ಕಾರಹುಣ್ಣಿಮೆ ಓಟದಲ್ಲಿ ಕರೆಂಟ್‌ ಶಾಕ್‌!

7

ಕಾರಹುಣ್ಣಿಮೆ ಓಟದಲ್ಲಿ ಕರೆಂಟ್‌ ಶಾಕ್‌!

Published:
Updated:
ಕಾರಹುಣ್ಣಿಮೆ ಓಟದಲ್ಲಿ ಕರೆಂಟ್‌ ಶಾಕ್‌!

ವಿಜಯಪುರ: ಎತ್ತುಗಳಿಗೆ ಕರೆಂಟ್ ಶಾಕ್‌ ನೀಡುವ ಮೂಲಕ ಬಂಡಿಗಳನ್ನು ವೇಗವಾಗಿ ಓಡಿಸಲು ಯತ್ನಿಸಿದ ಅಮಾನವೀಯ ಘಟನೆ ನಗರದಲ್ಲಿ ಶುಕ್ರವಾರ ಮುಸ್ಸಂಜೆ ನಡೆಯಿತು. ಕಾರ ಹುಣ್ಣಿಮೆಯಂದು ಸಂಪ್ರದಾಯದಂತೆ ಎತ್ತಿನ ಬಂಡಿ ಓಟ ನಡೆಯುತ್ತದೆ. ಇದು ಬಹಳ ವರ್ಷ ಗಳಿಂದ ನಡೆದುಕೊಂಡು ಬಂದಿದೆ.

‘ಎತ್ತುಗಳಿಗೆ ವಿದ್ಯುತ್‌ ಶಾಕ್‌ ನೀಡಲು, ಮನೆಗಳಲ್ಲಿ ಸೊಳ್ಳೆಗಳನ್ನು ಕೊಲ್ಲಲು ಬಳಸುವ ಬ್ಯಾಟ್‌ ಅನ್ನು ಕೆಲ ಯುವಕರು ಓಟದುದ್ದಕ್ಕೂ ಬಳಸಿದರು. ವಿದ್ಯುತ್‌ ಬ್ಯಾಟ್‌ನ ಮುಂಬದಿಯನ್ನು ತೆಗೆದು ಹಾಕಿ, ಪಿನ್‌ಗಳಿದ್ದ ಹಿಂಬದಿಯ ಹಿಡಿಯನ್ನು ಮಾತ್ರ ಬಂಡಿಯಲ್ಲಿ ಹಿಡಿದು ನಿಂತಿದ್ದರು.

ಓಟ ಆರಂಭಗೊಳ್ಳುತ್ತಿದ್ದಂತೆ ಎತ್ತುಗಳಿಗೆ ಪಿನ್‌ ಚುಚ್ಚಿ ವಿದ್ಯುತ್‌ ಸರಬರಾಜಾಗುವ ಬಟನ್‌ ಒತ್ತುತ್ತಿದ್ದಂತೆ, ಶಾಕ್‌ನಿಂದ ಎತ್ತುಗಳು ಶರವೇಗದಲ್ಲಿ ಓಡಿದವು. ಸ್ಥಳದಲ್ಲಿಯೇ ಇದ್ದ ಪೊಲೀಸರಿಗೆ ಈ ವಿಷಯ ತಿಳಿಸಿದರೂ, ಶಾಕ್‌ ನೀಡುವುದನ್ನು ತಪ್ಪಿಸಲು ಮುಂದಾಗಲಿಲ್ಲ’ ಎಂದು ಗುರು ಹಿರೇಮಠ ದೂರಿದರು.

ಉಲ್ಲಂಘನೆ: ‘ಪ್ರಾಣಿಗಳ ಹಕ್ಕು ರಕ್ಷಣೆಗಾಗಿ ಸುಪ್ರೀಂಕೋರ್ಟ್‌ 12 ಸೂಚನೆ ನೀಡಿದೆ. ಇದರ ಜತೆಗೆ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಪ್ರಾಣಿಗಳ ಐದು ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ ನೋಡಿ ಕೊಳ್ಳಬೇಕು ಎಂಬುದು ಕಡತಕ್ಕಷ್ಟೇ ಸೀಮಿತವಾಗಿದೆ.

ಪ್ರಾಣಿಗಳ ಹಕ್ಕು ಉಲ್ಲಂಘನೆಯಾಗದಂತೆ ಬಂಡಿ ಓಟ ನಡೆಸಬೇಕು. ಜೀವಕ್ಕೆ, ಆರೋಗ್ಯಕ್ಕೆ ತೊಂದರೆಯಾಗಬಾರದು. ಸೆರೆ ಕುಡಿಸಬಾರದು. ಕೋಲಿನಿಂದ ಬಡಿಯಬಾರದು. ಬೆದರಿ ಸಬಾರದು ಇತ್ಯಾದಿ ಷರತ್ತುಗಳನ್ನು ಸುಪ್ರೀಂಕೋರ್ಟ್‌ ವಿಧಿಸಿದೆ.

ಆದರೆ ಈ ಯಾವ ಷರತ್ತುಗಳು ಕಾರಹುಣ್ಣಿಮೆ ಬಂಡಿ ಓಟದ ಸಮಯದಲ್ಲಿ ಪಾಲನೆಯಾಗಲಿಲ್ಲ. ಕೆಲವರು ಎತ್ತುಗಳಿಗೆ ಸೆರೆ ಕುಡಿಸಿದ್ದರು. ಇನ್ನೂ ಹಲವರು ವಿದ್ಯುತ್‌ ಉಪಕರಣದಿಂದ ಕರೆಂಟ್‌ ಶಾಕ್‌ ನೀಡಿ ಬಂಡಿ ಓಡಿಸಿದ್ದು ಅಮಾನವೀಯವಾಗಿತ್ತು’ ಎಂದು ಜಿಲ್ಲಾ ಯುವ ಪರಿಷತ್‌ ಅಧ್ಯಕ್ಷ ಶರಣು ಸಬರದ ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಾಣಿಗಳ ಶಕ್ತಿ, ಸಾಮರ್ಥ್ಯಕ್ಕೆ ತಕ್ಕಂತೆ ಅವನ್ನು ಬಳಸಿಕೊಳ್ಳಬೇಕು. ಸೆರೆ ಕುಡಿಸಿ ಓಡಿಸಿದ್ದು, ಪಟಾಕಿ ಸಿಡಿಸಿ ಬೆದರಿಸಿದ್ದು, ವಿದ್ಯುತ್‌ ಶಾಕ್‌ ನೀಡಿರುವುದು ಅಮಾನವೀಯ ಘಟನೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ವಿಜಯಪುರ ತಾಲ್ಲೂಕು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಅಶೋಕ ಎಸ್‌.ಗೊಣಸಗಿ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಬಹಳ ವರ್ಷದಿಂದ ಬಂಡಿ ಓಡಿಸಲು ಇಲ್ಲಿಗೆ ಬರುವೆ. ವಿದ್ಯುತ್‌ ಶಾಕ್‌ ನೀಡಿ ಎತ್ತುಗಳನ್ನು ಓಡಿಸಿದ್ದು ಇದೇ ಮೊದಲು. ಇದು ಅಮಾನವೀಯ ಪದ್ಧತಿ

ಪ್ರಕಾಶ ಪರಗೂಳಿ

ತೇಗಡೆ ಗಲ್ಲಿ ನಿವಾಸಿ

* * 

ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರಿಗೆ ವರದಿ ನೀಡುವಂತೆ ಸೂಚಿಸಲಾಗುವುದು.  ವಿದ್ಯುತ್‌ ಶಾಕ್‌ ನೀಡಿ ಎತ್ತುಗಳನ್ನು ಓಡಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು

ಡಾ.ಎಚ್‌.ಬಿ.ಬೂದೆಪ್ಪ

ಹೆಚ್ಚುವರಿ ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry