‘ಪುರ’ದಲ್ಲಿ ಕುಡಿಯುವ ನೀರಿಗೆ ಬರ!

7

‘ಪುರ’ದಲ್ಲಿ ಕುಡಿಯುವ ನೀರಿಗೆ ಬರ!

Published:
Updated:
‘ಪುರ’ದಲ್ಲಿ ಕುಡಿಯುವ ನೀರಿಗೆ ಬರ!

ಹಿರೇಕೆರೂರ: ತಾಲ್ಲೂಕಿನ ಗಡಿಯಲ್ಲಿರುವ ಪುರಕೊಂಡಿಕೊಪ್ಪ ಗ್ರಾಮವು ಈ ಭಾಗದಲ್ಲಿ ‘ಪುರ’ ಎಂದೇ ಜನಜನಿತ. ಆದರೆ ಒಂದು ‘ಪುರ’ಕ್ಕೆ(ಊರು) ಇರಬೇಕಾದ ಕನಿಷ್ಠ ಮೂಲ ಸೌಲಭ್ಯಗಳೂ ಇಲ್ಲಿ ಇಲ್ಲ. ಸುಮಾರು 135 ಕುಟುಂಬಗಳನ್ನು ಹೊಂದಿರುವ ಈ ಪುಟ್ಟ ಗ್ರಾಮವು ತಾಲ್ಲೂಕು ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ.

ಹಿರೇಕೆರೂರಿನಿಂದ ಸೊರಬ ತಾಲ್ಲೂಕಿನ ಬಾರಂಗಿ, ಎಮ್ಮಿಗನೂರು ದಾಟಿದ ನಂತರ ಈ ಗ್ರಾಮ ಸಿಗುತ್ತದೆ. ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲ, ವಾಹನಗಳ ಸೌಲಭ್ಯ ಕೇಳುವಂತೆಯೂ ಇಲ್ಲ. ಜೀವ ಜಲಕ್ಕೂ ಇಲ್ಲಿ ತತ್ವಾರ ತಪ್ಪಿಲ್ಲ.

ಎಮ್ಮಿಗನೂರು ಗ್ರಾಮದಿಂದ ಪುರಕೊಂಡಿಕೊಪ್ಪದ ತನಕದ ಸುಮಾರು 3 ಕಿ.ಮೀ. ರಸ್ತೆ ಅತ್ಯಂತ ಕಿರಿದಾಗಿದ್ದು, ಸಂಪೂರ್ಣ ಹಾಳಾಗಿದೆ. ದಶಕಗಳ ಹಿಂದೆ ಹಾಕಿದ್ದ ಡಾಂಬರು ಕಿತ್ತು ಹೋಗಿ, ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ.

ಕಚವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಪಂಚಾಯ್ತಿ ವತಿಯಿಂದ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿಲ. ಹೀಗಾಗಿ ಸ್ಥಳೀಯ ನಿವಾಸಿಗಳ ರೈತರಿಬ್ಬರಿಂದ ಕೊಳವೆ ಬಾವಿ ಬಾಡಿಗೆ ಪಡೆದು, ಗ್ರಾಮಸ್ಥರಿಗೆ ಪೂರೈಕೆ ಮಾಡಲಾಗುತ್ತಿದೆ. ಆದರೆ ಈ ನೀರು ಸಾಲುತ್ತಿಲ್ಲ, ನೀರಿಗಾಗಿ ಮಹಿಳೆಯರು ಸತತವಾಗಿ ಕಾಯುವುದು ಇಲ್ಲಿನ ನಿತ್ಯ ಸ್ಥಿತಿ.

‘ಸುಮಾರು 4 ತಿಂಗಳಿಂದ ನೀರು ಸಂಗ್ರಹಿಸುವುದೇ ದೊಡ್ಡ ಕೆಲಸವಾಗಿದೆ. ವಿದ್ಯುತ್ ಇದ್ದಾಗ ಮಾತ್ರ ನೀರು ಸಿಗುತ್ತದೆ. ಎಲ್ಲರೂ ಸರದಿಯಲ್ಲಿ ನಿಂತು ನೀರು ಪಡೆಯಬೇಕು. ಒಬ್ಬರಿಗೆ ಒಂದು ಬಾರಿ ಕೇವಲ 4 ಕೊಡ ಮಾತ್ರ ತುಂಬಿಸಿಕೊಳ್ಳಲು ಅವಕಾಶವಿದೆ. ಸರದಿಯಲ್ಲಿ ವ್ಯತ್ಯಾಸವಾದಾಗ ಮಹಿಳೆಯರು ಪರಸ್ಪರ ಗಲಾಟೆ ಮಾಡಿಕೊಂಡ ಘಟನೆಗಳು ಸಹ ನಡೆದಿವೆ’ ಎನ್ನುತ್ತಾರೆ ಗ್ರಾಮದ ಪ್ರಭಾಕರ ಬೆನ್ನೂರ.

ಗ್ರಾಮದಲ್ಲಿ ನೀರಿನ ತೊಂದರೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಮಲ್ಲಾಡದ, ‘ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಪಂಚಾಯ್ತಿಗೆ ಸೂಚನೆ ನೀಡಲಾಗಿದೆ. ಖಾಸಗಿ ಕೊಳವೆ ಬಾವಿಗಳಿಂದ ನೀರು ಖರೀದಿಸಲಾಗಿದ್ದು, ಅಗತ್ಯ ಕಂಡು ಬಂದಲ್ಲಿ ತಾಲ್ಲೂಕಿನ ಟಾಸ್ಕ್‌ಫೋರ್ಸ್‌ ಗಮನಕ್ಕೆ ತಂದು ಹೊಸ ಕೊಳವೆ ಬಾವಿ ಕೊರೆಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry