಜಯಪುರ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ತನ್ನ ಸಿಎಸ್‌ಆರ್‌ (ಸಮುದಾಯದ ಸಾಮಾಜಿಕ ಜವಾಬ್ದಾರಿ) ಫಂಡ್‌ನಿಂದ ಒಂಭತ್ತು ಕೆರೆಗಳ ಪುನರುಜ್ಜೀವನ ಕಾಮಗಾರಿ ಕೈಗೆತ್ತಿಕೊಂಡಿದೆ.

ಧಾರವಾಡದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬ್ಯಾಂಕ್‌ ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿನ ತಲಾ ಒಂದೊಂದು ಕೆರೆಯ ಕಾಯಕಲ್ಪಕ್ಕೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಮುನ್ನುಡಿ ಬರೆದಿದೆ.

‘ಒಂಬತ್ತು ಜಿಲ್ಲೆ ವ್ಯಾಪ್ತಿಯಲ್ಲಿನ ಒಂಬತ್ತು ಕೆರೆಗಳ ಪುನರುಜ್ಜೀವನಕ್ಕೆ ₹ 45 ಲಕ್ಷ ಮೀಸಲಿಟ್ಟಿದ್ದು, ಪ್ರತಿ ಕೆರೆಯ ಕಾಯಕಲ್ಪಕ್ಕೆ ತಲಾ ₹ 5 ಲಕ್ಷ ವಿನಿಯೋಗಿಸಲಾಗುವುದು. ಪ್ರಸ್ತುತ ಸಾಲಿನ ವಿಶ್ವ ಪರಿಸರ ದಿನಾಚರಣೆಗೆ ಬ್ಯಾಂಕ್‌ನ ಕೊಡುಗೆ ಇದಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಎಸ್‌.ರವೀಂದ್ರನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ವಿಜಯಪುರ ಜಿಲ್ಲೆಯ ಕಾರಜೋಳ ಕೆರೆಯ ಪುನರುಜ್ಜೀವನ ಕಾಮಗಾರಿ ನಡೆದಿದ್ದು, ₹ 1.5 ಲಕ್ಷ ವ್ಯಯಿಸಲಾಗಿದೆ. ಇದೇ ರೀತಿ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕೆರೆಯ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಲಾಗಿದೆ.

ಉಳಿದಂತೆ ಏಳು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆರೆಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಳೆ ಆರಂಭಗೊಂಡು, ಕೆರೆಗಳಿಗೆ ನೀರು ಹರಿದು ಬರುವ ಮುನ್ನವೇ ಎಲ್ಲ ಕೆರೆಗಳ ಪುನರುಜ್ಜೀವನ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.

‘ಕೆರೆಯ ಹೂಳೆತ್ತುವ ಮೂಲಕ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದು. ಒಡ್ಡಿನ ಮೇಲೆ, ಅಂಗಳ, ಸುತ್ತಲೂ ಬೆಳೆದಿರುವ ಕಂಟಿ ಕೀಳಿಸುವುದು, ಕೆರೆಗೆ ನೀರು ಹರಿದು ಬರುವ ಪ್ರದೇಶದಲ್ಲಿ ನಿರ್ಮಿಸಿರುವ ತಡೆಗೋಡೆ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಬರುವ ಕಾಮಗಾರಿಗಳನ್ನು ಸ್ಥಳೀಯರ ಸಹಕಾರದಿಂದ ನಡೆಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಸೈಕಲ್‌ ಬಳಕೆ: ‘ಹಿಂದಿನ ವರ್ಷದ ಪರಿಸರ ದಿನಾಚರಣೆ ಸಂದರ್ಭ ಬ್ಯಾಂಕ್‌ನ ಕೇಂದ್ರ ಕಚೇರಿಯ ಎಲ್ಲ ಸಿಬ್ಬಂದಿ ವಾರಕ್ಕೊಮ್ಮೆ ಸೈಕಲ್‌ ಬಳಸುವ ಪ್ರತಿಜ್ಞೆ ಮಾಡಿದ್ದೆವು. ಅದರಂತೆ ಸೈಕಲ್‌ ಬಳಸುತ್ತಿದ್ದೇವೆ. ಇದರಿಂದ ನಮ್ಮ ಆರೋಗ್ಯ ಸದೃಢಗೊಂಡಿತು. ಕೊಂಚ ಕಾಸು ಉಳಿದವು.

ಇದನ್ನು ಈ ವರ್ಷವೂ ಮುಂದುವರಿಸುತ್ತೇವೆ. ಇದರಿಂದ ನಮಗಷ್ಟೇ ಲಾಭವಾಯಿತು. ಸಾಮಾನ್ಯಜನರಿಗೆ ಪ್ರಯೋಜನವಾಗಲಿಲ್ಲ. ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಬೇಕು ಎಂಬ ಚಿಂತನೆ ನಡೆಸಿದಾಗ ಹೊಳೆದ ಆಲೋಚನೆಯೇ ಕೆರೆಗಳ ಪುನರುಜ್ಜೀವನ ಕಾಮಗಾರಿ’ ಎಂದರು.

ಈ ಯೋಜನೆಗೆ ನಬಾರ್ಡ್‌ ಸಹ ಸಾಥ್‌ ನೀಡಿದೆ. ಜಂಟಿಯಾಗಿ ಕೆರೆಗಳ ಪುನರುಜ್ಜೀವನ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ನಾವು ಅಭಿವೃದ್ಧಿಗೊಳಿಸಿದ ಬಳಿಕ ಕೆರೆಯ ನಿರ್ವಹಣೆಯ ಹೊಣೆಯನ್ನು ಸ್ಥಳೀಯರಿಗೆ, ಗ್ರಾಮ ಪಂಚಾಯ್ತಿಗೆ ನೀಡುತ್ತೇವೆ’ ಎಂದು ಎಸ್‌.ರವೀಂದ್ರನ್‌ ತಿಳಿಸಿದರು.

* * 

ಬ್ಯಾಂಕ್‌ ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ತಲಾ ಒಂದೊಂದು ಕೆರೆಯ ಪುನರುಜ್ಜೀವನ ಕಾಮಗಾರಿಯನ್ನು ವಿಶ್ವ ಪರಿಸರ ದಿನದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿದೆ

ಎಸ್‌.ರವೀಂದ್ರನ್‌

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ

 * * 

ಬ್ಯಾಂಕ್‌ನವರು ಕೆರೆಗಳ ಪುನರುಜ್ಜೀವನ ಕಾಮಗಾರಿ ಕೈಗೊಂಡಿರುವುದು ನಾಲ್ಕು ಗ್ರಾಮಗಳ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ

ಭೀಮಶಿ ಆಸಂಗಿ

ಕಾರಜೋಳ ಗ್ರಾಮಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry